ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ಗಳ ಬಗ್ಗೆ ನಿಗಾ ವಹಿಸಿ; ಡಾ.ಜಿ.ಪರಮೇಶ್ವರ

Most read


ಶಿವಮೊಗ್ಗ: ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳ ಓದಿಗಾಗಿ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವರಿಗೆ ವಿವಿಧ ವಿಷಯಗಳ ಅವಶ್ಯಕ ಪುಸ್ತಕಗಳನ್ನು ಒದಗಿಸಬೇಕು.

ಪೊಲೀಸ್ ಇಲಾಖೆ ಸರ್ಕಾರದ ಮುಖ್ಯ ಇಲಾಖೆಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡಿ, ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮದು ಬಡವರ ಪರವಿರುವ ಸರ್ಕಾರವಾಗಿದ್ದು, ಸಮಾಜದಲ್ಲಿ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸವಾಗಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು. ಶಿಕ್ಷೆ ಆಗುವ ನಿಟ್ಟಿಲ್ಲಿ ಕೆಲಸ ಮಾಡಬೇಕು. ಕೊಪ್ಪಳದಲ್ಲಿ ನಡೆದಿದ್ದ ಘಟನೆಯಲ್ಲಿ ಒಂದೇ ಪ್ರಕರಣದಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆಯಾಗಿರುವ ಪ್ರಕರಣವನ್ನು ಮಾದರಿಯಾಗಿ ತೆಗೆದುಕೊಂಡು ಕರ್ತವ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಬಹುತೇಕ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಪಂದಿಸುವುದಿಲ್ಲ. ಪೊಲೀಸರು ದೂರುಗಳನ್ನು ಸ್ವೀಕರಿಸುತ್ತಿಲ್ಲ ಎಂದು ಪ್ರತಿದಿನ ಸಾರ್ವಜನಿಕರು ನನ್ನ ಬಳಿಗೆ ದೂರು ತೆಗೆದುಕೊಂಡು ಬರುತ್ತಿದ್ದಾರೆ. ಇದು ಮುಂದುವರಿದರೆ ಸಹಿಸುವುದಿಲ್ಲ. ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಿ, ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಶಿವಮೊಗ್ಗ ಪ್ರವಾಸದ್ಯೋಮ ಜಿಲ್ಲೆಯಾಗಿರುವುದರಿಂದ ದೇಶ ವಿದೇಶಗಳಿಂದ ಸಾಕಷ್ಟು ಜನರು ಪ್ರವಾಸಕ್ಕೆ ಬರುತ್ತಾರೆ. ಕಿಡಿಗೇಡಿಗಳು ಪ್ರವಾಸಿಗರಿಗೆ ತೊಂದರೆ ಉಂಟು ಮಾಡುತ್ತಿರುತ್ತಾರೆ. ಈ ಬಗ್ಗೆ ಹೆಚ್ಚು ನಿಗಾವಹಿಸಿ ಬಿಸಿ ಮುಟ್ಟಿಸಬೇಕು. ವಿವಿಧ ಆಚರಣೆಗಳ ಸಂದರ್ಭದಲ್ಲಿ ವಿವಾದಾತ್ಮಕ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕುತ್ತಿದ್ದಾರೆ. ಈ ಬಗ್ಗೆ ನಿಗಾವಹಿಸಬೇಕು. ಸಂಬಂಧಪಟ್ಟವರಿಗೆ ಎಚ್ಚರಿಸಿ ಕ್ರಮ ತೆಗೆದುಕೊಂಡರೆ ವಿವಾದಗಳು ಸೃಷ್ಟಿಯಾಗುವುದಿಲ್ಲ. ಸೈಬರ್ ಕ್ರೈಂ, ಡ್ರಗ್ಸ್ ಪ್ರಕರಣಗಳು ಪೊಲೀಸ್ ಇಲಾಖೆಗೆ ಸವಲಾಗಿ ಪರಿಣಮಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಿಬ್ಬಂದಿಗಳನ್ನು ನೀಡಿ ಸಿಇಎನ್ ಠಾಣೆಗಳ ಬಲವರ್ಧಿಸಲಾಗುವುದು ಎಂದರು.

More articles

Latest article