ಸಕಲೇಶಪುರ-ಬಾಳ್ಳುಪೇಟೆ ನಡುವಿನ ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಗುಡ್ಡ ಕುಸಿದು ಮಣ್ಣು ಬಿದಿತ್ತು. ಇದರ ತೆರವು ಕಾರ್ಯಾಚರಣೆ ಸಂಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ.
ರೈಲು ಮಾರ್ಗಕ್ಕೆ ಬಿದ್ದಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯವು ಸೋಮವಾರ ಸಂಜೆಗೆ ಪೂರ್ಣಗೊಂಡಿದೆ. ರೈಲು ಮಾರ್ಗವನ್ನು ರೈಲುಗಳ ಸಂಚಾರಕ್ಕೆ ಮುಕ್ತವಾಗುವಂತೆ ಮತ್ತೆ ಮರು ಹೊಂದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು (ಆಗಸ್ಟ್ 20) ಸಂಚರಿಸಬೇಕಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ ಪ್ರೆಸ್ ರೈಲು ಮಾತ್ರ ರದ್ದಾಗಿದ್ದು, ಉಳಿದ ಎಲ್ಲಾ ರೈಲುಗಲು ನಿಗದಿತ ದಿನಾಂಕ ಹಾಗೂ ಸಮಯದ ಪ್ರಕಾರ ಸಂಚರಿಸಲಿದೆ.
ಇದಲ್ಲದೆ ಎಲ್ಲಾ ರೈಲು ಸೇವೆಗಳನ್ನು ಅವುಗಳ ನಿಗದಿತ ದಿನಾಂಕಗಳು ಮತ್ತು ಸಮಯದ ಪ್ರಕಾರ ಪುನರಾರಂಭಿಸಲಾಗುವುದು ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಮಂಜುನಾಥ್ ಕನಮಡಿ ಹೇಳಿದ್ದಾರೆ.