ಪರಿಹಾರರೂಪವಾಗಿ ಪಡೆದ ಸೈಟುಗಳನ್ನು ಹಿಂದಿರುಗಿಸಿದ ಸಿಎಂ ಪತ್ನಿ ಪಾರ್ವತಿ

Most read

ಮೈಸೂರು: ತಮ್ಮ ಜಮೀನಿನಲ್ಲಿ ಮುಡಾ ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದ ಬೆನ್ನಲ್ಲಿ ಪರಿಹಾರ ರೂಪವಾಗಿ ಪಡೆದಿದ್ದ ಎಲ್ಲ ಹದಿನಾಲ್ಕು ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಹಿಂದಕ್ಕೆ ನೀಡಿದ್ದಾರೆ.

ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಯಾವ ಕಳಂಕವನ್ನೂ ಹೊತ್ತುಕೊಳ್ಳದ ಪತಿ ಸಿದ್ಧರಾಮಯ್ಯ ಅವರ ಮೇಲೆ ಮುಡಾ ಪ್ರಕರಣವನ್ನು ಕೆಸರು ಎರಚಲು ಬಳಸಿಕೊಳ್ಳಲಾಗುತ್ತಿರುವ ಕುರಿತು ಅವರು ತೀವ್ರ ವ್ಯಥೆ ವ್ಯಕ್ತಪಡಿಸಿದ್ದಾರೆ.

ಶ್ರೀಮತಿ ಪಾರ್ವತಿಯವರು ಮುಡಾ ಆಯುಕ್ತರಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.

ಇವರಿಗೆ,

ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆ, ಮೈಸೂರು, ಕರ್ನಾಟಕ – 570 005

ಇಂದ, ಶ್ರೀಮತಿ, ಪಾರ್ವತಿ, W/o ಶ್ರೀ ಸಿದ್ದರಾಮಯ್ಯ, R/a ‘ಕಾವೇರಿ’, ಕುಮಾರ ಕೃಪಾ ರಸ್ತೆ, ಬೆಂಗಳೂರು.

ಮಾನ್ಯರೇ,

ವಿಷಯ: ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ 464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ನನಗೆ ಮಂಜೂರು ಮಾಡಲಾದ 14 ನಿವೇಶನಗಳನ್ನು ಹಿಂದಿರುಗಿಸುವ ಕುರಿತು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೇ ನಂ 464 ರಲ್ಲಿ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರವಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳನ್ನು ಮಂಜೂರು ಮಾಡಿರುವುದು ನಿಮಗೆ ತಿಳಿದಿದೆ.

ಮುಂದುವರಿದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನನ್ನ ಪರವಾಗಿ ಕಾರ್ಯಗತಗೊಳಿಸಿದ 14 ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸುವ ಮೂಲಕ ನಾನು ಪರಿಹಾರದ ನಿವೇಶನಗಳನ್ನು ಒಪ್ಪಿಸಲು ಮತ್ತು ಹಿಂತಿರುಗಿಸಲು ಬಯಸುತ್ತೇನೆ. ನಿವೇಶನಗಳ ಸ್ವಾಧೀನವನ್ನು ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ. ದಯವಿಟ್ಟು ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಿ.

ವಂದನೆಗಳೊಂದಿಗೆ.

ತಮ್ಮ ವಿಶ್ವಾಸಿ
(ಶ್ರೀಮತಿ ಪಾರ್ವತಿ)

More articles

Latest article