ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಹಾಗೂ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆದರೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಹೈಕೋರ್ಟ್ ತಿಸ್ಕರಿಸಿದ್ದು, ತನಿಖೆಗೆ ಮಾತ್ರ ಅನುಮತಿ ನೀಡಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ.
ಸುದೀರ್ಘ ವಾದ, ಪ್ರತಿವಾದದ ಬಳಿಕ ಪ್ರಕರಣದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾ. ನಾಗಪ್ರಸನ್ನ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಅನ್ನು ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದು, ಭಾರತೀಯ ನ್ಯಾಯಸಂಹಿತೆ 218ರಡಿ ರಾಜ್ಯಪಾಲರು ನೀಡಿದ್ದ ಅಭಿಯೋಜನೆ ಮತ್ತು ತನಿಖೆಯ ಪೂರ್ವಾನುಮತಿಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ..
17ಎ ಅಡಿ ಪೊಲೀಸ್ ಅಧಿಕಾರಿಯೇ ಪೂರ್ವಾನುಮತಿಗೆ ಅರ್ಜಿ ಸಲ್ಲಿಸಬೇಕು ಎಂಬ ಕಡ್ಡಾಯ ನಿಯಮಗಳಿಲ್ಲ. ಖಾಸಗಿ ದೂರಿನ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರ ಬಳಸಿ ನಡೆಸಿರುವ ಪ್ರಕ್ರಿಯೆಗಳಲ್ಲಿ ದೋಷಗಳು ಕಂಡುಬಂದಿಲ್ಲ ಎಂದು ಪೀಠ ಹೇಳಿದೆ.
ಸಿಎಂ ಸಿದ್ದರಾಮಯ್ಯ ಅವರು ಪ್ರಾಸಿಕ್ಯೂಷನ್‌ಗೆ ಹಾಜರಾಗುವಂತೆ ರಾಜ್ಯಪಾಲರು ನೋಟೀಸ್ ನೀಡದ ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಮುಡಾ ಹಗರಣದ ಅರ್ಜಿ ವಿಚಾರಣೆಯನ್ನೂ ಕೈಗೆತ್ತಿಕೊಂಡಿತ್ತು. ಆದರೆ, ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಪಿಟಿಷನ್ ಅರ್ಜಿಯ ಆದೇಶ ಹೊರಬೀಳುವವರೆಗೂ ಕೆಳ ಹಂತದ ಯಾವುದೇ ನ್ಯಾಯಾಲಯಗಳು (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಯಾವುದೇ ತೀರ್ಪು ಅಥವಾ ಆದೇಶ ನೀಡದಂತೆ ಹೈಕೋರ್ಟ್‌ನಿಂದ ತಡೆ ಒಡ್ಡಲಾಗಿತ್ತು. ಇದೀಗ ಆದೇಶ ಹೊರ ಬಿದ್ದ ಬೆನ್ನಲ್ಲಿಯೇ ಕೆಳ ಹಂತದ ಕೋರ್ಟ್‌ಗಳಲ್ಲಿ ಪ್ರಾಸಿಕ್ಯೂಷನ್ ವಿಚಾರಣೆ ನಡೆಯಲಿದೆ.