ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿರುವುದಾಗಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಾಯ್ಯರನ್ನು ಭೇಟಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 40 ಸಾವಿರ ಕೆರೆಗಳನ್ನು ಹೂಳೆತ್ತಿಸಿ ರೈತ ಜಮೀನಿಗೆ ನೀರು ಸರಬರಾಜು ಮಾಡಲು ಮನವಿ ಮಾಡಿದ್ದೇವೆ. ತೆಲಂಗಾಣದಲ್ಲಿ ಈ ಮಾದರಿ ಮಾಡಿದ್ದಾರೆ. ಇದನ್ನು ರಾಜ್ಯದಲ್ಲಿ ಜಾರಿ ಮಾಡಲು ಮನವಿ ಮಾಡಿದ್ದೇವೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇನ್ನೂ ಕಾಯ್ದೆ ರದ್ದು ಮಾಡಿಲ್ಲ. ಎಪಿಎಂಸಿ ಕಾಯ್ದೆ ರದ್ದು ಮಾಡಿದಂತೆ ಕೂಡಲೇ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಕೇಂದ್ರದ ಕಾಯ್ದೆ ನೆಪದಲ್ಲಿ ರೈತರ ಜಮೀನುಗಳನ್ನ ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರದ ಕಾನೂನುನನ್ನು ರಾಜ್ಯ ಸರ್ಕಾರ ವಿರೋಧ ಮಾಡಬೇಕು. ಎನ್‌ಡಿಆರ್‌ಎಫ್ ಮಾನದಂಡ ಪರಿಷ್ಕರಣೆ ಮಾಡಬೇಕು. ಬರ ಪರಿಹಾರದ ಪರಿಹಾರ ಮೊತ್ತ ಜಾಸ್ತಿ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಕಳಸಾ-ಬಂಡೂರಿ ಯೋಜನೆ ವಿಚಾರ ವನ್ಯಜೀವಿ ಮಂಡಳಿ ವಿರೋಧ ಮಾಡಿದೆ. ಇದಕ್ಕೆ ಯಾರು ವಿರೋಧ ಮಾಡದೇ ಯೋಜನೆ ಜಾರಿ ಮಾಡಲು ಸಹಕಾರ ನೀಡಬೇಕು. ಈ ಬಗ್ಗೆ ಕೇಂದ್ರಕ್ಕೆ ಒತ್ತಾಯ ಮಾಡಬೇಕು. ಅಗತ್ಯ ಬಿದ್ದರೆ ನಿಯೋಗದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ತಿಳಿಸಿದ್ದೇವೆ. ಕಳಸಾ-ಬಂಡೂರಿ ವಿಚಾರವಾಗಿ ಕೇಂದ್ರದ ಬಳಿ ನಿಯೋಗ ಹೋಗುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.