ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; ಪಶುಪಾಲನಾ ಇಲಾಖೆಗೆ 700 ಡಿ ಗ್ರೂಪ್ ನೌಕರರ ನೇಮಕ: ಸಚಿವ ಕೆ.ವೆಂಕಟೇಶ್

Most read

ಮೈಸೂರು: ಪಶುಪಾಲನಾ ಇಲಾಖೆಗೆ 700 ಡಿ ಗ್ರೂಪ್ ನೌಕರರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಅನುಮತಿ ನೀಡಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು  ಪಶುಪಾಲನಾ ಮತ್ತು ಪಶುವೈದ್ಯಕೀಯ ನಮ್ಮ ಸರ್ಕಾರ ಬಂದ ಮೇಲೆ 400 ಪಶು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿದ್ದೇವೆ. 400 ಕಾಯಂ ವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ  ಪ್ರಕ್ರಿಯೆ ಆರಂಭಿಸಿದೆ ಎಂದರು.

ರಾಜ್ಯದಲ್ಲಿ ಪ್ರತಿ ವರ್ಷ 400 ಮಂದಿ ಪಶು ವೈದ್ಯ ಪದವಿ ಪಡೆದು ಹೊರಬರುತ್ತಿದ್ದಾರೆ. ಖಾಸಗಿ ಪಶುವೈದ್ಯ ಕಾಲೇಜು ಆರಂಭಿಸಲು ಕೆಲವರು ನನ್ನನ್ನು ಸಂಪರ್ಕಿಸಿದ್ದರು. ಈ ಸಂಬಂಧ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದಾಗ, ಖಾಸಗಿ ಕಾಲೇಜು ಆರಂಭಕ್ಕೆ ಅನುಮತಿ ಕೊಡುವುದು ಬೇಡ. ಅಗತ್ಯವಿದ್ದರೆ ಸರ್ಕಾರಿ ಪಶುವೈದ್ಯಕೀಯ ಕಾಲೇಜು ಆರಂಭಿಸಲು ಸೂಚಿಸಿದ್ದಾರೆ ಎಂದರು. ಹೊಸದಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಕಟನೂರ ಹಾಗೂ ಪುತ್ತೂರಲ್ಲಿಸರ್ಕಾರಿ ಕಾಲೇಜುಗಳನ್ನು ಈ ವರ್ಷವೇ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಎಸ್.ಪಾಳೇಗಾರ ಮಾತನಾಡಿ, ರಾಜ್ಯದಲ್ಲಿ 4,564 ಪಶುವೈದ್ಯಕೀಯ ಸಂಸ್ಥೆಗಳಿವೆ. 5 ಕೋಟಿ ಕೋಳಿ ಹಾಗೂ 3 ಕೋಟಿ ಜಾನುವಾರುಗಳಿವೆ. ಹಾಲು ಉತ್ಪಾದನೆಯಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ. ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂದಿದೆ ಎಂದು ಹೇಳಿದರು. ಇದೇ 21ರಿಂದ 98 ಲಕ್ಷ ರಾಸುಗಳಿಗೆಕಾಲುಬಾಯಿ ಜ್ವರದ ಲಸಿಕೆ ನೀಡಲಾಗುವುದು ಎಂದು ಹೇಳಿದರು.

More articles

Latest article