ʼರಾಜ್ಯದಲ್ಲಿ ಈತರ ಪ್ರತಿರೋಧ ಹುಟ್ಟಿಕೊಂಡಿರೋದು ನನಗೆ ಸಂತೋಷ ತಂದಿದೆ. ದಲಿತ ಅನ್ನಕ್ಕೆ ಬೆಲೆ ಇದೆ, ಬೇರೆಯವರಿಗೆ ಏನು ಮಾಡಿದ್ದೀರೊ ಏನೊ ನನಗೆ ಬೇಡ ಆದರೆ ದಲಿತರ ತಟ್ಟೆಯಲ್ಲಿರುವ ಅನ್ನವನ್ನು ನೀವು ಕಸಿದುಕೊಂಡಿದ್ದೀರಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ದೇವೆʼ ಎಂದು ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.
ಬೆಂಗಳೂರು : ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಇಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ʻಕಾಂಗ್ರೆಸ್ ಹಟಾವೋ ದಲಿತ್ ಬಚಾವೋʼ ಸಮಾವೇಶದಲ್ಲಿ ಮಾತನಾಡಿದ ಅವರು, ʻಕಾಂಗ್ರೆಸ್ ಒಂದು ಉರಿಯುವ ಮನೆʼ ಪ್ರವೇಶಿಸಬೇಡಿ ಎಂದು ಬಾಬಾಸಾಹೇಬರು ಹೇಳುವಂತೆ ನಮ್ಮ ದಲಿತರ ಮನೆ ಇಂದು ಉರಿಯುತ್ತಿದೆ. ಅದರಿಂದ ನಾವು ಹೊರಬರಬೇಕಿದೆ. ಅದು ಹೇಗೆ ಏನು ಎಂಬುದರ ಬಗ್ಗೆ ನಾವು ಆಲೋಚನೆ ಮಾಡಬೇಕಾಗುತ್ತದೆʼ ಎಂದು ಹೇಳಿದರು.
ʼಕಾಂಗ್ರೆಸ್ಗೆ ಬೇಕಾಗಿರುವುದು ದಲಿತರ ಅಧಿಕಾರ ಅಲ್ಲ, ಏಳಿಗೆಯಲ್ಲ ಬದಲಿಗೆ ನಮ್ಮ ವೋಟು ಮಾತ್ರ. ನಮಗಿರುವ ಆದ್ಯತೆ ಏನು ಎಂಬುದನ್ನು ನಾವು ಯೋಚನೆ ಮಾಡಬೇಕು. ನಮ್ಮ ನೆಲ ಭೂಮಿಗಳನ್ನು ವಿಧಾನಸೌಧದ ನೆಲಗಳ್ಳರ ಬಳಿ ಸೇರಿಕೊಂಡಿದೆ. ಈಗ ನಮ್ಮಲಿರುವ ಶಕ್ತಿ ಒಂದೇ ಅದು ಮತ ಅದನ್ನು ಉಪಯೋಗಿಸಿ ಬದಲಾವಣೆ ತರಬೇಕಾಗಿದೆʼ ಎಂದರು.
ʼಈ ಶತಮಾನದಲ್ಲಿ ಭೂಮಿಗಾಗಿ ಹೋರಾಟ ಮಾಡುವುದು ಸೂಕ್ತವಲ್ಲ. ಈಗಾಗಲೇ ಸ್ಮಶಾನಕ್ಕೆ, ಮಠಕ್ಕೆ ಉಳ್ಳವರ ಪಾಲಾಗಿದೆ. ಈಗ ನಾವು ಭೂಮಿಯ ಪಾಲನ್ನು ಕೇಳುವ ಬದಲು ಆಕಾಶ ತರಂಗದಲ್ಲಿ ನಮಗೆ ಸಮಪಾಲು ಕೊಡಿ ಎಂದು ಕೇಳಬೇಕಾಗಿದೆ. ದೇಶದ ಸಂಪತ್ತಿನಲ್ಲಿ ನಮಗೆ ಸಮಪಾಲು ಕೊಡಿ ಮತ್ತು ವಿದೇಶ ಒಪ್ಪಂದ ಹಾಗೂ ಸಂಸತ್ ಒಳಗೆ ಹೊರಗೆ ಮಾಡಿಕೊಂಡ ಒಪ್ಪಂದದಲ್ಲಿ ನಮಗೆ ಸಿಗದೇ ಇರುವ ಪಾಲನ್ನು ನಮಗೆ ವಾಪಸ್ ಕೊಡಿ ಎಂದು ಕೇಳುವ ಹೊತ್ತು ಇದಾಗಿದೆʼ ಎಂದು ರಾಮಯ್ಯ ಹೇಳಿದರು.
ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟಬೇಕು ಎಂದ ರಾಮಯ್ಯ ಈ ನೆಲದ ಮಕ್ಕಳ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ಪಕ್ಷವನ್ನು ಹುಟ್ಟು ಹಾಕುವುದು ನಮ್ಮ ಜವಾಬ್ದಾರಿಯಾಗಬೇಕು. ಈಗಿರುವ ಯಾವುದೇ ಪಕ್ಷಗಳೆಲ್ಲವೂ ಜನಸಾಮಾನ್ಯರನ್ನು ಕಿತ್ತು ತಿನ್ನುವ ಪಕ್ಷಗಳು, ಕಾರ್ಪೊರೇಟ್ ಕಂಪನಿಗೆ ಸಹಕಾರ ನೀಡುವ ಪಕ್ಷಗಳು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.