ಮೂರೂವರೆ ವರ್ಷಗಳಾದರೂ ಒಂದು ಹೈಕೋರ್ಟ್ ಆದೇಶ ಪಾಲನೆ ಮಾಡಲು ಆಗುತ್ತಿಲ್ಲ ಎಂದರೆ ಏನರ್ಥ? ಸರ್ಕಾರದಲ್ಲಿ ಯಾವ ತಮಾಷೆ ಜರುಗುತ್ತಿದೆ?. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ನೀಡಿದ ಆದೇಶ ಪಾಲನೆ ಮಾಡಲು ನಿಮಗೆ ಆಗುತ್ತಿಲ್ಲ ಎಂದರೆ ಜನ ಯಾವ ರೀತಿ ನಮ್ಮನ್ನು ಗೌರವಿಸುತ್ತಾರೆ ಎಂದು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ₹ 5 ಲಕ್ಷ ದಂಡ ವಿಧಿಸಿದೆ.
ವೇತನ ತಾರತಮ್ಯ ಕುರಿತಾದ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣವೊಂದನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ಸರ್ಕಾರದ ಆದೇಶ ಪಾಲನೆ ಮಾಡದೇ ಇರುವುದನ್ನು ಕಂಡು ತರಾಟೆ ತೆಗೆದುಕೊಂಡಿದೆ. ಪ್ರಕರಣದ ಆರೋಪಿಗಳಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ತಪ್ಪೆಸಗಿದ ಆರು ಜನ ಅಧಿಕಾರಿಗಳಿಂದ ಎರಡು ವಾರಗಳಲ್ಲಿ ದಂಡ ವಸೂಲು ಮಾಡುವಂತೆ ಆದೇಶಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಪ್ರಧಾನ ವಕೀಲ ಎಸ್.ಎಸ್. ಮಹೇಂದ್ರ ಅವರು, ಅರ್ಜಿಗೆ ಸಂಬಂಧಿಸಿದಂತೆ ಆದೇಶ ಪಾಲನೆ ಮಾಡಲು ಇನ್ನೂ ಎರಡು ವಾರಗಳ ಸಮಯಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಕುರಿತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಮಾತನಾಡಿ, ‘ಏನು ಕೇಳುತ್ತಿದ್ದೀರಿ ನೀವು? ಪ್ರತಿಯೊಂದು ಪ್ರಕರಣದಲ್ಲಿಯೂ ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ಅಸೀಮ ನಿರ್ಲಕ್ಷ್ಯ ತೋರುತ್ತಿದೆ. ಮೂರೂವರೆ ವರ್ಷಗಳಾದರೂ ಒಂದು ಹೈಕೋರ್ಟ್ ಆದೇಶ ಪಾಲನೆ ಮಾಡಲು ಆಗುತ್ತಿಲ್ಲ ಎಂದರೆ ಏನರ್ಥ? ಸರ್ಕಾರದಲ್ಲಿ ಯಾವ ತಮಾಷೆ ಜರುಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.
‘ಕೋರ್ಟ್‌ಗಳ ಬಗ್ಗೆ ಸಾಮಾನ್ಯ ಜನರು ಏನು ಮಾತನಾಡುತ್ತಾರೆ ಎಂಬುದನ್ನು ನೀವು ಯಾವತ್ತಾದರೂ ಕಿವಿಗೊಟ್ಟು ಕೇಳಿದ್ದೀರ? ಪಾರ್ಕ್‌ಗಳಲ್ಲಿ ಕೂತು ಕೇಳಿಸಿಕೊಂಡು ಬನ್ನಿ. ಆಗ ನಿಮಗೆ ಗೊತ್ತಾಗುತ್ತದೆ. ಕೋರ್ಟ್ ಇರುವುದು ಜನರ ಹಕ್ಕುಗಳನ್ನು ಎತ್ತಿ ಹಿಡಿಯಲು ಮತ್ತು ಅವರಿಗೆ ಪರಿಹಾರ ಕೊಡಲು. ಅವರೇನೂ ಬಯಸೀ ಬಯಸಿ ಕೋರ್ಟ್ ಮೆಟ್ಟಿಲೇರುವುದಿಲ್ಲ. ಅಂತಹುದರಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ನೀಡಿದ ಆದೇಶ ಪಾಲನೆ ಮಾಡಲು ನಿಮಗೆ ಆಗುತ್ತಿಲ್ಲ ಎಂದರೆ ಜನ ಯಾವ ರೀತಿ ನಮ್ಮನ್ನು ಗೌರವಿಸುತ್ತಾರೆ ಎಂಬುದರ ಕಿಂಚಿತ್ ಅರಿವಾದರೂ ನಿಮಗೆ ಇದೆಯಾ? ಎಂದು ಸರ್ಕಾರಕ್ಕೆ ತರಾಟೆ ತೆಗೆದುಕೊಂಡರು.
ಬೆಂಗಳೂರು ನಗರದ ಕೋನೇನ ಅಗ್ರಹಾರದ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ ಗ್ರಂಥಪಾಲಕಿ ವಿ.ಎ.ನಾಗಮ್ಮ ತಮಗೆ ಗ್ರಂಥಪಾಲಕರ ದರ್ಜೆಯ ವೇತನ ಮಂಜೂರು ಮಾಡಲು ಕೋರಿದ್ದರು.
ರಾಜ್ಯದಲ್ಲಿನ ದ್ವಿತೀಯ ದರ್ಜೆ ಸಹಾಯಕರಾಗಿದ್ದ 250ಕ್ಕೂ ಹೆಚ್ಚು ನೌಕರರು ಗ್ರಂಥಪಾಲಕರ ಹುದ್ದೆಯ ವೇತನ ಶ್ರೇಣಿ ಹೊಂದಿದ್ದು ನನಗೂ ಇದೇ ವೇತನ ಶ್ರೇಣಿ ಅನ್ವಯಿಸಬೇಕು’ ಎಂದು ಮನವಿ ಮಾಡಿದ್ದರು. ಈ ಕುರಿತ ರಿಟ್ ಅರ್ಜಿ ಮಾನ್ಯ ಮಾಡಿದ್ದ ಹೈಕೋರ್ಟ್, ವಿ.ಎ.ನಾಗಮಣಿ ಅವರ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಈ ಆದೇಶ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ನಾಗಮಣಿ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
ಬೆಂಗಳೂರು ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ ಗ್ರಂಥಪಾಲಕಿ ವಿ.ಎ.ನಾಗಮ್ಮ ತಮಗೆ ಗ್ರಂಥಪಾಲಕರ ದರ್ಜೆಯ ವೇತನ ಮಂಜೂರು ಮಾಡಲು ಕೋರಿದ್ದರು.
ರಾಜ್ಯದಲ್ಲಿನ ದ್ವಿತೀಯ ದರ್ಜೆ ಸಹಾಯಕರಾಗಿದ್ದ 250ಕ್ಕೂ ಹೆಚ್ಚು ನೌಕರರು ಗ್ರಂಥಪಾಲಕರ ಹುದ್ದೆಯ ವೇತನ ಶ್ರೇಣಿ ಹೊಂದಿದ್ದು ನನಗೂ ಇದೇ ವೇತನ ಶ್ರೇಣಿ ಅನ್ವಯಿಸಬೇಕು’ ಎಂದು ಮನವಿ ಮಾಡಿದ್ದರು. ಈ ಕುರಿತ ರಿಟ್ ಅರ್ಜಿ ಮಾನ್ಯ ಮಾಡಿದ್ದ ಹೈಕೋರ್ಟ್, ವಿ.ಎ.ನಾಗಮಣಿ ಅವರ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಈ ಆದೇಶ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ನಾಗಮಣಿ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.