ಚನ್ನಪಟ್ಟಣ ಉಪಚುನಾವಣೆಗೆ (Channapatna By-Election) ಟಿಕೆಟ್ ನೀಡುವ ವಿಚಾರದಲ್ಲಿ ತೀವ್ರ ನಗೂಢತೆ ಕಾಪಾಡಿಕೊಂಡು ಬಂದಿರುವ ಜೆಡಿಎಸ್ ಪಕ್ಷದ ನಾಯಕರು (JDS) ಕಡೆಗೂ ಯಾರಿಗೆ ಟಿಕೆಟ್ ಘೋಷಣೆ ಎಂಬುದನ್ನು ಬಹಿರಂಗಪಡಿಸಿದೆ .
ಚನ್ನಪಟ್ಟಣ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಆದ್ದರಿಂದ ಈಗ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ (CP Yogeshwar) ಎದುರಾಳಿಯಾಗಿ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಿದೆ. ಎನ್ಡಿಎ (NDA) ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ತೆರೆ ಬೀಳಲಿದೆ.
ನಿಖಿಲ್ ಕುಮಾರಸ್ವಾಮಿ ಅಥವಾ ಜಯಮುತ್ತು ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಮಂಗಳವಾರ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಲಾಗಿದ್ದ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿಯಾಗಲಿ ಎಂದು ಆಗ್ರಹ ಕೇಳಿ ಬಂದಿತ್ತು. ಇಂದು ಸಂಜೆ ಉಭಯ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಲು ತೀರ್ಮಾನ ಮಾಡಲಾಗಿದೆ.
ಈಗಾಗಲೇ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.