ದಲಿತರ ಓಟುಗಳಿಗೆ ಮಾತು ಕಲಿಸಿದ, ಭಾರತದ ರಾಜಕಾರಣದ ದಂತಕಥೆ ದಾದಾಸಾಹೇಬ್ ಕಾನ್ಶಿರಾಂ

Most read

ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅಂಬೇಡ್ಕರ್ ಚಿಂತನೆಗಳ ಮೂಲಕ ಸ್ವತಂತ್ರ ರಾಜಾಧಿಕಾರ ಹಿಡಿದು ಬಹುಜನ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡಿ ತೋರಿಸಿದ ದಲಿತ ರಾಜಕಾರಣದ ಯುಗಪುರುಷ ದಾದಾಸಾಹೇಬ್ ಕಾನ್ಶಿರಾಂಜೀ ಎಂಬ ವಿದ್ಯಮಾನ ಜರುಗದೆ ಇದ್ದಿದ್ದರೆ, ಇಂದಿಗೂ ದಲಿತ ಬಹುಜನ ಸಮಾಜಕ್ಕೆ ರಾಜಕಾರಣದ ಒಂದು ದಿಕ್ಕುದೆಸೆ ಎಂಬುದು ಇರುತ್ತಿರಲಿಲ್ಲಡಾ. ಸುರೇಶ ಗೌತಮ್.

ಕಾನ್ಶಿರಾಂ ಅವರು ಹೊಡೆದ ಹೋರಾಟದ ಏಟಿಗೆ ಸರ್ಕಾರಗಳೇ ಉರುಳಿ ಬಿದ್ದವು. ಮಂಡಲ್ ವರದಿ ಜಾರಿಯಾಯಿತು. ಬಾಬಾಸಾಹೇಬರಿಗೆ ಭಾರತರತ್ನ ಹುಡುಕಿಕೊಂಡು ಬಂತು. ಕಾನ್ಶಿರಾಂ ಆರಂಭಿಸಿದ ಅಬ್ಬರಕ್ಕೆ ಮನುವಾದಿ ರಾಜಕೀಯ ಪಕ್ಷಗಳ ಎದೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುತ್ತಿತ್ತು. ಸಂತೆಯಲ್ಲಿ ಬಿಕರಿಯಾಗುತ್ತಿದ್ದ ದಲಿತರ ಓಟುಗಳು ಪಾರ್ಲಿಮೆಂಟ್ ಭವನದ ಕದ ತಟ್ಟಲಾರಂಭಿಸಿದವು. ಅಯೋಗ್ಯರೂ ಕೂಡ ರಾಜ್ಯ ಆಳುವ ಕನಸು ಕಂಡರು. ಇದು ಯಾವುದೋ ದೇವಲೋಕದಲ್ಲಿ ನಡೆದ ಪವಾಡ ಪುರುಷರ ಕಾಲ್ಪನಿಕ ಘಟನೆ ಅಲ್ಲ; ನಮ್ಮ ಕಣ್ಣ ಮುಂದೆಯೇ ನಡೆದ ಪ್ರಜಾಪ್ರಭುತ್ವದ ಅದ್ಭುತ.

ಒಂದು ಕಾಲದಲ್ಲಿ ದಲಿತರ ಕೇರಿಯ ಓಟುಗಳನ್ನು ಮೇಲ್ಜಾತಿಯ ಪಂಚಾಯ್ತಿ ಕಟ್ಟೆಗಳು ನಿರ್ಧರಿಸುತ್ತಿದ್ದವು. ಆ ಪಂಚಾಯ್ತಿ ಕಟ್ಟೆಗಳು ದಲಿತರ ಕೇರಿಯ ಓಟುಗಳನ್ನು ಬೀದಿ ಕಸ ಗುಡಿಸಿದಂತೆ ಗುಡಿಸಿ, ಗುಡ್ಡೆ ಕಟ್ಟಿ ತಮ್ಮಿಚ್ಛೆ ಬಂದ ಕಡೆಗೆ ಉದಾಸೀನದಿಂದ ತಳ್ಳಿ ಬಿಡುತ್ತಿದ್ದವು. ಆದರೆ ಇಂದು ಆ ಕಾಲ ಬದಲಾಗಿದೆ, ಪಂಚಾಯ್ತಿ ಕಟ್ಟೆ ಮಾತ್ರವಲ್ಲ, ಇಡೀ ಊರಿಗೆ ಊರೇ ಟೊಂಕಕಟ್ಟಿ ನಿಂತರೂ ಅಷ್ಟು ಸುಲಭವಾಗಿ ದಲಿತರ ಓಟುಗಳನ್ನು ಖರೀದಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ದಲಿತರ ಓಟುಗಳೂ ಕೂಡ ಮಾತನಾಡುತ್ತವೆ, ತನಗೂ ಬೆಲೆ ಇದೆ ಎಂದು ಎದೆನಿಗುರಿಸಿ ಕೊಂಡು ನಡೆಯುತ್ತವೆ. ಈ ತರಹದ ಪರಿವರ್ತನೆ ಸುಖಾ ಸುಮ್ಮನೆ ಬಂದಿದ್ದಲ್ಲ ಅಥವಾ ಅಂಗೈಯಲ್ಲಿ ಬರೆದಿರುವ ಅದೃಷ್ಟ ರೇಖೆಯ ದೈವ ಬಲದ ಫಲದಿಂದಲೂ ಅಲ್ಲ, ದಾದಾಸಾಹೇಬ್ ಕಾನ್ಸಿರಾಂ ಎಂಬ ಸಾಧಾರಣ ವ್ಯಕ್ತಿಯ ಅಸಾಧಾರಣವಾದ ಹೋರಾಟದ ಫಲದಿಂದ ಎಂದು ಅದೆಷ್ಟೋ ಜನರಿಗೆ ಗೊತ್ತಿಲ್ಲ ?

ಕಾನ್ಶಿರಾಂ

ನಾವು ನ್ಯಾಯವನ್ನು ಕೇಳಿದರೆ ಅದು ಕೊಡುವವನ ವಿವೇಚನೆಯನ್ನು ಆಧರಿಸಿರುತ್ತದೆ. ನಾವು ನ್ಯಾಯವನ್ನು ಕೊಡುವ ಸ್ಥಾನದಲ್ಲಿ ಕೂತರೆ, ಆ ನ್ಯಾಯ ನಮ್ಮ ವಿವೇಚನೆಯನ್ನು ಆಧರಿಸಿರುತ್ತದೆ. ನಾವು ಬೇಡುವ ಸಮಾಜವಾಗದೆ, ಕೊಡುವ ಸಮಾಜವಾಗಬೇಕು ಎಂದು ಹೇಳಿದ ಭಾರತದ ರಾಜಕಾರಣದ ಸಮಾಜ ವಿಜ್ಞಾನಿ ದಾದಾಸಾಹೇಬ್ ಕಾನ್ಶಿರಾಂ.

ಒಂದು ಚಿಟಿಕೆ ಹೊಡೆದರೆ ಸಾಕು ದಲಿತರ ಓಟುಗಳು ನಮ್ಮ ಕಾಲ ಬುಡದಲ್ಲಿ ಬಂದು ಬೀಳಲಿವೆ, ಕಣ್ಸನ್ನೆ, ಕೈಸನ್ನೆಗಳಲ್ಲಿ ಅವರನ್ನು ಯಾಮಾರಿಸಬಹುದು, ಹೊಟ್ಟೆಗೆ ಬಟ್ಟೆಗೆ ಕೊಟ್ಟರೆ ಸಾಕು ಅವರು ಜೀವನಪೂರ್ತಿ ನಮ್ಮ ಚಪ್ಪಲಿ ಬಿಡುವ ಜಾಗದಲ್ಲಿ ಕೂರುತ್ತಾರೆ, ಚುನಾವಣೆಯ ಸಂತೆಯಲ್ಲಿ ಚಿಲ್ಲರೆ ಕಾಸುಗಳ ಮೂಲಕ ಮಾಂಸದ ಗುಡ್ಡೆಗಳಂತೆ ಅವರ ಓಟುಗಳನ್ನು ಖರೀದಿಸಬಹುದು ಎಂದೆಲ್ಲಾ ಅಪಮಾನಕ್ಕೆ ಒಳಗಾಗಿದ್ದ ಅಯೋಗ್ಯರ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಅಂಬೇಡ್ಕರ್ ವಾದಿ ರಾಜಕಾರಣದ ಪಿತಾಮಹ ದಾದಾಸಾಹೇಬ್ ಕಾನ್ಶಿರಾಂ ಅವರು ದಲಿತ ಸಮುದಾಯದಲ್ಲಿ ಆಳುವ ವರ್ಗದ ಪ್ರಜ್ಞೆ ಮೂಡಿಸಿದ ಅದ್ವಿತೀಯ ನಾಯಕರಾಗಿದ್ದಾರೆ.

ಕ್ರಿಸ್ತ ಪೂರ್ವ 185 ರಲ್ಲಿ ಸುಮತಿಭಾರ್ಗವನಿಂದ ಕಳೆದುಕೊಂಡಿದ್ದ ಬಹುಜನರ ಸಾಮ್ರಾಜ್ಯವನ್ನು ಆಧುನಿಕ ಭಾರತದಲ್ಲಿ ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅಂಬೇಡ್ಕರ್ ಚಿಂತನೆಗಳ ಮೂಲಕ ಸ್ವತಂತ್ರ ರಾಜಾಧಿಕಾರ ಹಿಡಿದು ಬಹುಜನ ಸಾಮ್ರಾಜ್ಯವನ್ನು ಪುನಃ ಮರುನಿರ್ಮಾಣ ಮಾಡಿ ತೋರಿಸಿದ ದಲಿತ ರಾಜಕಾರಣದ ಯುಗಪುರುಷ ದಾದಾಸಾಹೇಬ್ ಕಾನ್ಶಿರಾಂಜೀ ಎಂಬ ವಿದ್ಯಮಾನ ಜರುಗದೆ ಇದ್ದಿದ್ದರೆ, ಇಂದಿಗೂ ದಲಿತ ಬಹುಜನ ಸಮಾಜಕ್ಕೆ ರಾಜಕಾರಣದ ಒಂದು ದಿಕ್ಕುದೆಸೆ ಎಂಬುದು ಇರುತ್ತಿರಲಿಲ್ಲ.

ಇವತ್ತು ಮೊದಲಿನಷ್ಟು ಸುಲಭವಾಗಿ ದಲಿತರ ಓಟುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ, ದಲಿತ ಮತದಾರರಿಗೂ ಬೆಲೆ ಸಿಕ್ಕಿದೆ, ಅವರ ಓಟುಗಳ ಬೆಲೆ ಗಗನಕ್ಕೇರಿದೆ, ದೊಡ್ಡ ದೊಡ್ಡ ನೋಟುಗಳನ್ನು ಹೊತ್ತ ಪಾರ್ಟಿಗಳು ದಲಿತರ ಕೇರಿಗಳಲ್ಲಿ ಬಂದು ರಾತ್ರಿ ಪೂರ ನಿದ್ದೆಗೆಟ್ಟು ಕಾಯುತ್ತಾರೆ. ತಮ್ಮ ಬೀದಿಕೇರಿಗಳಿಗಷ್ಟೇ ನಾಯಕರಾಗಿದ್ದ ದಲಿತ ಮುಖಂಡರು ಇವತ್ತು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ದುಪ್ಪಟ್ಟು ಬೆಲೆಗೆ ಖರೀದಿಯಾಗುತ್ತಿದ್ದಾರೆ. ದಲಿತರು ಗುಂಪುಗೂಡಿ ಕೂಗಿದರೆ ಸಾಕು ಇವತ್ತು ಸಣ್ಣಪುಟ್ಟ ಸೌಲತ್ತುಗಳು ಅವರ ಮನೆ ಬಾಗಿಲನ್ನು ತಲುಪುತ್ತವೆ. ಅಯ್ಯಯ್ಯೋ… ಈ ನಿಗಮದಲ್ಲಿ, ಈ ಕಮಿಟಿಯಲ್ಲಿ, ಈ ವೇದಿಕೆಯಲ್ಲಿ ಅವರಿಗೆ ಅವಕಾಶ ಕೊಡದಿದ್ದರೆ ಅವರ ಓಟುಗಳು ಮಿಸ್ ಆಗಲಿವೆ ಎಂದು ಮಾತನಾಡುವುದನ್ನು ನಾವು ಪಾರ್ಲಿಮೆಂಟಿನಿಂದ ಹಿಡಿದು ಗ್ರಾಮ ಪಂಚಾಯಿತಿಯ ತನಕ ಇತ್ತೀಚಿಗೆ ದಿನನಿತ್ಯ ಕೇಳುತ್ತಿದ್ದೇವೆ. ಈ ಮೇಲಿನ ಎಲ್ಲಾ ಹೇಳಿಕೆಗಳ ಹಿಂದೆ ದಾದಾಸಾಹೇಬ್ ಕಾನ್ಸಿರಾಂ ಅವರು ಕಟ್ಟಿದ ಬಹುಜನ ರಾಜಕಾರಣದ ಜನಜಾಗೃತಿಯ ಬಹುದೊಡ್ಡ ತ್ಯಾಗ ಬಲಿದಾನವಿದೆ. ಅವರು ಕೇವಲ ರಾಜಕಾರಣವನ್ನು ಕಟ್ಟಲಿಲ್ಲ, ಬದಲಾಗಿ ದಲಿತ ಬಹುಜನರಿಗೆ ಓಟಿನ ಮಹತ್ವವನ್ನು ಹೇಳಿಕೊಟ್ಟರು. ನಿಮ್ಮ ಒಂದೊಂದು ಓಟುಗಳೂ ಕೂಡ ಭಾರತದ ಭವಿಷ್ಯವನ್ನು ಬರೆಯಲಿದ್ದಾವೆ ಎಂದು ಓಟಿನ ಘನತೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದರು. ಇದರ ಪರಿಣಾಮವಾಗಿ ಬಹುಜನ ಚಳುವಳಿಯ ಕಾರಣದಿಂದಾಗಿ ಇವತ್ತಿಗೂ ದಲಿತರನ್ನು ಬಹಳ ಸುಲಭವಾಗಿ ಖರೀದಿಸಲು ಸಾಧ್ಯವಿಲ್ಲ ಎಂಬ ಮಾತು ಜನಜನಿತವಾಗಿದೆ. ಈ ಎಲ್ಲಾ ಶ್ರೇಯಸ್ಸು ದಾದಾಸಾಹೇಬ್ ಕಾನ್ಶಿರಾಂ ಅವರಿಗೆ ಮಾತ್ರ ಸಲ್ಲಬೇಕು.

ಕಾನ್ಶಿರಾಂ

ಕಾನ್ಶಿರಾಂ ಅವರು ರೂಪಿಸಿದ ಸಿದ್ದಾಂತ, ಕಟ್ಟಿದ ಪಕ್ಷ, ಮಾಡಿದ ಕೆಲಸ, ಹೇಳಿದ ಚರಿತ್ರೆ, ಕೊಟ್ಟ ಪ್ರತಿಯೊಂದು ಹೇಳಿಕೆಗಳು ಕೂಡ ವಿಶ್ವದ ಇತಿಹಾಸದಲ್ಲಿ ದಾಖಲಾಗಿವೆ. ಓಟು ನಮ್ಮದು ಸೀಟು ನಿಮ್ಮದು ನಡೆಯೋದಿಲ್ಲ ನಡೆಯುವುದಿಲ್ಲ, ಒಂದು ನೋಟು ಕೊಡಿ ಒಂದು ಓಟು ಕೊಡಿ, ಎಷ್ಟೆಷ್ಟು ಜಾತಿ ಅಷ್ಟಷ್ಟು ಅಧಿಕಾರ ಹಂಚಿಕೆ, ಮಂಡಲ್ ವರದಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂಬ ಹೇಳಿಕೆಗಳು ಈ ನೆಲದ ರಾಜಕೀಯದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿ ಮಾಡಿದವು. ತುಂಬಿದ ಸಭೆಯಲ್ಲಿ ಬ್ರಾಹ್ಮಣ ಬನಿಯಗಳನ್ನು ಒದ್ದು ಓಡಿಸಿ, ನಮ್ಮ ಸಾಮ್ರಾಜ್ಯವಿರುವುದೇ ನಿಮ್ಮ ವಿರುದ್ಧ ನೀವು ಇಲ್ಲಿಂದ ತೊಲಗಿ ಎಂದು ಹೇಳುವ ಎದೆಗಾರಿಕೆ ಭಾರತದಂತಹ ಬ್ರಾಹ್ಮಣ ಪ್ರೇರಿತ ದೇಶದಲ್ಲಿ ಕಾನ್ಶಿರಾಂಜೀಗೆ ಅಲ್ಲದೆ ಮತ್ತೆ ಇನ್ಯಾರಿಗೆ ಬರಲು ಸಾಧ್ಯ.

ಆಳುವ ಪ್ರಭುತ್ವಕ್ಕೆ ಈ ಜಾತಿ ವ್ಯವಸ್ಥೆ ತೊಡಕಾಗಿದ್ದರೆ ಅವರು ಎಂದೋ ನಾಶ ಮಾಡಿಬಿಡುತ್ತಿದ್ದರು. ತಮಗೆ ಎಂದೂ ತೊಡಕಾಗದ ಈ ಜಾತಿ ಪದ್ಧತಿಯನ್ನೇ ಅವರು ತಮ್ಮ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದಾರೆ. ನಾನು ಕೂಡ ಈ ಜಾತಿಯನ್ನೇ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡು ದೇಶವಾಳಿ ಆ ಮೂಲಕ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ಸಂವಿಧಾನವನ್ನು ಜಾರಿಗೊಳಿಸುತ್ತೇನೆ. ಅವರು ಜಾತಿಯನ್ನು ನೆಗೆಟಿವ್ ಆಗಿ ಬಳಸಿಕೊಂಡರೆ ನಾನು ಬಹುಜನ ಸಮಾಜವನ್ನು ಕಟ್ಟಲು ಬಳಸಿಕೊಳ್ಳುತ್ತೇನೆ. ಎಂದು ಹೇಳಿದ ದಾದಾಸಾಹೇಬ್ ಕಾನ್ಸಿರಾಂಜೀ ಅವರನ್ನು ಆಧುನಿಕ ರಾಜಕಾರಣದ ಸಮಾಜ ವಿಜ್ಞಾನಿ ಎಂದು ಕರೆಯಬಹುದು.

ಅಂಬೇಡ್ಕರ್ ಹುಟ್ಟಿದ ದಿನದಂದೇ ಪಾರ್ಟಿ ಕಟ್ಟಿ, ಬುದ್ಧನ ಚಿಂತನೆಯ ಪದವಿಡಿದು ಪಾರ್ಟಿಗೆ ಬಹುಜನ ಸಮಾಜ ಪಕ್ಷ ಎಂದು ಹೆಸರಿಟ್ಟು, ಸಂವಿಧಾನವೇ ನಮ್ಮ ಪಾರ್ಟಿಯ ಪ್ರಣಾಳಿಕೆ ಎಂದೇಳಿ, ಅಂಬೇಡ್ಕರ್ ತೋರಿದ ತೋರುಬೆರಳ ಕನಸನ್ನು ಅರಿತು ಪಾರ್ಲಿಮೆಂಟ್ ಭವನವನ್ನು ಪ್ರವೇಶಿಸಿದ ಅಪ್ಪಟ ಅಂಬೇಡ್ಕರ್ ವಾದಿ ದಾದಾಸಾಹೇಬ್ ಕಾನ್ಶಿರಾಂ ಮಾತ್ರ. ನನ್ನ ಕನಸು ನನಸಾಗಲು ನಾನು ಇತರರಂತೆ ಭಿಕ್ಷೆ ಬೇಡುವುದಿಲ್ಲ, ಕುರಿ ಲೋನ್, ಕೋಳಿ ಲೋನ್ ಕೇಳಿ ಅರ್ಜಿ ಹಾಕುವುದಿಲ್ಲ, ಟಿಕೆಟ್ ಕಾಗಿ ಮೇಲ್ಜಾತಿಯ ಪಾರ್ಟಿಗಳ ಮಾಲೀಕರ ಬೂಟು ನೆಕ್ಕುವುದಿಲ್ಲ. ನಾನೊಬ್ಬ ಲಿಮಿಟೆಡ್ ಥಿಂಕರ್. ನನ್ನ ಕನಸು ಒಂದೇ ಅದು ಪಾರ್ಲಿಮೆಂಟ್ ಭಾವನವನ್ನು ಆಕ್ರಮಿಸಿಕೊಳ್ಳುವುದು ಎಂದು ಹೇಳಿ ಉತ್ತರ ಪ್ರದೇಶದಲ್ಲಿ ಮಾಡಿ ತೋರಿಸಿದ ಕಾನ್ಶಿರಾಂ ಸಾಹೇಬರ ಚಿಂತನೆಗಳು ನಮಗೆ ಆದರ್ಶವಾಗಬೇಕಿದೆ.

ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುವುದು ಒಂದು ಮಾದರಿ ರಾಜಕಾರಣವಲ್ಲ, ಅಕ್ಕಿಯ ಬೆಲೆ ಒಂದು ಸಾವಿರ ರೂಪಾಯಿಯಾದರೂ ಅದನ್ನು ಖರೀದಿಸುವ ಸಾಮರ್ಥ್ಯವನ್ನು ಜನರಿಗೆ ತುಂಬುವುದೇ ಮಾದರಿ ರಾಜಕಾರಣ. ರಾಜಕಾರಣ ಎಂದರೆ ರಸ್ತೆಗಳನ್ನು ಚರಂಡಿಗಳನ್ನು ಹೊಡೆದು ಕಟ್ಟುವುದಲ್ಲ, ಆ ರಸ್ತೆಯ ಮೇಲೆ ನಡೆಯುವ ಮನುಷ್ಯನಿಗೆ ಘನತೆಯನ್ನು, ಗೌರವವನ್ನು ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಬೇಕು. ಬಿಪಿಎಲ್ ಕಾರ್ಡ್ ಹಿಡಿದು ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತು ಗೇಣುದ್ದ ಹೊಟ್ಟೆಯನ್ನು ತುಂಬಿಸಿಕೊಳ್ಳುವ ದರಿದ್ರ ಧಾವಂತದ ಸ್ಥಿತಿಯಲ್ಲಿ ನಾವಿದ್ದೇವೆ. ಬದಲಾಗಿ ದುಡಿಯುವ ಕುಟುಂಬಗಳಿಗೆ ಎರಡೆರಡು ಎಕರೆ ಸರ್ಕಾರದ ಭೂಮಿಯನ್ನು ಹಂಚಿದರೆ ಅವರೇ ಬಿಪಿಎಲ್ ಕ್ಯೂ ನಿಲ್ಲುವ ಸ್ಥಿತಿಗೆ ಪರಿಹಾರದ ಇತಿಶ್ರೀ ಹಾಡುತ್ತಾರೆ. ಇಂತಹ ಮಾದರಿ ರಾಜಕಾರಣದ ಕನಸುಗಾರ ದಾದಾಸಾಹೇಬ್ ಕಾನ್ಸಿರಾಂಜೀ ಇಂಡಿಯಾದ ಭೂಪಟದ ಮೇರು ಶಿಖರವಾಗಿದ್ದಾರೆ.

ಸರ್ವರಿಗೂ ದಾದಾಸಾಹೇಬ್ ಕಾನ್ಶಿರಾಂಜಿಯವರ ಮಹಾಪರಿನಿಬ್ಬಾಣ ದಿನದ ಭೀಮನಮನಗಳು

ಡಾ. ಸುರೇಶ ಗೌತಮ್

More articles

Latest article