‘ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ ಈಚೆಗೆ ನಡೆಸಿದ ಪರೀಕ್ಷೆಯಲ್ಲಿ ಭಾಷಾಂತರದ ತಪ್ಪುಗಳ ಕಾರಣದಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಮರುಪರೀಕ್ಷೆ ನಡೆಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಡಳಿತ ಸೇವಾ ಅಧಿಕಾರಿಗಳ ಆಯ್ಕೆಗಾಗಿ ಕೆ.ಪಿ.ಎಸ್.ಸಿ.ಯಿಂದ ನಡೆದ ಪರೀಕ್ಷೆಯಲ್ಲಿ ಭಾಷಾಂತರದ ತಪ್ಪುಗಳ ಕಾರಣದಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದು ಬೇಜವಾಬ್ದಾರಿತನದಿಂದ ಆಗಿರುವ ಅನ್ಯಾಯ ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ನಾಡಿನ ಈ ‘ಪ್ರತಿಷ್ಠಿತ’ ಸಂಸ್ಥೆಯು ಸೂಕ್ತ ಭಾಷಾಂತರಕಾರರ ನೆರವು ಪಡೆಯದೆ ಬೇಕಾಬಿಟ್ಟಿ ನಡೆದುಕೊಂಡಿರುವುದು ಸರ್ಕಾರಕ್ಕೂ ಕೆಟ್ಟ ಹೆಸರು ತರುತ್ತದೆ. ಆದ್ದರಿಂದ ಸರ್ಕಾರವು ಕೂಡಲೇ ಸೂಕ್ತ ತನಿಖೆಗೆ ಆದೇಶಿಸಿ ಇಂತಹ ಅನಾಹುತಕ್ಕೆ ಕಾರಣವಾದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮರುಪರೀಕ್ಷೆ ಮಾಡುವುದು ಮೊದಲ ಆದ್ಯತೆಯಾಗಬೇಕು. ಕಡೇಪಕ್ಷ ಸೂಕ್ತ ಭಾಷಾತಜ್ಞರಿಂದ ಭಾಷಾಂತರದಲ್ಲಿ ಅಪಾರ್ಥ ಕೊಡುವ ಪಶ್ನೆಗಳನ್ನು ಪತ್ತೆ ಹಚ್ಚಿ ಆ ಪ್ರಶ್ನೆಗಳಿಗೆ ಉತ್ತರಿಸಿದ ಎಲ್ಲ ಅಭ್ಯರ್ಥಿಗಳಿಗೂ ಸರಿ-ತಪ್ಪುಗಳನ್ನು ಎಣಿಸದೆ ಪೂರ್ಣಾಂಕ ನೀಡಬೇಕು. ಒಟ್ಟಾರೆ ಇಡೀ ಪ್ರಕರಣದ ತನಿಖೆಗೆ ಸೂಕ್ತ ಸಮಿತಿಯನ್ನು ರಚಿಸಿ ಕೂಡಲೇ ಪರ್ಯಾಯ ಕ್ರಮಕ್ಕೆ ಸರ್ಕಾರ ಮುಂದಾಗಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸುತ್ತೇನೆ.” ಎಂದಿದ್ದಾರೆ.