ನುಡಿ ನಮನ | ಲಾಲ್‌ ಸಲಾಂ ಕಾಮ್ರೇಡ್

Most read

ರಸ್ತೆಯಲ್ಲೊಂದು ಚಲಿಸುತ್ತಿದ್ದ ವಾಹನ. ಮಾರ್ಗ ಮಧ್ಯೆಯ ಗೂಡಂಗಡಿಯ ಎದುರು ನಿಲ್ಲುತ್ತದೆ. ಇಳಿದ ವ್ಯಕ್ತಿಗೆ ಒಂದು ಚಹಾ ಮತ್ತು ತಕ್ಷಣಕ್ಕೆ ಒಂದು ಮತ್ತು ಜೊತೆಗೆ ಒಯ್ಯಲೊಂದು ಪ್ಯಾಕೆಟ್‌ ಸಿಗರೇಟ್‌ ಬೇಕು. ಗೂಡಂಗಡಿಯಾತ ಎರಡನ್ನೂ ಕೈಯ್ಯಲ್ಲಿರಿಸಿದ. ಖರೀದಿಸಿದವರು ಹಣ ಎಷ್ಟು ಕೊಡಬೇಕು ಎಂದು ಕೇಳುತ್ತಾರೆ. ಅಂಗಡಿಯಾತ ವಿನೀತನಾಗಿ ಹೇಳುತ್ತಾರೆ.. ಅರೆ ಸಾಬ್‌ ಆಪ್‌ ಸೇ ಪೈಸಾ ಲಿಯಾ ತೋ..ಭಗವಾನ್‌ ಕ್ಷಮಾ ನಹೀಂ ಕರೇಗಾ……ಆಪ್‌ ಯುಚುರಿ ಸಾಬ್‌ ಹೈ ನಾ… ನಹೀಂ ಸಾಬ್‌ ಹಮ್‌ ಜೈಸೆ ಗರೀಬ್‌ ಲೋಗೋಂಕಾ ಭಲಾಯಿಕೇಲಿಯೆ ಲಡ್‌ ರಹೇ ಹೈಂ ಆಪ್…ಪೈಸಾ ನಹೀಂ ಲೇತೆ ಹೈಂ..ಇಂತಹ ಅನುಭವವನ್ನು ಸೀತಾರಾಂ ಯಚೂರಿ ಹೀಗೇ ಒಮ್ಮೆ ಲೋಕಾಭಿರಾಮ ಮಾತಿನಲ್ಲಿ ಹೇಳಿದ್ದರು…ಹೀಗೆ ಮಾರ್ಗ ಮಧ್ಯದ ಗೂಡಂಗಡಿಯ ಮಾಲೀಕ, ರಾಷ್ಟ್ರದ ಅತ್ಯುನ್ನತ ಸ್ಥಾನಗಳಲ್ಲಿ ಇರುವವರು ಎಲ್ಲರಿಗೂ ಎಲ್ಲೊ ಒಂದು ರೀತಿಯ ಸ್ನೇಹದ ಭಾವ ಹುಟ್ಟಿಸಿದ ಮಹಾನ್‌ ಚೇತನ.

ಅಜಾತಶತ್ರು ಎಂಬೊಬ್ಬರಿರಲು ಸಾಧ್ಯವೇ ಇಲ್ಲ. ಅದರಲ್ಲಿಯೂ ಕಮ್ಯುನಿಷ್ಟ್‌ ಸಿದ್ಧಾಂತವನ್ನು ಉಸಿರಾಗಿಸಿಕೊಂಡು ಬಡವರ, ನೊಂದವರ ಬದುಕಿನ ನೈಜ ಪ್ರಗತಿಗಾಗಿ ತಮ್ಮ ಬದುಕನ್ನೇ ಒಡ್ಡಿಕೊಂಡವರಿಗಂತೂ ಎಲ್ಲರೂ ಮಿತ್ರರೇ ಆಗಿರಲು ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ ವರ್ಗವಿಭಜಿತ ಸಮಾಜದಲ್ಲಿ ಶೋಷಿತರ ಪರವಾದ ಧ್ವನಿ ಎತ್ತುವಾಗ ಶೋಷಕರಿಗೆ ಸಹ್ಯವಾಗಲಾರದು. ಹಾಗೆಯೇ ಅಪ್ಪಟ ಜಾತ್ಯತೀತ. ಮತ ನಿರಪೇಕ್ಷ, ಸರ್ವ ಸಮಾನತೆಯನ್ನು ಕೇವಲ ನುಡಿಯಲ್ಲಲ್ಲ ನಡೆಯಲ್ಲಿಯೂ ರೂಢಿಸಿ ಕೊಂಡವರನ್ನು ಮತೀಯವಾದೀ ಜನರು ಪ್ರೀತಿ ಮಾಡುವುದು ದುಸ್ತರವೇ..ಅದೆಲ್ಲಕ್ಕೂ ಒಂದು ಅಪವಾದವೆಂಬಂತೆ ಇದ್ದವರು ಕಾಂ.ಸೀತಾರಾಂ ಯಚೂರಿ. ಸಿ.ಪಿ.ಐ (ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇಡೀ ದೇಶದ ವಿವಿಧ ವಿಭಾಗಗಳ ಜನರ ಮಧ್ಯೆ ಒಂದಲ್ಲ ಒಂದು ರೀತಿಯ ಸಂಬಂಧ ಹೊಂದಿದ್ದ ಬೆಸುಗೆಯ ಕೊಂಡಿ ಇದೀಗ ಕಳಚಿದೆ.

ಸೀತಾರಾಂ ಯೆಚೂರಿ

ಉಕ್ಕಿನ ಲೇಡಿ ಎಂದು ಕರೆಯಿಸಿಕೊಂಡಿದ್ದ  ಇಂದಿರಾಗಾಂಧಿಯವರು ಜವಾಹರ್‌ ಲಾಲ್‌ ನೆಹರು ಯೂನಿವರ್ಸಿಟಿಯ ಚಾನ್ಸಲರ್‌ ಸ್ಥಾನದಿಂದ ಕೆಳಗಿಳಿಸುವ ಹೋರಾಟವನ್ನು ಅವರ ಮನೆಯ ಮುಂದೆಯೇ ನಡೆಸಿ ಜಯಶೀಲರಾದ ಸಂಗತಿ ಎಲ್ಲರ ಬಾಯಲ್ಲೀಗ ಓಡಾಡುತ್ತಿದೆ. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಸದನದಲ್ಲಿ ಅವರು ಮಂಡಿಸುತ್ತಿದ್ದ ವಿಷಯಗಳು ಕೇವಲ ಔಪಚಾರಿಕ ನೆಲೆಯಲ್ಲಿ ಇರುತ್ತಿರಲಿಲ್ಲ ಎಂಬುದು ಕೂಡಾ ಅಷ್ಟೇ ಮುಖ್ಯವಾದ ಸಂಗತಿ. 2016 ರಲ್ಲಿ ಅವರು ರಾಜ್ಯಸಭೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಿಧಾನವಾಗಿ ಜಾರಿಯಾಗುತ್ತಿರುವ ಅಥಾರಿಟೇರಿಯನ್‌ ರೂಲ್‌ ಕುರಿತು ಬಹಳ ಸ್ಪಷ್ಟವಾಗಿ ಮಾತನಾಡಿದ್ದರು. 2016ರಲ್ಲಿ ರೋಹಿತ್‌ ವೇಮುಲಾನಂತಹ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಯನ್ನು ವ್ಯವಸ್ಥೆ ಕೊಂದಿತ್ತು. ಮನುವಾದ ಸೃಷ್ಟಿಸಿದ ಜಾತಿ ಪದ್ಧತಿಯ ಕ್ರೌರ್ಯ, ದಲಿತ ಸಮುದಾಯದಲ್ಲಿ ಹುಟ್ಟಿದವನೆಂದು ಎದುರಿಸಿದ ತಾರತಮ್ಯಗಳು ರೋಹಿತ್‌ ವೇಮುಲಾ ತನ್ನನ್ನು ತಾನೇ ಕೊಂದುಕೊಳ್ಳುವ ಮೂಲಕ ಪ್ರತಿಭಟನೆಯನ್ನು ದಾಖಲಿಸಿದ್ದ. ಅದೇ ಸಮಯದಲ್ಲಿ ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ಜೆ.ಎನ್.ಯು ಕೂಡಾ ನಿಧಾನಗತಿಯಲ್ಲಿ ಬಹುತ್ವ ಭಾರತದ ಸಂಕೇತವಾಗಿರುವ ತನ್ನ ಗುಣ ಲಕ್ಷಣಗಳನ್ನು ಕೈಬಿಡುವ ಒತ್ತಡಕ್ಕೆ ಒಳಗಾಗುತ್ತಿರುವುದನ್ನು ಗುರುತಿಸಿ ಮಾತನಾಡಿದ್ದರು ಸೀತಾರಾಂ ಯೆಚೂರಿಯವರು. ಸಂಸತ್ತಿನಲ್ಲಿ ಅಂಬೇಡ್ಕರ್‌ ರವರನ್ನು ಚರ್ಚೆ ಮಾಡುವುದಷ್ಟೇ ಸಾಲದು, ಬದಲಿಗೆ ಸಾಮಾಜಿಕ ನ್ಯಾಯದ ಭಾಗವಾಗಿ ಇರುವ ಮೀಸಲಾತಿಯನ್ನು ಪಾಲಿಸುವುದು ಹಾಗೂ ಅದು ಸರಿಯಾಗಿ ಜಾರಿಯಾಗಿ ಫಲಾನುಭವಿಗಳಿಗೆ ದಕ್ಕುವಂತೆ ಮಾಡಬೇಕು. ದೇಶದಲ್ಲಿ ಜಾರಿ ಇರುವ ಆರ್ಥಿಕ ನೀತಿಗಳು ಇದಕ್ಕೆ ದೊಡ್ಡ ಅಡ್ಡಿಯುಂಟು ಮಾಡಿವೆ ಎಂದು ಹೇಳಿದ್ದರು. ಸಂವಿಧಾನದ ಮೇಲೆ ನಡೆಯುತ್ತಿರುವ ದುರ್ದಾಳಿಯನ್ನು ಅವರು ಸದನದಲ್ಲಿ ಪ್ರಸ್ತಾಪಿಸಿದ್ದರು.

ಮಾರ್ಕ್ಸವಾದೀ ಸಿದ್ಧಾಂತದ ಕುರಿತ  ಬದ್ಧತೆಗೆ ಯಾವುದೇ ರೀತಿಯ ಕುಂದುಂಟಾಗದಂತೆ ಎಚ್ಚರ ವಹಿಸುತ್ತಲೇ ಇತರ ಎಲ್ಲ ಪಕ್ಷಗಳ ನಾಯಕರ ಜೊತೆಯೂ ಅವರ ಒಡನಾಟವಿತ್ತು. ಭಾರತದ ರಾಜಕೀಯ ಸನ್ನಿವೇಶಕ್ಕೆ ಆಗಾಗ ಅಗತ್ಯವಾಗುವ ಒಡಂಬಡಿಕೆಯ ಮಾರ್ಗ ರೂಪಿಸುವಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸಿದ್ದವರಾಗಿಯೂ ತನ್ನ ಪಕ್ಷದ ಸೈದ್ಧಾಂತಿಕ ನಿಲುಮೆಗೆ ವ್ಯತಿರಿಕ್ತವಾದ ಹೆಜ್ಜೆಯನ್ನು ಇಡದಿರುವ ಕಾಠಿಣ್ಯವೂ ಅವರಲ್ಲಿತ್ತು. ಅವರ ಸಾವಿನ ನಂತರ ದೇಶದ ವಿವಿಧ ಮೂಲೆಗಳಿಂದ ಮತ್ತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರುಗಳು ಕೊಟ್ಟ ಪ್ರತಿಕ್ರಿಯೆ, ಶೋಕ ಸಂದೇಶಗಳಿಂದಲೂ ಇದು ವ್ಯಕ್ತವಾಗುತ್ತಿದೆ.

ಇಂದಿರಾ ಗಾಂಧಿಯವರ ವಿರುದ್ಧದ ಚಾರ್ಜ್‌ ಶೀಟ್‌ ಓದುತ್ತಿರುವ ಯೆಚೂರಿಯವರು

ಕೋಮುವಾದದ ನಿಗಿನಿಗಿ ಕೆಂಡ ದೇಶದಲ್ಲಿ ಕರಾಳ ಕಾಲವನ್ನು ಸೃಷ್ಟಿಸುತ್ತಿರುವಾಗ ಅದರ ವಿರುದ್ಧದ ನಡಿಗೆ ಜಂಟಿಯಲ್ಲದೇ ಒಂಟಿಯಾಗಿ ಸಾಧ್ಯವೇ ಇಲ್ಲ ಎಂಬ ಸ್ಪಷ್ಟತೆಯೂ ಅವರಿಗಿತ್ತು. ಕೋಮುವಾದದ ಅಪಾಯಗಳ ಕುರಿತು ಹಲವಾರು ಲೇಖನಗಳನ್ನು ಬರೆದವರು ಅವರು. ಪ್ರಕಟಿತ ಕೃತಿಗಳಲ್ಲಿ ʼಏನಿದು ಹಿಂದೂ ರಾಷ್ಟ್ರʼ ಹೆಸರಿನ ಪುಟ್ಟ ಹೊತ್ತಗೆಯಲ್ಲಿ ಬಹಳ ಸರಳವಾಗಿ ಹಿಂದುತ್ವದ ಅಪಾಯಗಳನ್ನು ಅವರು ಮುಂದಿಟ್ಟಿದ್ದಾರೆ. ಅದು ಕನ್ನಡದಲ್ಲಿಯೂ ಲಭ್ಯವಿದೆ.

ಸರಳ ನಡೆ ನುಡಿಯ, ಅಷ್ಟೇ ಹಾಸ್ಯಪ್ರಜ್ಞೆಯನ್ನೂ ಹೊಂದಿರುವ ಜನಾನುರಾಗಿ ವ್ಯಕ್ತಿಯಾಗಿದ್ದವರು ಅವರು. ದೇಶದ 6-7 ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡುವ ಪ್ರಾವೀಣ್ಯತೆ ಹೊಂದಿದ್ದ ಅವರು ಮಾರ್ಕ್ಸ್ ವಾದೀ ಸಿದ್ಧಾಂತದ ಬಗ್ಗೆ ಎಷ್ಟು ಆಳವಾದ ಜ್ಞಾನವನ್ನು ಹೊಂದಿದ್ದರೋ ಅಷ್ಟೇ ಜ್ಞಾನವನ್ನು ಇತಿಹಾಸ, ಚರಿತ್ರೆಗಳ ಬಗೆಗೂ ಹೊಂದಿದ್ದರು. ಜನರನ್ನು ದೇವರು, ಧರ್ಮ ಮುಂತಾದ ಅವರ ನಂಬಿಕೆಗಳ ಆಧಾರದಲ್ಲಿ ಜೋಡಿಸುತ್ತಲೇ ದೇಶವನ್ನು ಒಡೆಯುವ ಶಕ್ತಿಗಳಿಗೆ ಅವರು ಪುರಾಣಗಳ ಕಥೆಗಳನ್ನೇ ಉಲ್ಲೇಖಿಸಿ ಉತ್ತರ ನೀಡುತ್ತಿದ್ದುದನ್ನು ಕೇಳಿದರೆ ಅವರ ಅಧ್ಯಯನದ ಹರಹು ತಿಳಿಯುತ್ತದೆ.

ದುಡಿಯುವ ವರ್ಗದ, ಜನಸಾಮಾನ್ಯರ ಬದುಕಿನ ಬವಣೆಗಳಿಗೆ ಉತ್ತರ ಹುಡುಕುವ ಹೋರಾಟದ ಹಾದಿಯನ್ನು ಅವರು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಹುಡುಕಿ ಕೊಂಡವರು. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ನೀನಿದ್ದರೆ ನೀನು ನನ್ನ ಸಂಗಾತಿ ಎಂದ ಚೇ ಯ ನುಡಿಗಳಂತೆ ಸೀತಾರಾಂರವರ ನಡೆಯೂ ಇತ್ತು. ಇದು ಮಾರ್ಕ್ಸ್ ವಾದದ ಬದ್ಧತೆಯೂ ಕೂಡಾ ಹೌದು. ಹಾಗೆಂದೇ ಕರ್ನಾಟಕದ ಹಲವು ಜನಪರ ಚಳವಳಿಗಳ ಭಾಗವಾಗಿಯೂ ಅವರು ಸೇರಿಕೊಂಡಿದ್ದರು.

ವಿದಾಯದ ಲಾಲ್‌ ಸಲಾಂ

ಜನರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದು ಎನ್ನುವಾಗ ವೈಯಕ್ತಿಕ ಅಥವಾ ರಾಜಕೀಯ ಸಂಬಂಧಗಳಿಗಿಂತ ಹೆಚ್ಚು ಅವರ ಕಾಳಜಿಯಾಗಿತ್ತು ಎನ್ನುವುದಕ್ಕೆ ನಮ್ಮ ರಾಜ್ಯದ ಹಾಸನದ ಒಂದು ಘಟನೆ ಸರಿಯಾದ ಉದಾಹರಣೆಯಾಗುತ್ತದೆ. ಹಾಸನದ ಸಿಗರನಹಳ್ಳಿಯಲ್ಲಿ ದೇವಸ್ಥಾನವೊಂದಕ್ಕೆ ತಳ ಸಮುದಾಯದ ಜನರಿಗೆ ಪ್ರವೇಶವಿಲ್ಲದ್ದನ್ನು ವಿರೋಧಿಸಿ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ಪಾಲ್ಗೊಳ್ಳಲು ಯೆಚೂರಿ ಬೆಂಗಳೂರಿಗೆ ಬಂದಿದ್ದರು. ಹಾಸನವೆಂದರೆ ಗೌಡರ ಕುಟುಂಬದ ಆಣತಿಯಿಲ್ಲದೇ ಗಾಳಿಯೂ ಬೀಸಬಾರದೆಂಬಂತೆ ಇದ್ದ ಕಡೆ, ಅವರ ಕುಟುಂಬದ ವಿರೋಧದ ನಡುವೆಯೂ ದೇವಾಲಯದ ಪ್ರವೇಶಕ್ಕೆ ಪಟ್ಟು ಹಿಡಿದ ಹೋರಾಟಗಾರರು, ಮತ್ತು ಅಲ್ಲಿಗೆ ಸೀತಾರಾಂ ಯೆಚೂರಿಯವರೇ ಹೋಗಿ ಬಿಡುವುದು ಎಂಬುದು ದೇವೇಗೌಡರ ನಿದ್ದೆ ಕೆಡಿಸಿತ್ತು. ಸ್ವತಃ ಅವರೇ ಸೀತಾರಾಂ ರವರಿಗೆ ಕರೆ ಮಾಡಿ ಬೆಂಗಳೂರಿನಲ್ಲಿ ನೀವು ಪತ್ರಿಕಾ ಗೋಷ್ಟಿ ಮಾಡಿ ಬೇಕಾದ್ರೆ ಆದರೆ ಹಾಸನಕ್ಕೆ ಹೋಗಬೇಡಿರೆಂದು ಕೋರಿಕೆ ಇಟ್ಟಿದ್ದರು. ಆದರೆ ಸೀತಾರಾಂ ರವರಿಗೆ ದೇವೇಗೌಡರ ಜೊತೆಗಿನ ವೈಯಕ್ತಿಕ ಅಥವಾ ರಾಜಕಾರಣದ ಸಂಬಂಧಕ್ಕಿಂತಲೂ ಸಿಗರನಹಳ್ಳಿಯ ಜನರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಜೊತೆಗೆ ನಿಲ್ಲುವುದು ಮುಖ್ಯವಾಯಿತು. ಅಂಥದ್ದೇ ಮತ್ತೊಂದು ಘಟನೆ ಸುಂದರ ಮಲೆಕುಡಿಯರ ಕೈ ಕತ್ತರಿಸಿದ ಜಮೀನ್ದಾರನ ದೌರ್ಜನ್ಯವನ್ನು ಖಂಡಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿದ್ದೂ ಅಲ್ಲದೇ ರಾಜ್ಯಸಭೆಯಲ್ಲಿ ಅದನ್ನು ಆದಿವಾಸಿಗಳ ಮೇಲಿನ ದೌರ್ಜನ್ಯದ ಭಾಗವಾಗಿ ಪ್ರಸ್ತಾಪವನ್ನೂ ಮಾಡಿದ್ದರು. ಕರ್ನಾಟಕ 28 ಸಂಸದರನ್ನು ಹೊಂದಿದೆಯಾದರೂ ಅವರಾರಿಗೂ ಇದೊಂದು ಸಂಗತಿಯೇ ಆಗಿರಲಿಲ್ಲ.

ಇಂತಹ ಹಲವಾರು ಸಂಗತಿಗಳು ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆಯೂ, ರಾಷ್ಟ್ರೀಯ ಸ್ತರದಲ್ಲಿಯೂ ಅವರ ಬಗ್ಗೆ ಉಲ್ಲೇಖಿಸಲು ಸಿಗುತ್ತವೆ.

ದೆಹಲಿಯ ಒಂದು ಪ್ರಕಾಶನ ಸಂಸ್ಥೆ ಲೆಫ್ಟ್‌ ವರ್ಡ್‌ ಬುಕ್ಸ್‌ ನ ಸಂಸ್ಥಾಪಕ ನಿರ್ದೇಶಕರಾಗಿದ್ದು ಅದರ ಸಂಪಾದಕ ಮಾರ್ಗದರ್ಶಿ ಮಂಡಳಿಯಲ್ಲಿಯೂ ಇದ್ದರು. ಅದರಿಂದ ಯಾವುದೇ ಆರ್ಥಿಕ ಫಲಾನುಭವಿ ಅಲ್ಲದಿದ್ದಾಗ್ಯೂ ರಾಜ್ಯಸಭಾ ಸದಸ್ಯರಾದಾಗ ಅದರ ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದರು. ಇದಕ್ಕೆ ಕಾರಣ ಒಬ್ಬ ಸಂಸದ ಹೀಗೆ ಖಾಸಗಿ ಕಂಪನಿ ಅಥವಾ ಪ್ರಕಾಶನ ಸಂಸ್ಥೆಯ ನಿರ್ದೇಶಕರಾಗಿರಕೂಡದು ಎಂಬ ನಿಯಮದ ಅನುಸಾರವಾಗಿ. ಇದಲ್ಲವೇ ಮತ್ತೊಂದು ಉತ್ತಮ ಮಾದರಿ.

ಹೋಗುವ ಕಾಲವಿದಾಗಿರಲಿಲ್ಲ……ಹೋಗಿ ಬಿಟ್ಟಿರಿ. ಇದೋ ಕಂಬನಿದುಂಬಿ ನಿಮಗೆ ವಿದಾಯ. ಲಾಲ್‌ ಸಲಾಂ

ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ


ಇದನ್ನೂ ಓದಿ- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ | ನೆನೆಯಬೇಕಾದ ವೈರುಧ್ಯಗಳ ಮಹಿಳೆ- ಕೊರಜಾನೋ ಸಿ. ಆಕ್ವಿನೋ

More articles

Latest article