ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಬೇಡಿ: ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಚಂದ್ರು

Most read

ನಮ್ಮ ಮೆಟ್ರೋ ರೈಲು ಪ್ರಯಾಣ ದರವನ್ನು ಶೇ. 15ರಿಂದ 25ರಷ್ಟು ಏರಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿರುವ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ವಿರೋಧಿಸಿದ್ದಾರೆ.

ಮೆಟ್ರೋ ಪ್ರಯಾಣ ದರ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಸಿಎಂ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಚಂದ್ರು, ಈಗಾಗಲೇ ಮೆಟ್ರೋ ಪ್ರಯಾಣ ದರ ದುಬಾರಿಯಾಗಿದ್ದು, ಈಗ ಮತ್ತೆ ಪ್ರಯಾಣ ದರ ಏರಿಕೆ ಮಾಡುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ಹೇಳಿದ್ದಾರೆ.

ಬಿಎಂಆರ್‌ಸಿಎಲ್ ಈಗಾಗಲೇ ಆರ್ಥಿಕ ಸಂಪನ್ಮೂಲ ವೃದ್ಧಿ ಹಾಗೂ ಲಾಭ ಗಳಿಕೆಯಲ್ಲಿ ಮುಂದಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮರೆತಿರುವುದು ದುರದೃಷ್ಟಕರ. 2023-2024ರ ಆರ್ಥಿಕ ವರ್ಷದಲ್ಲಿ ಬಿಎಂಆರ್‌ಸಿಎಲ್ 129.3 ಕೋಟಿ ರೂ. ಲಾಭ ಗಳಿಸಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಲಾಭದಾಯಕ ಹಾದಿಗೆ ಬಂದಿದ್ದರೂ ಪ್ರಯಾಣ ದರ ಹೆಚ್ಚಳಕ್ಕೆ ದರ ನಿಗದಿ ಮಾಡಲು ಸಮಿತಿ ರಚಿಸಿರುವುದು ಸರಿಯಲ್ಲ ಎಂದರು.

ಬಿಎಂಆರ್‌ಸಿಎಲ್ ಕೂಡಲೇ ದರ ಏರಿಕೆ ಪ್ರಸ್ತಾಪವನ್ನು ಕೈಬಿಡಬೇಕು. ಸಿಎಂ ಕೂಡಲೇ ಈ ವಿಚಾರವನ್ನು ಗಮನಿಸಿ ದರ ಏರಿಕೆಗೆ ಕಡಿವಾಣ ಹಾಕಬೇಕು. ಬಿಎಂಆರ್‌ಸಿಎಲ್‌ನ ಈ ಜನ ವಿರೋಧಿ ನಡೆಯನ್ನು ಆಮ್ ಆದ್ಮಿ ಪಾರ್ಟಿ ಬಲವಾಗಿ ಖಂಡಿಸುತ್ತದೆ ಎಂದರು.

ಈಗ ಇರುವ ಆರು ಬೋಗಿಗಳ ಮೆಟ್ರೋದಲ್ಲಿ ಒಮ್ಮೆ 1,626 ಪ್ರಯಾಣಿಕರು ಪ್ರಯಾಣಿಸಬಹುದು. ಆದರೆ ದಟ್ಟಣೆ ಸಮಯದಲ್ಲಿ ಒಮ್ಮೆಲೆ 2,500ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಮಿತಿ ಮೀರಿದ ದಟ್ಟಣೆಯಿದ್ದರೂ, ಬೋಗಿ ಸಂಖ್ಯೆಯನ್ನು ಹೆಚ್ಚಿಸುವುದನ್ನು ಬಿಟ್ಟು, ಪ್ರಯಾಣದರ ಏರಿಕೆ ಬಗ್ಗೆ ಬಿಎಂಆರ್‌ಸಿಎಲ್ ಚಿಂತಿಸುತ್ತಿದೆ. ಇವರಿಗೆ ಪ್ರಯಾಣಿಕರ ಅನುಕೂಲಕ್ಕಿಂತ ಲಾಭ ಮಾಡಿಕೊಳ್ಳುವುದೇ ಮುಖ್ಯವಾಗಿದೆ ಎಂದರು.

ಪ್ರಯಾಣಿಕರಿಗೆ ಸುಖಕರ ಪ್ರಯಾಣ ಕೊಡುವಲ್ಲಿ ಬಿಎಂಆರ್‌ಸಿಎಲ್ ವಿಫಲವಾಗಿದೆ. ಮೂಲಸೌಕರ್ಯ, ಪ್ರಯಾಣಿಕ ಸ್ನೇಹಿ ವಾತಾವರಣದಲ್ಲಿ ಬೆಂಗಳೂರು ಮೆಟ್ರೋಗೆ ಹೋಲಿಸಿದರೆ ದಿಲ್ಲಿ ಹಾಗೂ ಮುಂಬೈನ ಮೆಟ್ರೋ ರೈಲು ಸೇವೆ ಮಾದರಿಯಾಗಿದೆ. ಈಗ ಪ್ರಯಾಣದರ ಹೆಚ್ಚಳ ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಮೊದಲು ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನ ಕೊಡಲಿ ಎಂದು ಹೇಳಿದರು.

ಬಿಎಂಟಿಸಿ ಬಳಿಕ ಅತಿ ಹೆಚ್ಚು ಜನ ಮೆಟ್ರೋ ಸಾರಿಗೆಯನ್ನು ಅವಲಂಬಿಸಿದ್ದಾರೆ. ಕೋವಿಡ್ ಬಳಿಕ ಮೆಟ್ರೋ ಲಾಭದ ಹಳಿಗೆ ಮರಳಿದೆ. ಈಗ ಪ್ರಯಾಣ ದರ ಹೆಚ್ಚಳ ಮಾಡುವ ಅಗತ್ಯವೇನಿದೆ ಎಂದ ಅವರು, ಬೆಲೆ ಏರಿಕೆ ಮಾಡುವ ಯೋಜನೆ ಕೈಬಿಟ್ಟು ಮೆಟ್ರೋ ರೈಲುಗಳ ಟ್ರಿಪ್ ಸಂಖ್ಯೆ ಹೆಚ್ಚಳ, ಸಮರ್ಪಕ ಪಾರ್ಕಿಂಗ್, ಮೂಲಸೌಕರ್ಯ ಒದಗಿಸಲು ಮೊದಲು ಆದ್ಯತೆ ಕೊಡಲಿ ಎಂದು ಆಗ್ರಹಿಸಿದರು.

More articles

Latest article