ಸರಕಾರಿ ಪ್ರಾಯೋಜಿತ ಪ್ರಶಸ್ತಿ ; ನಿಜವಾದ ಸಾಧಕರೇ ಕನ್ನಡದ ಆಸ್ತಿ

Most read

ಸಾಧಕರನ್ನು ಪ್ರೋತ್ಸಾಹಿಸಲು, ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಲು, ಸಾಧಕರ ಸಾಧನೆಯನ್ನು ನಾಡಿಗೆ ತಿಳಿಸಲು ಪ್ರಶಸ್ತಿಗಳನ್ನು ಸರಕಾರ ಕೊಡಬೇಕು ಎನ್ನುವುದರಲ್ಲಿ ಆಕ್ಷೇಪವಿಲ್ಲ. ಆದರೆ ಆಕ್ಷೇಪ ಇರುವುದು ನಾಮನಿರ್ದೇಶನದ ಹೆಸರಲ್ಲಿ ಲಾಬಿ, ಶಿಫಾರಸ್ಸುಗಳನ್ನು ಆಹ್ವಾನಿಸುವುದರ ಕ್ರಮದಲ್ಲಿ. ಆಕ್ಷೇಪ ಇರುವುದು ಸಾಧಕರೇ ಸ್ವತಃ ಅರ್ಜಿ ಸಲ್ಲಿಸಿ ಪ್ರಶಸ್ತಿ ಕೊಡಿ ಎಂದು ಕೇಳುವ ರೀತಿಯಲ್ಲಿ, ಬೇಸರ ಇರುವುದು ಪ್ರಶಸ್ತಿಗಳ ಸಂಖ್ಯೆಗಳನ್ನು ಅನಗತ್ಯವಾಗಿ ಹೆಚ್ಚಿಸಿದ್ದರಲ್ಲಿ ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಆಳುವ ಸರಕಾರಗಳಿಗೆ ಅದ್ದೂರಿ ಜಯಂತಿಗಳನ್ನು ಆಯೋಜಿಸುವುದರಲ್ಲಿ, ಪ್ರಶಸ್ತಿ ಪುರಸ್ಕಾರಗಳನ್ನು ಕೊಡುವುದರಲ್ಲಿ ಅದೆಂತಹುದೋ ಸಂಭ್ರಮ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಿರಿಯ ಕಲಾವಿದರಿಗೆ ಸರಿಯಾದ ಸಮಯಕ್ಕೆ ಪಿಂಚಣಿ ಕೊಡಲು ಹಣ ಇರುವುದಿಲ್ಲ, ಸಂಘ ಸಂಸ್ಥೆಗಳಿಗೆ ನಿಗದಿತ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. (ಮೂರು ಕಂತುಗಳಲ್ಲಿ ಕೊಡಲಾಗುತ್ತಿದೆ) ಪ್ರಾಯೋಜಿತ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡಲು ಹಣವೇ ಇಲ್ಲ. ಅಕಾಡೆಮಿ, ಪ್ರಾಧಿಕಾರ, ರಂಗಾಯಣಗಳಿಗೆ ಕೊಡಮಾಡುತ್ತಿದ್ದ ವಾರ್ಷಿಕ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಆದರೆ ಸರಕಾರಿ ಪ್ರಾಯೋಜಿತ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಮಾತ್ರ ಹಣದ ಕೊರತೆ ಇರುವುದಿಲ್ಲ.

ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಗಳನ್ನು ನವೆಂಬರ್ 1 ರಂದು ಆಯ್ದ ಸಾಧಕರಿಗೆ ಕೊಡಲಾಗುತ್ತಿದೆ. ಕನ್ನಡಿಗರ ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷಗಳ ಲೆಕ್ಕದಲ್ಲಿ ಅಷ್ಟೇ ಸಂಖ್ಯೆಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಸಂಪ್ರದಾಯವನ್ನು ಕಳೆದ ಸಲ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಜಾರಿ ಮಾಡಿತ್ತು. ಅದಕ್ಕಿಂತಲೂ ಹಿಂದಿದ್ದ ಸರಕಾರಗಳು ನೂರು, ನೂರೈವತ್ತು, ಇನ್ನೂರಕ್ಕೂ ಹೆಚ್ಚು ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಇಷ್ಟ ಬಂದಂತೆ ಹಂಚಿಕೆ ಮಾಡಿ ಪ್ರಶಸ್ತಿಗಳ ಮಾನ ಹಾಗೂ ಮೌಲ್ಯವನ್ನೇ ಹಾಳುಮಾಡಿದ್ದವು. ತದನಂತರ ಆ ಸಂಖ್ಯೆಯನ್ನು ನಿಯಂತ್ರಿಸಲಾಯ್ತು. ಕರ್ನಾಟಕ ಏಕೀಕರಣವಾಗಿ 69 ವರ್ಷ ಸಂದ ಈ ಸಂದರ್ಭದಲ್ಲಿ 69 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರೆ ಆಗುತ್ತಿತ್ತು.

ಆದರೆ ಇತ್ತೀಚೆಗೆ ಮೈಸೂರಲ್ಲಿ ಸರಕಾರ ಆಯೋಜಿಸಿದ ಸಾಂಸ್ಕೃತಿಕ ಸಲಹಾ ಸಭೆಯಲ್ಲಿ ಇನ್ನೂ ನೂರು ಜನಕ್ಕೆ ಹೆಚ್ಚುವರಿಯಾಗಿ ಸುವರ್ಣ ಕರ್ನಾಟಕ  ಪ್ರಶಸ್ತಿ ಪ್ರದಾನ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯ್ತು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷವಾಗಿರುವುದರ ಸ್ಮರಣೆಗೆ ‘ ಕರ್ನಾಟಕ ಸುವರ್ಣ ಸಂಭ್ರಮ’ ಹೆಸರಲ್ಲಿ 50 ಮಹಿಳಾ ಸಾಧಕಿಯರಿಗೆ ಹಾಗೂ 50 ಪುರುಷ ಸಾಧಕರಿಗೆ ಪ್ರಶಸ್ತಿಯನ್ನು ಕೊಡಬೇಕೆನ್ನುವ ತೀರ್ಮಾನವನ್ನು ಸರಕಾರ ತೆಗೆದುಕೊಂಡಿತು. 69 ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹೆಚ್ಚುವರಿಯಾಗಿ  100 ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಸೇರಿ ಒಟ್ಟು 169 ಸಾಧಕರಿಗೆ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ವಿಧಾನ ಸೌಧದ ಮುಂದೆ ಆಯೋಜಿಸಲಾಗುವ  ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ.

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವಾಗ, ಸರಕಾರಿ ಇಲಾಖೆಗಳಿಗೆ ಹಂಚಿಕೆಮಾಡಲು ಅಗತ್ಯವಿರುವಷ್ಟು ಅನುದಾನ ಬಿಡುಗಡೆ ಮಾಡಲು ಆಗದೇ ಇರುವಾಗ. ಶಾಸಕರುಗಳ ಅಭಿವೃದ್ಧಿ ನಿಧಿಗೆ ಆರ್ಥಿಕ ನಿರ್ಬಂಧ ಇರುವಾಗ ಹೀಗೆ ದುಂದು ವೆಚ್ಚದ ಅದ್ದೂರಿತನದ ಪ್ರಶಸ್ತಿ ಪ್ರದಾನ ಸಮಾರಂಭ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಕಾಡುತ್ತದೆ. ಹೆಚ್ಚುವರಿ ನೂರು ಪ್ರಶಸ್ತಿಗಳ ಜೊತೆಗೆ ತಲಾ ಎರಡು ಲಕ್ಷ ಹಣವನ್ನೂ ಕೊಡಲಾಗುತ್ತದೆ. ಅಂದರೆ ಎರಡು ಕೋಟಿಯಷ್ಟು ನಗದು ಹಾಗೂ ಇನ್ನೂ ಎರಡು ಕೋಟಿಯಷ್ಟು ಸಮಾರಂಭ, ಸನ್ಮಾನ, ಆಯೋಜನೆ ಪ್ರಯೋಜನೆಗಳ ಖರ್ಚೂ ಸರಕಾರಿ ಬೊಕ್ಕಸದಿಂದ ವ್ಯಯ ಮಾಡಬೇಕಾಗುತ್ತದೆ. ಹೆಚ್ಚುವರಿ 100 ಪ್ರಶಸ್ತಿಗಳು ಹಾಗೂ ಪ್ರತಿ ವರ್ಷ ಕೊಡಮಾಡುವ 69 ರಾಜ್ಯೋತ್ಸವ ಪ್ರಶಸ್ತಿಗಳೆಲ್ಲಾ ಸೇರಿ ಸರಿಸುಮಾರು 5 ಕೋಟಿಯಷ್ಟು ತೆರಿಗೆದಾರರ ಹಣ ವ್ಯಯಮಾಡುವುದು ಅನಪೇಕ್ಷಿತವಾಗಿದೆ.

ಅದೇನೋ ಅಂತಾರಲ್ಲಾ ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಅಂತಾ ಹಾಗಾಗಿದೆ ಸರಕಾರದ ಪಾಡು. ಯಾರೂ ಬಂದು ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆಗಳನ್ನು ಹೆಚ್ಚಿಸಿ ಎಂದು ಸರಕಾರವನ್ನು ಕೇಳಿರಲಿಲ್ಲ. ಸರಕಾರದ ಹಣದಲ್ಲಿ ಜಾತ್ರೆ ಮಾಡಿ ತಮ್ಮ ಪಾಲು ಪಡೆಯಲು ಪ್ರಯತ್ನಿಸುವ ಅಧಿಕಾರಿಗಳ ಹಿತಾಸಕ್ತಿ ಹಾಗೂ ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವತ್ತ ಇರುವ ಆಳುವವರ ಆಸಕ್ತಿ ಈ ಪ್ರಶಸ್ತಿ ಸಮಾರಂಭದ ಹಿಂದಿದೆ. ಇದಕ್ಕೆ ಕರ್ನಾಟಕ ಸುವರ್ಣ ಸಂಭ್ರಮ ಎನ್ನುವುದು ನೆಪವಾಗಿದೆ.

ಹೋಗಲಿ ಸಾಧಕರನ್ನು ಗುರುತಿಸಿ ಗೌರವಿಸುವುದು ಸರಕಾರದ ಪ್ರಮುಖ ಸಾಂಸ್ಕೃತಿಕ ಜವಾಬ್ದಾರಿ ಎಂದುಕೊಳ್ಳೋಣ. ಆದರೆ ಸಾಧಕರ ಆಯ್ಕೆಗೆ ಮಾನದಂಡಗಳೇನು? ಪ್ರತಿ ಸಲ ಪ್ರಶಸ್ತಿಗಳು ಘೋಷಣೆಯಾದಾಗಲೂ ಆಕ್ಷೇಪಗಳಿಗೆ ಕೊರತೆ ಇರುವುದಿಲ್ಲ. ಆಳುವ ಪಕ್ಷದ ಕಾರ್ಯಕರ್ತರಿಗೆ, ಸರಕಾರದ ಬೆಂಬಲಿಗರಿಗೆ ಹಾಗೂ ಪಕ್ಷದ ಪರ ಭಜನಾ ಮಂಡಳಿ ಸದಸ್ಯರುಗಳಿಗೆ ಪ್ರಶಸ್ತಿ ಕೊಡಲಾಗುವುದು ಎಂಬ ಅಪಸ್ವರಕ್ಕೆ ಕೊನೆಮೊದಲಿಲ್ಲ. ಸಾಧನೆಗಿಂತಲೂ ವಂದಿಮಾಗಧರಿಗೆ ಮಣೆಹಾಕುವ ಸಂಪ್ರದಾಯವನ್ನು ಎಲ್ಲಾ ಪಕ್ಷದ ಸರಕಾರದ ಕಾಲದಲ್ಲೂ ಚಾಚೂ ತಪ್ಪದೇ ಪಾಲಿಸಲಾಗಿದೆ. ಅದಕ್ಕೆ ಸಿದ್ದರಾಮಯ್ಯನವರ ಆಡಳಿತಾವಧಿ ಹೊರತೇನಲ್ಲ.

ಈ ಸರಕಾರಿ ಪ್ರಾಯೋಜಿತ ರಾಜ್ಯೋತ್ಸವ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಆನ್ ಲೈನ್ ಅರ್ಜಿ ಕರೆಯಲಾಗಿತ್ತು. ಪ್ರಶಸ್ತಿ ಬಯಸುವವರು ಹಾಗೂ ಸಾಧಕರ ಸಮರ್ಥಕರುಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿತ್ತು. 

ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ 5 ಲಕ್ಷ ನಗದು ಹಾಗೂ 25ಗ್ರಾಂ ಚಿನ್ನದ ಪದಕವನ್ನು ಕೊಡಲಾಗುತ್ತದೆ. ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪಡೆಯುವ 100 ಸಾಧಕರಿಗೆ ಪ್ರಶಸ್ತಿಯ ಜೊತೆಗೆ ತಲಾ 2 ಲಕ್ಷ ನಗದು ಹಣವನ್ನು ಕೊಡಲಾಗುತ್ತಿದೆ. ಹೀಗಾಗಿ ಈ ಪ್ರಶಸ್ತಿ ಪಡೆಯಲು ಪೈಪೋಟಿಯೂ ಜೋರಾಗಿರುತ್ತದೆ, ಜೊತೆಗೆ ಲಾಬಿ, ಶಿಫಾರಸ್ಸು ಒತ್ತಡಗಳು ಎಲ್ಲಾ ದಿಕ್ಕುಗಳಿಂದಲೂ ಆಕ್ರಮಣಿಸುತ್ತವೆ.

ನಿಜವಾದ ಸ್ವಾಭಿಮಾನಿ ಸಾಧಕರು ತನಗೊಂದು ಪ್ರಶಸ್ತಿ ಕೊಡಿ ಎಂದು ಅರ್ಜಿ ಹಾಕುವುದಿಲ್ಲ. ಹಾಗೂ ತನಗೊಂದು ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿ ಎಂದು ಕೇಳುವುದೂ ಇಲ್ಲ, ಕೇಳಬಾರದು. ಸರಕಾರ ನೇಮಕ ಮಾಡಿದ ಆಯ್ಕೆ ಸಮಿತಿ ಅರ್ಜಿ ಮರ್ಜಿಗಳ ಬಗ್ಗೆ ಮುತುವರ್ಜಿವಹಿಸದೇ ಆಯಾ ಕ್ಷೇತ್ರಗಳ ಪರಿಣಿತರನ್ನು ಸಂಪರ್ಕಿಸಿ ಅತ್ಯಂತ ಸೂಕ್ತವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವುದು ಉತ್ತಮವಾದ ಮಾರ್ಗ. ಆದರೆ ಈಗ ಪ್ರಶಸ್ತಿ ಬೇಕು ಎಂದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದವರ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚಿದೆ. ಇಂತವರಿಗೆ ಪ್ರಶಸ್ತಿ ಕೊಡಿ ಎಂದು ನಾಮನಿರ್ದೇಶನ ಮಾಡಿದ ಅರ್ಜಿಗಳ ಸಂಖ್ಯೆ ಏಳು ಸಾವಿರಕ್ಕೂ ಹೆಚ್ಚಿದೆಯಂತೆ!. ನನ್ನ ಸಾಧನೆ ಇಷ್ಟೊಂದಿದೆ, ನನಗೆ ಈ ಪ್ರಶಸ್ತಿ ಕೊಡಿ ಎಂದು ಸಾಧನೆಯ ಪಟ್ಟಿಯ ಜೊತೆಗೆ ನೇರವಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 700 ರಷ್ಟಿದೆಯಂತೆ. ಈ ಅರ್ಜಿಗಳ ಭರಾಟೆಯಲ್ಲಿ ನಿಜವಾದ ಸಾಧಕ ನೇಪಥ್ಯದಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದ್ದು ಅರ್ಜಿ ಸಲ್ಲಿಸಬಹುದಾದ ಹಾಗೂ ತನ್ನ ಪರವಾಗಿ ನಾಮ ನಿರ್ದೇಶನ ಮಾಡಿಸಬಹುದಾದ ಮತ್ತು ಲಾಬಿ ಶಿಫಾರಸ್ಸು ತರಬಹುದಾದವರಿಗೆ ಪ್ರಶಸ್ತಿಗಳಲ್ಲಿ ಸಿಂಹಪಾಲು ದಕ್ಕುವುದಂತೂ ಖಚಿತ.

ಇದರ ಜೊತೆಗೆ ಸರಕಾರವು  ಪ್ರಶಸ್ತಿ ಆಯ್ಕೆ ಸಮಿತಿಯೊಂದನ್ನು ರಚಿಸಿದೆ. ಆದರೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಡಾ.ವಸುಂಧರಾ ಭೂಪತಿಯವರು ಹಾಗೂ ಪದನಿಮಿತ್ತ ಸದಸ್ಯರಾಗಿ ಕೆಲವು ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರುಗಳೆಂದು ಘೋಷಣೆ ಕೂಡಾ ಮಾಡಿದೆ. ಆಯ್ಕೆ ಸಮಿತಿಯಲ್ಲಿರುವವರ ಹೆಸರುಗಳನ್ನಾದರೂ ರಹಸ್ಯವಾಗಿ ಇಡಬೇಕಿತ್ತು. ಈಗ  ಪ್ರಶಸ್ತಿ ಆಕಾಂಕ್ಷಿಗಳ ಚಿತ್ತ ಆಯ್ಕೆ ಸಮಿತಿಯವರತ್ತ ತಿರುಗಿದೆ. ಹಲವಾರು ಫೋನ್ ಕಾಲ್ ಗಳು, ಬೇರೆಯವರಿಂದ ಶಿಫಾರಸ್ಸು ಕರೆಗಳಿಗೆ ಉತ್ತರಿಸುವುದೇ ಈಗ ಆಯ್ಕೆ ಸಮಿತಿಯವರ ಕಾಯಕವಾಗಿದೆ. ಪ್ರಭಾವಿಗಳು, ಅತ್ಯಂತ ಆತ್ಮೀಯರುಗಳು ಫೋನ್ ಮಾಡಿ ಇಲ್ಲವೇ ಮಾಡಿಸಿ ಪ್ರಶಸ್ತಿ ಕೊಡಿಸಿ ಎಂದು ಕೇಳಿದಾಗ ಅದು ಆಯ್ಕೆ ಸಮಿತಿಯ ಸದಸ್ಯರುಗಳಿಗೆ ಮುಜುಗರವನ್ನುಂಟು ಮಾಡುತ್ತದೆ. ಮುಲಾಜಿಗೆ ಒಳಗಾಗಿ ಆಯ್ತು ಎಂದು, ಆಗದೇ ಹೋದರೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇಲ್ಲಾ ಆಗುವುದಿಲ್ಲಾ, ಸಮಿತಿಯಲ್ಲಿ ನಿರ್ಧಾರ ಮಾಡಲಾಗುವುದು, ಆಯ್ತು ನೋಡೋಣ ಎಂದು ಆಯ್ಕೆ ಸಮಿತಿಯವರು ಉತ್ತರಿಸಿದರೂ ಆಕಾಂಕ್ಷಿಗಳ ಅಸಮಾಧಾನ ಇದ್ದೇ ಇರುತ್ತದೆ. ಪ್ರಶಸ್ತಿಗಳ ಅಂತಿಮ ಪಟ್ಟಿ ಸಿದ್ಧವಾಗುವವರೆಗೂ ಆಯ್ಕೆ ಸಮಿತಿಯಲ್ಲಿರುವವರ ಹೆಸರನ್ನು ಘೋಷಿಸುವ ಅಗತ್ಯವೇ ಇರಲಿಲ್ಲ. ಆದರ ಪರಿಣಾಮದ ಅರಿವು ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಇದ್ದಂತೆ ಕಾಣುತ್ತಿಲ್ಲ.

ಸಾಧಕರನ್ನು ಪ್ರೋತ್ಸಾಹಿಸಲು, ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಲು, ಸಾಧಕರ ಸಾಧನೆಯನ್ನು ನಾಡಿಗೆ ತಿಳಿಸಲು ಪ್ರಶಸ್ತಿಗಳನ್ನು ಸರಕಾರ ಕೊಡಬೇಕು ಎನ್ನುವುದರಲ್ಲಿ ಆಕ್ಷೇಪವಿಲ್ಲ. ಆದರೆ ಆಕ್ಷೇಪ ಇರುವುದು ನಾಮನಿರ್ದೇಶನದ ಹೆಸರಲ್ಲಿ ಲಾಬಿ, ಶಿಫಾರಸ್ಸುಗಳನ್ನು ಆಹ್ವಾನಿಸುವುದರ ಕ್ರಮದಲ್ಲಿ. ಆಕ್ಷೇಪ ಇರುವುದು ಸಾಧಕರೇ ಸ್ವತಃ ಅರ್ಜಿ ಸಲ್ಲಿಸಿ ಪ್ರಶಸ್ತಿ ಕೊಡಿ ಎಂದು ಕೇಳುವ ರೀತಿಯಲ್ಲಿ, ಬೇಸರ ಇರುವುದು ಪ್ರಶಸ್ತಿಗಳ ಸಂಖ್ಯೆಗಳನ್ನು ಅನಗತ್ಯವಾಗಿ ಹೆಚ್ಚಿಸಿದ್ದರಲ್ಲಿ.

ಈ ಎಲ್ಲಾ ಸೂಕ್ಷ್ಮಗಳು ಸರಕಾರಕ್ಕೆ, ಸರಕಾರ ನಡೆಸುವವರಿಗೆ, ಅವರಿಗೆ ಮಾರ್ಗದರ್ಶನ ನೀಡುವವರಿಗೆ ಅರ್ಥವಾಗಬೇಕಿತ್ತು. ಅಗುವುದಿಲ್ಲ. ಹೀಗಾದಾಗ ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತವೆ. ಜನರ ಕಣ್ಣಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಎಲ್ಲಾ ಸರಕಾರಿ ಪ್ರಾಯೋಜಿತ ಅದ್ದೂರಿ ಜಾತ್ರೆಗಳಂತೆ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆದು ಪ್ರಶಸ್ತಿ ಕೊಡುವ ಹಿಂದಿನ ನಿಜವಾದ ಉದ್ದೇಶವೇ ಗೌಣವಾಗುತ್ತದೆ. ಅಬ್ಬರ ಲಾಬಿ ಶಿಫಾರಸ್ಸು ಪ್ರಭಾವ ಹಾಗೂ ಸರಕಾರದ ಹಣದ ಅಪವ್ಯಯವೇ ಹೆಚ್ಚಾಗುತ್ತದೆ. ಈ ಸಲವಾದರೂ ಆಯ್ಕೆ ಸಮಿತಿ ಯಾವುದೇ ಒತ್ತಡಕ್ಕೊಳಗಾಗದೇ ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿಗಳ ಮೌಲ್ಯವನ್ನು ಹೆಚ್ಚಿಸುವ ಸ್ತುತ್ಯರ್ಹ ಕೆಲಸ ಮಾಡಲಿ ಎಂಬುದೇ ಸಮಸ್ತ ಕನ್ನಡಿಗರ ಆಶಯವಾಗಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ರಾಜಕೀಯ ವಿಶ್ಲೇಷಕರು

ಈ ಸುದ್ದಿಯನ್ನು ಓದಿದ್ದೀರಾ? ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು 50 ಜನರ ಸಮಿತಿ ರಚನೆ

More articles

Latest article