ಶರಣ ಮಾಗನೂರು ಬಸಪ್ಪನವರ ಸರಳ ಜೀವನ ಶೈಲಿ, ಶಿಸ್ತುಬದ್ಧ ಜೀವನಕ್ರಮ, ಪಾರದರ್ಶಕ ವ್ಯಕ್ತಿತ್ವ, ವಚನ ತತ್ವದಿಂದ ಅವರು ಪರಿಶುದ್ಧಗೊಂಡು ಜನ ಸಮುದಾಯವನ್ನು, ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿವ್ಯ ಶರಣ. ಇವರ ಹೆಸರನ್ನು ಜನ-ಮಾನಸದಲ್ಲಿ ಶಾಶ್ವತವಾಗಿರಿಸಲು ರಾಜ್ಯ ಮಟ್ಟದ ಪ್ರಶಸ್ತಿಯನ್ನು 2014 ರಲ್ಲಿಯೇ ಆರಂಭಿಸಿದ್ದು 2024ರ ಪ್ರಶಸ್ತಿಯನ್ನು ಶರಣ ಡಾ. ವೀರಣ್ಣ ಬಿ. ರಾಜೂರ ರವರಿಗೆ ( 03 .08. 2024 ರಂದು) ನೀಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ – ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು.
ದವನಗಿರಿಯ ಸಮಾಜಸೇವೆಯ ಸಾಕಾರಮೂರ್ತಿ, ಕಾಯಕಯೋಗಿ, ಆರೂಢದಾಸೋಹಿ, ಧರ್ಮಚಿಂತಾಮಣಿ, ವಚನವಾಚಕ, ಜೀವನೋತ್ಸಾಹದ ಚಿಲುಮೆ, ಸಮಯ ಪರಿಪಾಲಕ, ಶಿವಮಂತ್ರ ಜಪಸ್ತ, ಗುರುಭಕ್ತ, ಹಾಗೂ ದೈವಭಕ್ತರಾದ ಶರಣ ಮಾಗನೂರು ಬಸಪ್ಪನವರ ಪರಿಚಯ ಗೊತ್ತಿಲ್ಲದೇ ಇರುವವರು ವಿರಳ. ಇಂದಿನ ಯುವ ಮನಸ್ಸುಗಳಿಗೆ, ಸಮಾಜಸೇವೆಗೆ ಹೆಜ್ಜೆ ಇಡುವವರಿಗೆ ಇವರು ಪಠ್ಯ ಪುಸ್ತಕ. ಅವರ ಜೀವನ ಕೃತಿಯ ಅನುಸರಣೆ, ತತ್ವಗಳ ಅನುಷ್ಠಾನ ಆರೋಗ್ಯವಂತ ಸಮಾಜಕ್ಕೆ ಮೈಲುಗಲ್ಲು ಗಳಾಗಬಹುದು. ಪ್ರಸ್ತುತ ಸಂದರ್ಭಕ್ಕೆ ಇಂತಹ ಪುಣ್ಯ ಪುರಷರ ಸ್ಮರಣೆ ತೀರ ಅವಶ್ಯಕವೂ ಹಾಗೂ ಅನಿವಾರ್ಯವೂ ಹೌದು. ಅವರ ವ್ಯಕ್ತಿ ಪರಿಚಯಕ್ಕಿಂತ ತತ್ವ, ಮೌಲ್ಯಗಳ ಪರಿಚಯ, ಸೇವೆಯ ಮುಖಗಳು, ನೀತಿ-ಸಂಸ್ಕಾರಗಳು ಜನಸಮುದಾಯಕ್ಕೆ ಅವರ ಮಾರ್ಗದರ್ಶನ, ಬದುಕಿನ ಕ್ರಮಗಳು, ಸತ್ಕಾರ್ಯಗಳಲ್ಲಿ ಜೀವನೋತ್ಸಾಹ, ಸಹೃದಯತೆ, ಹೃದಯ ವೈಶಾಲ್ಯತೆ, ಕಾರ್ಯ ನಿಷ್ಠೆ, ಮಾನವ ಪ್ರೇಮ ಹೀಗೆ ಗಮನಿಸುತ್ತಾ ಹೋದರೆ ಅವರು ಒಬ್ಬ ವ್ಯಕ್ತಿಯಾಗದೇ ಶಕ್ತಿಯಾಗಿ ಕಾಣುತ್ತಾರೆ. ಪೂಜ್ಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು “ಮಾಗನೂರು ಬಸಪ್ಪನವರೆಂದರೆ ಒಂದು ಸಂಸ್ಥೆ ಇದ್ದಂತೆ” ಎನ್ನುತ್ತಾರೆ.
ಜನ ಸಾಮಾನ್ಯರಂತೆ ಇದ್ದು, ವ್ಯಾಪಾರ-ವಾಣಿಜ್ಯ ಚಟುವಟಿಕೆಗಳ ಕಾರ್ಯಗಳಲ್ಲಿ ನೀತಿ-ತತ್ವಗಳನ್ನು ಮೈಗೂಡಿಸಿಕೊಂಡು ಬದುಕಿ ಮಹಾನ್ ಶ್ರೇಷ್ಠರೆನಿಸಿದರು. ಅವರನ್ನು ದಾವಣಗೆರೆಯ “ಗಾಂಧಿ” ಎಂದರೆ ತಪ್ಪಾಗದು. ಏಕೆಂದರೆ ಗಾಂಧೀಜಿ ಹರಿಜನರನ್ನು ಪ್ರೀತಿಸಿದರು, ಶರಣ ಬಸಪ್ಪನವರು ಹರಿಜನರಿಗೆ ವಿದ್ಯಾಭ್ಯಾಸಕ್ಕಾಗಿ ಶಾಲೆ-ಹಾಸ್ಟೆಲ್‍ಗಳನ್ನು ಸ್ಥಾಪಿಸಿ ಮಾನವೀಯತೆಯನ್ನು ಮೆರೆದರು. ಸರ್ವಜಾತಿ, ಜನಾಂಗಕ್ಕೆ ಜನಾನುರಾಗಿಯಾಗಿದ್ದರು. ಸಾಮಾಜಿಕ ಹರಿಕಾರನಾಗಿದ್ದ ಇವರು ಕೈಗೊಂಡ ಕಾರ್ಯಗಳು ಒಂದೆರಡಲ್ಲ. ಅವರಿಗಿದ್ದ ಮಾನವ ಸಂಪರ್ಕ ಸೇತುವೆ ರಾಷ್ಟ್ರಮಟ್ಟದ್ದು.
ಸ್ವಾಭಿಮಾನಿಯಾಗಿ ಬದುಕು ನಡೆಸಿದ ಶರಣ ಬಸಪ್ಪ:
ಬಾಲ್ಯದಲ್ಲಿಯೇ ನೀತಿ ಅಳವಡಿಸಿಕೊಂಡು ಬಡತನದ ಬೇಗೆಯಲ್ಲಿಯೂ ಸ್ವಾಭಿಮಾನಿಯಾಗಿ ಜೀವನ ಸಾಗಿಸಬೇಕೆಂಬ ಛಲದಿಂದ ಅವರು ಬದುಕು ನಡೆಸಿದ ರೀತಿ, ಅನುಭವಿಸಿದ ಕಷ್ಟ-ನಷ್ಟಗಳು ಒಂದು ‘ಸಿನಿಮಾ’ ಮಾಡಲು ಯೋಗ್ಯ ಕಥಾ ವಸ್ತುಗಳು. ವಾರಕ್ಕೆ ‘ಮೂರು ರೂಪಾಯಿ’ ಪಗಾರದಿಂದ ವಾರಕ್ಕೆ 50 ರೂಪಾಯಿ ಆಗುವವರೆಗೆ ದಾವಣಗೆರೆ ನಗರದ ವಿವಿಧ ಅಂಗಡಿಗಳಲ್ಲಿ ದಶಕಗಳ ಕಾಲ (1918-1928) ಗುಮಾಸ್ತನಾಗಿ, ಸೇವಕನಾಗಿ ದುಡಿದರು. ತಮ್ಮ 30ನೇ ವಯಸ್ಸಿನಲ್ಲಿ 100 ರೂಪಾಯಿ ಬಂಡವಾಳದೊಂದಿಗೆ ಸ್ವಂತ ವ್ಯಾಪಾರ ಆರಂಭಿಸಿ, ಬದುಕಿನಲ್ಲಿ ಒಂದೊಂದೆ ಹೆಜ್ಜೆ ಇಡುತ್ತಾ ಬಹುದೊಡ್ಡ ವ್ಯಾಪಾರಿಯಾಗಿ, ವರ್ತಕರಾಗಿ ಅತ್ಯಧಿಕ ಪರಿಶ್ರಮದಿಂದ, ನಿಷ್ಠೆ, ಬದ್ಧತೆ, ಪ್ರಮಾಣಿಕ ಕಾಯಕದೊಂದಿಗೆ ದಾವಣಗೆರೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು. ಬಂದ ಕಾಯಕದ ಪ್ರತಿಫಲವನ್ನು ತಮ್ಮ ಕುಟುಂಬ ವರ್ಗಕ್ಕೆ ಮಾತ್ರ ಸೀಮಿತಗೊಳಿಸದೇ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದರು. ಧರ್ಮ ಚಿಂತಾಮಣಿ, ಆರೂಢದಾಸೋಹಿ ಎಂಬ ಹೆಸರು ಪಡೆದರು.
ಶರಣ ಬಸಪ್ಪನವರ ಸಮಾಜಮುಖಿ ಕಾರ್ಯಗಳು:
ಕಾಂಗ್ರೇಸ್ ಚಳುವಳಿಯಲ್ಲಿ 1930ರಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಸಂಪರ್ಕಕ್ಕೆ ಬಂದರು.
ಕಾಂಗ್ರೇಸ್ ಮೈಸೂರು ಸ್ಟೇಟ್ ಕಾನ್‌ಫರೆನ್ಸ್ 1934ರಲ್ಲಿ ಆಯೋಜನೆ ಮಾಡಿ ಅದರ ಖಜಾಂಚಿಯಾಗಿ ಕಾರ್ಯನಿರ್ವಹಿಸಿ, ಎಸ್. ನಿಜಲಿಂಗಪ್ಪ, ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ಮೆಚ್ಚುಗೆಗೆ ಪಾತ್ರರಾದರು.
ಚಲೇಜಾವ್, ಕ್ವೀಟ್ ಇಂಡಿಯಾ ಚಳುವಳಿಯಲ್ಲಿ 1942ರಲ್ಲಿ ಭಾಗವಹಿಸಿ, ತಮ್ಮ ಸ್ವಂತ ದುಡಿಮೆಯ ‘ಹತ್ತು ಸಾವಿರ’ ರೂಪಾಯಿಗಳನ್ನು ಖರ್ಚುಮಾಡಿ ಧರ್ಮಚಿಂತಾಮಣಿ ಅನ್ನಿಸಿಕೊಂಡರು. ಈ ಭಾಗದಿಂದ ಸ್ವಾತಂತ್ಯ ಹೋರಾಟದಲ್ಲಿ ಭಾಗಿಯಾದವರಿಗೆ ಪ್ರೋತ್ಸಾಹ, ಅವರ ಕುಟುಂಬ ವರ್ಗಕ್ಕೆ ಆರ್ಥಿಕ ನೆರವು ನೀಡಿದ ಮಹಾತ್ಮ ಇವರು.
ಹನ್ನೆರಡು ವರ್ಷಗಳ ಕಾಲ (1942-1954) ದಾವಣಗೆರೆ ನಗರದ ಮುನ್ಸಿಪಲ್ ಕೌನ್ಸಿಲರ್ ಆಗಿ ಅನೇಕ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನತೆಯಿಂದ ಸೈ-ಎನ್ನಿಸಿಕೊಂಡರು, ಮುನಿಸಿಪಲ್ ಸೊಸೈಟಿ ಆರಂಭಿಸಿ, ನಗರಸಭೆ ಕಟ್ಟಡ ನಿರ್ಮಾಣಕ್ಕೆ ಕಾರಣ ಶಕ್ತಿ ಇವರಾದರು.
ಸಂಘ-ಸಂಸ್ಥೆಗಳ ಸ್ಥಾಪನೆಯ ಜನಾನುರಾಗಿ
ದಾವಣಗೆರೆ ನಗರದಲ್ಲಿ ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಜನಾನುರಾಗಿಯಾದರು. ನಗರದಲ್ಲಿ ಎಜ್ಯುಕೇಶನ್ ಅಸೋಸಿಯೇಷನ್ 1937ರಲ್ಲಿ ಆರಂಭಿಸಿ, ಆಗಿನ ಸಂದರ್ಭಕ್ಕೆ 75 ಸಾವಿರ ರೂಪಾಯಿಗಳ ವಂತಿಗೆ ನೀಡಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಈ ಭಾಗದ ಮಕ್ಕಳಿಗೆ ಅಕ್ಷರ ದಾಸೋಹ ಆರಂಭಿಸಿದ ಕೀರ್ತಿ ಶರಣ ಮಾಗನೂರು ಬಸಪ್ಪನವರು.
ಅಶಕ್ತ ಪೋಷಕರ ಸಂಘವನ್ನು 1938ರಲ್ಲಿ ಆರಂಭಿಸಿ ದಾವಣಗೆರೆ ಶಿಕ್ಷಣಕ್ಕೆ ಬರುವ ಗ್ರಾಮೀಣ ಬಡವರ, ದೀನ-ದಲಿತರ ಮಕ್ಕಳಿಗೆ ಉಚಿತ ಊಟ, ವಸತಿ ಏರ್ಪಾಟು ಮಾಡಿದ ಕರುಣೆಯ ಸಾಕಾರಮೂರ್ತಿಯಾದರು.
ದಾವಣಗೆರೆ ವರ್ತಕರ ಸಂಘವನ್ನು 1934ರಲ್ಲಿ ಆರಂಭಿಸಿ 20 ವರ್ಷ ಅದರ ಅಧ್ಯಕ್ಷರಾಗಿ ರಾಜ್ಯ ವರ್ತಕರ ಸಮ್ಮೇಳನ ಆಯೋಜನೆ, ಅನೇಕ ಜನಪರ ಕೆಲಸ ಆರಂಭಿಸಿ ವರ್ತಕರ ವಲಯದಲ್ಲಿ ಬಹುದೊಡ್ಡ ಹೆಸರನ್ನು ಪಡೆದು ಜನಾನುರಾಗಿಯಾದರು.
ನಗರದ ಛೇಂಬರ್ ಆಫ್ ಕಾಮರ್ಸ್‍ನಲ್ಲಿ 1941 ರಿಂದ 1991ರ ವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿ ವರ್ತಕರ, ಕೈಗಾರಿಕೋದ್ಯಮಿಗಳ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿ ‘ಕಾಯಕ’ ನಿರ್ವಹಿಸಿದರು.
ದಾವಣಗೆರೆ ಅರ್ಬನ್ ಸಹಕಾರಿ ಬ್ಯಾಂಕ್‍ನ್ನು ತಮ್ಮ ಸ್ವಂತ ಷೇರು ಹಣ ಹಾಕಿ 1961ರಲ್ಲಿ ಆರಂಭಿಸಿ, ಅದರ ನಿರ್ದೇಶಕರಾಗಿ ದಶಕಗಳ ಕಾಲ ದುಡಿದು ನಗರದ ಜನರಿಗೆ ಆರ್ಥಿಕ ಅನುಕೂಲ ಕಲ್ಪಿಸಿದರು.
ಬಾಪೂಜಿ ಸಹಕಾರಿ ಬ್ಯಾಂಕ್ 1970ರಲ್ಲಿ 1974 ರಲ್ಲಿ ಶಿವ ಸಹಕಾರಿ ಬ್ಯಾಂಕ್ ಆರಂಭಿಸಿ ಅವುಗಳ ಅಧ್ಯಕ್ಷರಾಗಿ, ಆರ್ಥಿಕ ಪ್ರಗತಿಯ ಒಳಿತಿಗಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ಇವರದು.
ಶಿವ ಫೈನಾನ್ಸ್ ಕಾರ್ಪೋರೇಷನ್ 1977ರಲ್ಲಿ ಆರಂಭಿಸಿ, ವ್ಯವಸ್ಥಾಪಕ ನಿರ್ದೇಶಕರಾಗಿ ಈ ಸಂಸ್ಥೆ ನಗರದಲ್ಲಿ ಹೆಸರು, ಕೀರ್ತಿ ಸಂಪಾದಿಸುವಲ್ಲಿ ಇವರ ಸೇವೆ ಸ್ಮರಣೀಯ.
ಗಣೇಶ ಟೆಕ್ಸ್‌ಟೈಲ್ ಮಿಲ್ ಆರಂಭಿಸಿ ಎರಡು ದಶಕಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿದರು.
ದಾವಣಗೆರೆ ನಗರದಲ್ಲಿ ಹರಿಜನ ಹಾಸ್ಟೆಲ್ (1942) ಛಲವಾದಿ ಹಾಸ್ಟೆಲ್ (1975) ನಾಯಕರ (ಭೋವಿ) ಹಾಸ್ಟೆಲ್ (1975) ಗಳನ್ನು ಆರಂಭಿಸಿ ತಮ್ಮ ದುಡಿಮೆಯ ಹಣದಿಂದ 70 ಸಾವಿರಕ್ಕಿಂತಲೂ ಹೆಚ್ಚು ಹಣ ಖರ್ಚುಮಾಡಿ ದೀನ-ದಲಿತರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದರು.
ದಾವಣಗೆರೆ ನಗರದಲ್ಲಿ ವಿದ್ಯಾ ಸಂಸ್ಥೆಗಳ ಕೊರತೆ ಇತ್ತು, ಹೀಗಾಗಿ 1958ರಲ್ಲಿ ಬಾಪೂಜಿ ವಿದ್ಯಾ ಸಂಸ್ಥೆ ಆರಂಭಿಸಿ, ಡಿ.ಆರ್.ಎಂ. ಪ್ರಥಮ ದರ್ಜೆ ಕಾಲೇಜು, ಮೆಡಿಕಲ್ ಕಾಲೇಜು, ಎ.ವಿ.ಕೆ. ಕಾಲೇಜು, ಲಾ-ಕಾಲೇಜು, ಎಂ.ಎಸ್.ಬಿ. ಕಾಲೇಜು ಗಳನ್ನು ಆರಂಭಿಸಿ ನಗರವನ್ನು ‘ಶಿಕ್ಷಣ ನಗರಿ’ ಯನ್ನಾಗಿ ಮಾಡಿದ ಕೀರ್ತಿ ಶರಣ ಮಾಗನೂರು ಬಸಪ್ಪನವರದು.
ಸಿರಿಗೆರೆ ಬೃಹನ್ಮಠದ ಪರಮಾಪ್ತ ಭಕ್ತರು
ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳ ಆಪ್ತ ಶಿಷ್ಯರಾಗಿ ಶ್ರೀ ಮಠದ ಶ್ರೇಯೋಭಿವೃದ್ಧಿಗೆ ದುಡಿದರು. 1975ರಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಜಗಳೂರಿನಲ್ಲಿ ಯಶಸ್ವಿಯಾಗಿ ನಡೆಯಲು ಇವರ ಸೇವೆ ಸ್ಮರಣೀಯ.
ದಾವಣಗೆರೆಯ ಅನುಭವ ಮಂಟಪಕ್ಕೆ 15 ಎಕರೆ 23 ಗುಂಟೆ ಜಮೀನನ್ನು ದಾಸೋಹಾರ್ಥ ನೀಡಿ ಅದರ ಕಟ್ಟಡ ಕಾರ್ಯಕ್ಕೆ ತಮ್ಮ ಸ್ವಂತ ಜಮೀನು ಮಾರಾಟ ಮಾಡಿ 92 ಸಾವಿರ ರೂಪಾಯಿಗಳನ್ನು ಕಟ್ಟಡ ನಿಧಿಗೆ ಸಮರ್ಪಿಸಿದ ಮಹಾದಾಸೋಹಿ ಇವರು.
ಹಳೆ ಸಿರಿಗೆರೆ ಹಾಸ್ಟೆಲ್ ಆರಂಭಿಸಿ ಅದಕ್ಕಾಗಿ 30 ಸಾವಿರ ರೂಪಾಯಿ ಖರ್ಚು ಮಾಡಿದರು. ವಿದ್ಯಾರ್ಥಿ ನಿಲಯದ ಹೊರ ಆವರಣದಲ್ಲಿ 22 ಮಳಿಗೆಗಳನ್ನು ಕಟ್ಟಿಸಿದ ಕೀರ್ತಿ ಇವರದು.
ಗುರುಶಾಂತ ಸ್ವಾಮೀಜಿ ಹಾಸ್ಟೆಲ್ 1946ರಲ್ಲಿ ಆರಂಭಿಸಿ, ಅದಕ್ಕೆ ಸಮಾಜದ ಭಕ್ತರಿಂದ 6 ಲಕ್ಷ ರೂಪಾಯಿ ಸಂಗ್ರಹಿಸಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸುವಲ್ಲಿ ಶರಣ ಬಸಪ್ಪನವರ ಪಾತ್ರ ಹಿರಿದಾಗಿದೆ.
ಶರಣ ಬಸಪ್ಪನವರ ಹೆಸರಲ್ಲಿ ರಾಜ್ಯ ಪ್ರಶಸ್ತಿ
ಶರಣ ಮಾಗನೂರು ಬಸಪ್ಪನವರ ಸರಳ ಜೀವನ ಶೈಲಿ, ಶಿಸ್ತುಬದ್ಧ ಜೀವನಕ್ರಮ, ಪಾರದರ್ಶಕ ವ್ಯಕ್ತಿತ್ವ, ಉದಾರ ಮನಸ್ಸಿನ ವಂತಿಗೆಗಳು, ವಚನ ತತ್ವದಿಂದ ಅವರು ಪರಿಶುದ್ಧಗೊಂಡು ಜನ ಸಮುದಾಯವನ್ನು, ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿವ್ಯ ಶರಣ. ಆರೂಢದಾಸೋಹಿ, ಮಹಾಶರಣ ಹೆಸರಿನಲ್ಲಿ ಅವರ ಮಾನಸ ಸುಪುತ್ರರಾದ ಶರಣ ಸಂಗನಗೌಡ್ರು ಮತ್ತು ಅವರ ಕುಟುಂಬ ವರ್ಗದವರು ಪೂಜ್ಯ ಶರಣ ಬಸಪ್ಪನವರ ಹೆಸರನ್ನು ಜನ-ಮಾನಸದಲ್ಲಿ ಶಾಶ್ವತವಾಗಿರಿಸಲು ರಾಜ್ಯ ಮಟ್ಟದ ಪ್ರಶಸ್ತಿಯನ್ನು 2014 ರಲ್ಲಿಯೇ ಆರಂಭಿಸಿದ್ದು ಸ್ಮರಣೀಯ ಕಾರ್ಯ. ಈ ಗೌರವ ಪ್ರಶಸ್ತಿಯನ್ನು ಪ್ರತಿ ವರ್ಷ ಕನ್ನಡ ನಾಡಿನಲ್ಲಿ ಹೆಸರು ಮಾಡಿದ, ಸೇವೆಗೈದ ಮಹನೀಯರನ್ನು ಗುರುತಿಸಿ ನೀಡಲಾಗುತ್ತಿದೆ. ಇಲ್ಲಿಯವರೆಗೆ ಈ ಪ್ರಶಸ್ತಿಗೆ ಭಾಜನರಾದವರೆಂದರೆ ಶರಣ ಜಿ.ಎಸ್. ಜಯದೇವ, ಶರಣ ಗೊ ರು ಚನ್ನಬಸಪ್ಪ, ಶರಣ ರಂಜಾನ್ ದರ್ಗಾ, ಶರಣ ಡಾ. ಪಾಟೀಲ್ ಪುಟ್ಟಪ್ಪ, ಶರಣೆ ಡಾ. ಲೀಲಾದೇವಿ ಪ್ರಸಾದ್, ಶರಣ ಅರವಿಂದ ಜತ್ತಿ, ಶರಣ ಉದಯಶಂಕರ ಪುರಾಣಿಕ್, ಪೂಜ್ಯ ಡಾ. ತೊಂಟದ ಸಿದ್ಧರಾಮ ಮಹಾ ಸ್ವಾಮಿಗಳು, ಶರಣೆ ಡಾ. ಬಿ.ಟಿ. ಲಲಿತಾನಾಯ್ಕ್, ಮತ್ತು ಪೂಜ್ಯ ಡಾ. ಬಸವಲಿಂಗ ಪಟ್ಟದೇವರು. 2024ರ ಪ್ರಶಸ್ತಿಯನ್ನು ಶರಣ ಡಾ. ವೀರಣ್ಣ ಬಿ. ರಾಜೂರ ರವರಿಗೆ ನೀಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ಈ ಶುಭ ಕಾರ್ಯ ಶರಣ ಮಾಗನೂರು ಕುಟುಂಬದಿಂದ ನಿರಂತರವಾಗಿ ನಡೆಯಲಿ ಎಂಬುದು ನನ್ನ ಆಶಯವಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ, ದಾವಣಗೆರೆ
ವಿಶ್ರಾಂತ ಪ್ರಾಧ್ಯಾಪಕರು
ಇದನ್ನೂ ಓದಿ- ಮತ್ತೆ ಎಚ್ಚರಿಸಿದ ಯೆತ್ನಳ್ಳ..