ಕೆಎಎಸ್ ಪರೀಕ್ಷೆ ಯಡವಟ್ಟು: ವರದಿ ಕೇಳಿ KPSCಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದ ನೋಟಿಸ್

Most read

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ನೇಮಕಾತಿಗೆ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತವಾಗಿದ್ದ ಕೆಲವು ಪ್ರಶ್ನೆಗಳು ದೋಷಪೂರಿತ ಭಾಷಾಂತರವಾಗಿದ್ದು ಇದರ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ವರದಿ ಸಲ್ಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕೆಪಿಎಸ್‌ಸಿ ಗೆ ನೋಟಿಸ್ ನೀಡಿದ್ದಾರೆ.

ನೋಟಿಸ್ ನಲ್ಲಿ, ದಿನಾಂಕ: 27-08-2024 ರಂದು ಕೆಪಿಎಸ್‌ಸಿಯಿಂದ ನಡೆದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಗೊಂದಲದಲ್ಲಿ ಇದ್ದು ಅಭ್ಯರ್ಥಿಗಳಿಗೆ ತೊಂದರೆ ಉಂಟಾಗಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದೆ.

ಪ್ರಶ್ನೆಗಳ ಭಾಷಾಂತರ ಕಬ್ಬಿಣದ ಕಡಲೆಯಾಗಿದ್ದು, ಉದ್ದುದ್ದ ಪ್ರಶ್ನೆಗಳನ್ನು ಕೇಳಿದ್ದು. ಗೊಂದಲವಾಗಿರುವುದು. ಪ್ರಶ್ನೆಗಳ ಅಸ್ಪಷ್ಟತೆ ಕೆಪಿಎಸ್ಸಿ ಪರೀಕ್ಷೆಯ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದೆ ಎಂದು ತಿಳಿಸಿದೆ.

ಒಂದು ಕಾಲದಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದ ಕೆಪಿಎಸ್ಸಿ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಇಂದು ತೀರಾ ಕಳಪೆಯಾಗಿರುವುದು ದುರದೃಷ್ಟಕರ. ಅರ್ಥವಾಗದ ಕನ್ನಡ ಬಳಕೆಯಿಂದಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನಾನುಕೂಲವಾಗಿದೆ. ಸಂಕೀರ್ಣ ಮತ್ತು ಗೊಂದಲ ಮೂಡಿಸುವಂತಹ ಇಂತಹ ಪ್ರಶ್ನೆ ಪತ್ರಿಕೆಗಳಿಂದ ಕನ್ನಡಿಗರೇ ಸಂಕಷ್ಟಕ್ಕೆ ಈಡಾಗಿದ್ದಾರೆ. ನೂರಾರು ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ ಎಂದು ಅದು ಹೇಳಿದೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಮತ್ತು ಆಡಳಿತ ಭಾಷೆಯಾಗಿದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾದ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಂಡು ಅಭ್ಯರ್ಥಿಗಳು ಉತ್ತರ ಬರೆಯುವಂತೆ ಸೂಚಿಸಿರುವುದನ್ನು ಪ್ರಾಧಿಕಾರ ಖಂಡಿಸುತ್ತದೆ. ಆಡಳಿತ ಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ನೀಡದೆ ಮತ್ತು ಅಭ್ಯರ್ಥಿಗಳಿಗೆ ಅನಾನುಕೂಲತೆಯನ್ನು ಉಂಟು ಮಾಡಿರುವ ಕೆಪಿಎಸ್ಸಿ ನಡೆಯನ್ನು ಪ್ರಾಧಿಕಾರ ವಿರೋಧಿಸಿ ಖಂಡಿಸುತ್ತದೆ.

ದಿನಾಂಕ: 27-08-2024ರಂದು ನಡೆಸಿದ ಪರೀಕ್ಷೆಗಳು, ಉಂಟಾದ ಪ್ರಮಾದ ಹಾಗೂ ಇದಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನದೊಳಗಾಗಿ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸೂಚಿಸಿದೆ ಎಂದು ಅವರು ಬರೆದಿದ್ದಾರೆ.

More articles

Latest article