‘ನೀವು ಯಾವ ಕೇಸ್ ?’ ಎಂದು ನಾನಿದ್ದ ಜೈಲಿನ ವಾರ್ಡ್ ನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರನ್ನು ಕೇಳಿದ್ದೆ, ಆತ ‘ನಾಗಪಾತ್ರಿ ರಾಬರಿ ಕೇಸ್’ ಎಂದಿದ್ದ !. ಇದೊಂದು ಅಪರೂಪದ ಕೇಸ್ ಎಂದುಕೊಂಡು ಆತನ ಎದುರು ಚಕ್ಕಳಮಕ್ಕಳ ಹಾಕಿ ದರೋಡೆ ಕತೆ ಕೇಳಲು ಕೂತಿದ್ದೆ – ನವೀನ್ ಸೂರಿಂಜೆ
ಕರಾವಳಿಯಲ್ಲಿ ಬೆರಳೆಣಿಕೆಯ ನಾಗಪಾತ್ರಿ ಬ್ರಾಹ್ಮಣ ಕುಟುಂಬಗಳಿವೆ. ಒಬ್ಬರು ನಾಗಪಾತ್ರಿಯಾದರೆ ಇನ್ನೊಬ್ಬರು ವೈದ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಈಗ ಇದೊಂದು ಮಾಫಿಯಾವಾಗಿ ಬೆಳೆದಿದೆ. ಒಬ್ಬ ನಾಗಪಾತ್ರಿಗೆ ದರ್ಶನಕ್ಕೋ, ನಾಗಮಂಡಲಕ್ಕೋ ಬಂದು ದರ್ಶನ ಸೇವೆ ನೀಡುವಂತೆ ಕೇಳಿಕೊಂಡರೆ ಅವರು ಇಡೀ ಕಾರ್ಯಕ್ರಮದ ಕಾಂಟ್ರ್ಯಾಕ್ಟ್ ಕೇಳುತ್ತಾರೆ. ಹೂ, ಹಣ್ಣು, ಪಿಂಗಾರ, ವಾದ್ಯ, ಹೋಮ, ಹವನ, ಅರ್ಚಕರ ತಂಡ, ಕ್ಯಾಟರಿಂಗ್, ಶಾಮಿಯಾನ, ಕುರ್ಚಿಗಳು, ಸೌಂಡ್ ಸಿಸ್ಟಮ್ ಎಲ್ಲದರ ಗುತ್ತಿಗೆಯನ್ನು ನಾಗಪಾತ್ರಿಯೇ ವಹಿಸಿಕೊಳ್ಳುತ್ತಾರೆ. ‘ನೀವೊಬ್ಬರೇ ಬಂದು ದರ್ಶನ ನೀಡಿ. ಉಳಿದ ವ್ಯವಸ್ಥೆಯನ್ನು ನಾವೇ ನೋಡಿಕೊಳ್ತೇವೆ’ ಎಂದು ಹೇಳಿದರೆ ಅದಕ್ಕೂ ಒಪ್ಪಿ ನಾಗಮಂಡಲದಲ್ಲಿ ನಾಗದರ್ಶನ ನೀಡುತ್ತಾರೆ. ಆದರೆ ನಾಗದರ್ಶನದ ಕೊನೆಗೆ ‘ಸರಿಯಾದ ಕ್ರಮದಲ್ಲಿ ನಾಗದರ್ಶನ ಆಗಲಿಲ್ಲ. ಹಾಗಾಗಿ ಇನ್ನೊಮ್ಮೆ ಆಗಬೇಕು. ಇಲ್ಲದಿದ್ದರೆ ಅಪಾಯ’ ಎಂದು ಭಯ ಹುಟ್ಟಿಸುತ್ತಾರೆ. ಹಾಗಾಗಿ ರಗಳೆಯೇ ಬೇಡ ಎಂದು ಪೂರ್ತಿ ಗುತ್ತಿಗೆಯನ್ನು ನಾಗಪಾತ್ರಿಗೋ ವೈದ್ಯನಿಗೋ ವಹಿಸೋದು ವಾಡಿಕೆಯಾಗಿದೆ. ಹಾಗಾಗಿ ಒಂದೊಂದು ನಾಗಮಂಡಲವೂ ಕೊಟ್ಯಾಂತರ ರೂಪಾಯಿ ಗುತ್ತಿಗೆಯಾಗಿದೆ.
ಅಂದು ಆ ನಾಗಪಾತ್ರಿ ರಾತ್ರಿಯಿಡೀ ನಾಗನಾಗಿ ಕುಣಿದು ಬೆಳಿಗ್ಗೆ ಕಾರಿನಲ್ಲಿ ವಾಪಸ್ ಆಗ್ತಿದ್ದರು. ದರೋಡೆಕೋರ ಹೆದ್ದಾರಿಯಿಂದ ನಾಗಪಾತ್ರಿಯ ಮನೆಗೆ ತಿರುವು ತೆಗೆದುಕೊಳ್ಳುವ ರಸ್ತೆಯಲ್ಲಿ ನಾಗಪಾತ್ರಿಯ ಕಾರನ್ನು ಅಡ್ಡ ಹಾಕಿದನಂತೆ. ನಾಗಪಾತ್ರಿಯ ಬಾಯಿಗೆ ಪಿಸ್ತೂಲ್ ಇಟ್ಟ. ನೂರಾರು ನಾಗದರ್ಶನ ಮಾಡಿ ಕೋಟ್ಯಾಂತರ ಜನರಿಂದ ಕೈ ಮುಗಿಸಿಕೊಂಡಿದ್ದ, ಪಾದ ಪೂಜೆ ಮಾಡಿಸಿ ಕೊಂಡಿದ್ದ ನಾಗಪಾತ್ರಿ ದರೋಡೆಕೋರನ ಕಾಲಿಗೆ ಬಿದ್ದರು, ದೈನೇಸಿಯಾಗಿ ಕೈ ಮುಗಿದರು. ದರೋಡೆಕೋರ ಬಾಯಿಗಿಟ್ಟ ಪಿಸ್ತೂಲ್ ತೆಗೆಯಲಿಲ್ಲ. ಅಂತಿಮವಾಗಿ ‘ಸ್ವಾಮಿ ನನ್ನ ಬಳಿ ಇರುವ ಎಲ್ಲವನ್ನೂ ಕೊಂಡೊಯ್ಯಿರಿ. ಆದರೆ ಜೀವ ಮಾತ್ರ ತೆಗೆಯಬೇಡಿ’ ಎಂದು ಅಂಗಲಾಚಿದರು. ನಾಗಪಾತ್ರಿಯ ಹತ್ತು ಬೆರಳಲ್ಲಿ ಇದ್ದ ಇಪ್ಪತ್ತು ಚಿನ್ನದ ಉಂಗುರ, ಎರಡೂ ಕೈಯ್ಯಲ್ಲಿ ಐದಕ್ಕೂ ಹೆಚ್ಚು ಚಿನ್ನದ ಕಡಗಗಳು, ಕೊರಳಲ್ಲಿದ್ದ ಐದಾರು ಚಿನ್ನದ ಸರಗಳು, ಸೊಂಟದಲ್ಲಿದ್ದ ಚಿನ್ನದ ಸೊಂಟಪಟ್ಟಿ, ಕಾರಿನ ಹಿಂದಿನ ಸೀಟ್ ನಲ್ಲಿ ಬ್ಯಾಗ್ ನಲ್ಲಿದ್ದ ಲಕ್ಷಾಂತರ ರೂಪಾಯಿಗಳು ದರೋಡೆಕೋರನ ಪಾಲಾಯಿತು. ಖಾಲಿ ಕೈಯ್ಯಲ್ಲಿ ನಾಗಪಾತ್ರಿ ಮನೆಗೆ ಹೋದರು.
‘ಹೋ, ಆ ಕೇಸಲ್ಲಿ ನೀವು ಜೈಲಿಗೆ ಬಂದ್ರಾ?’ ಎಂದು ನಾನು ಪ್ರಶ್ನಿಸಿದೆ.
‘ಇಲ್ಲ. ಆ ಕೇಸಲ್ಲಿ ನಾನು ಅರೆಸ್ಟ್ ಆಗಲಿಲ್ಲ. ಯಾಕೆಂದರೆ ನಾಗಪಾತ್ರಿ ದೂರನ್ನೇ ಕೊಡಲಿಲ್ಲ. ಯಾಕೆಂದರೆ ನಿಜ ವಿಷಯ ಉಲ್ಲೇಖಿಸಿ ದೂರು ನೀಡಿದರೆ ಅವರ ಮನೆಗೆ ಐಟಿ ರೈಡ್ ಆಗುತ್ತದೆ ಅಂತ ಅವರ ಗೆಳೆಯರು ಬೆದರಿಸಿದರಂತೆ’ ಎಂದ.
ಮತ್ತೆ ನೀವು ಹೇಗೆ ಅರೆಸ್ಟ್ ಆಗಿ ಜೈಲಿಗೆ ಬಂದ್ರಿ ? ಎಂದು ಮರಳಿ ಪ್ರಶ್ನಿಸಿದೆ.
ಅವನು ಹೇಳಲು ಶುರು ಮಾಡಿದ. ‘ನಾನು ಒಮ್ಮೆ ದರೋಡೆ ಮಾಡಿ ಒಂದು ಹದಿನೈದು ದಿನ ಸುಮ್ಮನಿದ್ದೆ. ಮತ್ತೆ ಒಂದು ಒಳ್ಳೆ ದಿನ ನೋಡಿಕೊಂಡು ಅದೇ ನಾಗಪಾತ್ರಿಯನ್ನು ಅಡ್ಡ ಹಾಕಿ ಪಿಸ್ತೂಲ್ ಹಿಡಿದೆ. ಆಗ ನಾಗಪಾತ್ರಿ ಕೈಯ್ಯಲ್ಲಿ ಕೇವಲ ಹತ್ತು ಉಂಗುರು, ಎರಡು ಕಡಗ, ಎರಡು ಚಿನ್ನದ ಸರ, ಲಕ್ಷಾಂತರ ಹಣ ಸಿಕ್ಕಿತ್ತು. ಆಗಲೂ ನಾಗಪಾತ್ರಿ ದೂರು ಕೊಡಲಿಲ್ಲ. ಮೂರನೇ ಬಾರಿ ಹದಿನೈದು ದಿನದ ಬಳಿಕ ಮತ್ತೆ ಅಡ್ಡ ಹಾಕಿ ಪಿಸ್ತೂಲ್ ಬಾಯಿಗಿಟ್ಟೆ. ಆಗ ಎರಡು ಉಂಗುರ, ಒಂದಷ್ಟು ಹಣ ಸಿಕ್ಕಿತ್ತು. ಆಗ ನಾಗಪಾತ್ರಿ ದೂರು ಕೊಟ್ಟರು. ಹಿಂದಿನ ದರೋಡೆಯನ್ನು ದೂರಿನಲ್ಲಿ ಉಲ್ಲೇಖಿಸದೇ ಒಂದೇ ದೂರು ಕೊಟ್ಟರು’ ಎಂದು ತನ್ನ ಕೇಸ್ ಡಿಟೇಲ್ ವಿವರಿಸಿದ.
ನಾಗದರ್ಶನ, ನಾಗಮಂಡಲ ಎನ್ನುವುದು ಒಂದು ಮಾಫಿಯಾವಾಗಿ ಬೆಳೆದಿದೆ. ನಾಗರಾಧನೆ ಕರಾವಳಿಯ ಶ್ರೀಮಂತ ಸಂಸ್ಕೃತಿ. ಬಾಕುಡ ಎಂಬ ದಲಿತ ಸಮುದಾಯ ನಾಗದರ್ಶನ ಮಾಡುತ್ತಿತ್ತು. ಅದಕ್ಕೆ ಕಾಡ್ಯನಾಟ್ಯ ಎಂದೂ ಕರೆಯುತ್ತಾರೆ. ಯಾವ ಆಡಂಬರವೂ ಇಲ್ಲದ, ಕೆಲವೇ ಸಾವಿರ ರೂಗಳಲ್ಲಿ ಮುಗಿಯಬಹುದಾದ, ಯಾರನ್ನೂ ಭಯ ಹುಟ್ಟಿಸದ ಕರಾವಳಿಯ ಮೂಲ ಸಂಸ್ಕೃತಿ ಅದು. ಅದನ್ನು ವೈದಿಕರು ವಶ ಮಾಡಿಕೊಂಡು ವ್ಯಾಪಾರವನ್ನಾಗಿಸಿಕೊಂಡಿದ್ದಾರೆ. ಆ ವ್ಯಾಪಾರದ ಭಾಗವಾಗಿ ನಡೆದಿದ್ದೇ ಕಲಾವಿದರ ಸಂಘದ ನಾಗದರ್ಶನ !
ನಾಗದರ್ಶನ ಉಂಟಾಗಬೇಕಾದರೆ ಮೊದಲನೆಯದಾಗಿ ನಾಗನ ಸಾನ್ನಿಧ್ಯವಿರಬೇಕು. ಕಲಾವಿದರ ಸಂಘದಲ್ಲಿ ನಾಗಸಾನ್ನಿಧ್ಯವಿದೆಯೇ ? ನಾಗನ ಕಲ್ಲಿನ ಎದುರು ಮಾತ್ರ ನಾಗದರ್ಶನವಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಕಲಾವಿದರ ಸಂಘದಲ್ಲಿ ನಾಗಪಾತ್ರಿಯ ಮೈಮೇಲೆ ಬಂದ ನಾಗ ಯಾರ ಕುಟುಂಬದ ನಾಗ ? ಯಾವ ದೇವಸ್ಥಾನದ ನಾಗ ? ಎಂಬುದಕ್ಕೆ ಉತ್ತರ ಬೇಕು. ನಾಗನನ್ನು ನಾಗಪಾತ್ರಿಯ ಮೇಲೆ ಆವಾಹಿಸಿಕೊಳ್ಳುವಾಗ ಇದನ್ನು ಹೇಳಿಯೇ ಆವಾಹನೆ ಮಾಡಲಾಗುತ್ತದೆ. ಆ ರೀತಿ ಮಾಡದೇ ಇದ್ದರೆ ನಾಗಪಾತ್ರಿಯ ಮೈಮೇಲೆ ಬಂದ ನಾಗ ನಕಲಿ ಎಂದರ್ಥ. ಕರಾವಳಿ ಭಾಗ ಹೊರತುಪಡಿಸಿ ಇನ್ನೆಲ್ಲೂ ಕೂಡಾ ನಾಗದರ್ಶನ ಮಾಡುವ ಕ್ರಮ ಇಲ್ಲ. ಯಾಕೆಂದರೆ ಕರಾವಳಿಯ ನಾಗಾರಾಧನೆಗೂ ರಾಜ್ಯ, ದೇಶದ ಇತರ ಭಾಗದ ನಾಗಾರಾಧನೆ ಕ್ರಮಕ್ಕೂ ವ್ಯತ್ಯಾಸವಿದೆ.
ತುಳುನಾಡಿನಲ್ಲಿ ದೈವಾರಾಧನೆಗೆ, ನಾಗಾರಾಧನೆಗೆ ವಿಶಿಷ್ಟ ಧಾರ್ಮಿಕ ಸ್ಥಾನವಿದೆ. ದೈವ ಯಾರ್ಯಾರದ್ದೋ ಮೈಮೇಲೆ ಆವಾಹನೆಗೊಳ್ಳುವುದಿಲ್ಲ. ಅದಕ್ಕೊಂದು ಕ್ರಮವಿದೆ. ಪಾಡ್ದನ, ಪಾರಿ, ನುಡಿ, ಗಗ್ಗರ, ಎಣ್ಣೆಬೂಳ್ಯ, ಮಧ್ಯಸ್ಥನ ನಿಯಮಾವಳಿಗಳಿವೆ. ಅವೆಲ್ಲವೂ ಪೂರೈಸಿದ ಬಳಿಕವೇ “ನಮಲೆಕ್ಕಂತಿ ಅಪ್ಪೆ ಪೆದ್ದೀ ನರಮಾನಿ ಮಿತ್ತು” ದೈವ ಬರುತ್ತದೆ. ಹಾಗಾಗಿಯೇ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ದೈವದ ಹಾಡಿಗೆ ಮಹಿಳೆಯೊಬ್ಬರು ದರ್ಶನ ಬರುವಂತೆ ಕುಣಿದಿದ್ದು ದೈವಾರಾಧನೆಗೆ ಮಾಡಿದ ಅವಮಾನ ಎಂದು ತುಳುವರು ಆಕ್ರೋಶ ವ್ಯಕ್ತಪಡಿಸಿ ಮಹಿಳೆಯಿಂದ ಕ್ಷಮೆ ಕೇಳಿಸಿದ್ದರು. ಇದೀಗ ನಾಗಪಾತ್ರಿಯು ಬೆಂಗಳೂರಿನ ಕಲಾವಿದರ ಸಂಘದ ನಾಗಸಾನ್ನಿಧ್ಯವಿಲ್ಲದ ಹಾಲ್ ನಲ್ಲಿ ನಾಗದರ್ಶನ ನೀಡಿದ್ದು ಕರಾವಳಿಯ ನಾಗಾರಾಧನೆಗೆ ಮಾಡಿದ ಅವಮಾನವಲ್ಲವೇ ? ಹಾಗಾಗಿ ನಾಗಪಾತ್ರಿ ಮತ್ತು ಅದನ್ನು ಮಾಡಿಸಿದ ಜೋತಿಷಿ ಕ್ಷಮೆ ಕೇಳಬೇಕಲ್ಲವೇ ?
ನವೀನ್ ಸೂರಿಂಜೆ
ಹಿರಿಯ ಪತ್ರಕರ್ತರು, ಲೇಖಕರು