ಕಾಂಗ್ರೆಸ್ ಬದಲು ಜೆಡಿಎಸ್‌ನಿಂದಲೇ ಯೋಗೇಶ್ವರ್ ನಿಲ್ಲಬಹುದಿತ್ತು. ಎನ್‌ಡಿಎಗೆ ಅನುಕೂಲ ಆಗುತ್ತಿತ್ತು. ಸಿಪಿ ಯೋಗೇಶ್ವರ್ ಈಗ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ. ಅವರೇನು ಬಿಜೆಪಿಯ ಕಟ್ಟಾಳು ಏನಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ. ಬಿಜೆಪಿಯ ಸಿದ್ಧಾಂತದಿಂದ ಬಂದವರಲ್ಲ. ಸೈಕಲ್ ಪಾರ್ಟಿ, ಪಕ್ಷೇತರ, ಬೇರೆ ಬೇರೆ ಪಕ್ಷದಿಂದ ಬಂದವರು. ನಾವೂ ಕೂಡ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಮಾಡಿದ್ದೆವು, ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೆವು. ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂದು ಸುದ್ದಿ ಇದೆ. ನಮ್ಮ ಮಾತು ಕೇಳದೆ ಕಾಂಗ್ರೆಸ್ ಸೇರಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಚಿನ್ಹೆಯಿಂದ ಸ್ಪರ್ಧೆಗೆ ಆಫರ್ ಕೊಟ್ಟರು. ಯಾವ ಚಿನ್ಹೆ ಆದರೇನು ಇಲ್ಲಿದ್ದರೆ ಎನ್‌ಡಿಎಯಿಂದನೇ ಸ್ಪರ್ಧೆ ಮಾಡುತ್ತಿದ್ದರು. ಸಿಪಿ ಯೋಗೇಶ್ವರ್ ನಮ್ಮಲ್ಲಿ ಸೀನಿಯರ್ ಲೀಡರ್ ಆಗಿದ್ದರು. ಈಗ ಕಾಂಗ್ರೆಸ್‌ನಲ್ಲಿ ಲಾಸ್ಟ್ ಬೆಂಚ್ ಆಗುತ್ತಾರೆ. ಅವರನ್ನು ಅಲ್ಲಿ ಡಿಕೆ ಶಿವಕುಮಾರ್ ಬೆಳೆಯಲು ಬಿಡಲ್ಲ. ಕಾಂಗ್ರೆಸ್ ಸೇರಿ ಯೋಗೇಶ್ವರ್ ತಮ್ಮ ಭವಿಷ್ಯ ಹಾಳು ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು.
ಮಂಗಳವಾರವೇ ಸಿಪಿವೈ ಕಾಂಗ್ರೆಸ್ ಸೇರುತ್ತಾರೆ ಎಂದು ನಮಗೆಲ್ಲ ಸುಳಿವಿತ್ತು. ಇದರ ಬಗ್ಗೆ ಜೋಷಿಗೆ ಹೆಚ್‌ಡಿಕೆ ಹೇಳಿದ್ದರು. ಆದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆವು ಎಂದಿದ್ದಾರೆ.