ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಕಣ ರಂಗೇರುತ್ತಿದೆ. ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಇಂದು ನಾಮಪತ್ರ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಇಂದು ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ .
ಈ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗ ರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವರಾದ ಚೆಲುವರಾಯಸ್ವಾಮಿ, ಹಾಗೂ ಸರ್ಕಾರದ ಇನ್ನೂ ಹಲವಾರು ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ರಾಜ್ಯ ಮಟ್ಟದ ಅನೇಕ ನಾಯಕರು, ಮಾಜಿ ಸಚಿವರು ಮಾಜಿ ಶಾಸಕರು ಭಾಗವಹಿಸುತ್ತಿದ್ದಾರೆ. ತಾಲೂಕು ಕಾಂಗ್ರೆಸ್ನ ಎಲ್ಲ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲಿದ್ದಾರೆ.