ಗಾಂಧಿ ಜಯಂತಿ | ಜಗತ್ತಿನ ಮನ ಗೆದ್ದ ಮಹಾತ್ಮ

Most read

ಭಾರತೀಯರ ಮನಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಪ್ರಮುಖ ಹೆಸರುಗಳಲ್ಲಿ ಮಹಾತ್ಮ ಗಾಂಧೀಜಿಯವರದೂ ಒಂದು. ನಾಳೆ ಅವರ ಹುಟ್ಟುಹಬ್ಬ. ಆ ಪ್ರಯುಕ್ತ (ಅ. 2) ಅವರನ್ನು ನೆನೆದು ಅವರ ಕೊಡುಗೆ, ತತ್ವ ಸಿದ್ಧಾಂತಗಳನ್ನು ಸ್ಮರಿಸಿದ್ದಾರೆ ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಚಿಂತನೆಗಳು, ತತ್ವಗಳು, ಸಂಘಟನೆ, ತ್ಯಾಗ, ದೇಶಪ್ರೇಮ, ಚಳುವಳಿಗಳು, ಸರ್ವೋದಯ ಪರಿಕಲ್ಪನೆ, ಸತ್ಯ-ಅಹಿಂಸೆಯ ಜೀವನ, ಶಾಂತಿ, ಸಹನೆ, ನೈತಿಕ ಶಕ್ತಿ, ಗ್ರಾಮೀಣ ಅಭ್ಯುದಯ, ಅಸ್ಪೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಸಾಕ್ಷರತೆ, ಧರ್ಮ ಸಹಿಷ್ಣುತೆ , ಸತ್ಯಾಗ್ರಹದ ಆಶಯ, ಸ್ವಾತಂತ್ರ್ಯಕ್ಕೆ ಜನರಲ್ಲಿ ಜಾಗೃತಿ, ಖಾದಿ ಪ್ರಚಾರ, ಮೂಲಶಿಕ್ಷಣ, ಆದಿವಾಸಿ ಕಲ್ಯಾಣ, ವಯಸ್ಕರ ಶಿಕ್ಷಣ ಮುಂತಾದ ಸಂಗತಿಗಳು ಗಾಂಧೀಜಿಯನ್ನು ಅಮರವಾಗಿಸಿವೆ. ಅವರು ಬದುಕಿನಲ್ಲಿ ಅಳವಡಿಸಿಕೊಂಡ ಸರಳತೆ, ಸಜ್ಜನಿಕೆ, ದೂರದರ್ಶಿತ್ವ, ಗ್ರಾಮೀಣ ಪುನರ್ರಚನೆ, ಸಮಾನತೆ, ಮಹಿಳಾ ಸಬಲೀಕರಣಗಳು ಮಹತ್ವ ಪಡೆದಿವೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ನಾಯಕರಾಗಿದ್ದ ಇವರು ಭಾರತೀಯರ ಮನದಾಳದಲ್ಲಿ ಶಾಶ್ವತ ನೆಲೆಯೂರಿದ್ದಾರೆ.  ಅಕ್ಟೋಬರ್ 2 ಅವರ ಜನ್ಮ ದಿನದ ಸವಿ ನೆನಪಿಗೆ ಅವರ ವ್ಯಕ್ತಿತ್ವ ದರ್ಶನ ಅಗತ್ಯವಾಗಿದೆ.

ಜನನ, ವಿದ್ಯಾಭ್ಯಾಸ, ಕೌಟುಂಬಿಕ ಜೀವನ

ಮೋಹನದಾಸ್ ಕರಮ್‍ಚಂದ್ ಗಾಂಧಿಯವರು 1869 ಅಕ್ಟೋಬರ್ 2 ರಂದು ಗುಜರಾತ್ ರಾಜ್ಯದ ಕರಾವಳಿ ಪಟ್ಟಣ ಪೋರ ಬಂದರಿನಲ್ಲಿ ಜನಿಸಿದರು.  ತಂದೆ ಕರಮ್‍ಚಂದ್ ತಾಯಿ, ಪುತಳಿಬಾಯಿ. ಪೋರಬಂದರಿನಲ್ಲಿ ಪ್ರಾಥಮಿಕ‌, ರಾಜಕೋಟ್‍ನಲ್ಲಿ ಪ್ರೌಢಶಾಲೆ, ಭಾವನಗರದಲ್ಲಿ ಕಾಲೇಜು ವಿದ್ಯಾಭ್ಯಾಸದ ನಂತರ 1888 ರಲ್ಲಿ ಕಾನೂನು ಅಧ್ಯಯನಕ್ಕೆ ಇಂಗ್ಲೆಂಡಿಗೆ ತೆರಳಿ 1891ರಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಮರಳಿದರು.  1893 ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಅಲ್ಲಿಯೇ 20 ವರ್ಷ ನೆಲೆಸಿ 1915 ರಲ್ಲಿ ಭಾರತಕ್ಕೆ ಬಂದರು. 1883 ರಲ್ಲಿಯೇ ಬಾಲ್ಯವಿವಾಹ.  ಹರಿಲಾಲ್, ಮಣಿಲಾಲ್, ರಾಮದಾಸ್ ಮತ್ತು ದೇವದಾಸ್ ಎಂಬ ನಾಲ್ಕು ಗಂಡು ಮಕ್ಕಳ ಕೌಟುಂಬಿಕ ಜೀವನ.

ಗಾಂಧೀಜಿಯ ಸತ್ಯ-ಅಹಿಂಸೆಯ ತತ್ವಗಳು:

ಗಾಂಧೀಜಿಯವರ ಜೀವನವೆಂದರೆ ಸತ್ಯ ಮತ್ತು ಅಹಿಂಸೆಗಳ ಭಾಷ್ಯವೇ ಸರಿ.  ಸತ್ಯಕ್ಕೆ ಹಲವು ಮುಖಗಳಿವೆ.  ಸತ್ಯದ ಸಮ್ಯಕ್ ದರ್ಶನವೇ ಆತ್ಮ ಸಾಕ್ಷಾತ್ಕಾರ. ಸತ್ಯ, ಅಹಿಂಸೆ ಒಂದೇ ನಾಣ್ಯದ ಎರಡು ಮುಖಗಳು.  ಸತ್ಯವಿದ್ದಲ್ಲಿ ಜ್ಞಾನ, ಜ್ಞಾನವಿದ್ದಲ್ಲಿ ಸತ್ಯ.  ಸತ್ಯವು ಭಾವ, ಕ್ರಿಯೆ ಮತ್ತು ಮಾತಿನಲ್ಲಿ ವ್ಯಕ್ತವಾಗಬೇಕು. ಸತ್ಯವೇ ನಮ್ಮ ಬದುಕಿನ ಉಸಿರಾಗಬೇಕು. ಮನದಲ್ಲಿ, ನಡೆಯಲ್ಲಿ, ನುಡಿಯಲ್ಲಿ ಸತ್ಯ ಪಾಲಿಸಬೇಕೆಂಬುದು ಗಾಂಧೀಜಿಯವರ ಆಶಯ. ಅಹಿಂಸೆ ಮನಸ್ಸಿನ ಒಂದು ವೃತ್ತಿಯಾಗಿದೆ. ಕೋಪ, ಅಹಿಂಸೆಯ ಶತ್ರು. ಅಹಿಂಸೆಯ ಆಚರಣೆಯಲ್ಲಿ ಪ್ರೇಮ, ತ್ಯಾಗ, ಸಹನೆ, ಮತ್ತು ಧೈರ್ಯ ಎಂಬ ಅಂಶಗಳಿವೆ. ಅಹಿಂಸೆಯ ತತ್ವ ಅಷ್ಟು ಸುಲಭವಾಗಿ ಬರಲಾರದು. ಯೋಗ್ಯಶಿಕ್ಷಣ, ಸಂಸ್ಕಾರ ಬೇಕು. ಸತ್ಯ ಪರಮಧರ್ಮ, ಅಹಿಂಸೆ ಪರಮ ಕರ್ತವ್ಯ. ಅಹಿಂಸೆಗೆ ಸೋಲಿಲ್ಲ. ಅದೊಂದು ನೈತಿಕ ಶಕ್ತಿ.  ಹೀಗಾಗಿ ಅಹಿಂಸೆ ಮತ್ತು ಸತ್ಯ ಮಾನವ ಧರ್ಮವಾಗಬೇಕು ಎಂಬುದು ಅವರ ಪರಮ ವಿಚಾರವಾಗಿತ್ತು.

ಗಾಂಧೀಜಿಯವರ ಸರ್ವೋದಯದ ಪರಿಕಲ್ಪನೆ

ಸರ್ವೋದಯ ಗಾಂಧೀಜಿಯವರ ಪ್ರಬುದ್ಧ ಚಿಂತನೆ.  ಜಾನ್‍ ರಸ್ಕಿನ್‍ರ ‘ಅನ್ ಟು ದಿಸ್ ಲಾಸ್ಟ್” ಎಂಬ ಕೃತಿಯನ್ನು ಓದಿ ಗಾಂಧೀಜಿಯ ಜೀವನದಲ್ಲಿ ಅವರ ತತ್ವಗಳು ಪ್ರಭಾವ ಬೀರಿದವು. ಸರ್ವೋದಯ ಸಮಾಜ ಸ್ಥಾಪಿಸಲು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಖಾದಿಯ ಪ್ರಚಾರ, ಅಸ್ಪೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಗ್ರಾಮ ನೈರ್ಮಲ್ಯ, ಮೂಲ ಶಿಕ್ಷಣ, ವಯಸ್ಕರ ಶಿಕ್ಷಣ, ವ್ಯವಸಾಯ ಅಭಿವೃದ್ಧಿ, ಕುಷ್ಟರೋಗಿಗಳ ಉಪಚಾರ, ಆದಿವಾಸಿ ಕಲ್ಯಾಣ, ಕಾರ್ಮಿಕರ ಸಂಘಟನೆ, ಸ್ತ್ರೀ-ಪುರುಷರ ಹಕ್ಕುಗಳ ಸಮಾನತೆ, ಪ್ರಾಮಾಣಿಕ ಜೀವನ, ರಾಷ್ಟ್ರಭಾಷೆ, ಮಾತೃಭಾಷೆ ಮತ್ತು ಸಂಪರ್ಕಭಾಷೆ, ಧರ್ಮ ಸಹಿಷ್ಣುತೆಯ ಆಶಯವೇ ಗಾಂಧೀಜಿಯ ಸರ್ವೋದಯ ಪರಿಕಲ್ಪನೆ.

ಗಾಂಧೀಜಿಯವರ ಗ್ರಾಮೀಣ ಪುನರ್‍ರಚನೆ

ನವದೆಹಲಿಯ ಬಿರ್ಲಾ ಹೌಸ್‌ ನಲ್ಲಿ ಸಂತಸದ ಕ್ಷಣ ( ಗೆಟ್ಟಿ ಇಮೇಜಸ್)

ದಕ್ಷಿಣ ಆಫ್ರೀಕಾದಿಂದ ಗಾಂಧೀಜಿ 1915 ರಲ್ಲಿ ಭಾರತಕ್ಕೆ ಬಂದಾಗ ಗ್ರಾಮಗಳ ಬಗೆಗೆ ಆಳವಾದ ಪರಿಚಯ ಅವರಿಗಿರಲಿಲ್ಲ.  ಗೋಖಲೆ ಮಾರ್ಗದರ್ಶನದಂತೆ ಭಾರತದಾದ್ಯಂತ ಸುತ್ತಾಡಿ ಗ್ರಾಮಗಳ ವಾಸ್ತವಿಕ ಸ್ಥಿತಿ ಅರಿತರು.  ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಕಂಡು ಗ್ರಾಮಗಳ ಪುನರ್ ರಚನೆಗೆ ಆದ್ಯತೆ ನೀಡಿದರು. ಸಹಕಾರ-ಸೌಹಾರ್ದತೆಯಿಂದ ಗ್ರಾಮ ಸ್ವರಾಜ್ಯ ಸ್ಥಾಪಿಸುವುದು..  ಗ್ರಾಮ ಸಭೆ, ಗ್ರಾಮ ಪಂಚಾಯಿತಿ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪಿಸುವ ಆಶಯದೊಂದಿಗೆ ಭೂಮಿಯ ಪುನರ್ ಹಂಚಿಕೆ, ಭೂರಹಿತರಿಗೆ ಭೂಮಿ, ಗೋಮಾಳ, ದೇವಾಲಯ, ಆಟದ ಮೈದಾನ, ಶಾಲೆ, ಮನರಂಜನೆಯ ಸ್ಥಳ, ರಂಗ ಮಂದಿರ, ಸಭಾಭವನ, ಮುಂತಾದವುಗಳಿಗೆ ಭೂಮಿ ನೀಡುವುದು.  ಗ್ರಾಮ ಪಂಚಾಯಿತಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದು. ಪ್ರತಿಯೊಬ್ಬರೂ ಸಾಕ್ಷರರಾಗುವುದು. ಜೀವನ ಮೌಲ್ಯಗಳಾದ ಪ್ರೀತಿ, ವಿಶ್ವಾಸ, ಸಹನೆ, ಅನುಕಂಪ ಮೈಗೂಡಿಸಿಕೊಂಡು ಬದುಕಲು ಆರೋಗ್ಯ ಶಿಕ್ಷಣ, ಮೂಲ ಶಿಕ್ಷಣ, ಉದ್ಯೋಗ ಕೇಂದ್ರೀತ ಶಿಕ್ಷಣದ ಅವಶ್ಯಕತೆಯನ್ನು ತಿಳಿಸಿದರು.

ಗಾಂಧೀಜಿಯವರ ಮೂಲ ಶಿಕ್ಷಣದ ಆಶಯ

ಕೈಕೆಲಸದ ಮೂಲಕ ಮಗುವಿನ ದೈಹಿಕ, ಬೌದ್ಧಿಕ, ಮತ್ತು ನೈತಿಕ ಅಭಿವೃದ್ಧಿಯೇ ಮೂಲ ಶಿಕ್ಷಣದ ಗುರಿ.  ಸಾಕ್ಷರತೆ ಶಿಕ್ಷಣದ ಕೊನೆಯೂ ಅಲ್ಲ, ಆರಂಭವೂ ಅಲ್ಲ.   ಎಲ್ಲರೂ ಶಿಕ್ಷಣ ಪಡೆಯುವುದು ಒಂದು ದಾರಿ ಅಷ್ಟೇ.  ಆದ್ದರಿಂದ ಮಗುವಿಗೆ ಕೈಕಸುಬು ಹೇಳಿಕೊಟ್ಟು, ಅದು ತನ್ನ ತರಗತಿಯ ಜೊತೆಯಲ್ಲೇ ಉತ್ಪಾದನೆ ತಿಳಿಯುವ, ಕಲಿಯುವ ಮಗುವಿನ ಶಿಕ್ಷಣ ಆರಂಭಿಸಬೇಕು.  ಅಂತಹ ಶಿಕ್ಷಣ ಪದ್ಧತಿಯಲ್ಲಿ ಮನಸ್ಸು, ಆತ್ಮಗಳ ಅತ್ಯುನ್ನತ ಬೆಳವಣಿಗೆ ಸಾಧ್ಯ ಎಂದರು. ಶಿಕ್ಷಣವು ಸಾಧ್ಯವಾಗಬೇಕಾದರೆ, ಸ್ವಯಂ ನಿರ್ಭರವಾಗಬೇಕು.  ಶಿಕ್ಷಣವು ಮಾತೃಭಾಷೆಯಲ್ಲಿ ಇರಬೇಕು. ಒಳ್ಳೆಯ ಶೀಲವನ್ನು ರೂಪಿಸದೇ ಇರುವ ಶಿಕ್ಷಣಕ್ಕೆ ಬೆಲೆ ಇಲ್ಲ. ಭಾರತದ ಶಿಕ್ಷಣ ನೀತಿ ಮತ್ತು ರಚನೆ, ಪಾಶ್ಚಿಮಾತ್ಯ ಶೈಲಿಯ ಅಕ್ಷರಜ್ಞಾನ, ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನೇ ಪ್ರತಿಪಾದಿಸುತ್ತದೆಯೇ ಹೊರತು ಗಾಂಧೀಜಿಯ ಮೂಲ ಶಿಕ್ಷಣದ ಪ್ರಭಾವ ಇಲ್ಲಿ ಅತ್ಯಲ್ಪ.  ಗುಜರಾತ್ ವಿದ್ಯಾಪೀಠ, ಮಧುರೈ ಬಳಿಯ ಗಾಂಧಿ ಗ್ರಾಮ ವಿಶ್ವವಿದ್ಯಾನಿಲಯಗಳು ಗಾಂಧೀಜಿ ಕಲ್ಪನೆಯನ್ನು ಜೀವಂತವಾಗಿ ಉಳಿಸಿ ಕೊಂಡಿವೆ.  ಭಾರತದಲ್ಲಿ 125ಕ್ಕೂ ಹೆಚ್ಚು ವಿ.ವಿ. ಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳಿವೆ.

ಗಾಂಧೀಜಿಯ ಸತ್ಯಾಗ್ರಹ ಆಶ್ರಮ, ಚಳುವಳಿಗಳು

ಭಾರತದಲ್ಲಿ  ಗಾಂಧೀಜಿ ತಮ್ಮ ಮೊದಲ ಆಶ್ರಮವನ್ನು 1915 ಮೇ 25 ರಂದು ಅಹಮದಾಬಾದ್ ಸಮೀಪದ ‘ಸಾಬರಮತಿ’ ನದಿ ತೀರದ ಪಕ್ಕದಲ್ಲಿದ್ದ ಕೊಚ್ರಾಬ್ ಪ್ರದೇಶದಲ್ಲಿ ಸ್ಥಾಪಿಸಿದರು. ಇದಕ್ಕೆ ನಿವೇಶನವನ್ನು ಜೀವನಲಾಲ್ ದೇಸಾಯಿ ಎಂಬ ಬ್ಯಾರಿಸ್ಟರ್ ನೀಡಿದರು. ಮಂಗಳದಾಸ್, ಗಿರಿಧರದಾಸ್ ಎಂಬ ಸಿರಿವಂತರಿಬ್ಬರು ಗಾಂಧೀಜಿ ಸ್ಥಾಪಿಸುವ ಆಶ್ರಮದ ಖರ್ಚು-ವೆಚ್ಚಗಳನ್ನು ಭರಿಸುವುದಾಗಿ ಹೇಳಿದ್ದರು.  ಆಶ್ರಮಕ್ಕೆ ‘ಸತ್ಯಾಗ್ರಹ ಆಶ್ರಮ’ ಎಂದು ಹೆಸರಿಸಲಾಯಿತು.  ಚಂಪಾರಣ್ ಸತ್ಯಾಗ್ರಹ, ಗಿರಿಣಿ ಕಾರ್ಮಿಕರ ಮುಷ್ಕರ, ಖೇಡಾ ಸತ್ಯಾಗ್ರಹ, ರೌಲೇಟ್ ಕಾಯಿದೆ ಹೋರಾಟ, ಜಲಿಯನ್‌ ವಾಲಾ ಭಾಗ್ ಹತ್ಯಾಕಾಂಡ, ಖಿಲಾಫತ್ ಚಳುವಳಿ, ಅಸಹಕಾರ ಚಳುವಳಿ, ಬರ್ಡೋಲಿ ಸತ್ಯಾಗ್ರಹ, ದಂಡಿಯಾತ್ರೆ, ಭಾರತ ಬಿಟ್ಟು ತೊಲಗಿ ಮುಂತಾದ ಚಳುವಳಿಗಳಿಂದ ಭಾರತೀಯರನ್ನು ಜಾಗೃತ ಗೊಳಿಸಿದರು. 

ಗಾಂಧೀಜಿ ಸತ್ಯಾಗ್ರಹದ ತತ್ವ-ನಿಯಮಗಳು

ರೈಲಿನಲ್ಲಿ ದೇಣಿಗೆ ಸ್ವೀಕರಿಸುತ್ತಿರುವುದು.‌ ( ಗೆಟ್ಟಿ ಇಮೇಜಸ್)

ಸತ್ಯಾಗ್ರಹದ ತತ್ವ ಮತ್ತು ನಿಯಮಗಳು ಗಾಂಧೀಜಿ ಜಗತ್ತಿಗೆ ಕೊಟ್ಟ ಮಹತ್ವದ ಕಾಣಿಕೆ.  ಸತ್ಯಾಗ್ರಹವೆಂಬ ತಂತ್ರವನ್ನು ಬಳಸಿ ಅನ್ಯಾಯದ ವಿರುದ್ಧ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಅವರು ಹೋರಾಡಿದರು. ಇದು ಗಾಂಧೀಜಿಯವರ ಅವಿರತ ಪರಿಶ್ರಮ ಹಾಗೂ ಪ್ರಯೋಗದಿಂದ ಮಹತ್ವದ ಸಾಧನೆಯಾಗಿ ದೇಶದ ರಾಷ್ಟ್ರೀಯ ವಿಮೋಚನಾ ಆಂದೋಲನದಲ್ಲಿ ಒಂದು ಅಸ್ತ್ರವಾಗಿ ಪರಿಣಮಿಸಿತು.  ದಕ್ಷಿಣ ಆಫ್ರಿಕಾದಲ್ಲಿ 1906 ರ ಚಳುವಳಿಗೆ ರಸ್ಕಿನ್, ಟಾಲ್‍ಸ್ಟಾಯ್, ಥೋರೋ, ರಾಯಿಚಂದಬಾಯ, ಬರಹಗಳು ಮತ್ತು ಭಗವದ್ಗೀತಾ, ಉಪನಿಷತ್, ಕುರಾನ್, ಬೈಬಲ್‍ಗಳ ಅಧ್ಯಯನದಿಂದ ಆದ ಪ್ರೇರಣೆ ಎಂಬುದು ಗಾಂಧೀಜಿಯ ಅಭಿಮತ.  ಸತ್ಯಾಗ್ರಹಿಯು ಅನುಸರಿಸಬೇಕಾದ  ಗುಣಗಳ ಕುರಿತು ಹೀಗೆ ಹೇಳಿದ್ದಾರೆ – ಸತ್ಯದಲ್ಲಿ ಅಚಲ ವಿಶ್ವಾಸ, ನಂಬಿಕೆ, ಪರಿಶುದ್ಧ ಜೀವನ, ಖಾದಿ ಬಟ್ಟೆ ಧಾರಣೆ, ಮದ್ಯಪಾನ ನಿಷೇಧ, ಆತ್ಮಗೌರವಕ್ಕೆ ಚ್ಯುತಿ ಬರದಂತೆ ಇರುವುದು, ಸತ್ಯ-ಅಹಿಂಸೆಯೇ ಗುರಿಯಾಗಿರಬೇಕು, ಕಾರಾಗೃಹದ ನಿಯಮಗಳನ್ನು ಪಾಲಿಸಬೇಕು ಎಂಬುದಾಗಿದೆ.  ಸತ್ಯಾಗ್ರಹವು ಹಲವು ರೂಪಗಳನ್ನು ಹೊಂದಿದೆ.  ಅಸಹಕಾರ, ಹರತಾಳ, ಬಹಿಷ್ಕಾರ, ಕಾಯ್ದೆಭಂಗ, ಉಪವಾಸ, ಹಿಜ್ರತ್, ಮುಷ್ಕರ, ಪಿಕೆಟಿಂಗ್ ಇತ್ಯಾದಿ. ಸಾಮಾಜಿಕ ಏಳ್ಗೆ ಮತ್ತು ಸುಖೀರಾಜ್ಯದ ಸ್ಥಾಪನೆಗೆ ಇವಗಳು ಕಾರ್ಯರೂಪಕ್ಕಿರಬೇಕೇ ಹೊರತು ಸ್ವಾರ್ಥಕ್ಕೆ ಅಧಿಕಾರದಾಹಕ್ಕಾಗಿ ಇದನ್ನು ಉಪಯೋಗಿಸಕೂಡದು ಎಂಬುದು ಗಾಂಧೀಜಿಯ ದೃಢ ಸಂಕಲ್ಪವಾಗಿದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಧ್ರುವತಾರೆ, ಸತ್ಯ, ಅಹಿಂಸೆ, ಶಾಂತಿ, ಆದರ್ಶ ತತ್ವಗಳಿಂದಾಗಿ ಮಹಾಪುರುಷರ ಸಾಲಿಗೆ ಸೇರಿದ ಗಾಂಧೀಜಿಗೆ ‘ಮಹಾತ್ಮಾಗಾಂಧಿ’ ಎಂಬ ಗೌರವ ಸೂಚಕ ಪದವನ್ನು ಮೊದಲು ನೀಡಿದ್ದು, ರವೀಂದ್ರನಾಥ್ ಟಾಗೂರರು. ಅವರನ್ನು ‘ರಾಷ್ಟ್ರಪಿತ’ ಎಂದು ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಸುಭಾಷ್ ಚಂದ್ರಭೋಸ್ ಜುಲೈ-6, 1944 ರಂದು ಕರೆದರು.  ಈ ದಿನವನ್ನು ರಾಷ್ಟ್ರೀಯ ರಜಾದಿನ ಮತ್ತು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ

More articles

Latest article