ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯುವ ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ – ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ:-
ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅಲ್ಲದೇ ಬೊಮ್ಮಾಯಿ ಪುತ್ರ ಭರತ್ ಅವರೇ ಬಿಜೆಪಿ ಅಭ್ಯರ್ಥಿಯಾಗಿರುವುದು ಮತ್ತು ಬೊಮ್ಮಾಯಿ ಕ್ಷೇತ್ರದ ಸಂಸದರಾಗಿರುವ ಹಿನ್ನೆಲೆಯಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿ ಇದೆ.
ಕಾಂಗ್ರೆಸ್‌ನಿಂದ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ಎದುರು ಯಾಸೀರ್ ಅವರು ಸ್ಪರ್ಧಿಸಿ 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಈಗ ಮತ್ತೆ ಚುನಾವಣೆಗೆ ನಿಂತಿದ್ದು, ಈ ಮೂಲಕ ಎರಡನೇ ಬಾರಿ ವಿಧಾನಸಭಾ ಚುನಾವಣೆಗೆ ಧುಮುಕುತ್ತಿದ್ದಾರೆ.
ಯಾಸೀರ್ ತಾಯಿ ಕೂಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಜೊತೆಗೆ ಇವರು ಹಾನಗಲ್ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರು. ಈ ಬಾರಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸ್ಪರ್ಧಿಸಿದ್ದು ಗೆಲ್ಲುವ ಭರವಸೆ ಹೊಂದಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆ:-
ಪರಿಶಿಷ್ಟ ಪಂಗಡಕ್ಕೆ ( Scheduled Tribes) ಮೀಸಲು ಕ್ಷೇತ್ರ, ಕಾಂಗ್ರೆಸ್‌ನ ಭದ್ರಕೋಟೆಯಾಧಿಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿಈ ಬಾರಿ ತುಕಾರಾಂ ಅವರ ಕುಟುಂಬಕ್ಕೆ ಟಿಕೆಟ್ ಲಭಿಸಿದೆ. ಸತತ ನಾಲ್ಕು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಪತಿ ತುಕಾರಾಮ್ ಅವರ ಪರ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪತ್ನಿ ಅನ್ನಪೂರ್ಣ ಅವರು ಈ ಬಾರಿ ನೇರವಾಗಿ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
ಸಂಡೂರಿನಲ್ಲಿ ಒಂದು ಕಾಲದ ಸ್ಯಾಂಡಲ್ ವುಡ್ ನಟರಾಗಿದ್ದ ಬಂಗಾರು ಹನುಮಂತು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜನಾರ್ದನ ರೆಡ್ಡಿ ಹಠ ತೊಟ್ಟಿದ್ದಾರೆ. ಕಳೆದ ಬಾರಿಯ ಪರಾಜಿತ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ, ಕಳೆದ ಬಾರಿಯ ಪರಾಜಿತ ರೆಡ್ಡಿಯವರ KRPP ಪಕ್ಷದ ಕೆ.ಎಸ್.ದಿವಾಕರ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಇವರ ಅಸಮಾಧಾನದ ನಡುವೆ ಚುನಾವಣೆ ನಡೆಯಲಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ:-
ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ, ರಾಮನಗರ ವಿಧಾನಸಭಾ ಚುನಾವಣೆ ಸೇರಿ ಒಟ್ಟು ಎರಡು ಭಾರೀ ಚುನಾವಣೆಯಲ್ಲಿ ಸೋಲು ಕಂಡಿದ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮತ್ತೆ ಮೂರನೇ ಬಾರಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಮೂಲಕ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.
ಬಿಜೆಪಿಯಿಂದ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಆಗುತ್ತಿದ್ದಂತೆ ಅವರು ಕಾಂಗ್ರೆಸ್‌ನಿಂದ ಅದೇ ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದಾರೆ. ಇಂದು ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ ಅವರು ಮುಖಾಮುಖಿ ಆಗಿದ್ದಾರೆ.
ಉಪ ಚುನಾವಣೆ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ | ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ |
ಚನ್ನಪಟ್ಟಣ | ಸಿ ಪಿ ಯೋಗೇಶ್ವರ್ | ನಿಖಿಲ್ ಕುಮಾರಸ್ವಾಮಿ |
ಸಂಡೂರು | ಈ ಅನ್ನಪೂರ್ಣ | ಬಂಗಾರು ಹನುಮಂತು |
ಶಿಗ್ಗಾಂವಿ | ಯಾಸಿರ್ ಅಹ್ಮದ್ ಖಾನ್ ಪಠಾಣ್ | ಭರತ್ ಬೊಮ್ಮಾಯಿ |