ಇದೊಂದು ಅಪರೂಪದ ತೀರ್ಪು. ಈ ತೀರ್ಪು ದಲಿತರ ಮೇಲಿನ ದೌರ್ಜನ್ಯ, ಅಟ್ಟಹಾಸಕ್ಕೆ ಎಚ್ಚರಿಕೆಯ ಸಂಕೇತವಾಗಿದ್ದರೆ, ದಲಿತ ಸಮುದಾಯಕ್ಕೆ ನ್ಯಾಯದ ಮನೋಬಲವನ್ನು ತುಂಬಿದಂತಾಗಿದೆ. ಇಂತಹ ತೀರ್ಪು ಗಳನ್ನು ಈ ಸಮಾಜ ಜಾತಿ-ಬೇಧವಿಲ್ಲದೆ ಮನುಷ್ಯತ್ವದ ನೆಲೆಯಲ್ಲಿ ಸ್ವಾಗತಿಸಬೇಕು. ಇದು ಜಾತಿಕೋರರ ಎದೆಗೆ ಭಯದ ಒನಕೆ ಕುಟ್ಟುವಂತಾಗಲಿ – ಎನ್.ರವಿಕುಮಾರ್ ಟೆಲೆಕ್ಸ್, ಪತ್ರಕರ್ತರು.
2014, ಆಗಸ್ಟ್ 28 ರಂದು ಕೊಪ್ಪಳದ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದ ದಲಿತರ ಮೇಲಿನ ದಾಳಿ, ಹಲ್ಲೆ, ಗುಡಿಸಲಿಗೆ ಬೆಂಕಿ ಹಚ್ಚಿದ 101 ಜನರನ್ನು ದೋಷಿಗಳೆಂದು ಘೋಷಿಸಿದ ಕೊಪ್ಪಳ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇವರಲ್ಲಿ98 ಜನರಿಗೆ ಜೀವಾವಧಿ ಶಿಕ್ಷೆ, ತಲಾ 5000 ರೂ. ದಂಡ ಮತ್ತು ಮೂವ್ವರಿಗೆ ಐದುವರ್ಷ ಜೈಲು ತಲಾ 2000ರೂ. ದಂಡ ವಿಧಿಸಿದ ತೀರ್ಪು ನೀಡಿದೆ.
ದಲಿತರ ಮೇಲಿನ ಜಾತಿ ಆಧಾರಿತ ಕ್ರೌರ್ಯಕ್ಕೆ ಇಷ್ಟೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತೀರ್ಪು ಭಾರತದಲ್ಲಿ ಇದೇ ಮೊದಲಾಗಿದ್ದು, ಇಡೀ ದೇಶದ ಗಮನವನ್ನು ಸೆಳೆದಿದೆ ಎನ್ನಬಹುದು. ಈ ನೆಲಕ್ಕೆ ದಲಿತರ ಬೆವರಷ್ಟೆ ಹರಿದಿಲ್ಲ, ಅವರ ರಕ್ತಕಣ್ಣೀರು ಗಂಗಾನದಿಯಂತೆ ಭೋರ್ಗರೆದಿರುವ ಚರಿತ್ರೆಯೂ ಇದೆ. ವರ್ತಮಾನದಲ್ಲೂ ಅದು ಮುಗಿವ ಲಕ್ಷಣಗಳೇ ಕಾಣುತ್ತಿಲ್ಲ.
ದಲಿತರ ಮೇಲಿನ ದೌರ್ಜನ್ಯ, ಹತ್ಯೆ , ಅತ್ಯಾಚಾರ ಪ್ರಕರಣಗಳು ಜಾತೀಯತೆಯ ಜೀವಂತಿಕೆಯನ್ನು ಸಾರುತ್ತವೆ. ಶಿಕ್ಷಣ, ಆಧುನಿಕತೆಯ ನಾಗಾಲೋಟದ ಈ ಹೊತ್ತಿನಲ್ಲೂ ಜಾತಿ ಆಧಾರಿತ ಕೇಡು ಈ ಸಮಾಜವನ್ನು ಬಾಧಿಸುತ್ತಿರುವುದು ವಿಶ್ವಗುರುವಾಗುವತ್ತ ಹೊರಟಿರುವ ಭಾರತದ ನಾಗರೀಕ ಸಮಾಜಕ್ಕೆ ನಾಚಿಕೆಗೇಡು ಅನಿಸುವುದಿಲ್ಲ.
ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆ ಕಾಯ್ದೆಗಳು ಜಾತಿವಾದಿಗಳ ಎದೆಯಲ್ಲಿ ಯಾವ ಭಯವನ್ನೂ ಬಿತ್ತಿಲ್ಲ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಸರಾಸರಿ ಶೇ.೩೬ ರಷ್ಟು ಮಾತ್ರ ಕಂಡುಬರುತ್ತಿರುವುದು ನ್ಯಾಯವ್ಯವಸ್ಥೆಯ ದೌರ್ಭಾಗ್ಯದ ಸಂಗತಿ. ಈ ಕಾರಣದಿಂದ ದಲಿತರು ನ್ಯಾಯವ್ಯವಸ್ಥೆಯ ಬಗ್ಗೆ ವಿಶ್ವಾಸವೇ ಕಳೆದುಕೊಂಡಿದ್ದರೆ ಅದು ಅವರ ತಪ್ಪಲ್ಲ.
ಮರಕುಂಬಿ ಪ್ರಕರಣದಲ್ಲಿ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ಅಮಾನುಷವಾದ ಹಲ್ಲೆ ನಡೆಸಿದ್ದರು. ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದಾಗಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದವರೊಬ್ಬರನ್ನು ಹತ್ಯೆ ಮಾಡಲಾಯಿತು. 117 ಜನರ ವಿರುದ್ಧ ಕೇಸು ದಾಖಲಾಗಿದ್ದು ಇದರಲ್ಲಿ 11 ಮಂದಿ ತೀರಿಹೋಗಿದ್ದಾರೆ. ಉಳಿದ 101 ಜನರನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ. ಇದೊಂದು ಅಪರೂಪದ ತೀರ್ಪು. ಈ ತೀರ್ಪು ದಲಿತರ ಮೇಲಿನ ದೌರ್ಜನ್ಯ, ಅಟ್ಟಹಾಸಕ್ಕೆ ಎಚ್ಚರಿಕೆಯ ಸಂಕೇತವಾಗಿದ್ದರೆ, ದಲಿತ ಸಮುದಾಯಕ್ಕೆ ನ್ಯಾಯದ ಮನೋಬಲವನ್ನು ತುಂಬಿದಂತಾಗಿದೆ.
2000 ನೇ ಇಸವಿ ಆಗಸ್ಟ್ ನಲ್ಲಿ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ಏಳು ಜನ ದಲಿತರನ್ನು ಸವರ್ಣೀಯರು ಜೀವಂತವಾಗಿ ಸುಟ್ಟ ಪ್ರಕರಣದಲ್ಲಿ ಎಲ್ಲಾ 46 ಜನ ಆರೋಪಿಗಳು ನ್ಯಾಯಾಲಯದಲ್ಲಿ ನಿರಪರಾಧಿಗಳಾಗಿ ಬಿಡುಗಡೆ ಹೊಂದಿದ್ದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗಳಲ್ಲಿನ ಲೋಪಗಳಿಗೆ ಕನ್ನಡಿ ಹಿಡಿದಿತ್ತು. ಇಂತಹ ಅದೆಷ್ಟೋ ಪ್ರಕರಣಗಳು ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲೆ ನ್ಯಾಯ ದಕ್ಕದೆ ಮರೆಯಾಗುತ್ತಿವೆ.
ಜಾತಿ ಆಧಾರಿತ ಸಾಮಾಜಿಕ ಸಂರಚನೆಯೇ ಜಾತಿ ತರತಮಗಳಿಗೆ ಮೂಲ ತಳಹದಿಯಾಗಿದ್ದು, ದಲಿತರು ಹಿಂಸೆಯ ಕುಲುಮೆಯಲ್ಲಿ ನಿತ್ಯವೂ ಬೇಯುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆದು ರಕ್ಷಣೆಯ ಕವಚ ತೊಡಿಸಿದ್ದರೂ, ಈ ಸಮಾಜದ ನ್ಯಾಯ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ರಾಜಕೀಯ ವ್ಯವಸ್ಥೆಗಳು ಬಲಾಢ್ಯ ಜಾತಿಕೋರರ ವಶದಲ್ಲೋ, ಪ್ರಭಾವದಲ್ಲೋ ಇರುವುದರಿಂದ ದಲಿತರ ಪಾಲಿಗೆ ನ್ಯಾಯ ಎನ್ನುವುದು ಗಗನ ಕುಸುಮವಾಗಿದೆ. ದಲಿತರ ಮೇಲಿನ ಎಲ್ಲಾ ಬಗೆಯ ಅಪರಾಧಗಳು ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆ ಹೆಸರಿನಲ್ಲಿ ನಿಲ್ಲದೇ ಹೋಗುತ್ತವೆ. ಪ್ರಕರಣದ ತನಿಖೆಯ ಹಂತದಲ್ಲೆ ನೆಲಕಚ್ಚಿ ಹೋಗುವ ಅಟ್ರಾಸಿಟಿ ಪ್ರಕರಣಗಳು ಮತ್ತೊಂದು ಬಗೆಯ ಜಾತಿ ಆಧಾರಿತ ಕ್ರೌರ್ಯಕ್ಕೆ ನೆಲಕಚ್ಚಿ ಹೋಗುತ್ತವೆ.
ಈ ದೇಶದಲ್ಲಿ ದಲಿತರ ಮೇಲೆ ಪ್ರತಿ ಆರು ನಿಮಿಷಕ್ಕೊಂದು ದೌರ್ಜನ್ಯ ನಡೆಯುತ್ತದೆ. ಆದರೆ ಎಲ್ಲವನ್ನೂ ಪೊಲೀಸ್ ಠಾಣೆ ಮೆಟ್ಟಿಲೇರುವ ಮುಂಚೆಯೇ ಹತ್ತಿಕ್ಕಲಾಗುತ್ತದೆ. ಹಾಗೊಮ್ಮೆ ಠಾಣೆಯಲ್ಲಿ ಕೇಸು ದಾಖಲಾದರೂ ಸಂತ್ರಸ್ತರು, ಸಾಕ್ಷಿಗಳು ಕೊಲೆಯಾಗಿಯೋ, ಬೆದರಿಕೆಗೆ ಹಿಂಜರಿದೋ ಪ್ರಕರಣಗಳು ಖುಲಾಸೆಯಲ್ಲಿ ಅಂತ್ಯವಾಗುತ್ತವೆ.
2020 ರಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ19 ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಹತ್ಯೆ ಈ ದೇಶ ಕಂಡ ಅತ್ಯಂತ ಅಮಾನುಷ ಕ್ರೌರ್ಯ. ಇದನ್ನು ಪ್ರಭುತ್ವ ಪ್ರಾಯೋಜಿತ ಘೋರ ಅಪರಾಧ ಎನ್ನದೆ ಬೇರೆ ಪದ ಸಿಗದು. ಈ ಪ್ರಕರಣದಲ್ಲಿ ಪ್ರಮುಖ ಮೂವ್ವರು ಆರೋಪಿಗಳು ಖುಲಾಸೆಯಾದರೆ, ಉಳಿದವರಿಗೆ ಶಿಕ್ಷೆಯಾಗುತ್ತದೆ. ಈ ನಡುವೆ ಸಂತ್ರಸ್ತ ಕುಟುಂಬದ ಸದಸ್ಯರ ಹತ್ಯೆಯೂ ನಡೆದು ಹೋಗುತ್ತದೆ. ಪ್ರತಿನಿತ್ಯ ಇಂತಹ ಅನೇಕ ಉದಾಹರಣೆಗಳಿಗೆ ಈ ದೇಶದಲ್ಲಿ ಕಡಿಮೆಯೇನಿಲ್ಲ.
ಮೇಲ್ಜಾತಿಗಳು, ಬಲಾಢ್ಯ ಜಾತಿಗಳ ಅಟ್ಟಹಾಸ ಶತಮಾನಗಳಿಂದಲೂ ನೆತ್ತರಿನ ದಾಹದ ದಾರಿಗಳನ್ನು ಬಗೆದಿವೆ. ದಲಿತರ ಮೇಲಿನ ದೌರ್ಜನ್ಯಗಳನ್ನು ಹತ್ತಿಕ್ಕಲು ಅನುಷ್ಠಾನ ಗೊಳಿಸಲಾದ ಪರಿಶಿಷ್ಟ ಜಾತಿ-ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕ್ರಮೇಣ ಕಾನೂನು ವ್ಯಾಖ್ಯಾನಗಳಿಗೆ ಸಿಕ್ಕಿ ದುರ್ಬಲಗೊಳಿಸುವ ದೊಡ್ಡ ಸಂಚು ನಡೆದಿದೆ. ಕಾನೂನು ಕಟ್ಟಳೆಯನ್ನು ಮೀರಿಯೂ ಈ ಸಮಾಜದಲ್ಲಿ ದಲಿತರನ್ನು ಕೊಲ್ಲುವ, ಹಿಂಸಿಸುವ, ಜೀವಂತ ಸುಡುವ ನಿರ್ದಯತೆಯ ಮಾನಸಿಕತೆ ಬೇರೂರಿದೆ. ಜಾತಿಯ ದ್ವೇಷದಿಂದ ದಲಿತರನ್ನು ಕೊಂದು ದಕ್ಕಿಸಿಕೊಳ್ಳುವ ಧೈರ್ಯವನ್ನು ಬಲಾಢ್ಯ ಜಾತಿಗಳು ಈ ಹೊತ್ತಿಗೂ ಹೊಂದಿರುವುದೇ ಆದರೆ ಅದರ ಹಿಂದೆ ರಾಜಕೀಯ, ಪೊಲೀಸ್, ನ್ಯಾಯಾಂಗ ವ್ಯವಸ್ಥೆಯೊಳಗೆ ನೆಲೆಯೂರಿರುವ ಜಾತಿವ್ಯವಸ್ಥೆಯೇ ಕಾರಣ . ʼಎಲ್ಲರೂ ಜಿಗಣೆಗಳು ನನ್ನ ನೆತ್ತರಿಗೆʼ ಎಂಬ ಪಾಡು ದಲಿತರದ್ದಾಗಿರುವುದು ವಿಪರ್ಯಾಸ.
ಕೊಪ್ಪಳದ ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಅಪರಾಧವನ್ನು ಕರಾರುವಕ್ಕಾಗಿ ಗುರುತಿಸುವಲ್ಲಿ ನ್ಯಾಯಪೀಠವು ( ಜಸ್ಟೀಸ್ ಸಿ.ಚಂದ್ರಶೇಖರ್) ಪ್ರತಿಯೊಬ್ಬರ ಬದುಕುವ ಘನತೆಯನ್ನು ಎತ್ತಿ ಹಿಡಿದಿದೆ. ನ್ಯಾಯಕ್ಕಾಗಿ ನಡೆದ ಹೋರಾಟ, ಸಾಕ್ಷಿಗಳ, ಸರ್ಕಾರಿ ಅಭಿಯೋಜಕರ (ಅಪರ್ಣಬಂಡಿ) ಪ್ರಾಮಾಣಿಕತೆ ಅಂತಿಮವಾಗಿ ನ್ಯಾಯದ ಯಶೋಗಾಥೆಯನ್ನೆ ಸೃಷ್ಟಿಸಿದೆ. ಈ ತೀರ್ಪು ನ್ಯಾಯವ್ಯವಸ್ಥೆಯ ಬಗೆಗೆ ಭ್ರಮನಿರಸನಗೊಂಡಿದ್ದ ದಲಿತರಲ್ಲಿ ದೊಡ್ಡ ವಿಶ್ವಾಸವನ್ನು ಮೂಡಿಸಿದ್ದರೆ ಅದಷ್ಟೆ ಸಾರ್ಥಕ. ಇಂತಹ ತೀರ್ಪು ಗಳನ್ನು ಈ ಸಮಾಜ ಜಾತಿ-ಬೇಧವಿಲ್ಲದೆ ಮನುಷ್ಯತ್ವದ ನೆಲೆಯಲ್ಲಿ ಸ್ವಾಗತಿಸಬೇಕು. ಇದು ಜಾತಿಕೋರರ ಎದೆಗೆ ಭಯದ ಒನಕೆ ಕುಟ್ಟುವಂತಾಗಲಿ.
ಎನ್.ರವಿಕುಮಾರ್ ಟೆಲೆಕ್ಸ್
ಪತ್ರಕರ್ತರು
ಇದನ್ನೂ ಓದಿ- ಮರಕುಂಬಿ ದಲಿತ ದಮನ ಪ್ರಕರಣ : ಜಾತಿವಾದಿಗಳಿಗೆ ಜೀವಾವಧಿ ಜೈಲು