ರಂಗಾಯಣ ನಿರ್ದೇಶಕರ ನೇಮಕದಲ್ಲಿ ಅಧಿಕಾರಶಾಹಿಯ ಛಾಯೆ ಎದ್ದು ಕಾಣುವಂತಿದೆ

Most read

ರಂಗಾಯಣ ನಿರ್ದೇಶಕ ಹುದ್ದೆಯನ್ನು ನಿರ್ವಹಿಸಲು ಬೇಕಾದ ಬದ್ಧತೆ-ಕ್ಷಮತೆ ಹೊಂದಿರುವ ನಿವೃತ್ತ ರಂಗಾಯಣ ಕಲಾವಿದರನ್ನು, ಮೈಸೂರಿನಲ್ಲೇ ಹವ್ಯಾಸಿ ರಂಗಕರ್ಮಿಗಳನ್ನು ಅಲಕ್ಷ್ಯ ಮಾಡಿರುವುದು ಸರ್ವಥಾ ಸಾಧುವಲ್ಲ. ಸಂವೇದನಾಶೀಲ ಸಾಂಸ್ಕೃತಿಕ ವಲಯವನ್ನು ಅಧಿಕಾರಶಾಹಿಯ ಮಾದರಿಯಲ್ಲಿ ನಿರ್ವಹಿಸುವ ಸರ್ಕಾರದ ಧೋರಣೆ ಖಂಡನಾರ್ಹ – ನಾ. ದಿವಾಕರ, ಚಿಂತಕರು.

“ಮಣ್ಣಿನ ವಾಸನೆ ಅರಿಯದವರು ಬೇಸಾಯ ಮಾಡಲಾರರು/ಬಾರದು”. ಇದು ದಾರ್ಶನಿಕ ಸತ್ಯ. ಹಾಗೊಮ್ಮೆ ದುಸ್ಸಾಹಸ ಮಾಡಿದವರಿಗೂ ಸಹ ʼ ಕಳೆ ʼ ಮತ್ತು ʼ ಬೆಳೆ ʼ ಯ ನಡುವೆ ವ್ಯತ್ಯಾಸ ಅರಿವಾಗದೆ ಹೋಗಬಹುದು. ಸಂಸ್ಕೃತಿ ಅಥವಾ ಸಾಂಸ್ಕೃತಿಕ ಜಗತ್ತು ಒಂದು ರೀತಿಯಲ್ಲಿ ಇಳೆಗೆ ಸಮಾನವಾದುದು. ಕೃಷಿ ಪ್ರಪಂಚದೊಳಗೆ ಪ್ರವೇಶಿಸುವ ಮುನ್ನ ಮಣ್ಣಿನ ಗುಣ ಪರಿಚಯ ಇರುವುದಷ್ಟೇ ಅಲ್ಲ ಇಳೆಯೊಡಲಿನ ಅಂತರ್‌ ಸೂಕ್ಷ್ಮಗಳ ಪರಿವೆ-ಪರಿಜ್ಞಾನವೂ ಇರುವುದು ಮುಖ್ಯ. ಹಾಗೆಯೇ ಸಾಂಸ್ಕೃತಿಕ ಪ್ರಪಂಚದ ಮುಖ್ಯ ಭೂಮಿಕೆಗಳನ್ನು ನಿರ್ವಹಿಸುವವರಿಗೆ ಸುತ್ತಲಿನ ಸಮಾಜದ ಒಳಸೂಕ್ಷ್ಮಗಳು ಹಾಗೂ ನೆಲೆಗಾಣುವ ನೆಲದ ಸಾಂಸ್ಕೃತಿಕ ಸಂವೇದನೆಯ ಪರಿಚಯವೂ ಇರಬೇಕಾಗುತ್ತದೆ. ಇದು ಸಾಂಸ್ಕೃತಿಕ ಜಗತ್ತಿನ ವಿಶಾಲ ಹರವಿನುದ್ದಕ್ಕೂ ಅನ್ವಯಿಸುವುದಾದರೂ, ವಿಶೇಷವಾಗಿ ರಂಗಭೂಮಿಗೆ ಹೆಚ್ಚು ಆಪ್ತತೆಯಿಂದ ಅನ್ವಯಿಸುತ್ತದೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದ ನಂತರ ರಂಗಾಯಣಗಳಿಗೆ ಕಾಯಕಲ್ಪ ಒದಗಿಸುವ ಯೋಚನೆ ಮಾಡಿರುವುದು ಸ್ವಾಗತಾರ್ಹ. ಆದರೆ ಕರ್ನಾಟಕದ ರಂಗಭೂಮಿಗೆ ಒಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿ, ಅಂತಾರಾಷ್ಟ್ರೀಯ ಮನ್ನಣೆ ಗಳಿಸುವುದರಲ್ಲಿ ಸಫಲವಾಗಿರುವ ರಂಗಾಯಣದಂತಹ ಸಾಂಸ್ಕೃತಿಕ ಸಂಸ್ಥೆಗೆ ಕಾಯಕಲ್ಪ ನೀಡುವುದೆಂದರೆ ಏನು ? ಆಯ್ಕೆ ಪ್ರಕ್ರಿಯೆಯಲ್ಲಿ ಈ ಅರಿವು ಮಿಸ್‌ ಆಗಿದೆ ಎನಿಸುತ್ತದೆ. ಮೈಸೂರು ರಂಗಾಯಣ ಕಳೆದ ಹಲವು ವರ್ಷಗಳಲ್ಲಿ ಎದುರಿಸಿದ ಜಟಿಲ ಸವಾಲುಗಳು ಮತ್ತು ಸಂಕೀರ್ಣ ಸಮಸ್ಯೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಸಾಂಸ್ಥಿಕವಾಗಿ ಸಂಪೂರ್ಣ ದುರಸ್ತಿ ಮಾಡಬೇಕಾದ ಸನ್ನಿವೇಶ ಇರುವುದು ಎಲ್ಲರಿಗೂ ತಿಳಿದ ಸತ್ಯ. ಹಿಂದಿನ ನಿರ್ದೇಶಕರು ಮಾಡಿದ ಅವಾಂತರಗಳು ಮತ್ತು ಎಬ್ಬಿಸಿದ ರಾಡಿಯನ್ನು ಸ್ವಚ್ಚಗೊಳಿಸುವುದೇ ಒಂದು ದೊಡ್ಡ ಕಾಯಕ ಎನ್ನುವುದೂ ಅಷ್ಟೇ ಸತ್ಯ.

ಮೇಲಾಗಿ ರಂಗಾಯಣ ಎಂಬ ಸಂಸ್ಥೆ ಒಂದು Stage Management ಅಥವಾ Event Management ಮಾಡುವ ವೇದಿಕೆಯಲ್ಲ, ಅಲ್ಲವೇ ? ವಿವಿಧ ತಂಡಗಳಿಂದ ನಾಟಕಗಳನ್ನು ಆಡಿಸುವುದು ಅದಕ್ಕೆ ಬೇಕಾದ Logistics ಒದಗಿಸುವುದು ಅಥವಾ ವರ್ಷಕ್ಕೊಮ್ಮೆ ಬಹುರೂಪಿ ಹೆಸರಿನಲ್ಲಿ ಜಾತ್ರೆ ನಡೆಸುವುದು, ಇದಷ್ಟೇ ರಂಗಾಯಣದ ಆದ್ಯತೆಯಲ್ಲ. ಇದಕ್ಕೂ ಮೀರಿದ ಸಾಂಸ್ಕೃತಿಕ ಜವಾಬ್ದಾರಿ, ರಂಗಪ್ರಜ್ಞೆಯ ಅರಿವು ಹಾಗೂ ಸ್ಥಳೀಯ ಸಾಂಸ್ಕೃತಿಕ ಸೂಕ್ಷ್ಮಗಳ ಪರಿಜ್ಞಾನ ಬಹಳ ಮುಖ್ಯವಾಗುತ್ತದೆ. ಮೈಸೂರು ಸಾಂಸ್ಕೃತಿಕ ನಗರಿ ಎಂದು ಹೆಸರು ಪಡೆದಿರುವುದು ಕೇವಲ ಶಾಸ್ತ್ರೀಯ ಸಂಗೀತ, ವಾಗ್ಗೇಯಕಾರರು, ಸಾಹಿತಿಗಳಿಂದ ಮಾತ್ರ ಅಲ್ಲ. ಕಳೆದ 35 ವರ್ಷಗಳ ರಂಗಾಯಣದ ಪಯಣವೂ ಈ ಕೀರ್ತಿಗೆ ಕಾರಣವಾಗಿದೆ. ರಂಗಭೂಮಿಯ ಚಟುವಟಿಕೆಗಳಿಗೆ ಕೇವಲ ಅಮೂಲ್ಯ ನಾಟಕಗಳನ್ನು ನೀಡಿರುವುದಷ್ಟೇ ಅಲ್ಲದೆ ನೂರಾರು ರಂಗಕರ್ಮಿಗಳನ್ನು ಮೈಸೂರು ರಂಗಾಯಣ ನೀಡಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಗೆ ತಮ್ಮ ತನುಮನ ಅರ್ಪಿಸಿ ಸಮಾಜದೊಡನೆ ಬೆರೆತು, ಇಲ್ಲಿನ ಸಾಂಸ್ಕೃತಿಕ ಮನಸುಗಳೊಡನೆ ನಿರಂತರ ಒಡನಾಟ ಇಟ್ಟುಕೊಂಡು, ರಂಗಕಲೆಯನ್ನು ವಿಶಾಲ ಸಮಾಜದ ಸಾಂಸ್ಕೃತಿಕ ಭಾಗವನ್ನಾಗಿ ಮಾಡಿರುವುದು ರಂಗಾಯಣ ಮತ್ತು ಅಲ್ಲಿ ದುಡಿಯುತ್ತಿರುವ, ದುಡಿದು ನಿವೃತ್ತರಾಗಿರುವ, ಅದರೊಡನೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಸಾಂಸ್ಕೃತಿಕ ಮನಸುಗಳ ಕೊಡುಗೆ. ಅಷ್ಟೇ ಅಲ್ಲದೆ ರಂಗಾಯಣದ ನಿವೃತ್ತ ಕಲಾವಿದರು ತಮ್ಮ ರಂಗಪ್ರಜ್ಞೆಯನ್ನು ಸವೆಯಲು ಅವಕಾಶವನ್ನೇ ನೀಡದೆ ಇಂದಿಗೂ ಸಹ ರಂಗ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಂಗ ಚಟುವಟಿಕೆ ಎಂದರೆ ಕೇವಲ ನಟನೆ, ನಿರ್ದೇಶನ ಮಾತ್ರವಲ್ಲದೆ, ಸಮಾಜದ ಒಳಸುಳಿಗಳನ್ನು ಭೇದಿಸಿ, ಸಮಕಾಲೀನ ಯುಗದಲ್ಲಿ ಯುವ ಸಮಾಜಕ್ಕೆ ಅಗತ್ಯವಾದ ಚಾರಿತ್ರಿಕ-ಸಾಂಸ್ಕೃತಿಕ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.

ರಂಗಾಯಣ ಅನೇಕ ಪ್ರದರ್ಶನಗಳನ್ನು ನೀಡುವ ಜಾಗವಾದ ಮೈಸೂರಿನ ಕಲಾಮಂದಿರ

ಈಗ ನೇಮಕವಾಗಿರುವರ ವ್ಯಕ್ತಿಗತ ಕ್ಷಮತೆ, ದಕ್ಷತೆ ಮತ್ತು ವೈಯುಕ್ತಿಕ ಪ್ರತಿಭೆ, ನೈಪುಣ್ಯ, ಅನುಭವ ಮತ್ತು ರಂಗ ಕೌಶಲಗಳನ್ನು ಅನುಮಾನಿಸಬೇಕಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಮೈಸೂರು ಮತ್ತಿತರ ರಂಗಾಯಣಗಳಿಗೆ ಬಿ.ವಿ. ಕಾರಂತರ ಕನಸಿನ ನಾಟಕ ಕಟ್ಟುವ, ರಂಗಭೂಮಿಯನ್ನು ಮರಳಿ ಕಟ್ಟುವ, ಸಂಸ್ಥೆಯನ್ನು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಪುನರುಜ್ಜೀವನಗೊಳಿಸುವ ಅವಶ್ಯಕತೆ ಇದೆ. ಇದಕ್ಕೆ ಮೇಲಿನ ಲಕ್ಷಣಗಳಷ್ಟೇ ಸಾಲುವುದಿಲ್ಲ. ಅದಕ್ಕೂ ಮೀರಿದ ವಿಶಾಲ ರಂಗಪ್ರಜ್ಞೆ ಮತ್ತು ಅನುಭವದ ಅವಶ್ಯಕತೆ ಇದೆ.  ನೇಮಕವಾಗಿರುವ ವ್ಯಕ್ತಿಗಳು ಇದನ್ನು ಪೂರೈಸುವುದಾದರೆ ಬಹಳ ಸಂತೋಷವಾದೀತು. ಆದರೆ ಈ ಕಾರ್ಯವನ್ನು ಇನ್ನೂ ದಕ್ಷತೆಯಿಂದ ಮಾಡುವ ಅರ್ಹತೆಯುಳ್ಳ ಹಲವು ರಂಗಕರ್ಮಿಗಳನ್ನು, ರಂಗಾಯಣದ ಉತ್ಪನ್ನಗಳನ್ನು ಅಲಕ್ಷಿಸಿರುವುದು ಒಪ್ಪಲಾಗುವುದಿಲ್ಲ.  ಹಾಗೆಯೇ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ಮಾತನಾಡುವ ಸರ್ಕಾರಕ್ಕೆ ಆರು ರಂಗಾಯಣಗಳಿಗೆ ಮೂರರಲ್ಲಾದರೂ ಮಹಿಳಾ ನಿರ್ದೇಶಕಿಯರು ಕಾಣದಾದುದೇಕೆ ?

ಅಂತಹ ಅಭ್ಯರ್ಥಿಗಳಿಲ್ಲ ಎಂದು ಸಬೂಬು ಹೇಳುವ ಸಾಧ್ಯತೆಗಳಿದ್ದರೂ, ಅದನ್ನು ಅಲ್ಲಗಳೆಯುವ ಮಟ್ಟಿಗೆ ಪ್ರತಿಭಾವಂತ ರಂಗನಿರ್ದೇಶಕಿಯರು ನಮ್ಮ ನಡುವೆ ಸಕ್ರಿಯವಾಗಿದ್ದಾರೆ, ಹಲವು ದಶಕಗಳಿಂದ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಹೊಸ ಪ್ರಯೋಗಗಳೊಂದಿಗೆ ರಂಗಭೂಮಿ ಮತ್ತು ರಂಗಕಲೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುತ್ತಿದ್ದಾರೆ. ಸಂಸ್ಕೃತಿ ಇಲಾಖೆಯ ಸಚಿವರಿಗೆ ಅಥವಾ ರಂಗ ಸಮಾಜಕ್ಕೆ ಈ ಮಹಿಳಾ ರಂಗಕರ್ಮಿಗಳು ಕಾಣದೆ ಹೋದುದು ದೃಷ್ಟಿದೋಷವೋ ಅಥವಾ ನಿರ್ಲಕ್ಷ್ಯದ ಪರಿಣಾಮವೋ ? ಎಲ್ಲ ಕ್ಷೇತ್ರಗಳಲ್ಲಿ ಶೇಕಡಾ 33ರಷ್ಟಾದರೂ ಮೀಸಲಾತಿಗಾಗಿ ಹೋರಾಡುತ್ತಿರುವ ಮಹಿಳೆಯರಿಗೆ ಸಾಂಸ್ಕೃತಿಕ ವಲಯದಲ್ಲೇ ಪ್ರಾತಿನಿಧ್ಯವನ್ನು ನಿರಾಕರಿಸುವುದು, ಪುರುಷ ಪ್ರಧಾನ ಧೋರಣೆಯ ಮತ್ತೊಂದು ಮುಖ ಎಂದೇ ಹೇಳಬಹುದು.

ರಂಗಾಯಣ ನಿರ್ದೇಶಕ ಹುದ್ದೆಯನ್ನು ನಿರ್ವಹಿಸಲು ಬೇಕಾದ ಬದ್ಧತೆ-ಕ್ಷಮತೆ ಹೊಂದಿರುವ ನಿವೃತ್ತ ರಂಗಾಯಣ ಕಲಾವಿದರನ್ನು, ಮೈಸೂರಿನಲ್ಲೇ ಹವ್ಯಾಸಿ ರಂಗಕರ್ಮಿಗಳನ್ನು ಅಲಕ್ಷ್ಯ ಮಾಡಿರುವುದು ಸರ್ವಥಾ ಸಾಧುವಲ್ಲ. ಸಂವೇದನಾಶೀಲ ಸಾಂಸ್ಕೃತಿಕ ವಲಯವನ್ನು ಅಧಿಕಾರಶಾಹಿಯ ಮಾದರಿಯಲ್ಲಿ ನಿರ್ವಹಿಸುವ ಸರ್ಕಾರದ ಧೋರಣೆ ಖಂಡನಾರ್ಹ.

ನಾ ದಿವಾಕರ

ಚಿಂತಕರು

ತಂಗಲಾನ್‌ ಸಿನೆಮಾ ವಿಮರ್ಶೆ ಓದಿದ್ದೀರಾ? ಬೆಂಕಿ ಕುಲುಮೆಯಲ್ಲಿ ಅರಳಿದ ರುದ್ರಕಾವ್ಯ..

More articles

Latest article