ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 31 ವರ್ಷದ ನಟರೊಬ್ಬರು ದೂರು ದಾಖಲಿಸಿದ್ದಾರೆ.
ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇರಳ ಪೊಲೀಸರು ಪ್ರಕರಣವನ್ನು ಬೆಂಗಳೂರು
ಪೊಲೀಸರಿಗೆ ವರ್ಗಾಯಿಸಿದ ನಂತರ ರಂಜಿತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋಯಿಕ್ಕೋಡ್ ಮೂಲದ ಕಲಾವಿದರಾಗಿರುವ ದೂರುದಾರರು, 2012ರಲ್ಲಿ ಬಾವುಟ್ಟಿಯುಡೆ ನಾಮತ್ತಿಲ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಕೇರಳದ ಈಸ್ಟ್ ಹಿಲ್‌ಗೆ ಹೋಗಿದ್ದೆ. ಆ ಸಂದರ್ಭದಲ್ಲಿ ರಂಜಿತ್ ನನ್ನನ್ನು ಭೇಟಿಯಾಗಿದ್ದರು ಎಂದು
ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಸಮೀಪ ಇರುವ ಐಷಾರಾಮಿ ಹೋಟೆಲ್‌ಗೆ ರಂಜಿತ್ ನನ್ನನ್ನು ಕರೆಸಿಕೊಂಡಿದ್ದರು. ಅಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ವಿವರಿಸಿದ್ದಾರೆ. ನನ್ನನ್ನು ಬೆತ್ತಲೆಯಾಗಿ ನಿಲ್ಲುವಂತೆ ರಂಜಿತ್ ಹೇಳಿದ್ದರು. ನಾನು ಅವರು ಹೇಳಿದಂತೆ ಕೇಳಿದ್ದೆ. ಇದೇ ಸಂದರ್ಭದಲ್ಲಿ ರಂಜಿತ್ ಅವರು ನಟಿ ರೇವತಿ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗಲೇ ನನ್ನ ಬೆತ್ತಲೆ ಫೋಟೊಗಳನ್ನು ರೇವತಿ ಅವರಿಗೆ ಕಳುಹಿಸಿದ್ದರು. ಆ ಫೋಟೊಗಳನ್ನು ನೋಡಿ ರೇವತಿ ಇಷ್ಟಪಟ್ಟಿದ್ದಾಳೆ ಎಂದು ರಂಜಿತ್ ಹೇಳಿದ್ದರು ಎಂದೂ ದೂರಿನಲ್ಲಿ ವಿವರಿಸಿದ್ದಾರೆ.
ರಂಜಿತ್ ವಿರುದ್ಧ ಐಟಿ ಕಾಯ್ದೆಯ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 66 ಇ (ಗೌಪ್ಯತೆಯ ಉಲ್ಲಂಘನೆಗಾಗಿ ಶಿಕ್ಷೆ) ಅಡಿಯಲ್ಲಿ
ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಕಸಬಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸೆ.9ರಂದು ಕೋಯಿಕ್ಕೋಡ್ ಪ್ರಧಾನ ಸೆಷನ್ಸ್ ನ್ಯಾಯಾಲಯ ರಂಜಿತ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕೆಲವು ದಿನಗಳ ಹಿಂದೆ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರೂ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಚಿತ್ರನಟರಿಂದ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ನಂತರ ಮಲಯಾಳಂ ಸಿನಿಮಾ
ಕಲಾವಿದರ ಸಂಘಕ್ಕೆ (ಅಮ್ಮ) ಹಿರಿಯ ನಟ ಮೋಹನ್‌ಲಾಲ್ ಸೇರಿದಂತೆ ಅನೇಕ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.