ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ಇಂದು ಮುಖ್ಯವಾದ ದಿನ ಅಂತಲೇ ಹೇಳಬಹುದು. ಕಾರಣ, ಮುಡಾ ಬದಲಿ ನಿವೇಶನ ಕೇಸಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇಂದು ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಈ ವಿಚಾರದಲ್ಲಿ ಹೈಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.
ಈ ತೀರ್ಪು ಸಿಎಂ ಸಿದ್ದರಾಮಯ್ಯ ಅವರ ಪರ ಬಂದರೆ ಸಿಎಂ ಬದಲಾವಣೆ ಚರ್ಚೆ ಹಾಗೂ ವಿಪಕ್ಷಗಳ ಆರೋಪಗಳಿಗೆ ಒಂದು ಫುಲ್ ಸ್ಟಾಪ್ ಹಾಕಿದಂತಾಗುತ್ತದೆ. ಇಲ್ಲದಿದ್ದರೆ ವಿಪಕ್ಷಗಳು ಹೈಪರ್ ಆಕ್ಟಿವ್ ಆಗುವ ಸಾಧ್ಯತೆಗಳು ಹೆಚ್ಚಿದೆ. ಇತ್ತ ಪರ ವಿರೋಧ ಏನೇ ತೀರ್ಪು ಬಂದರು ಶಾಸಕರ ಬೆಂಬಲ ಅವಶ್ಯಕತೆ ಇದ್ದು ತೀರ್ಪು ಬಂದ ನಂತರ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲು ಸಿದ್ದತೆ ನಡೆಸಿದೆ ಎಂದು ತಿಳಿದುಬಂದಿದೆ.