ಸಿಪಿ ಯೋಗೇಶ್ವರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ವಿಚಾರವಾಗಿ ಸಿಪಿ ಯೋಗೇಶ್ವರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಚಿವರ ಸಭೆಯಲ್ಲಿ ಯೋಗೇಶ್ವರ್ ಪಕ್ಷ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, “ಅದು ಸಿದ್ದರಾಮಯ್ಯ ಅವರ ದೊಡ್ಡಗುಣ..ಮುಖ್ಯಮಂತ್ರಿಗಳು ಹಾಗೆ ಮಾತಾಡಿದ್ದಾರೆ ಅಂದ್ರೆ ಸಂತೋಷವಾಗುತ್ತಿದೆ. ನಾನು ಹಿಂದೆ ಕಾಂಗ್ರೆಸ್ ನಲ್ಲೇ ಇದ್ದವನು ಎಂದು ಖುಷಿ ಪಟ್ಟಿದ್ದಾರೆ.
ಮುಂದುವರೆದು, ನಾನು ಈಗ ಯಾವ ನಿರ್ಧಾರಕ್ಕೆ ಬಂದಿಲ್ಲ, ಸಂಜೆ ನಂತರ ಮಾತಾಡ್ತೇನೆ. ನಿನ್ನೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಇವತ್ತು ಚನ್ನಪಟ್ಟಣದಲ್ಲಿ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದಿದ್ದೇನೆ. ಸಂಜೆವರೆಗೂ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರ್ತೇವೆ. ನಾನು ಕಾಂಗ್ರೆಸ್ ನಾಯಕರಲ್ಲಿ ಯಾರನ್ನೂ ಭೇಟಿ ಮಾಡಿಲ್ಲ. ಕಾರ್ಯಕರ್ತರ ಜೊತೆ ಚರ್ಚೆ ಬಳಿಕ ಮುಂದಿನ ತೀರ್ಮಾನ ಮಾಡ್ತೇನೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಚನ್ನಪಟ್ಟಣವನ್ನು ಬಿಜೆಪಿಗೆ ಬಿಟ್ಟುಕೊಟ್ಟು ತನ್ನ ಹೆಸರನ್ನು ಘೋಷಿಸುವ ನಿರೀಕ್ಷೆ ಇನ್ನು ಇದ್ದಂತೆ ಕಾಣುತ್ತಿದೆ. ಅದಕ್ಕೆ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಕಡೆ ಹಂತದಲ್ಲಿ ಟಿಕೆಟ್ ಕೈತಪ್ಪಿದರೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.