ವಿಶ್ವವಿದ್ಯಾಲಯಗಳು ಸರ್ಕಾರದ ಪ್ರಚಾರದ ಸಾಧನಗಳಾಗಿ ಕೆಲಸ ಮಾಡಬಾರದು – ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ

Most read

ಬಹುತ್ವ ಸಂಸ್ಕೃತಿಯ ನಮ್ಮ ದೇಶ ಇಂದು ಬೌದ್ಧಿಕ ಮರುಭೂಮಿಯಾಗುತ್ತಿರುವುದು ವೇದನೆಯನ್ನು ತರುವ ವಿಷಯವಾಗಿದ್ದು, ಪಾರಂಪಾರಿಕ ರಾಜಸ್ವ, ಧಾರ್ಮಿಕ ಜಡ್ಡುಗಳಿಂದ ನಮಗೆ ಬಿಡುಗಡೆ ನೀಡಿರುವ ಸಂವಿಧಾನವೇ ನಮ್ಮನ್ನು ಮುನ್ನಡೆಸಬಹುದಾದ ಏಕೈಕ ಭರವಸೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಥ ಸಂಶೋಧನಾತ್ಮಕ ಚಟುವಟಿಕೆಗಳು ಮಾತ್ರ ಸಂವಿಧಾನದ ಆಶಯವನ್ನುಬಲಪಡಿಸಬಲ್ಲವು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

ಹಿರಿಯ ಸಾಹಿತಿ, ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ರವರ ಹುಡುಕಾಟ ಎನ್ನುವ ಸಂಶೋಧನಾ ಗ್ರಂಥವನ್ನು ಇಂದು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ವಿಶ್ವವಿದ್ಯಾಲಯಗಳು ಸರ್ಕಾರದ ಪ್ರಚಾರ ಸಾಧನಗಳಾಗಿ ರೂಪಾಂತರಗೊಳ್ಳುತ್ತಿರುವುದು ವಿಷಾದನೀಯ ಸಂಗತಿ. ಇವು ಮುಕ್ತ ಚರ್ಚೆಯ ಕೇಂದ್ರಗಳಾಗಿ ರೂಪುಗೊಂಡಾಗ ಮಾತ್ರ ಸಂಶೋಧನಾತ್ಮಕತೆಗೆ ವೈವಿಧ್ಯತೆ ಹಾಗೂ ನಿರಂತರ ದೊರೆಯುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ರೂಪುಗೊಂಡಾಗ ಮಾತ್ರ ನಿರೀಕ್ಷಿತ ಫಲಿತಾಂಶ ದೊರಕಲು ಸಾಧ್ಯವೆಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನುಸರಿಸಲಾಗುತ್ತಿರುವ ಪರೀಕ್ಷಾ ಪ್ರಕ್ರಿಯೆಗಳು ಸಹ ವಿದ್ಯಾರ್ಥಿಗಳ ಸಂಶೋಧನಾ ಮನಸ್ಥಿತಿಯನ್ನು ಕಸಿದುಕೊಳ್ಳುತ್ತಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ವೀರಪ್ಪ ಮೊಯಿಲಿ, ಬರವಣಿಗೆ, ಓದಿನ ಸಂಭ್ರಮವನ್ನು ಇಂದಿನ ವಿದ್ಯಾರ್ಥಿಗಳು ಕಂಡುಕೊಳ್ಳಬೇಕಾದ್ದು ಅತ್ಯವಶ್ಯಕವೆಂದರು.

ಸಂಶೋಧನೆ ಎಂದರೆ ಸತ್ಯದ ಹುಡುಕಾಟ. ಆದರೆ ಇಂದಿನ ಸಮಾಜಕ್ಕೆ ಸತ್ಯದ ಅವಶ್ಯಕತೆ ದೂರವಾಗುತ್ತಿದ್ದು, ಸಂಶೋಧಕರಿಗೆ ಆತಂಕದ ವಾತಾವರಣವಿದೆ ಎಂದ ವೀರಪ್ಪ ಮೊಯಿಲಿ, ಲೋಕದೃಷ್ಠಿ ಇಲ್ಲದ ದೇಶ, ಸಾಹಿತ್ಯಗಳಿಗೆ ಭವಿಷ್ಯವಿಲ್ಲ. ಅದರಿಂದ ಹೊರ ಬರಬೇಕಾದರೆ ಸತ್ಯದ ಸಂಶೋಧನಾತ್ಮಕ ಕೆಲಸಗಳು ಮುಖ್ಯವಾಗಿದ್ದು, ಬಿಳಿಮಲೆ ಅವರ ಕೃತಿ ನಿರ್ಭೀತಿಯಿಂದ ಸತ್ಯವನ್ನು ಪ್ರತಿಪಾದಿಸುವುದು ಈ ದೃಷ್ಠಿಕೋನದಿಂದ ಅತ್ಯಂತ ಅಭಿನಂದನೀಯವಾದ ಸಂಗತಿ ಎಂದರು.

ಸಂಶೋಧನೆಗಳ ಗುಣಮಟ್ಟ ಕ್ಷೀಣವಾಗುತ್ತಿರುವ ದಿನಗಳಲ್ಲಿ ಹುಡುಕಾಟ ಕೃತಿ ದೊಡ್ಡ ಭರವಸೆ

ಕೃತಿಯ ಕುರಿತಂತೆ ಮಾತನಾಡಿದ ಹಿರಿಯ ಪತ್ರಕರ್ತರಾದ ಚ.ಹ.ರಘುನಾಥ, ಹೊಸ ವಿಷಯಗಳನ್ನು ತಿಳಿಸುವುದರಲ್ಲಿ ಸಂಶೋಧಕ ನಿರ್ಲಿಪ್ತ ಭಾವವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ಸಂಶೋಧಕನಿಗೆ ಇರಬೇಕಾದ ಸಿದ್ಧತೆ ಶ್ರಮಗಳಿಗೆ ಡಾ.ಬಿಳಿಮಲೆ ಅವರ ಹುಡುಕಾಟ ಪುಸ್ತಕ ಮಾದರಿಯಾಗಿದ್ದು, ಪುರಾಣ, ಇತಿಹಾಸ, ಕಾವ್ಯಗಳನ್ನು ಯಾವ ರೀತಿ ಗ್ರಹಿಸಬೇಕೆಂಬ ಸ್ಪಷ್ಟತೆಯನ್ನು ಒದಗಿಸುತ್ತದೆ ಎಂದರು.

ಸಂಶೋಧನಾ ಕೃತಿಗಳ ಪರಿಭಾಷೆ ಜನರನ್ನು ಈ ಮಾದರಿಯ ಕೃತಿಗಳ ಓದಿನಿಂದ ವಿಮುಖಗೊಳಿಸುತ್ತಿರುವ ಸಂದರ್ಭದಲ್ಲಿ ಬಿಳಿಮಲೆ ಅವರ ಹುಡುಕಾಟ ಕೃತಿಯ ಸೃಜನಶೀಲ ಭಾಷೆ ಓದುಗನಲ್ಲಿ ಆಸಕ್ತಿಯನ್ನು ಕೆರಳಿಸುವುದಷ್ಟೇ ಅಲ್ಲ ಸಂಶೋಧನಾತ್ಮಕ ಚೌಕಟ್ಟಿಗೆ ಒಂದು ಹೊಸ ಆಯಾಮವನ್ನೇ ಒದಗಿಸುತ್ತದೆ ಎಂದರು.

ಶಿಷ್ಠದಿಂದ ಜನಪದದತ್ತ, ಸಂಸ್ಕೃತದ ಮನಸ್ಥಿತಿಯಿಂದ ದೇಸಿ ಭಾಷೆಗಳತ್ತ, ಅಗ್ರಹಾರದಿಂದ ಕೇರಿ, ಒಳ ಕೇರಿಗಳತ್ತ ತೆರಳಿ ಸತ್ಯವನ್ನು ಸಂಶೋಧಿಸುವ ಹುಡುಕಾಟ ಕೃತಿ ಅಸಂಖ್ಯ ಜನವರ್ಗದಲ್ಲಿ ಮೂಡಿರುವ ವೈದಿಕ ದೃಷ್ಠಿಯೇ ಸಮಗ್ರ ಲೋಕ ದೃಷ್ಠಿ ಎನ್ನುವ ರಾಜ ಬೆಂಬಲದ ಮನೋಧರ್ಮವನ್ನು ಒಡೆದು ಹಾಕುತ್ತದೆ. ಗ್ರಹಿಕೆಗಳಲ್ಲಿನ ಪೂರ್ವಾಗ್ರಹಗಳಿಂದ ಮುಕ್ತರಾಗಿ ಜನ ಸಂಸ್ಕೃತಿಯ ಮೂಲಕ ಶಿಷ್ಠ ಭಾರತವನ್ನು ಕಾಣಬೇಕೆನ್ನುವ ಅತ್ಯುತ್ತಮ ಮಾದರಿಯನ್ನು ಬಿಳಿಮಲೆಯವರು ತಮ್ಮ ಈ ಕೃತಿಯ ಮೂಲಕ ಒದಗಿಸಿದ್ದಾರೆ ಎಂದು ರಘುನಾಥ ಹೇಳಿದರು.

ಹೀಗೆ ಮುಂದುವರೆದರೆ ಕನ್ನಡದಲ್ಲಿ ಸಂಶೋಧನೆಗೆ ಭವಿಷ್ಯವಿಲ್ಲ

ತಮ್ಮ ಕೃತಿಯ ಕುರಿತಂತೆ ಮಾತನಾಡಿದ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡದ ಸಂಶೋಧನೆ ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ರೂಪುಗೊಳ್ಳದೇ ಹೋದರೆ ಸಂಶೋಧನೆ ತನ್ನೆಲ್ಲಾ ಭವಿಷ್ಯವನ್ನು ಕಳೆದುಕೊಳ್ಳುತ್ತದೆ. ನಮ್ಮ ಈ ಪರಂಪರೆ ಅತ್ಯುನ್ನತ ಮಟ್ಟದ್ದಾಗಿದ್ದು, ಇಂದಿನ ಸಾಮಾಜಿಕ ಸ್ಥಿತ್ಯಂತರಗಳು ಈ ಇತಿಹಾಸವನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದರು.

ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಉತ್ಸುಕವಾಗಿರುವ ಇಂದಿನ ದಿನಗಳಲ್ಲಿ ಸಂಶೋಧನೆಗೆ ಭರವಸೆಯೇ ಇಲ್ಲದ ವಾತಾವರಣ ರೂಪುಗೊಳ್ಳುತ್ತಿರುವುದು ದುರಂತದ ಸಂಗತಿ. ಇಡೀ ದೇಶದ ಬಹುತ್ವ ಹಾಗೂ ಶ್ರೇಷ್ಠತೆಗಳು ನಮ್ಮಲ್ಲಿರುವ ವೈವಿಧ್ಯಯುತ ಭಾಷೆಗಳಲ್ಲಿದ್ದು, ತಾಯ್ನುಡಿಯ ಶಬ್ದಗಳೇ ಕಾಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ ಎನ್ನುವುದು ನಶಿಸುತ್ತಿರುವುದು ದುರದೃಷ್ಠಕರವೆಂದ ಬಿಳಿಮಲೆ, ಸಂಶೋಧನೆಯ ಮೂಲಕ ನಾವು ನಮ್ಮ ಸಂಸ್ಕೃತಿಯನ್ನು ಮರುಕಟ್ಟಲು ವಿಫಲರಾದರೆ ಅದು ನಮ್ಮ ಕಾಲಘಟ್ಟದ ಅತಿದೊಡ್ಡ ದುರಂತವಾಗುತ್ತದೆ. ಈ ನಿಟ್ಟಿನಲ್ಲಿ ತಾನು ಈ ಕೃತಿಯನ್ನು ರಚಿಸಿದ್ದೇನೆಂದರು.

ನಾಡೋಜ ಹಂ.ಪ.ನಾಗರಾಜಯ್ಯ ಕೃತಿಯ ಕುರಿತಂತೆ ತಮ್ಮ ಮೆಚ್ಚುಗೆಯ ನುಡಿಗಳನ್ನಾಡಿದರು. ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆ, ಚಿರಂತ್ ಪ್ರಕಾಶನದ ಪರಮೇಶ್ವರ್.ಎಚ್ ಹಾಜರಿದ್ದರು.

More articles

Latest article