ನಾನು ಸಿದ್ದರಾಮಯ್ಯ ಪರ ನಿಲ್ಲುತ್ತೇನೆ ಏಕೆಂದರೆ?…

Most read

ಆರ್ಥಿಕ ಭ್ರಷ್ಟಾಚಾರಕ್ಕಿಂತ ಕೋಮುವಾದ ಈ ಸಮಾಜಕ್ಕೆ ದೊಡ್ಡ ಕಂಟಕ.‌ ಮನುಷ್ಯ ಸಂಬಂಧಗಳನ್ನು ರಕ್ತಪಾತದಲ್ಲಿ ಕೊನೆಗಾಣಿಸಿಬಿಡುತ್ತದೆ. ಅರಾಜಕತೆ ರಾಷ್ಟ್ರವನ್ನೆ ಸೃಷ್ಟಿಸಬಲ್ಲದು.

ಅಧಿಕಾರದಲ್ಲಿದ್ದು ರಾಜಧರ್ಮವನ್ನು ಮರೆತು ಜಾತಿ, ಧರ್ಮದ ಹೆಸರಲ್ಲಿ ಜನಾಂಗೀಯ ಹತ್ಯೆಗಳನ್ನು ನಡೆಸಿದವರು ವಿಶ್ವ ಗುರುವಿನಂತೆಯೂ, ಯುದ್ಧ ನಿರತ ಜಾಗತಿಕ ರಾಷ್ಟ್ರಗಳ ನಡುವಿನ ಸಂಧಾನದ ಶಾಂತಿಧೂತರಂತೆಯೂ ಮುಖವಾಡ ಧರಿಸಿರುವುದನ್ನು ನೋಡುವಂತಾಗಿದೆ.

ಧರ್ಮದ ಹೆಸರಲ್ಲಿ ರಕ್ತಪಾತವನ್ನೆ ನಡೆಸಿದವರನ್ನು ಸಮರ್ಥಿಸಿಕೊಂಡು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡವರು, ಬೇರೆ ಬೇರೆ ಪಕ್ಷಗಳ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಆತ್ಮವಂಚಕರು ಧರ್ಮ ಧರ್ಮಗಳ ನಡುವೆ ಸೌಹಾರ್ದತೆಗೆ ದುಡಿಯುವ, ಬಡ- ಬಗ್ಗರಿಗೆ, ಅಸಹಾಯಕರಿಗೆ ಶಕ್ತಿತುಂಬುವ ಯೋಜನೆಗಳನ್ನು ಕೊಟ್ಟ ಸಿದ್ದರಾಮಯ್ಯ ಅವರ ನೈತಿಕತೆಯನ್ನು ಪ್ರಶ್ನಿಸುವುದು ವಿಪರ್ಯಾಸ ಅಲ್ಲವೆ.!?

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅದನ್ನು ಪಾಲಿಸಬೇಕಾದವರೆ ಅದಕ್ಕೆ ವಿರುದ್ಧವಾಗಿ ಜನರ ಮಾರಣಹೋಮಕ್ಕಿಳಿದದ್ದು ಘೋರ ಅಪರಾಧ. ಅಧಿಕಾರ ದಂಡ ಹಿಡಿದವರು ರಾಜಧರ್ಮ ಪಾಲಿಸಲು ವಿಫಲರಾಗಿದ್ದೇವೆ ಎಂಬ ಆತ್ಮಸಾಕ್ಷಿಯ ‘ನೈತಿಕ’ ಹೊಣೆ ಹೊತ್ತು ತಾವಿದ್ದ ಸಾಂವಿಧಾನಿಕ ಹುದ್ದೆಗಳಿಗೆ ರಾಜೀನಾಮೆ ಕೊಟ್ಟ ಮಾದರಿಗಳು ಇವೆಯಾ?

ಸೈದ್ಧಾಂತಿಕ ವಿರೋಧಿಗಳನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕವೆ ಮಟ್ಟಹಾಕುವ, ಬಾಯಿಮುಚ್ಚಿಸುವ ಪ್ಯೂಢಲ್ ರಾಜಕಾರಣದ ಮಾದರಿಯೊಂದು ದೇಶದಲ್ಲಿ ಸದ್ಯ ಚಾಲ್ತಿಯಲ್ಲಿದೆ. ಇದರ ಭಾಗವಾಗಿಯೇ ಸಿದ್ದರಾಮಯ್ಯ ಅವರ ವಿರುದ್ಧ ಮೂಡಾ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಕನ್ನಡಿ ಬೇಕಿಲ್ಲ.

ಇಂತಹ ಫ್ಯೂಢಲ್ ರಾಜಕಾರಣದ ಆಂತರ್ಯದಲ್ಲಿ ಕೋಮುವಾದ, ಮನುಸಿದ್ಧಾಂತ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಿಸುಕಾಡುತ್ತಿದೆ. ಕೋಮುವಾದಕ್ಕೆ ಈ ರಾಜ್ಯದಲ್ಲಿ ರಾಜಕೀಯವಾಗಿ ದೊಡ್ಡ ತಡೆಗೋಡೆಯಂತಿರುವುದೇ ಸಿದ್ದರಾಮಯ್ಯ.

ಸಿದ್ದರಾಮಯ್ಯ ಅವರನ್ನು ನಿವಾರಿಸಿಕೊಳ್ಳದ ಹೊರತು ಮತೀಯವಾದಿಗಳಿಗೆ ಬೇರೆ ದಾರಿಯೇ ಇಲ್ಲ,

ದಿನ ಬೆಳಗಾದರೆ ಹಿಂದೂ-ಮುಸ್ಲಿಂ, ದನ, ಹಂದಿ, ಮಂದಿರ-ಮಸೀದಿ, ಜಿಹಾದ್, ಬುರ್ಖಾ, ಬಹಿಷ್ಕಾರದಂತಹ ಕೇಡುಗಳ ಬಿತ್ತುವ ದುಷ್ಟ ಸಿದ್ದಾಂತ, ದುರುಳರ ನಡುವೆ ಸಮಾನತೆ, ಸೌಹಾರ್ದತೆ, ನ್ಯಾಯ, ಅನ್ನ, ಅಕ್ಷರ, ಸ್ತ್ರೀ ಅಭ್ಯುದಯ….ದಂತಹ ಜೀವಮೌಲಿಕ ಉದ್ದೇಶಗಳನ್ನೆ ರಾಜಕೀಯ ಸಂಸ್ಕೃತಿ ಮತ್ತು ಮಾದರಿಯನ್ನಾಗಿಸಿಕೊಂಡವರಲ್ಲಿ ವರ್ತಮಾನಕ್ಕೆ ಸಿದ್ದರಾಮಯ್ಯ ಒಬ್ಬರೆ ಆಗಿದ್ದಾರೆ.

`ನೈತಿಕತೆ’ ಅನ್ನೋದು ಕ್ರಮೇಣ ಈ ಸಮಾಜದ ಬಲಾಢ್ಯರ ರಾಜಕಾರಣವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಮತ್ತು ಅದೇ ಕಾಲಕ್ಕೆ ದುರ್ಬಲ ವರ್ಗಗಳ ರಾಜಕೀಯ ಏಳಿಗೆಯನ್ನು ಹತ್ತಿಕ್ಕಲು ಬಳಸುವ ಸಂಚಿನ ಅಸ್ತ್ರವಾಗಿದೆ.

ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಂದಿರುವ ಆರೋಪವನ್ನು ಎದುರಿಸಲೇಬೇಕು, ಎದುರಿಸುತ್ತೇನೆ ಎಂದು ಅವರೂ ಕೂಡ ಸವಾಲು‌ ಹಾಕಿದ್ದಾರೆ.

ಆದರೆ “ನೈತಿಕತೆ” ಎಂಬ ಗೂಟಕ್ಕೆ ಕಟ್ಟಿ ಬಲಿ ಹಾಕುವ ರಾಜಕೀಯ ಸಂಚಿಗೆ ಸಿದ್ದರಾಮಯ್ಯ ನವರು ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ನೋಡಿಕೊಳ್ಳಬೇಕಿದೆ.

ಯಕಶ್ಚಿತ್ ಮುಡಾ ಪ್ರಕರಣದ ಕೃತಕ ಕಾವಿಗೆ ಹೆದರಿಗೆ ಸಿದ್ದರಾಮಯ್ಯ ಎಂಬ ಜನನಾಯಕ ಅಧಿಕಾರದಿಂದ ನಿರ್ಗಮಿಸುವುದು ಎಂದರೆ ಅದು ಈ‌ ಸಮಾಜದ ಬಹುಜನರ ವಿಚಾರಧಾರೆಯ ಸೋಲೇ ಆಗುತ್ತದೆ.

ಕಾಂಗ್ರೇಸ್ ಪಕ್ಷ ಕೂಡ ಎದುರಾಳಿಗಳ ಪ್ರೇತಕೇಕೆಗೆ ಬೆಚ್ಚಿಬೀಳದೆ ಸಿದ್ದರಾಮಯ್ಯ ಪರ ನಿಲ್ಲಬೇಕು. ಈ ರಾಜ್ಯದ ಪ್ರಜ್ಞಾವಂತ ಜನಸಮೂಹ ಸಿದ್ದರಾಮಯ್ಯ ಅವರನ್ನು ಕೇವಲ ಓರ್ವ ವ್ಯಕ್ತಿಯನ್ನಾಗಿ ನೋಡದೆ ಒಂದು “ಸಿದ್ಧಾಂತ” ವನ್ನಾಗಿ ಉಳಿಸಿಕೊಳ್ಳುವ ಹೋರಾಟಕ್ಕೆ ಮುಂದಾಗಬೇಕು.

ಕೋಮುವಾದಿ ಸಿದ್ದಾಂತ ಹೆಡೆ ಎತ್ತದಂತೆ ಎಚ್ಚರವಹಿಸಬೇಕಿದೆ.

  • Ravikumar nagaiah telex

More articles

Latest article