ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿಚಾರಣೆ ನಡೆಸಿದ ಲೋಕಾಯುಕ್ತ

Most read

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಪೊಲೀಸರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ. ಎಂ. ಪಾರ್ವತಿ ಅವರ ವಿಚಾರಣೆ ನಡೆಸಿದ್ದಾರೆ.

ಗೌಪ್ಯ ಸ್ಥಳದಲ್ಲಿ ಬೆಳಗ್ಗೆ 8ರಿಂದ 12.30ರವರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೈಸೂರು ಲೋಕಾಯುಕ್ತ ಎಸ್‌ಪಿ ಟಿ. ಜೆ. ಉದೇಶ್ ನೇತೃತ್ವದ ತಂಡ ನಡೆಸಿದೆ.

ಜಮೀನು ಮತ್ತು 14 ನಿವೇಶನಗಳ ಹಂಚಿಕೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಪಾರ್ವತಿ ಅವರು ಸಲ್ಲಿಸಿದ್ದಾರೆ ಮತ್ತು ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೆ ಮುಂದಿನ ಗುರುವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪಾರ್ವತಿ ಅವರು ಎರಡನೇ ಆರೋಪಿಯಾಗಿದ್ದಾರೆ. ಈಗಾಗಲೇ ಎ-3 ಮಲ್ಲಿಕಾರ್ಜುನ ಸ್ವಾಮಿ ಮತ್ತು ಎ-4 ದೇವರಾಜ್ ಅವರನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದೆ.

ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸೆಪ್ಟಂಬರ್ 27ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸೆಪ್ಟಂಬರ್ 25ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆ ನಡೆಸಲು ಮೈಸೂರು ಲೋಕಾಯುಕ್ತ ಎಸ್‌ಪಿಗೆ ನಿರ್ದೇಶನ ನೀಡಿತ್ತು.

ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾರ್ವತಿ ಅವರು ಮುಡಾ ಹಂಚಿಕೆ ಮಾಡಿದ್ದ 14 ನಿವೇಶನಗಳನ್ನು ಮುಡಾಗೆ ಮರಳಿಸಿದ್ದರು.

More articles

Latest article