ಸಂಯಮ ಸೌಜನ್ಯ ಇಲ್ಲದ ರಾಜಕೀಯ ಪರಿಭಾಷೆ

Most read

ಒಂದು ಆರೋಗ್ಯಕರ ಸಮಾಜ ಮತ್ತು ಅಲ್ಲಿನ ಪ್ರಜ್ಞಾವಂತ ಜನತೆಯನ್ನು ಬಾಧಿಸುವುದು ನಮ್ಮ ರಾಜಕೀಯ ನಾಯಕರು ಬಳಸುತ್ತಿರುವ ರಾಜಕೀಯ ಪರಿಭಾಷೆ ಮತ್ತು ಅದರ ಹಿಂದಿನ ನೈತಿಕತೆ. ಏಕವಚನಲ್ಲಿ ಸಂಬೋಧಿಸುವುದು ಒತ್ತಟ್ಟಿಗಿರಲಿ, ನೀನು-ನಿನ್ನಪ್ಪ-ನಿನ್ನಜ್ಜ ಎಂಬ ಮಾತುಗಳು, ಆ ಧ್ವನಿಯ ಹಿಂದಿರುವ ಅಸಭ್ಯತೆ ಮತ್ತು ಸಂಯಮವಿಲ್ಲದ ಮಾತುಗಳು ಇಡೀ ರಾಜಕೀಯ ವ್ಯವಸ್ಥೆಯ ನೈತಿಕತೆಯನ್ನು ಪ್ರಶ್ನಾರ್ಹವಾಗಿಸಿವೆ – ನಾ ದಿವಾಕರ, ಚಿಂತಕರು

ಆಂಗ್ಲ ಭಾಷೆಯಲ್ಲಿ Pandoraʼs Box ಎಂಬ ನುಡಿಗಟ್ಟು ಬಳಕೆಯಲ್ಲಿದೆ. ಇದರರ್ಥ ಯಾವುದೋ ಒಂದು ವಿಚಾರವನ್ನು ಅಥವಾ ಸಮಸ್ಯೆಯನ್ನು ಬಹಿರಂಗಪಡಿಸಲು ಆರಂಭಿಸಿಬಿಟ್ಟರೆ ಅದು ಇನ್ನೂ ಹಲವಾರು ಅನಿರೀಕ್ಷಿತ-ಅನಪೇಕ್ಷಿತ ಸಮಸ್ಯೆ-ಗೊಂದಲಗಳಿಗೆ ಕಾರಣವಾಗುವ ಒಂದು ಪ್ರಕ್ರಿಯೆ. ಆಧುನಿಕ ಪರಿಭಾಷೆಯಲ್ಲಿ ಇದನ್ನು To open a can of worms ಎಂದೂ ಹೇಳಲಾಗುತ್ತದೆ. ಅಂದರೆ ಜಂತುಗಳಿಂದ ತುಂಬಿರುವ ಒಂದು ಪೆಟ್ಟಿಗೆಯನ್ನು ತೆರೆಯುವುದು ಎಂದರ್ಥ. ಬಹುಶಃ ಕರ್ನಾಟಕದ ರಾಜಕಾರಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ತನ್ನ ದಶಕಗಳ ಬ್ರಹ್ಮಾಂಡ ಭ್ರಷ್ಟಾಚಾರದ ಒಂದು ತುಣುಕನ್ನು ಹೊರಹಾಕುವ ಮೂಲಕ ಹೀಗೊಂದು Pandoraʼs Box ತೆರೆದಿಟ್ಟು ಬಿಟ್ಟಿದೆ.

ಮುಡಾ ಹಗರಣದ ಸುತ್ತ ನಡೆಯುತ್ತಿರುವ ಅಧಿಕಾರಾರೂಢ ಕಾಂಗ್ರೆಸ್‌ ಪಕ್ಷದ ಜನಾಂದೋಲನವಾಗಲೀ, ಬಿಜೆಪಿ-ಜೆಡಿಎಸ್‌ ದೋಸ್ತಿಯ ಪಾದಯಾತ್ರೆಯಾಗಲೀ ಏನನ್ನು ಸೂಚಿಸುತ್ತಿದೆ ? ಚುನಾಯಿತ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸುವುದನ್ನು ಒಂದು ಚಟ ಮಾಡಿಕೊಂಡಿರುವ ಬಿಜೆಪಿಗೆ ಸಿದ್ಧರಾಮಯ್ಯ ಸರ್ಕಾರದ ಪತನವೇ ಪ್ರಧಾನ ಧ್ಯೇಯವಾಗಿದ್ದರೆ, ಅದರೊಡನೆ ಬೇಕೂಬೇಡದ ಹಾಗೆ ಕೈಜೋಡಿಸಿರುವ ಜಾತ್ಯತೀತ(?) ಜನತಾ ದಳಕ್ಕೆ ಮತ್ತೊಮ್ಮೆ ಅಧಿಕಾರ ಪೀಠ ಅಲಂಕರಿಸಲು ಇದಕ್ಕಿಂತಲೂ ಪ್ರಶಸ್ತ ಅವಕಾಶ ಮತ್ತೆ ಲಭಿಸುವುದಿಲ್ಲ ಎಂಬ ಹತಾಶೆ ಕಾಡುತ್ತಿದೆ. ಈ ಪೀಠದಾಹದ ಪೈಪೋಟಿಯಲ್ಲಿ ಪ್ರವಾಹ ಪೀಡಿತರು, ಭೂಕುಸಿತದಿಂದ ಮನೆ-ಮಠ ಕಳೆದುಕೊಂಡಿರುವ ನತದೃಷ್ಟರು ಲೆಕ್ಕಕ್ಕೇ ಬಾರದ ರೀತಿಯಲ್ಲಿ ಸುದ್ದಿವಾಹಿನಿಗಳಿಗೆ ಸೀಮಿತವಾಗುತ್ತಿದ್ದಾರೆ. ನೆರೆ ರಾಜ್ಯ ಕೇರಳದಲ್ಲಿ ಸಂಭವಿಸಿರುವ ಭೀಕರ ದುರಂತ, ಅದಕ್ಕೆ ಸಮಾನಾಂತರವಾಗಿ ಕರ್ನಾಟಕದ ಮಲೆನಾಡು-ಪಶ್ಚಿಮ ಘಟ್ಟಗಳಲ್ಲಿ ಸಂಭವಿಸುತ್ತಲೇ ಇರುವ ಭೂಕುಸಿತ ರಾಜ್ಯದ ರಾಜಕೀಯ ವಲಯವನ್ನು ಮತ್ತಷ್ಟು ಸಂವೇದನಾಶೀಲವನ್ನಾಗಿ ಮಾಡಬೇಕಿತ್ತಲ್ಲವೇ ?

BJP-JDS​ ಪಾದಯಾತ್ರೆ

ರಾಜ್ಯ ರಾಜಕಾರಣದಲ್ಲಿ ಸ್ವಲ್ಪವಾದರೂ ಸಾರ್ವಜನಿಕ ಸೂಕ್ಷ್ಮಪ್ರಜ್ಞೆ-ಸಾಂವಿಧಾನಿಕ ಕರ್ತವ್ಯಪ್ರಜ್ಞೆ ಇದ್ದಿದ್ದಲ್ಲಿ ಎಲ್ಲ ಪಕ್ಷಗಳೂ ಒಂದಾಗಿ ಎರಡೂ ರಾಜ್ಯಗಳಲ್ಲಿ ಸಂಭವಿಸಿರುವ ಮಾನವ ನಿರ್ಮಿತ ನೈಸರ್ಗಿಕ ವಿಕೋಪದತ್ತ ಗಮನ ಹರಿಸುತ್ತಿದ್ದವು. ಸಾಮಾಜಿಕ ನ್ಯಾಯದ ಸುಭದ್ರ ಅಡಿಪಾಯದ ಮೇಲೆ ನಿಂತಂತೆ ಕಾಣುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದು, ಈ ಅನಾಹುತಗಳಿಂದ ಜರ್ಝರಿತವಾಗಿರುವ ಸಾಮಾನ್ಯ ಜನತೆಯತ್ತ ಗಮನಹರಿಸಲು ಕ್ರಮ ಕೈಗೊಳ್ಳುತ್ತಿದ್ದವು. ಆದರೆ ಭ್ರಷ್ಟಾಚಾರದ ರೇಸಿನಲ್ಲಿ ಅಂತಿಮ ಗೆರೆಯನ್ನು ಮುಟ್ಟುವ ತವಕದಲ್ಲಿ ಮೂರೂ ಪಕ್ಷಗಳು ಇತ್ತ ಗಮನವನ್ನೇ ನೀಡುತ್ತಿಲ್ಲ.  ಈಗ ಸಂಭವಿಸಿರುವ ದುರಂತ ಪುನರಾವರ್ತನೆಯಾಗುವುದಿಲ್ಲ ಎಂಬ ʼಗ್ಯಾರಂಟಿʼ ಯನ್ನಂತೂ ವಿಜ್ಞಾನಿಗಳೂ ಕೊಡಲಾಗುವುದಿಲ್ಲ. ಹೀಗಿರುವಾಗ ಜವಾಬ್ದಾರಿಯುತ ಸರ್ಕಾರ ಮತ್ತು ವಿರೋಧ ಪಕ್ಷಗಳು ಯಾವ ದಿಕ್ಕಿನಲ್ಲಿ ಯೋಚಿಸಬೇಕು ? ಯಾವ ದಿಕ್ಕಿನಲ್ಲಿ ಯೋಚಿಸುತ್ತಿವೆ ?

ರಾಜ್ಯ ರಾಜಕಾರಣದಲ್ಲಿ ಯಾರು ಭ್ರಷ್ಟರು ಎಂಬ ಪ್ರಶ್ನೆಯೇ ಈಗ ಅಪ್ರಸ್ತುತವಾಗಿದ್ದು, ಯಾರು ಎಷ್ಟು ಭ್ರಷ್ಟರು ಎಂದಷ್ಟೇ ನೋಡಬೇಕಿದೆ. ಇಷ್ಟಕ್ಕೂ MUDA ಎಂಬ ಸಂಸ್ಥೆಯ ಆವರಣದಲ್ಲಿ ಒಮ್ಮೆ ಹೊಕ್ಕಿ ನೋಡಿದರೆ ಅಲ್ಲಿನ ರಿಯಲ್‌ ಎಸ್ಟೇಟ್‌ ದಂಧೆ, ಪ್ರಭಾವಿ ವಲಯದ ಅತಿಕ್ರಮಣ, ಅಧಿಕಾರಶಾಹಿಯ ಮತ್ತೊಂದು ಮುಖ ಮತ್ತು ಇವೆಲ್ಲವನ್ನೂ ಪರೋಕ್ಷವಾಗಿ ಸದ್ದಿಲ್ಲದೆ ನಿರ್ವಹಿಸುವ ದಲ್ಲಾಳಿಗಳ ಸಂತೆ ಇವೆಲ್ಲವನ್ನೂ ನೋಡಬಹುದು. ಆದರೂ ಮೈಸೂರಿನ ಜನತೆ ಸಹನಶೀಲರು. MUDA ಬಡಾವಣೆಗಳನ್ನು ನಿರ್ಮಿಸಿ ಸೂರಿಲ್ಲದ ಜನರಿಗೆ ಒಂದು ಸೂರು ಒದಗಿಸುವ ತನ್ನ ಕೈಂಕರ್ಯವನ್ನು ಮರೆತು ಎರಡು ದಶಕಗಳೇ ಕಳೆದರೂ, ಯಾರೂ ಸಹ ದನಿ ಎತ್ತಿಲ್ಲ. MUDA ಅರ್ಜಿಯನ್ನು ಕೈಯ್ಯಲ್ಲಿ ಹಿಡಿದು ಅತ್ತಿಂದಿತ್ತ ಇತ್ತಿಂದತ್ತ ಪ್ರಭಾವಿಗಳ ಮನೆಗೆ ಸುತ್ತಾಡುವ ಪರಿಶ್ರಮದ ಹೊರತಾಗಿಯೂ ಪಾಪದ ಜನರಿಗೆ ನಿವೇಶನ ದೊರೆಯದಿರುವುದೂ ಸುಡು ವಾಸ್ತವ. ಆದರೆ ಈಗಾಗಲೇ ನಿವೇಶನ ಪಡೆದವರು, ಮನೆ ಕಟ್ಟಲೆಂದೋ, ಕಟ್ಟಿದ ಮನೆಯ ಮೇಲೆ ಮತ್ತೊಂದು ಅಂತಸ್ತು ಕಟ್ಟಲೆಂದೋ ಈ ಕಚೇರಿಗೆ ಭೇಟಿ ನೀಡಿದಾಗ ಪಡುವ ಪಟಿಪಾಟಲುಗಳನ್ನು ಅನುಭವಿಸಿದವರೇ ಬಲ್ಲರು. ಮಂಜೂರು ಪತ್ರದಿಂದ ತೆರಿಗೆ ಪಾವತಿಯವರೆಗೂ ಸಾಮಾನ್ಯ ಜನತೆಗೆ Helpline ಒದಗಿಸುವ ದಲ್ಲಾಳಿಗಳ ದಂಡು ಸದಾ ಯುದ್ಧೋಪಾದಿಯಲ್ಲಿ ಸಿದ್ಧವಾಗಿರುತ್ತದೆ.

20 X 30 ಅಥವಾ  30X40 ನಿವೇಶನಗಳಲ್ಲಿ ಮನೆ ಕಟ್ಟಿರುವವರಿಗೆ ಎರಡನೆ ಅಂತಸ್ತು ನಿರ್ಮಿಸಲು ನಿರ್ಮಾಣ ಲೈಸೆನ್ಸ್‌ ಕೊಡುವುದಿಲ್ಲ ಎಂದು ಅಧಿಕೃತವಾಗಿ ಹೇಳಲಾಗುತ್ತದೆ. ಆದಾಗ್ಯೂ ಮೈಸೂರಿನ ಸಾವಿರಾರು ಮನೆಗಳಲ್ಲಿ ಈ ನಿವೇಶನಗಳು ಬಹುಮಹಡಿಗಳನ್ನು ಅಲಂಕರಿಸಿರುವುದನ್ನು ನೋಡಿದರೆ ಈ ಬ್ರಹ್ಮಾಂಡದ ವಿಶ್ವರೂಪವೂ ತಿಳಿಯುತ್ತದೆ. ಇವುಗಳಿಗೆ ಸಿಆರ್‌ (Completion Report) ಸಹ ಕೊಡಲಾಗಿರುತ್ತದೆ. ಇನ್ನು ಮನೆಯ ಮುಂದೆ ಕಟ್ಟುವ ಕಾರ್‌ ಗ್ಯಾರೇಜ್‌ ಅಥವಾ ಖಾಲಿ ಆವರಣವು ಒಂದು ವ್ಯಾಪಾರಕ್ಕಾಗಿ ಬಳಕೆಯಾಗುತ್ತಿದ್ದರೂ ಅದಕ್ಕೆ ವಾಣಿಜ್ಯ ತೆರಿಗೆ ವಿಧಿಸದೆ ಗೃಹತೆರಿಗೆಯನ್ನೇ ಮುಂದುವರೆಸುವ ಪರಂಪರೆಯೂ ಇಲ್ಲಿದೆ. ಮೈಸೂರಿನ ಹಲವಾರು ವಸತಿ ನಿವೇಶನದ ಮನೆಗಳಿರುವ ರಸ್ತೆಗಳು ಇಂದು Commercial Steet ಗಳಾಗಿವೆ. ಮುಂಭಾಗ ಅಂಗಡಿ-ಮಳಿಗೆ-ಹೋಟೆಲು, ಹಿಂಭಾಗದಲ್ಲಿ ಮನೆ. ಇವುಗಳ ಪೈಕಿ ಎಷ್ಟು ಮನೆಗಳಿಗೆ ವಾಣಿಜ್ಯ ತೆರಿಗೆ ವಿಧಿಸಲಾಗುತ್ತಿದೆ ? ಇದಕ್ಕೆ ಮಹಾನಗರ ಪಾಲಿಕೆಯೂ ಉತ್ತರಿಸಬೇಕಿದೆ. ಈ ಪ್ರಶ್ನೆಯನ್ನಾದರೂ ಮೈಸೂರಿನ ಜನತೆ ಎತ್ತಬಾರದೇ ?

ಈ ಬ್ರಹ್ಮಾಂಡ ಭ್ರಷ್ಟಾಚಾರ ಸಾಮಾನ್ಯ ಜನತೆಗೇನೂ ಅಚ್ಚರಿ ಮೂಡಿಸುವುದಿಲ್ಲ. ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳೂ ಸಹ ಸೋಜಿಗ ಉಂಟುಮಾಡುವುದಿಲ್ಲ. ಆದರೆ ಒಂದು ಆರೋಗ್ಯಕರ ಸಮಾಜ ಮತ್ತು ಅಲ್ಲಿನ ಪ್ರಜ್ಞಾವಂತ ಜನತೆಯನ್ನು ಬಾಧಿಸುವುದು ನಮ್ಮ ರಾಜಕೀಯ ನಾಯಕರು ಬಳಸುತ್ತಿರುವ ರಾಜಕೀಯ ಪರಿಭಾಷೆ ಮತ್ತು ಅದರ ಹಿಂದಿನ ನೈತಿಕತೆ. ಏಕವಚನಲ್ಲಿ ಸಂಬೋಧಿಸುವುದು ಒತ್ತಟ್ಟಿಗಿರಲಿ, ನೀನು-ನಿನ್ನಪ್ಪ-ನಿನ್ನಜ್ಜ ಎಂಬ ಮಾತುಗಳು, ಆ ಧ್ವನಿಯ ಹಿಂದಿರುವ ಅಸಭ್ಯತೆ ಮತ್ತು ಸಂಯಮವಿಲ್ಲದ ಮಾತುಗಳು ಇಡೀ ರಾಜಕೀಯ ವ್ಯವಸ್ಥೆಯ ನೈತಿಕತೆಯನ್ನು ಪ್ರಶ್ನಾರ್ಹವಾಗಿಸಿವೆ. ಸದನದ ಒಳಗೂ-ಹೊರಗೂ ನಮ್ಮ ಚುನಾಯಿತ ಜನಪ್ರತಿನಿಧಿಗಳು ಬಳಸುತ್ತಿರುವ ಭಾಷೆ ಸಂಯಮ-ಸೌಜನ್ಯಗಳನ್ನು ಮೀರಿರುವುದು ಅಕ್ಷಮ್ಯವಷ್ಟೇ ಅಲ್ಲ ಅಸಾಂವಿಧಾನಿಕವೂ ಹೌದು. ವಿರೋಧ ಪಕ್ಷವಾಗಲೀ ಆಡಳಿತ ಪಕ್ಷವಾಗಲೀ ಪ್ರತಿನಿಧಿಸುವುದು ಜನತೆಯನ್ನು ಮತ್ತು ಈ ಜನತೆ ಅವಲಂಬಿಸುವ ಸಾಂವಿಧಾನಿಕ ಪ್ರಜಾಸತ್ತೆಯನ್ನು.

ಕಾಂಗ್ರೆಸ್​ ಜನಾಂದೋಲನ ಸಮಾವೇಶ – ಮೈಸೂರು

ಈ ಪ್ರಜಾಸತ್ತೆಯ ಮೂಲ ನೈತಿಕ ಅಡಿಪಾಯವನ್ನೇ ಕಲುಷಿತಗೊಳಿಸುವ ರೀತಿಯಲ್ಲಿ ಮಾತನಾಡುವುದು ಯಾವುದೇ ರಾಜಕಾರಣಿಗೂ ಶೋಭಿಸುವುದಿಲ್ಲ. ಈ ವಿಚಾರ ಮಾಲಿನ್ಯ ಮತ್ತು ಅಕ್ಷರ ಭ್ರಷ್ಟತೆ ಸಮಾಜದ ಮೇಲೆ ಎಂತಹ ಪ್ರಭಾವ ಬೀರುತ್ತದೆ ಎಂಬ ಪರಿಜ್ಞಾನವಾದರೂ ಜನಪ್ರತಿನಿಧಿಗಳಿಗೆ ಇರಬೇಕಲ್ಲವೇ ? ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದೇನೂ ಹೊಸತಲ್ಲ. ಲೋಹಿಯಾ ಅವರಿಂದ ಕವಿ ಸಿದ್ಧಲಿಂಗಯ್ಯ ಅವರವರೆಗೂ ಸದನದಲ್ಲಿ ಜನತೆಯ ಪ್ರತಿರೋಧಗಳಿಗೆ ಧ್ವನಿಯಾದ ನಾಯಕರು ಶಾಸನ ಸಭೆಗಳನ್ನು ಅಲಂಕರಿಸಿದ್ದಾರೆ. ಅವರ ಸದನದ ಭಾಷಣಗಳನ್ನಾದರೂ ಇವತ್ತಿನ ಜನಪ್ರತಿನಿಧಿಗಳು ಒಮ್ಮೆ ಓದಬೇಕು. ರಾಜಕೀಯ ವಿರೋಧ ತಾತ್ವಿಕ ನೆಲೆಗಳನ್ನು ದಾಟಿ ವೈಯಕ್ತಿಕ ಸ್ತರದಲ್ಲಿ ವ್ಯಕ್ತವಾದರೂ ಸಹ, ಪರಸ್ಪರ ಸಂಬೋಧನೆಯಲ್ಲಿ ಒಂದು ಸೌಜನ್ಯ, ಸಂಯಮ ಮತ್ತು ಶಿಸ್ತು ಕಾಪಾಡಿಕೊಳ್ಳುವುದು ಜನಪ್ರತಿನಿಧಿಗಳ ನೈತಿಕ ಕರ್ತವ್ಯವಲ್ಲವೇ ?

ಮುಡಾ-ವಾಲ್ಮೀಕಿ ಹಗರಣದ Pandoraʼs Box ನಿಂದ ಹೊರಬರುವ ಸತ್ಯಗಳು ಇಡೀ ವ್ಯವಸ್ಥೆಯನ್ನೇ ಬೆತ್ತಲೆಗೊಳಿಸುತ್ತಿವೆ. ಪರಸ್ಪರ ದೂಷಣೆ ಮತ್ತು ಆರೋಪ-ಪ್ರತ್ಯಾರೋಪಗಳ ಮೂಲಕ ಈ ವ್ಯವಸ್ಥೆಯನ್ನು ಪ್ರತಿನಿಧಿಸುವ ಚುನಾಯಿತರೂ ಸಾರ್ವಜನಿಕವಾಗಿ ಬೆತ್ತಲಾಗುತ್ತಿದ್ದಾರೆ. ಇಲ್ಲಿ ಪಾದಯಾತ್ರೆ ಮಾಡಬೇಕಿರುವುದು, ಜನಾಂದೋಲನ ಹಮ್ಮಿಕೊಳ್ಳಬೇಕಿರುವುದು ಸಾಮಾನ್ಯ ಜನತೆ. ರಾಜಕೀಯ ವ್ಯವಸ್ಥೆಯನ್ನು ಸ್ವಚ್ಚಗೊಳಿಸುವ ಮೂಲಕ ಅಪ್ರಾಮಾಣಿಕತೆ, ಅಪಾರದರ್ಶಕತೆ, ಸ್ವಜನಪಕ್ಷಪಾತ, ಹಣಕಾಸು ಭ್ರಷ್ಟಾಚಾರ, ಅನೈತಿಕತೆ, ಅಕ್ರಮಗಳು ಇವೆಲ್ಲವನ್ನೂ ಹೋಗಲಾಡಿಸುವ ಜವಾಬ್ದಾರಿ ನಾಗರಿಕರ ಮೇಲಿದೆ. ಇದು ಕೇವಲ ಚುನಾವಣೆಯ ಮೂಲಕ ಅಗುವ ಕೆಲಸವಲ್ಲ ಎನ್ನುವುದು ಈಗ ನಡೆಯುತ್ತಿರುವ ರಾಜಕೀಯ ಸಮರದಲ್ಲೇ ಸ್ಪಷ್ಟವಾಗುತ್ತಿದೆ. ಅಧಿಕಾರ ರಾಜಕಾರಣದ ಛಾಯೆಯಿಂದ ಹೊರಬಂದು ಪ್ರಜ್ಞಾವಂತ ಸಮಾಜ ಮತ್ತು ಸಂಘಟನೆಗಳು  ಈ ಭ್ರಷ್ಟಾಚಾರದ ಹೊಳೆಯನ್ನು ತೊಳೆಯಬೇಕಿದೆ.

ನಾ.ದಿವಾಕರ

ಚಿಂತಕರು

ಈ ಸುದ್ದಿ ಓದಿದ್ದೀರಾ? ಮನುವಾದಿಗಳು ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸಲ್ಲ: ಸಿ.ಎಂ ಸಿದ್ದರಾಮಯ್ಯ

More articles

Latest article