ಮಾಜಿ ಮುಖ್ಯಮಂತ್ರಿ ಬಿಎಸ್ ಯಡೊಯೂರಪ್ಪ ಮತ್ತು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ದಾಖಲೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಅವರು ಬಿಎಸ್ವೈ ಹಾಗೂ ಎಚ್ಡಿಕೆ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿದರು.
ದಾಖಲೆ ಬಿಡುಗಡೆ ಬಳಿಕ ಮಾತನಾಡಿದ ಕೃಷ್ಣಬೈರೇಗೌಡ, ರಾಜ್ಯಪಾಲರು ಕೆಲವು ಪ್ರಕರಣಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ರಾಜ್ಯಪಾಲರು ರಕ್ಷಣೆ ನೀಡುತ್ತಿದ್ದಾರೆ. ಇವರು ಮಾಡಿದ ಅಕ್ರಮ ಒಂದೆರಡಲ್ಲ, ಇವರ ಹಲವಾರು ಅಕ್ರಮಗಳಲ್ಲಿ ಮತ್ತೊಂದು ದಾಖಲೆ ಇದು. ಆಸ್ತಿ ಇರುವುದು ಮಠದ ಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧಿನಗೊಂಡಿರುತ್ತದೆ. ಇದನ್ನು ಡಿನೋಟಿಫೈ ಮಾಡಬೇಕು ಅಂತ ಯಾರೋ ರಾಜಶೇಖರಯ್ಯ ಅನ್ನೋರು ಅರ್ಜಿ ಕೊಡ್ತಾರೆ. ದಾರಿಯಲ್ಲಿ ಹೋಗುವ ಯಾರೋ ದಾಸಯ್ಯ ಜಮೀನಿಗೆ ಸಂಬಂಧವೇ ಇಲ್ಲದ ರಾಜಶೇಖರಯ್ಯ ಅನ್ನುವವರ ಅರ್ಜಿ ಕೊಡ್ತಾರೆ. 22.08.2007 ರಲ್ಲಿ ಅರ್ಜಿ ಬಂದ ಅದೇ ದಿನ ಸಿಎಂ ಆಗಿದ್ದ ಎಚ್ಡಿಕೆ ಡಿನೋಟಿಫೈ ಮಾಡಲು ಸೂಚಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಜಮೀನಿನ ಅಸಲಿ ಮಾಲೀಕರು 21 ಜನರಿದ್ದಾರೆ. 30 ವರ್ಷಗಳ ಹಿಂದೆಯೇ ಈ ಜಮೀನೂ ಭೂಸ್ವಾಧೀನ ಆಗಿತ್ತು. ಯಾವುದು ಭೂ ಸ್ವಾಧೀನ ಆಗಿತ್ತೋ ಆ ಜಮೀನಿಗೆ ಕುಮಾರಸ್ವಾಮಿ ಅತ್ತೆ ಅನಿತಾ ಕುಮಾರಸ್ವಾಮಿ ತಾಯಿ ಜಿಪಿಎ ಮಾಡಿಕೊಳ್ಳುತ್ತಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಫೈಲ್ ತಿರಸ್ಕಾರ ಮಾಡುತ್ತಾರೆ. ಆದರೂ ಅಂದಿನ ಸಿಎಂ ಕುಮಾರಸ್ವಾಮಿ ಡಿನೋಟಿಫೈ ಮಾಡುವಂತೆ ಸೂಚಿಸುತ್ತಾರೆ. ಬಳಿಕ ಸರ್ಕಾರ ಬದಲಾಗಿ ಯಡಿಯೂರಪ್ಪ ಸಿಎಂ ಆಗುತ್ತಾರೆ. ಆಗ ಮತ್ತೆ ಅದೇ ಫೈಲ್ ಸಿಎಂ ಯಡಿಯೂರಪ್ಪ ಕೈಗೆ ಬರುತ್ತದೆ. ಕಾನೂನು ಗಾಳಿಗೆ ತೂರಿ ಯಡಿಯೂರಪ್ಪ 2010 ಜೂನ್ 5ರಂದು ರಂದು ಭೂಸ್ವಾಧೀನದಿಂದ ಕೈ ಬಿಡುತ್ತಾರೆ ಎಂದು ಹೇಳಿದರು.
ಡಿ ನೋಟಿಫಿಕೇಷನ್ ಆದ ಒಂದೇ ತಿಂಗಳಿಗೆ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರಿಗೆ ಶುದ್ದ ಕ್ರಯಪತ್ರ ಆಗುತ್ತದೆ . ಹೀಗೆ ಅಕ್ರಮವಾಗಿ ಡಿನೋಟಿಫೈ ಆದ ಜಮೀನು ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದೆ. ಇದು ವ್ಯವಸ್ಥಿತ ವಂಚನೆ ಹೌದೋ ಅಲ್ವೋ? ಇದು ನೇರವಾಗಿ ಕುಮಾರಸ್ವಾಮಿ ಆದೇಶದಿಂದಲೇ ಆಗಿದೆ. ಕುಮಾರಸ್ವಾಮಿ ಪುಟಫ್ ಮಾಡಿದ ಫೈಲ್ ಗೆ ಯಡಿಯೂರಪ್ಪ ಸಹಿ ಮಾಡಿದ್ದಾರೆ. ಸಾರ್ವಜನಿಕ ಸ್ವತ್ತನ್ನು ತಂತ್ರಗಾರಿಕೆ ಮಾಡಿ ಲೂಟಿ ಮಾಡಿದ್ದೀರ ಕುಮಾರಸ್ವಾಮಿಯವರೇ ಎಂದು ಆರೋಪಿಸಿದರು.
ಲೋಕಾಯುಕ್ತದವರು ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ತಕ್ಷಣ ಪ್ರಕರಣದ ತನಿಖೆ ಶೀಘ್ರ ಮಾಡಬೇಕು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ವಿರುದ್ದ ಎಫ್ಐಆರ್ ದಾಖಲಾಗಿ ಒಂಭತ್ತು ವರ್ಷಗಳಾಗಿದೆ. ಹೈ ಕೋರ್ಟ್ ತನಿಖೆಗೆ ಸೂಚನೆ ನೀಡಿದ್ದರೂ ಲೋಕಾಯುಕ್ತ ಯಾಕೆಸುಮ್ಮನೇ ಇದೆ? ಎಂದರು.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್:
ಮುಖ್ಯಮಂತ್ರಿಗಳು ದಲಿತರ ಭೂಮಿಯನ್ನು ನುಂಗಿದ್ದಾರೆ ಎಂದು ಯಾವುದೇ ದಾಖಲೆಗಳು ಇಲ್ಲದಿದ್ದರೂ ಅವರ ಮೇಲೆ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.
ಅನಾಮಿಕರು ಬಂದು ಗಂಗೇನಹಳ್ಳಿಯ ಭೂಮಿಯ ಮೇಲೆ ಅರ್ಜಿ ಕೊಡುತ್ತಾರೆ. ಅದಕ್ಕೆ ಕೂಡಲೇ ಮುಖ್ಯಮಂತ್ರಿಗಳು ಸ್ಪಂದನೆ ಮಾಡುತ್ತಾರೆ. ಆನಂತರ ಎಲ್ಲಾ ಕೆಲಸವೂ ಕುಮಾರಸ್ವಾಮಿ ಅವರ ಕುಟುಂಬದ ಪರವಾಗಿ ನಡೆದು ಅವರ ಕುಟುಂಬದವರಿಗೆ ಆಸ್ತಿ ತಲುಪುತ್ತದೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಹೋಗುವ ತನಕ ಇದನ್ನು ಫಾಲೋ ಅಪ್ ಮಾಡುತ್ತಲೆ ಇರುತ್ತಾರೆ. ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ತಾಯಿಗೂ ಈ ಜಮೀನಿಗೂ ಸಂಬಂಧವೇ ಇಲ್ಲ. ಆದರೂ ಅವರ ಹೆಸರಿಗೆ 20 ದಿನಗಳಲ್ಲಿ ಜಿಪಿಎ ಆಗುತ್ತದೆ. ಇದು ನಿಜವೊ ಸುಳ್ಳೋ ಎಂದು ಮಾನ್ಯ ಕುಮಾರಸ್ವಾಮಿಯವರೇ ಹೇಳಬೇಕು.
ಕುಮಾರಸ್ವಾಮಿ ಅವರ ಅತ್ತೆ ವಿಮಲಾ ಅವರು ತಮ್ಮ ಮಗನಾದ ಚಂದ್ರಪ್ಪ ಅವರಿಗೆ ಮಾರಾಟ ಮಾಡಿರುವುದು ನಿಜವೋ ಸುಳ್ಳೋ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು.
ಈ ಹಗರಣದಲ್ಲಿ ಯಡಿಯೂರಪ್ಪ ಅವರು ಹಾಗೂ ಕುಮಾರಸ್ವಾಮಿ ಅವರು ಎಷ್ಟು ಪಾಲು ಮಾಡಿಕೊಂಡಿದ್ದಾರೆ ಎಂದು ಹೇಳಬೇಕು. ಇದರ ಬಗ್ಗೆ ಇಬ್ಬರೂ ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು.
ಯಡಿಯೂರಪ್ಪ ಅವರಿಗೆ 25 ಸಾವಿರ ದಂಡ ಹಾಕಿದ ಹೈಕೋರ್ಟ್ ತನಿಖೆ ಮುಂದುವರೆಸಿ ಎಂದು 2021 ರಲ್ಲಿ ಲೋಕಾಯುಕ್ತಕ್ಕೆ ಹೇಳಿದರೂ ಸಹ ಏಕೆ ತನಿಖೆ ಮುಂದುವರೆಯುತ್ತಿಲ್ಲ.
ಸಚಿವರಾದ ಸಂತೋಷ್ ಲಾಡ್:
ನಾವು ಮಾಡುವ ಆರೋಪಗಳು ದಾಖಲೆ ಸಮೇತ ಇವೆ. ಬಿಜೆಪಿಯಾವರು ಮಾಡಿರುವ ಆರೋಪಗಳಿಗೆ ಇದುವರೆಗೂ ಯಾವುದೇ ದಾಖಲೆಗಲಿಲ್ಲ.
ಈ ಹಗರಣದ ಮುಖ್ಯ ರೂವಾರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಉತ್ತರ ಕೊಡಬೇಕು. ಮುಖ್ಯವಾಗಿ ಬಿಜೆಪಿಯವರು ನಾವು ಬಿಡುಗಡೆ ಮಾಡುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ನೀಡಿ ಮತ್ತೊಮ್ಮೆ ತನಿಖೆಗೆ ಆದೇಶಿಸಿ ಎಂದು ಅವರಲ್ಲಿ ಮನವಿ ಮಾಡಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಿ ಎಂದು ರಾಜ್ಯಪಾಲರಿಗೆ ಪತ್ರ ಬರೆಯಬೇಕು.
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡುವಾಗ ಕೇವಲ 14 ಸೈಟ್ ಗಳ ಮೇಲೆ ಮಾತ್ರ ಏಕೆ ಅನುಮತಿ ನೀಡಿದ್ದಾರೆ. ಅಧಿಕಾರಿಗಳ ಮೇಲೆ ಏಕೆ ಕ್ರಮವಿಲ್ಲ. 125 ಸೈಟ್ ಗಳನ್ನು ಪಡೆದವರ ಮೇಲೆ ಏಕೆ ಕ್ರಮವಿಲ್ಲ.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಎಂಎಲ್ ಸಿ ನಾರಾಯಣ ಸ್ವಾಮಿ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾದ ವಿಜಯ್ ಮತ್ತಿಕಟ್ಟಿ ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ ಅವರು ಉಪಸ್ಥಿತರಿದ್ದರು.