ಮೀಡಿಯಾ, ಸಾರ್ವಜನಿಕರು ಯಾರು ಏನೇ ಬೈದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ನೀರಿನ ದರ ಹಲವು ವರ್ಷಗಳಿಂದ ಏರಿಸಿಲ್ಲ. ಬೆಂಗಳೂರಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಮೇಕೆದಾಟು ಯೋಜನೆ ಮೇಲೆ ನನಗೆ ಭರವಸೆ ಇದೆ. ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯು ಇದೆ. ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ. ಎತ್ತಿನ ಹೊಳೆ ಯೋಜನೆಯು ಒಂದು ಹಂತದಲ್ಲಿ ಇದೆ ಎಂದು ತಿಳಿಸಿದ್ದಾರೆ.
ಜಲ ಮತ್ತು ಇಂಧನ ಎರಡು ಪ್ರಮುಖವಾದ ಇಲಾಖೆಗಳು. ಈ ಎರಡು ಇಲಾಖೆಗಳ ಉಸ್ತುವಾರಿಯನ್ನು ನಾನೇ ವಹಿಸಿದ್ದೇನೆ. ಹಿಂದೆ ಎಸ್ಎಂ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ಅದರ ಬಗ್ಗೆ ಫ್ರಾನ್ಸ್ಗೆ ಎಲ್ಲ ಹೋಗಿ ನೋಡಿಕೊಂಡು ಬಂದಿದ್ದೆ. ನಂತರ ಆ ರೀತಿ ಅಳವಡಿಕೆ ನಮ್ಮ ರಾಜ್ಯದಲ್ಲಿ ಕಷ್ಟವಾಗುತ್ತದೆ ಎಂದು ಮಾಹಿತಿ ನೀಡಿದ್ದೆ. ಅದಕ್ಕೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆನಂತರ ಕೈ ಬಿಟ್ಟೆವು. ಈಗಲೂ ನಾನು ಸಚಿವನಾದ ಮೇಲೆ ಆ ಬಗ್ಗೆ ಚರ್ಚಿಸಲು ಮತ್ತೆ ಕೆಲವರು ಬಂದರು. ಆಗಲ್ಲ, ನಾನಿರುವವರೆಗೆ ಆಗಲ್ಲ ಅಂತ ಹೇಳಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದೇ ವೇಳೆ ನೀರಿನ ದರದ ಬಗ್ಗೆ ಮಾಹಿತಿಯನ್ನು ನೀಡುವಂತೆ ಬಿಡಬ್ಲ್ಯೂಎಸ್‍ಎಸ್‍ಬಿ ಡಿಸಿಎಂ ಸೂಚನೆ ನೀಡಿದರು. ನೀರಿಗೆ ಎಷ್ಟು ಖರ್ಚಾಗುತ್ತಿದೆ. ಎಷ್ಟು ಜನ ನೀರಿನ ಬಿಲ್ ಕಟ್ಟಿಲ್ಲ, ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ ಎಲ್ಲಾ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗ್ಬೇಕು, ಮಂಡಳಿ ನಷ್ಟದಲ್ಲಿ ನಡೆಯುತ್ತಿದೆ, ಸಂಬಳ ಕೊಡೋಕೆ ಆಗುತ್ತಿಲ್ಲ. ಮಂಡಳಿಯು ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ, ಕೆಲವು ಸೆಕ್ಷನ್ ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡ್ಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ ಸಭೆ ಮತ್ತು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡ್ತೀವಿ, ಇಂದಿನ ಕ್ಯಾಬಿನೆಟ್ ನಲ್ಲಿ ಈ ವಿಷಯ ಇಲ್ಲ ಎಂದು ತಿಳಿಸಿದರು.
ನಾಗರೀಕರಿಗೆ ಎಷ್ಟು ಮಾಡಿದರು ಅಷ್ಟೇ ಅವರಿಗೆ ಉಪಕಾರ ಸ್ಮರಣೆ ಇಲ್ಲ. ಬೈತಾರೆ ಕಾಮೆಂಟ್ ಮಾಡ್ತಾರೆ, ವಾಟ್ಸಾಪ್ ನಲ್ಲಿ ಹಾಕ್ತಾರೆ, ಕೆಲವರು ದುಡ್ಡು ಕಟ್ಟೋರು ಕಟ್ಟುತ್ತಾರೆ ಕೆಲವರು ಕಟ್ಟಲ್ಲ. ಮೀಡಿಯಾದವರಾದರು ಬೈಯಲ್ಲಿ, ಜನರಾದರು ಬೈದರೂ, ವಿರೋಧ ಪಕ್ಷದವರಾದರು ವಿರೋಧ ಮಾಡಲಿ. ಏನೇ ಆದರೂ ನಾವು ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.