ಗಣಿ ಹಗರಣ | HDK ವಿರುದ್ಧ ಪ್ರಾಸಿಕ್ಯೂಷನ್‌ಗೆ SIT ಮನವಿ: ಮಂಜೂರಾತಿ ನೀಡದೆ ವಿಷಯವನ್ನೇ ಮುಚ್ಚಿಟ್ಟ ರಾಜ್ಯಪಾಲರು!

Most read

ಮುಡಾ ಹಗರಣ ವಿಷಯವಾಗಿ ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಮನವಿ ಮಾಡದೇ ಇದ್ದರು ಹೆಚ್ಚು ಆಸಕ್ತಿ ತೋರಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಮತ್ತೊಂದು ಸಂಕಷ್ಟ ಎದುರಾಗಿದೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 550 ಎಕರೆ ಗಣಿ ಭೂಮಿಯನ್ನು ಕಾನೂನುಬಾಹಿರವಾಗಿ ವಿನೋದ್‌ ಗೋಯಲ್‌ ಎಂಬವರಿಗೆ ಮಂಜೂರು ಮಾಡಲು ಸಹಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗಣಿ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ ಮಂಜೂರಾತಿ ಕೋರಿ ಲೋಕಾಯುಕ್ತ SIT ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿವರೆಗು ಅದನ್ನು ಅನುಮತಿಸದೆ ವಿಷಯವನ್ನು ಮುಚ್ಚಿಟ್ಟಿರುವ ಘಟನೆ ಈಗ ಹೊರಬಿದ್ದಿದೆ.

2014ರಿಂದ ವಿಚಾರಣೆ ನಡೆಸುತ್ರಿರುವ ಲೋಕಾಯುಕ್ತದ ಎಸ್‌ಐಟಿ ತಂಡವು ಕೇಂದ್ರ ಸಚಿವ ಕುಮಾರಸ್ವಾಮಿ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಬಂದು, ಸ್ವತಃ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಲು ಮನವಿ ಮಾಡಿಕೊಂಡಿದೆ. ಆದರೂ, ಇದುವರೆಗೂ ಆ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಳ್ಳದೇ ವಿಷಯವನ್ನು ಮರೆಮಾಚಿದ್ದಾರೆ.

2006ರಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಎಂಸಿಆರ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ವಿನೋದ್‌ ಗೋಯಲ್‌ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂಬುದು ಆರೋಪವಾಗಿದೆ.

ವಿನೋದ್ ಗೋಯಾಲ್ ಅವರಿಗೆ ಭೂಮಿ ಮಂಜೂರು ಮಾಡುವಲ್ಲಿ ಅಧಿಕಾರಿಗಳು ಹಾಗೂ ಹೆಚ್ ಡಿ ಕುಮಾರಸ್ವಾಮಿ ಕೂಡ ಸಾಮೀಲಾಗಿದ್ದು, ವಿನೋದ್‌ ಗೋಯಲ್‌ ಅವರನ್ನು ಪ್ರಥಮ ಆರೋಪಿಯೆಂದೂ, ಎಚ್‌ ಡಿ ಕುಮಾರಸ್ವಾಮಿ ಅವರನ್ನು ಎರಡನೇ ಆರೋಪಿಯೆಂದೂ, ಇಲಾಖೆಯ ಅಧಿಕಾರಿ ಕೆ ಜಯಚಂದ್ರ ಹಾಗೂ FDA ಜವರೇಗೌಡ ಅವರನ್ನು ಕ್ರಮವಾಗಿ ಮೂರು ಮತ್ತು ನಾಲ್ಕನೇ ಆರೋಪಿಗಳನ್ನಾಗಿ ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 420, 465, 468, 409 ಜೊತೆಗೆ 120ಬಿ ಮತ್ತು ಐಪಿಸಿ ಸೆಕ್ಷನ್‌ 511, ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಮತ್ತು ಎಂಎಂಆರ್‌ಡಿ ಕಾಯಿದೆಯ ಸೆಕ್ಷನ್‌ಗಳಾದ 21(2) ಮತ್ತು 23 ಅಡಿ ದಾಖಲಾಗಿರುವ ಪ್ರಕರಣದಲ್ಲಿ ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ ಮಂಜೂರಾತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತದ SIT 2023ರ ಸೆಪ್ಟೆಂಬರ್‌ನಲ್ಲಿ ಮನವಿ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರ್ಕಾರವು 2014ರ ಜನವರಿ 24ರಂದು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ, ಎಲ್ಲಾ ಗಣಿಗಾರಿಕೆ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಿತ್ತು. ಈ ಪ್ರಕರಣವನ್ನೂ ಎಸ್‌ಐಟಿ ತನಿಖೆ ನಡೆಸಿ, ಆರೋಪ ಪಟ್ಟಿ ಸಿದ್ಧಪಡಿಸಿದ್ದು, ಪ್ರಾಸಿಕ್ಯೂಷನ್‌ ಮಂಜೂರಾತಿಗೆ ಕೋರಿದೆ. ಆದರೆ ರಾಜ್ಯಪಾಲರು ಇದರ ಬಗ್ಗೆ ಕ್ರಮಕೈಗೊಳ್ಳದೇ ವಿಷಯವನ್ನು ಮುಚ್ಚಿಟ್ಟು ಕೂತಿರುವ ವಿಷಯ ಈಗ ಬಯಲಾಗಿದೆ.

More articles

Latest article