ಸ್ವಾಮಿ ವಿವೇಕಾನಂದರ 161ನೇ ಜಯಂತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ನಮನ ಸಲ್ಲಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಜನ್ಮದಿನದಂದು ಅವರಿಗೆ ನನ್ನ ನಮ್ರ ನಮನಗಳನ್ನು ಸಲ್ಲಿಸುತ್ತೇನೆ. ಮಹಾನ್ ಆಧ್ಯಾತ್ಮಿಕ ನಾಯಕ ಮತ್ತು ಸುಧಾರಕ, ಸ್ವಾಮೀಜಿ ಅವರು ಭಾರತೀಯರಿಗೆ ತಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವು ಮೂಡಿಸಲು ದೇಶಾದ್ಯಂತ ಪ್ರಯಾಣಿಸಿದರು. ಅವರು ಯುವಕರನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಲು ಮತ್ತು ಮಾನವೀಯತೆಯ ಸೇವೆಗೆ ಪ್ರೇರೇಪಿಸಿದರು. ಅವರು ಮಹಾನ್ ಭಾರತೀಯ ಆಧ್ಯಾತ್ಮಿಕ ಸಂದೇಶವನ್ನು ಹರಡಿದರು. ಅವರ ಬೋಧನೆಗಳು ಮತ್ತು ಆಲೋಚನೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲಿ. ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತೀಯ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಸ್ಥಾಪಿಸಿದ ಸ್ವಾಮಿ ವಿವೇಕಾನಂದರಿಗೆ ಜನ್ಮವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ನೂರಾರು ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಶಕ್ತಿ ಮತ್ತು ಉತ್ಸಾಹ ತುಂಬಿರುವ ವಿವೇಕಾನಂದರ ಆಲೋಚನೆಗಳು ಮತ್ತು ಸಂದೇಶಗಳು ಕಾಲಕಾಲಕ್ಕೆ ಯುವಕರಲ್ಲಿ ಬದಲಾವಣೆಯನ್ನು ಬಯಸಲು ಪ್ರೇರೇಪಿಸುತ್ತಲೇ ಇರುತ್ತವೆʼ ಎಂದು ಬರೆದುಕೊಂಡಿದ್ದಾರೆ.
ಅಸ್ಪ್ರಶ್ಯತೆ, ಅಂಧ ಶ್ರದ್ಧೆ ಮತ್ತು ಪುರೋಹಿತಶಾಹಿ ಡಾಂಭಿಕತನವನ್ನು ತೊಲಗಿಸಿ ಹಿಂದೂ ಧರ್ಮದ ಸುಧಾರಣೆಗೆ ನಿರಂತರ ಪ್ರಯತ್ನ ಮಾಡಿದ ಸ್ವಾಮಿ ವಿವೇಕಾನಂದರನ್ನು ಅವರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯೋಣ. ಬಡತನ ಮತ್ತು ಅನಾರೋಗ್ಯದಿಂದ ಕುಂದದೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಕಿರಿ ವಯಸ್ಸಿನಲ್ಲಿಯೇ ವಿಶ್ವವೇ ತಲೆಬಾಗುವಂತಹ ಆಧ್ಯಾತ್ಮಿಕ ಗುರುವಾಗಿ ಬೆಳೆದು ನಿಂತ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ. ನಾಡಿನ ಸಮಸ್ತ ಯುವಕ-ಯುವತಿಯರಿಗೆ ರಾಷ್ಟ್ರೀಯ ಯುವದಿನದ ಶುಭಾಶಯಗಳು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.