ಮಾತೆಂಬುದು ಜ್ಯೋತಿರ್ಲಿಂಗ

Most read

ಬದಲಾದ ಸನ್ನಿವೇಶಗಳ ಎದುರು ಬಾಶೆಯ ಅಳಿವು-ಉಳಿವು ಹಲವು ಸಿಕ್ಕುಗಳೊಂದಿಗೆ ತಳುಕು ಹಾಕಿಕೊಂಡಿದ್ದರೂ ಆತ್ಯಂತಿಕವಾಗಿ ಆರ್ತಿಕ ಸಂಗತಿಗಳೇ ನಿರ್ಣಾಯಕ ಪಾತ್ರ ವಹಿಸುವುದರಿಂದ  ಕನ್ನಡವನ್ನು ಅನ್ನದ ಬಾಶೆಯನ್ನಾಗಿ ಪರಿವರ್ತಿಸದಿದ್ದರೆ ನಾವು ಅದಕ್ಕೆ ತಕ್ಕನಾದ ಬೆಲೆ ತೆರಬೇಕಾಗುತ್ತದೆ. ಆದಕಾರಣ ನಮಗೀಗ ನಮ್ಮದೇ ಆದ ಬಾಶಾನೀತಿ ಜರೂರಾಗಿ ಬೇಕು -ಎಲ್ಲರ ಕನ್ನಡದಲ್ಲಿ ಈ ಲೇಖನವನ್ನು ಬರೆದಿದ್ದಾರೆ ಹೊಸಪೇಟೆಯ ವನಮಾಲಾ ಕಟ್ಟೇಗೌಡರ್.

ಕನ್ನಡ ಪರಂಪರೆಯಲ್ಲಿ ಬಾಶೆಯ ಬಗ್ಗೆ ಅಲ್ಲಮನಷ್ಟು ಇನ್ಯಾರೂ ತಲೆಕೆಡಿಸಿಕೊಂಡಿಲ್ಲವೇಂದೇ ಹೇಳಬೇಕು. ಬಾಶೆಯ ಬಗ್ಗೆ ಪರಮ ಸಂದೇಹಿಯಾದ ಅಲ್ಲಮ ಶಬ್ದವನ್ನು ‘ಶ್ರೋಶ್ರದೆಂಜಲು’ ಎನ್ನುತ್ತಾನೆ. ‘ಶಬ್ದಸೂತಕ’, ‘ಶಬ್ದ ಸಂದಣಿ’, ‘ಮಾತಿನ ಬಣವೆ’, ‘ಶಬ್ದ ಲಜ್ಜೆ’, …ಮೊದಲಾದವುಗಳ ಮೂಲಕ ಬಾಶೆಯ ಮಿತಿಗಳನ್ನು ಶೋದಿಸುತ್ತಾನೆ. ‘ಎರಡೆಂಬತ್ತು ಕೋಟಿ ವಚನವ ಹಾಡಿ ಹಲವು ಹಂಬಲಿಸಿತ್ತೆನ್ನ ಮನವು…,’ ಎನ್ನುವ ಮೂಲಕ ಬಾಶೆಯ ನಿರರ್ತಕತೆಯನ್ನು ಮನಗಾಣಿಸುತ್ತಾನೆ. ‘ಶಬ್ದ ಸಂಬ್ರಮದ ಮದವಳಿಯದೇ ಶಬ್ದಮುಗ್ದನಾದ ಗುಹೇಶ್ವರನನ್ನು’ ಅರಿಯಲಾಗದು ಎಂಬುದು ಅಲ್ಲಮನ ಅಬಿಮತ. ಬಾಶೆ ತನ್ನೆಲ್ಲ ಕಾಳಿಕೆಯನ್ನು ಕಳೆದುಕೊಂಡು ಒದಗಿಬಂದಾಗಲೇ ಅದು ‘ಜ್ಯೋತಿರ್ಲಿಂಗ’ವಾಗುತ್ತದೆ. ಆಗ ಅದು ಸೂತಕರಹಿತವಾಗಿರುತ್ತದೆ. ಅದಕ್ಕಾಗಿಯೇ ‘ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ’.

‘ಅಳಿಸಲಾಗದ ಲಿಪಿಯನು ಬರೆಯಲಾಗದು’ ಎಂದೂ ಹೇಳುತ್ತಾನೆ ಅಲ್ಲಮ. ಸ್ತಾವರ ವಿರೋದಿ ಅಲ್ಲಮನಿಗೆ ಇದು ಕೂಡಾ ಸಹಜವೇ.  ಇದೆಲ್ಲಾ ಅಲ್ಲಮನಂತ ಅನುಬಾವಿಗಳ ಮಾತಾಯಿತು. ಜನಸಾಮಾನ್ಯರಾದ ನಮ್ಮಂತವರಿಗೆ ಮಾತೇ ಜೀವಾಳ! ಮಾತಿನಲ್ಲೇ ಮಂಟಪ ಕಟ್ಟುವವರು ನಾವು! ಇನ್ನು ಲಿಪಿಯ ಬಗ್ಗೆಯಂತೂ ಕೇಳುವುದೇ ಬೇಡ! ಚಿಕ್ಕಂದಿನ ಓನಾಮದಿಂದ ಶುರುವಾಗಿ ಮುಂದೆ ಆಲದ ಮರದಂತೆ ಬೆಳೆದು ಬೆಟ್ಟ ವಾಗುತ್ತದೆ! ಅಲ್ಲಮನಂತ ಅನುಬಾವಿಗಳ ಮಾತು ಏನೇ ಇರಲಿ, ನಮ್ಮ ಮಟ್ಟಿಗೆ ಮಾತು ಜಂಗಮವಾದರೆ, ಲಿಪಿ ಸ್ತಾವರ. ಅದಕ್ಕೇ ನಮ್ಮ ಜನಪದರು ಲಿಪಿ ಕಾರ್ಕಾನೆ ಗಳಾದ ಶಾಲೆಗಳನ್ನು ‘ಸಾಲಿಗುಡಿ’ ಎಂದೇ ಕರೆಯುತ್ತಾರೆ!

ಕರ್ನಾಟಕದಲ್ಲಿ ಕನ್ನಡ ನುಡಿಯನ್ನು ದಾರವಾಡ ಕನ್ನಡ, ಗುಲ್ಬರ್ಗ ಕನ್ನಡ, ಮೈಸೂರು ಕನ್ನಡ, ಕರಾವಳಿ ಕನ್ನಡ ಎಂದು ಮುಂತಾಗಿ ವಿಬಜಿಸಿದರೂ ಇದೊಂದು ಸ್ತೂಲ ಚಿತ್ರಣ ಮಾತ್ರ. ಅಸಲಿನ ಸಂಗತಿಯೆಂದರೆ ಹಲವು ಕಿಲೋಮೀಟರ್ ಗಳ ಅಂತರದಲ್ಲಿ ಬಾಶೆ ಬದಲಾಗುತ್ತಿರುತ್ತದೆ! ಉದಾಹರಣೆಗೆ ಬಾಲ್ಯದಲ್ಲಿ ನಾವು ಬೇಸಿಗೆ ರಜೆ ಕಳೆದ ಸವಣೂರು-ಲಕ್ಷ್ಮೇಶ್ವರಗಳು ಅವಿಬಜಿತ ದಾರವಾಡ ಜಿಲ್ಲೆಯ ಪ್ರದೇಶಗಳೇ ಆಗಿದ್ದರೂ ಗದಗ್-ಬೆಟಗೇರಿಗಿಂತ ಅಲ್ಲಿನ ಬಾಶೆಯಲ್ಲಿ ವ್ಯತ್ಯಾಸವಿದ್ದೇ ಇರುತ್ತಿತ್ತು. ನವಾಬರ ಆಡಳಿತಕ್ಕೊಳಪಟ್ಟ ಸವಣೂರಿನ ಬಾಶಿಕರಲ್ಲಿ ಖತರ್ನಾಕ್, ತಾಲಾಬ್, ಮೋತಿ, ದುಖಾನ್, ಮಕಾನ್….,ಮೊದಲಾದ ಅನ್ಯದೇಶೀಯ ಶಬ್ದಗಳು ಲೀಲಾಜಾಲವಾಗಿ ಬಳಕೆಯಲ್ಲಿದ್ದರೆ, ಲಕ್ಷ್ಮೇಶ್ವರದಲ್ಲಿ ಒಂದು ಮಟ್ಟಿನ ತಿರುಳುಗನ್ನಡವಿತ್ತು. ಇನ್ನು ದಾರವಾಡಕ್ಕೂ ಗದುಗಿನ ಮಾತುಗಳಿಗೂ ವ್ಯತ್ಯಾಸಗಳಿದ್ದೇ ಇತ್ತು. ಗದುಗಿನ ‘ಇಲ್ಲಂದ್ರ’ ಎಂಬ ಶಬ್ದವನ್ನು ದಾರವಾಡದಲ್ಲಿ ‘ಇಲದಿರಕ’ ಎಂದು ಉಚ್ಚರಿಸಲಾಗುತ್ತಿತ್ತು. ಹೆಚ್ಚಾಗಿ ಹೆಂಗಳೆಯರು ಆಡುವ ‘ನಾ ಒಲ್ಲೆವ್ವಾ!!’ ಎಂಬ ಉದ್ಗಾರವಾಚಕ ನುಡಿ ದಾರವಾಡದ ಹೆಂಗಸರ ಬಾಯಲ್ಲಿ ಒಂದು ರೀತಿಯ ಎಳೆತದ ಸ್ವರದಲ್ಲಿ ‘ಯವ್ವಾ ನಾ ಒಲ್ಲೆ!!’ ಎಂದಾಗುತ್ತಿತ್ತು. ‘ಬರಾಕತ್ತಾಳಾ’, ‘ಹೋಗಾಕತ್ತಾನಾ’ ಎಂಬ ಗದುಗಿನ ಪರಿಸರದ ಶಬ್ದಗಳು ದಾರವಾಡಿಗರ ಬಾಯಲ್ಲಿ ‘ಬರಾತ್ತಾನಾ’, ‘ಹೋಗಾತ್ತಾನಾ’ ಎಂದು ನಡುವಿನ ‘ಕ’ ಅಕ್ಷರವನ್ನು ನುಂಗಿ ಬಳಕೆಯಾಗುತ್ತಿದ್ದವು! ದಾರವಾಡ ಹೋಗಲಿ, ಗದಗ್-ಬೆಟಗೇರಿಯ ಸುತ್ತಮುತ್ತಲಿನ ಹಳ್ಳಿಗಳಾದ ಚಿಕ್ಕೊಪ್ಪ, ಹಿರೇಕೊಪ್ಪ, ನೀರಲಗಿ, ಕನ್ಯಾಳ, ನಾಗಾವಿ, ಅಸುಂಡಿ, ಮಲ್ಲಸಮುದ್ರ, ಬಿಂಕದಕಟ್ಟಿ, ಹುಲಕೋಟಿ, ಡಂಬಳ, ಲಕ್ಕುಂಡಿ…, ಮೊದಲಾದ ಜನಪದರ ಬಾಶೆಗೂ ಗದಗ್-ಬೆಟಗೇರಿ ಬಾಶೆಗೂ ವ್ಯತ್ಯಾಸಗಳಿರುತ್ತಿದ್ದವು!

ಸವಣೂರು-ಲಕ್ಷ್ಮೇಶ್ವರದಲ್ಲಿ ‘ಬ್ಯಾಸಗಿ ಸೂಟಿ’ ಕಳೆದಂತೆ ಬಿಜಾಪುರದ ದೊಡ್ಡಮ್ಮನ ಮನೆಯಲ್ಲೂ ಸೂಟಿ ಕಳೆಯುವುದಿತ್ತು ಆಗಾಗ. ಬಿಜಾಪುರದ ಬಾಶೆ ಇನ್ನೂ ವಿಶಿಷ್ಟ. ಆ ಮಾತಿಗೆ ತನ್ನದೇ ಆದ ಒಂದು ಲಯವಿತ್ತು. ವಾಕ್ಯದ ಕೊನೆಯ ಶಬ್ದವನ್ನು ಒಂದು ರೀತಿಯ ಸ್ವರದಲ್ಲಿ ಎಳೆದು ಮಾತನಾಡುತ್ತಿದ್ದರು. ‘ಎಟ್ಟ ಸಾವಕಾಶ ಬರ್ತೀಯಲ್ಲ? ದೌಡದೌಡ ಬಾ ನೀ..ಇಇಇಇ’ , ‘ಅದೇನೈತೋ ಯಾಂಬಲ್ಲ…ಅಅಅಅ’ ‘ಏ ಪೋರಿ, ಇಟ್ಟ ಯಾಕ ಗಡಬಡ್ ನಿಂದು…ಉಉಉಉ’ ಹೀಗೆ ಅವರ ಮಾತುಗಳು ಒಂದು ಬಗೆಯ ಸಂಗೀತದಂತೆ ಕೇಳುತ್ತಿದ್ದವು. ಅದೂ ಅಲ್ಲದೇ ಶಬ್ದದ ಅಂತ್ಯ ಸ್ವರಗಳನ್ನೇ ಪಲ್ಲಿಟಿಸಿಬಿಡುತ್ತಿದ್ದರು! ನಮ್ಮ ಕಡೆಯ ‘ಕಾಡು’, ‘ನೀರು’ ಗಳು ‘ಉ’ ಸ್ವರವನ್ನು ಕಳೆದುಕೊಂಡು ‘ಕಾಡಾ’, ‘ನೀರಾ’ ಎಂದು ‘ಆ’ ಸ್ವರಕ್ಕೆ ಬಂದು ಹಿಂದಕ್ಕೆ ಜಿಗಿಯುತ್ತಿದ್ದವು!

ಬಿಜಾಪುರದಲ್ಲಿ ದೊಡ್ಡಮ್ಮನ ಮನೆ ತುಂಬಾ ಮಕ್ಕಳು. ಗದುಗಿನಲ್ಲಿ ಬರೀ ಇಬ್ಬರು ತಮ್ಮಂದಿರ ಜೊತೆಗಿದ್ದ ನನಗೆ ಇಲ್ಲಿ ಅಕ್ಕ, ಅಣ್ಣ, ತಮ್ಮ, ತಂಗಿ, ಎಲ್ಲ ಸಿಗುತ್ತಿದ್ದರು!  ಒಂದು ಬಾರಿ ನನ್ನ ದೊಡ್ಡಕ್ಕ “ನಾಳೆ ಹರ್ಯಾಗ ದೌಡದೌಡ ಏಳ್ ನೀ…ಇಇಇಇ. ನಿನ್ನಿಯಂಗ ಶಿಕೋಣಿ ತಪ್ಪಿಸಬ್ಯಾಡಾ…ಆಆಆಆ” ಎಂದು ಜೋರು ಮಾಡಿ ತಮ್ಮನನ್ನು ಮಲಗಿಸುತ್ತಿದ್ದಳು. ಅವಳು ಆಡಿದ ಮಾತೇ ನನಗರ್ತವಾಗಲಿಲ್ಲ! ನಾನು ಅಡುಗೆಮನೆಯಲ್ಲಿದ್ದ ದೊಡ್ಡಮ್ಮನ ಬಳಿ ಓಡಿ ಕೇಳಿದೆ. ಗಂಡನ ಮನೆಯಾದ ಗಜೇಂದ್ರಗಡದಿಂದ ವಲಸೆ ಬಂದು ಬಿಜಾಪುರದಲ್ಲಿ ಗಟ್ಟಿಯಾಗಿದ್ದರೂ ದೊಡ್ಡಮ್ಮ ಗಡಾದ ಕಡೆಯ ಮಾತನ್ನು ಕಳೆದು ಕೊಂಡಿರಲಿಲ್ಲ. ಅವರು ನಗುತ್ತಲೇ ಹೇಳಿದರು-”ಅಕಿ ತಮ್ಮಗ- ನಾಳೆ ಮುಂಜೆಲೆ ಉದೆ ಹಾವುತ್ಲೆನ (ನಸುಕಿನಲ್ಲೇ) ಏಳು, ನಿನ್ನಿಗತೆ ಮನಿಪಾಟಾ(ಟ್ಯೂಶನ್) ತಪ್ಪಿಸಬ್ಯಾಡಾ, ಅಂತ ಹೇಳಾಕತ್ತಾಳಾ”

ಗದುಗಿನ ‘ಮುಂಜಾನೆ ಅತವಾ ಮುಂಜಾಲೆ ಅಲ್ಲಿ ‘ಹರ್ಯಾಗ’ ಆಗಿತ್ತು! ಕಬ್ಬಿಣದ ಕಡಲೆಯಾಗಿ ತಲೆ ತಿನ್ನುತ್ತಿದ್ದ ಗಣಿತ ವಿಶಯಕ್ಕೆ ಮಾತ್ರ ನಾವೂ ಕದ್ದುಮುಚ್ಚಿ (ಕದ್ದುಮುಚ್ಚಿ ಯಾಕೆಂದರೆ ಅಂದು ಟ್ಯೂಶನ್ ಗೆ ಹೋಗುವವರನ್ನು ‘ದಡ್ಡರು’ ಎಂದೇ ಪರಿಗಣಿಸಲಾಗುತ್ತಿತ್ತು!) ಹೋಗುತ್ತಿದ್ದ ‘ಓದಕೋಲಿ’(ಮನೆಪಾಟ-ಟ್ಯೂಶನ್) ‘ಶಿಕೋಣಿ’ ಆಗಿತ್ತು! ಈ ‘ಶಿಕೋಣಿ’ ಶಬ್ದ ಬಹಳ ದಿನ ನನ್ನ ತಲೆ ತಿಂದಿತು. ಕೊನೆಗೆ ‘ಶಿಕ್ಷಣದ ಕೋಣೆ’ ಶಿಕೋಣಿ ಯಾಗಿರಬಹುದಾದ ಸಮಾಸ ಪದವಿರಬೇಕೆಂದುಕೊಂಡು ಸುಮ್ಮನಾದೆ.

ನಾನು ಮ್ಯಾಟ್ರಿಕ್ ಪರೀಕ್ಷೆ ಮುಗಿಸಿದ ಮಾರನೆಯ ವರ್ಶವೇ ಮದುವೆಯಾಗಿ ಬಳ್ಳಾರಿ ಸೀಮೆಯ ಹಳ್ಳಿ ಉಬ್ಬಲಗಂಡಿಯ ಗಂಡನ ಮನೆಗೆ ಬಂದಾಗ ಇನ್ನೂ ಪಿಕಲಾಟಕ್ಕಿಟ್ಟುಕೊಂಡಿತು! ಒಂದು ದಿನ ಅತ್ತೆ ರೊಟ್ಟಿ ಸುಡಲು ಹಿಟ್ಟು ಹಾಗೂ ಕೊಣವಿಗೆಯನ್ನು ಮುಂದಿಟ್ಟುಕೊಂಡು ಅಲ್ಲೇ ಸೊಪ್ಪು ಸೋಸುತ್ತ ಕುಳಿತಿದ್ದ ನನಗೆ ದೇವರ ಕೋಣೆಯತ್ತ ಕೈ ತೋರಿಸಿ “ಜಲ್ಡಿ ತತ್ತಾಮ್ಮಾ”  ಎಂದರು. ಅವರ ಮಾತು ಏನೆಂದು ಅರ್ಥವಾಗದೇ ಎದ್ದು ಮಿಕಮಿಕನೇ ನೋಡುತ್ತಾ ನಿಂತೆ. ಅವರು ಮತ್ತೆ ದೇವರ ಕೋಣೆಯತ್ತ ಕೈ ತೋರಿಸಿ ಜಲ್ಡಿ ತತ್ತಾಮ್ಮಾ ಎಂದು ಪುನರುಚ್ಚರಿಸಿದರು. ನಾನು ಒಡನೆಯೇ ದೇವರ ಕೋಣೆಗೆ ಹೋಗಿ ಅವರು ಕೇಳಿದ ವಸ್ತು ಯಾವುದಾಗಿರಬಹುದು? ಎಂದು ಹುಡುಕಾಡತೊಡಗಿದೆ. ತಕ್ಕಮಟ್ಟಿಗೆ ದೊಡ್ಡದಾದ ದೇವರ ಮನೆಯಲ್ಲಿ ದೇವರ ಜಗುಲಿಯ ಎದುರು ಗೋಡೆಯ ನೆಲದ ಮೇಲೆ ಉದ್ದಕ್ಕೆ ಒಂದು ಚಿಕ್ಕ ಕಟ್ಟೆಯ ಮೇಲೆ ಸಾಲಾಗಿ ಅಡಕಲು ಗಡಿಗೆಗಳನ್ನು ಪೇರಿಸಿಟ್ಟಿದ್ದರು. ಮೊದಲು ದೊಡ್ಡ ಪಡಗ. ಅದರ ಮೇಲೆ ಕೆಳಗಿನದ್ದಕ್ಕಿಂತ ಕೊಂಚ ಚಿಕ್ಕದು. ಅದರ ಮೇಲೆ ಅದಕ್ಕಿಂತ ಚಿಕ್ಕದು…ಹೀಗೆ ಕೊನೆಗೆ ತಂಬಿಗೆಯಳತೆಯ ಪೂರಾ ಚಿಕ್ಕ ಗಡಿಗೆಗೆ ಅದು ಮುಗಿಯುತ್ತಿತ್ತು. ಒಂದರ ಮೇಲೊಂದರಂತೆ ಚೆಂದವಾಗಿ ಜೋಡಿಸಿಟ್ಟ ಅವುಗಳು ಗೋಪುರದಂತೆ ಕಾಣುತ್ತಿದ್ದವು. ಅವುಗಳಲ್ಲಿಯೇ ಹಿಟ್ಟು-ನುಚ್ಚು, ಕಾಳು-ಕಡಿ, ಒಣಮೆಣಸು-ಹುಣಸೇಹಣ್ಣು..ಹೀಗೆ ಅಡುಗೆಗೆ ಬೇಕಾದ ಸಕಲೆಂಟು ದಿನಸಿಯೆನ್ನೆಲ್ಲಾ ಅವುಗಳಲ್ಲಿಟ್ಟಿರುತ್ತಿದ್ದರು. ನಾನು ಆ ಗೋಪುರದ ಮೇಲಿನ ಚಿಕ್ಕ ಗಡಿಗೆಯನ್ನು ಕೇಳುತ್ತಿರಬಹುದೆಂದುಕೊಂಡು  ಅದನ್ನು ಒಯ್ದು ಕೊಟ್ಟೆ. ಅದನ್ನು ಕಂಡವರೇ ಅತ್ತೆ “ಏ ಕೋಡಿ, ಜಲ್ಡಿ ತತ್ತಾ ಅಂದ್ರಗಿನ ಮಗಿ ತಂದಿಗಿ…” ಎನ್ನುತ್ತಾ ಸಟಕ್ಕನೆ ಎದ್ದು ಅದನ್ನು ಸ್ವಸ್ತಾನದಲ್ಲಿಟ್ಟು ಬದಿಯ ಗೋಡೆಯ ಮೇಲೆ ನೇತು ಹಾಕಿದ್ದ ಹಿಟ್ಟು ಸಾಣಿಸುವ ಸಾಣಿಗೆಯನ್ನು ತೆಗೆದುಕೊಂಡು ಹಿಟ್ಟು ಸೋಸತೊಡಗಿದರು! ‘ಅರೆ! ಇದನ್ನಾ ಇವರು ಕೇಳಿದ್ದು?!’ ಎಂದು ಅಚ್ಚರಿಯಾಯಿತು.

“ಇದ್ಕ ನಿಮ್ಮೂರಾಕ ಏನಂಬ್ತೀರಿ?” ಅತ್ತೆ ಕೇಳಿದರು.

“ಇದಕ್ಕ ನಮ್ಮೂರಾಗ ಸಾಣಿಗಿ ಅಂತೀವ್ರಿ” ನಾನೆಂದೆ.

“ಬೇಸೈತಿ ಬಿಡು ಹೆಸ್ರು” ಎಂದು ನಗುತ್ತ ಅತ್ತೆ ಹಿಟ್ಟು ನಾದಿಕೊಂಡು ರೊಟ್ಟಿ ತಟ್ಟತೊಡಗಿದರು.

ಅಡುಗೆಯೆಲ್ಲ ಮುಗಿದು ಬುತ್ತಿಯೊಂದಿಗೆ ಹೊಲಕ್ಕೆ ಹೊರಟುನಿಂತ ಅತ್ತೆ ಮತ್ತೆ ಹೇಳಿದರು-“ಹೊತ್ರೂಟಕ್ಕ, ಹಗಲೂಟಕ್ಕ ನಮಿಗಾಗಟು ಮಾಡ್ಕಂಡೀನಿ, ನಿಮ್ಮೂವರ್ಗೆ ಮಾಡ್ಕಳ್ರಿ” ಎನ್ನುತ್ತಾ ಅವರು ಕಾಲ್ಮರಿ ಮೆಟ್ಟಿಕೊಂಡು ದಾಪುಗಾಲು ಹಾಕುತ್ತಾ ಹೊಲದತ್ತ ನಡೆದರು. ನನಗೆ ಮತ್ತೆ ಅದೇ ಸಮಸ್ಯೆಯಾಯಿತು! ಪಡಸಾಲೆಯಲ್ಲಿ ನವಣೆ ಥಳಿಸುತ್ತಿದ್ದ ಅಜ್ಜಿಯನ್ನು(ಮಾವನವರ ತಾಯಿ) ಕೇಳಿದೆ.

“ತಾವಿಬ್ರೂ ಗಂಡ-ಹೇಣ್ತಿಗೆ ಮತ್ತ ಹೊಲದಾಗಳ ಮುಯ್ಯಾಳಗೂಳ್ಗೆ ಬುತ್ತಿ ತಕಂಡಾಳ. ನಮಿಗಟ ಮಾಡು’ ಎಂದರು.

“ಮತ್ತೆ ಹೊತ್ರೂಟ….,” ಕೇಳಲೋ ಬೇಡವೋ ಎಂಬಂತೆ ಕೇಳಿದೆ.

“ಏಯ್ ಕೋಡಿ, ಮುಂಜಾನೆ-ಮದ್ಯಾನ್ಕ ಉಂಬಾಕ ಮಾಡು” ಎಂದರು!

ಹೀಗೆಯೇ  ಕಿಟಕಿ-ಜನಾಲು, ಲೋಹದ ಪಾತ್ರೆ-ತಸ್ತು, ಸ್ಟಲ್ಪ-ರವ್ವೋಟು, ಬೇಗನೆ-ಬಿರಬಿರನೆ, ಮದುಮಗ-ಮದ್ಲಿಂಗ, ಮದುಮಗಳು-ಮದ್ಲಿಂಗಿ, ಬಸುರಿ-ಬಿಮ್ಮನಸ್ಯಾಳು, ಹೆರಿಗೆ-ಹಡುಣಿಗಿ, ಹುಡುಗಿ-ಪಿಳ್ಳೆ, ಬಾಲಮ್ಮ-ಕುನ್ಯಮ್ಮ, ಸೆಟಗೊಳ್ಳು-ಮುನಿಸುಗುಟ್ಟು, ಬಿಸಿ ನೀರಿನ ಹಂಡೆ-ಹೊತ್ತಿನ ಪಡಗ, ನೀರೊಲೆ-ಹೊತ್ತೊಲೆ, ಬಹಳ-ಸನಾ, ಕೊಡು-ತತ್ತಾ, ತೊಗೋ-ಕ್ವಾ, ಹುಡುಗಾಟಿಕೆ-ಕುವ್ವಾಡ, ದಿಮಾಕು-ವೈಶಾಕು, ಶಿಳ್ಳಗಂಡ-ಸಿಂಬಳಬುರುಕ, ಚೆನ್ನಾಗಿ-ವಯಿನಾಗಿ, ಗೃಹ ಪ್ರವೇಶ -ಮಾಳಿದೇವ್ರು, ಮುಟ್ಟಾಗು-ಬಟ್ಟಿಮಾಸು….., ಮೊದಲಾದ ಅನೇಕ ಶಬ್ದಗಳನ್ನು ಹೊಸದಾಗಿ ಕಲಿಯಬೇಕಾಯಿತು! ಕ್ರಮೇಣ ಅವುಗಳನ್ನೆಲ್ಲಾ ನಾನು ಕಲಿತೆ ಕೂಡಾ. ಆದರೆ ಅವುಗಳನ್ನು ಮಾತಿನಲ್ಲಿ ಪ್ರಯೋಗಿಸಲು ಸಾಧ್ಯವಾಗಲಿಲ್ಲ! ‘ಕಲಿತ ಚಾಳಿ ಕಲ್ಲ ಹಾಕಿದ್ರೂ ಹೊಗಂಗಿಲ್ಲ’ ಎಂಬ ಗಾದೆಯನ್ನು ತುಸು ಬದಲಾಯಿಸಿ ‘ಕಲಿತ ಮಾತು ಕಲ್ಲ ಹಾಕಿದ್ರೂ ಹೊಗಂಗಿಲ್ಲ’ ಎನ್ನಬಹುದೇನೋ!  

ಉಬ್ಬಲಗಂಡಿಯ ಜನ ತಮ್ಮ ಊರು ಹಾಗೂ ಸುತ್ತಮುತ್ತಲ ಹಳ್ಳಿಗಳು-ಹೆಚ್ಚೆಂದರೆ ಬಳ್ಳಾರಿ ಆಸುಪಾಸಿನಲ್ಲಿಯೇ ಬೀಗಸ್ತನ ಮಾಡುತ್ತಿದ್ದರು. ಇತ್ತೀಚೆಗೆ ಅವರು ಗದುಗಿನಮಟ ಪಾದ ಬೆಳೆಸಿದ್ದೇ ಹೆಚ್ಚಾಗಿತ್ತು. ಆದರೆ ನಾನು ಬಂದ ನಂತರದ ದಿನಗಳಲ್ಲಿ ಆಂದ್ರದ ಗಡಿಯ ಹಳ್ಳಿಯ ಒಂದೆರಡು ಬೀಗಸ್ತನಗಳಾದವು. ಅದರಲ್ಲಿ ಒಂದು ಹುಡುಗಿ ಚೊಚ್ಚಲ ಹೆರಿಗೆಗಾಗಿ ತವರಿಗೆ ಹೋದಳು. ತಿಂಗಳೊಪ್ಪತ್ತಿನಲ್ಲಿ ಅವಳ ಹೆರಿಗೆಯೂ ಆಯಿತು. ಸುದ್ದಿ ತಿಳಿಸಲು ಅವಳಣ್ಣ ಊರಿಗೆ ಬಂದ. ಅವಳು ಗಂಡುಕೂಸು ಹೆತ್ತಿದ್ದಳು. ಸುದ್ದಿ ತಂದವನಿಗೆ ಪದ್ದತಿ ಪ್ರಕಾರ ಉಡುಗೊರೆ ನೀಡಿಯಾದಮೇಲೆ

“ಹಡುಣಿಗಿ ವೈನಾಗಿ ಆತಾ? ಕೂಸು-ಬಾಣತಿ ಬೇಸದಾರಾ?” ಎಂದು ವಾಡಿಕೆಯಂತೆ ಅವರು ಕೇಳಿದರು. ಆತ ಒಳ್ಳೆ ಹುರುಪಿನಿಂದ ನುಡಿದ-

“ಹಡ್ತ ಬಲು ಬೇಸಾತು, ಒಬ್ರ ಕಿವ್ಯಾಕ ಬಿದ್ರ ಇನ್ನೊಬ್ರ ಕಿವ್ಯಾಕ ಬೀಳ್ದಂಗ-ಯಾ ಸುದ್ದಿ ಗದ್ಲ ಇಲ್ದಂಗ. ಕೂಸು-ಬಾಣ್ತಿ ಬೇಸದಾರ” ಎಂದ!

ಯಪ್ಪಾ!! ಹೆರಿಗೆ ಎನ್ನುವುದಕ್ಕೆ ಎಂತ ಪದ ಬಳಸಿದ ಈ ಮಾರಾಯ! ಎನಿಸಿ ಕೆಟ್ಟ ಮುಜುಗರವಾಯಿತು.

ಈ ಪ್ರಸಂಗ ತುಂಬಾ ದಿನಗಳವರೆಗೆ ನನ್ನನ್ನು ಕಾಡಿತು. ಬಾಶೆಯಲ್ಲಿನ ಕೆಲವು ಶಬ್ದಗಳು ಕೆಲವರಿಗಷ್ಟೇ ಯಾಕೆ ಮುಜುಗರ ಉಂಟುಮಾಡುತ್ತವೆ? ಎಂಬ ಪ್ರಶ್ನೆ ಎದ್ದಿತು. ಯಾಕೆಂದರೆ ಮೇಲಿನ ಪ್ರಸಂಗದಲ್ಲಿ ಆ ಶಬ್ದವನ್ನು ಬಳಸಿದಾತ ಯಾವ ಬಾವವಿಕಾರವನ್ನೂ ತೋರದೇ ಸಹಜವಾಗಿ ಅದನ್ನು ಬಳಸಿದ್ದ. ಅಷ್ಟು ಮಾತ್ರವಲ್ಲ, ಉಬ್ಬಲಗಂಡಿ ಪರಿಸರದಲ್ಲೂ ಈ ಬಗೆಯ ಮಾತುಗಳು ನನ್ನ ಕಿವಿಗೆ ಬೀಳುತ್ತಿದ್ದವು. ಒಂದು ಬಾರಿ ಅತ್ತೆ ತಮ್ಮ ಬಂದುಗಳಲ್ಲಿ ತುಂಬಾ ಹಟಮಾರಿ-ಜಿಡ್ಡು ಸ್ವಬಾವದ ವ್ಯಕ್ತಿಯೊಬ್ಬರ ಬಗ್ಗೆ ಮಾತನಾಡುತ್ತಾ “ಕೌದಿಗೆ ಹತ್ತಿದ ಹೇಲಿದ್ದಂಗ ಆತ. ಯಾತಕ್ಕ ತಲಿ ಒಡ್ಕಂಬದು? ಆತನ್ ಸನೇಕ ಹಾಯಬೇಕಂಬುದ್ಯಾಕ? ಎಂದರು! ಆ ವ್ಯಕ್ತಿಯ ವ್ಯಕ್ತಿತ್ವವನ್ನು ಎಶ್ಟು ಸಮರ್ತ ಉಪಮೆಯೊಂದಿಗೆ ತೆರೆದಿಟ್ಟಿದ್ದರು! ಆದರೂ ನನಗೆ ಅದನ್ನು ಮನಪೂರ್ವಕ ಸವಿಯುವುದಾಗಲಿಲ್ಲ! ಇನ್ನೊಂದು ಬಾರಿ ಅಜ್ಜಿಯೊಬ್ಬರು ತಮ್ಮ ಮಗ-ಸೊಸೆಯ ರಂಪಾಟವನ್ನು ತುಂಬಾ ದುಕ್ಕದಿಂದ ಅತ್ತೆಯ ಹತ್ತಿರ ತೋಡಿಕೊಳ್ಳುತ್ತಿದ್ದರು. ‘ಗಿಣಿಯಂತೆ ಸಾಕಿದ ಮಗ ಸೊಸೆಯೆಂಬ ಗಿಡುಗನ ಪಾಲಾದ’ ಎಂದು ರೋದಿಸತೊಡಗಿದರು. ಅತ್ತೆ ಅವರನ್ನು “ಹೋಗ್ಲಿ ಸುಮ್ಕಿರಂಗೆ, ಸಣ್ಣವು, ಅವುಕ ಗೊತ್ತಾಗಾಕಿಲ್ಲ. ಯಾಕ ಮನಕ್ಕ ತಾಪ ಮಾಡ್ಕಂಬದು” ಹೀಗೆ ತಮಗೆ ತೋಚಿದಂತೆ ಸಮಾದಾನ ಮಾಡತೊಡಗಿದರು. ಆದರೂ ಅವರು ಏನೇನೋ ಬಡಬಡಿಸಿ ಕೊನೆಗೆ ಸೆರಗಿನ ಚುಂಗಿನಿಂದ ಕಣ್ಣೀರೊರೆಸಿಕೊಳ್ಳುತ್ತ “ನಾವು ಅನ್ಕಂಬುದೆಲ್ಲ ಸುಳ್ಳು. ಲೋಕದ ನಡಾವಳಿನ ಅಂಗಿರದು. ಮಲಿ ಕೊಟ್ಟಕಿ ಮಂಗಮ್ಮ; …….ಕೊಟ್ಟಕಿ ತುಂಗಮ್ಮ” ಎನ್ನುತ್ತ ಎದ್ದು ಹೋದರು!! ಅವರ ಮಾತು ಕೇಳಿ ನನ್ನದೆ ಜಲ್ ಅಂತು! ಇಂತವನ್ನೆಲ್ಲಾ ಇವರು ಎಷ್ಟು ಸಸಾರವಾಗಿ ಮಾತಾಡುತ್ತಾರಲ್ಲಪ್ಪ, ಯಾವ ಎಗ್ಗು-ಸಿಗ್ಗಿಲ್ಲದೆ!! ಎನಿಸಿ ಅಸಹ್ಯ ಬಾವ ಮೂಡಿತು. ಪಟ್ಟನೆ ಅವ್ವ ನೆನಪಾದಳು. ಅವಳು ಯಾರನ್ನಾದರೂ ಬೈಯ್ಯುವ ಅತೀ ಕೆಟ್ಟ ಬೈಗುಳೆಂದರೆ-”ರಗಾಡಿ ಎಮ್ಮಿಗೊಡ್ಡು”. ಅದು ಬಿಟ್ಟರೆ “ದಿಬರದಿಂಡಿ”.

 ಒಂದು ಬಾರಿ ಅಜ್ಜಿ ಓಣಿಯ ಯಾವುದೋ ‘ದಿಬರದಿಂಡಿ’ ಹೆಂಗಸಿನ ‘ದೀಡ ಪಂಡಿತ’ ಕೆಲಸದ ಬಗ್ಗೆ ಬೈಯ್ಯುತ್ತ “ಬಲ್ಲೆರೆ (ಭಲೇರೆ?) ಬಾನಗಿತ್ತಿ ಅಂದ್ರ ಮುಕಳಾಗೆಲ್ಲ ಆಮ್ರ ಸುರುಕೊಂಡಿದ್ಲಂತ ಹಂಗಾತು ಇಕಿ ಬಾಳೇವು” ಎಂದು ಅನ್ನುವುದೇ ತಡ ಅವ್ವ “ಸಣ್ಣ ಸಣ್ಣ ಮಕ್ಳಿರೂ ಮನ್ಯಾಗ ಏನಂತ ಮಾತಾಡ್ತಿ ದೊಡ್ಡಿ ನೀನು?” ಎನ್ನುತ್ತ ಅಜ್ಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಳು.

ಇನ್ನೊಮ್ಮ ಅಜ್ಜಿ ಮೂಳ ಹೀರೇತನ ಮಾಡುವ ಬಂದುವೊಬ್ಬರನ್ನು ಬೈಯ್ಯುತ್ತ  “ಹಿರೇತನಕ್ಕ ಗುಗ್ಗಳ ಹೊತ್ರ, ಬಗಲಾಗಿನ್ ಸೆಂಟನೆಲ್ಲ ಊರ್ ಮಂದಿ ನೋಡಿದ್ರಂತ” ಎಂದಾಗಲೂ ಅವ್ವ ಅಜ್ಜಿಯನ್ನು ಹೀಗೇ ಕಂಡಿಸಿದ್ದಳು. ಇಂತಹ ಅವ್ವ ಇಂದೇನಾದರೂ ಈ ಮಾತುಗಳನ್ನು ಕೇಳಿದ್ದರೆ ಎದೆಯೊಡೆದುಕೊಳ್ಳುತ್ತಿದ್ದಳೇನೋ ಎನಿಸಿತು. ಈ ಎಲ್ಲಾ ಮಾತುಗಳೂ ಅತ್ಯಂತ ಶಕ್ತ ಉಪಮೆ-ರೂಪಕಗಳಿಂದ, ಮಾತಿನ ಸಂದರ್ಬ- ಸನ್ನಿವೇಶಗಳನ್ನು ತುಂಬಾ ಮಾರ್ಮಿಕವಾಗಿ ಕಟ್ಟಿಕೊಡುತ್ತಿದ್ದರೂ ಇವುಗಳ ಬಗ್ಗೆ ಮನಸ್ಸು ಹೇಸುತ್ತಿತ್ತು. ಯಾಕೆ ಹೀಗೆ? ಎಂಬ ಪ್ರಶ್ನೆ ಕಾಡಿತು. ಈ ಮಾತುಗಳನ್ನು ಆಡಿದ ಯಾರಲ್ಲೂ ಇರದ ಹೇಸಿಗೆ ಬಾವ ಅವ್ವನನ್ನು ಹಾಗೂ ಅವಳ ಪ್ರಬಾವದಲ್ಲಿದ್ದ ನನ್ನನ್ನು ಮಾತ್ರ ಯಾಕೆ ಕಾಡುತ್ತಿದೆ? ಎಂದು ತೀವ್ರವಾಗಿ ಯೋಚಿಸಿದಾಗ ನನಗೆ ಹೊಳೆಯಿತು-ಇದು ಮನಸ್ಸಿನ ‘ತರತಮ ಬಾವದಾಟ’ ಎಂದು! ಹಾಗಾದರೆ ಇದು ಬಾಶೆಯ ಕಾಳಿಕೆಯಲ್ಲ, ಅದನ್ನು ಬಳಸುವ ಮನುಷ್ಯರ ಮನಸ್ಸಿನ ಕಸರು. ಈ ಕಸರು ಕಳೆದುಕೊಳ್ಳದೇ ಬಾಶೆ ತಿಳಿಯಾಗುವುದೆಂತು? ಎಲ್ಲರಿಗೂ ಸಮಾನವಾಗುವುದೆಂತು? ಹಾಗಾಗಲು ಸಾದ್ಯವೇ ಇಲ್ಲ ಎನಿಸಿತು. ಯಾಕೆಂದರೆ ಇದು ಮನುಷ್ಯರಿಗಾಗಿ ಮನುಷ್ಯರೇ ಕಂಡುಹಿಡಿದು ಕೇವಲ ಮನುಷ್ಯರಷ್ಟೇ ಬಳಸುವ ಒಂದು ವ್ಯವಸ್ತೆ. ಹಾಗಾಗಿ ಮನುಶ್ಯರ ಮನೋವ್ಯಾಪಾರಗಳೆಲ್ಲ ಅದಕ್ಕಂಟುವುದು ಅತೀ ಸಹಜ. ಆದಕಾರಣವೇ ಅಲ್ಲಮ ಬಾಶೆಯ ಬಗ್ಗೆ ಅಷ್ಟೊಂದು ಸಂದೇಹಿಯಾದದ್ದು ಎನಿಸತೊಡಗಿತು. ಬಾಶೆಗಂಟಿದ ಈ ಸೂತಕವನ್ನು ಕಳೆದುಕೊಳ್ಳುವುದು ಅಸಾದ್ಯವೇ ಸರಿ. ಶರಣರು ನುಡಿದು ಸೂತಕಿಗಳಲ್ಲ ಎನ್ನುತ್ತಾನೆ ಅಲ್ಲಮ. ಇದೂ ಕೂಡ ಪೂರ್ಣ ಸತ್ಯವಲ್ಲ.

“ಮಲ ಒತ್ತಿ ಬಂದರೆ ಹಾಳುಗೇರಿಯಲಿ ಬಿಡಬೇಕಯ್ಯ

ಜಲವೊತ್ತಿ ಬಂದರೆ ಬಚ್ಚಲೊಳಗೆ ಬಿಡಬೇಕಯ್ಯ

ಇಂದ್ರಿಯ ಒತ್ತಿ ಬಂದರೆ ಯೋನಿಯೆಂಬ ಬಚ್ಚಲೊಳಗೆ ಬಿಡಬೇಕಯ್ಯ

………

ಸಿದ್ದಲಿಂಗ ಯತಿಗಳ ಈ ವಚನವನ್ನು ಹೇಗೆ ತೆಗೆದು ಕೊಳ್ಳಬೇಕು? ಯತಿಗಳೇ ಆಗಿರಲಿ, ಯೋಗಿಗಳೇ ಆಗಿರಲಿ  ಬಾಶೆಗಂಟಿದ ಈ ಸೂತಕವನ್ನು ಕಳೆದುಕೊಳ್ಳುವುದು ಸುಲಬ ಸಾದ್ಯವಲ್ಲ. ಅದು ಎಲ್ಲೋ ಒಬ್ಬ ಅಲ್ಲಮನಿಗೆ, ಒಬ್ಬ ಬುದ್ದನಿಗೆ ಸಾದ್ಯವಾಗಬಹುದು. ಬುದ್ದ ಕೂಡ ದೇವರ ಅಸ್ತಿತ್ವದ ಬಗ್ಗೆ ಕೇಳಿದಾಗ ಮೌನ ವಹಿಸಿದ. ಹೌದು-ಇಲ್ಲಗಳಾಚೆ ಅಂದರೆ ಶಬ್ದಸೀಮೆಯಾಚೆ ನಿಂತ.

ಉಬ್ಬಲಗಂಡಿಯಿಂದ, ನನ್ನವರು ಕೆಲಸ ಮಾಡುತ್ತಿದ್ದ ಹೊಸಪೇಟೆಗೆ ಬಂದು ನೆಲೆಸಿದಾಗ ಅಲ್ಲಿನದು ಮತ್ತೊಂದು ರೀತಿ! ನಾವು ಬಾಡಿಗೆಗೆ ಇದ್ದ ಮನೆ ಆಯಕಟ್ಟಿನ ಜಾಗದಲ್ಲಿತ್ತು. ನಮ್ಮ ಮನೆಯ ಮುಂದಿನ ಬಾಗದಲ್ಲಿ ಲಿಂಗಾಯತರ ಮನೆಗಳಿದ್ದರೆ ಎಡಗಡೆ ‘ಕೋಟೆ’ ಪ್ರದೇಶ. ಅಂದರೆ ಬ್ರಾಮಣರ ಓಣಿ. ಮನೆಯ ಹಿಂದಿನ ಹಾಗೂ ಬಲಬಾಗವನ್ನೆಲ್ಲಾ ಬ್ಯಾಡರ ಓಣಿ ಆವರಿಸಿತ್ತು. ಮತ್ತೆ ಅಲ್ಲಿನ ಸಮುದಾಯಗಳಿಗೆ ಅನುಸಾರವಾಗಿ ಬಾಶೆಯಲ್ಲೂ ವೈವಿದ್ಯತೆ ಇತ್ತು. ‘ಬಟ್ಟೆ ಶುಬ್ರವಾಗಿ ತೊಳಿ. ಕೊಳೆ ಹಂಗ ಕಾಣಸ್ತದ’, ‘ಎಷ್ಟ ಚಂದದ ಆ ಹುಡುಗಿ! ಏನ್ ರೂಪು-ಲಾವಣ್ಯ..’ ಹೀಗೆ ಬ್ರಾಮಣ ಸಮುದಾಯದ ಮಾತುಗಳು ವ್ಯಾಕರಣ ಬದ್ದವಾಗಿದ್ದರೆ ಲಿಂಗಾಯತರವು- ‘ಓದದು ಸಾಕಿನ್ನ. ಹೊಲ್ದಾಕ ನಡಿ’, ‘ಸಂಪಾದ್ಸಿ ಇಟ್ಟಿಗಿ ಮನಾರ ಮಾಗಾಣಿ (ಗದ್ದೆ), ಬರ್ತೀನಿ ತಕ’ ಈ ರೀತಿ. ಇನ್ನು ಬ್ಯಾಡರದು ‘ಏ ಕಣಿಮ್ಯಾ, ಏಟತ್ತು ನಿಂದು ಬಬಾದೇ’, ‘ಏ..ಬರ್ತ್ನಿ ತಡಿಬಾದೇ..,’ ಈ ಬಗೆ. ಹೀಗೆ ಅಲ್ಲಿನ ಬಾಶೆಯ ವೈವಿದ್ಯತೆಯಿತ್ತು. ಈ ನುಡಿಬೆಡಗು ಬೆರಗು ಮೂಡಿಸುತ್ತಿತ್ತು, ಕುತೂಹಲ ಹುಟ್ಟಿಸುತ್ತಿತ್ತು. ಆದರೆ ಚಿಕ್ಕಂದಿನಿಂದಲೂ ನಾ ಕಲಿತ ವ್ಯಾಕರಣಬದ್ದ ಶುದ್ದ ಬಾಶಾ ಪ್ರಜ್ಞೆ ಈ ಬೆರಗು-ಕುತೂಹಲಗಳನ್ನು ನಿರ್ದಾಕ್ಷಿಣ್ಯವಾಗಿ ಪಾತಾಳಕ್ಕೆ ತುಳಿಯುತ್ತಿತ್ತು! ಕಾರಣ ಈ ವೈವಿದ್ಯವನ್ನು ಮನಸಾರೆ ಸವಿಯಲು ಸಾದ್ಯವಾಗುತ್ತಿರಲಿಲ್ಲ.

ಒಂದು ದಿನ ನಾನು ಮನೆಯ ಮುಂದಿನ ಕಟ್ಟೆಯ ಮೇಲೆ ಬಿಸಿಲಿಗೆ ಜೋಳ ಹರವುತ್ತಿದ್ದೆ. ಆಗ ಒಬ್ಬ ತೆಳ್ಳನೆಯ-ಗೌರವರ್ಣದ ಅಜ್ಜಿ ಬಂದು “ಯಾವೂರಮ್ಮಾ ನಿಮ್ದು?” ಎಂದು ಮಾತಿಗೆಳೆದರು. ನಾನು ನನ್ನ ಊರು-ಉದ್ಮಾನಗಳ ಬಗ್ಗೆ ಸಂಕ್ಶಿಪ್ತವಾಗಿ ತಿಳಿಸಿ “ನಿಮ್ದು ಯಾವೂರಜ್ಜಿ?” ಎಂದು ಕೇಳಿದೆ. ನನ್ನ ಮಾತಿಗೆ ಅಜ್ಜಿ- “ನಾವಿದ್ದಿದ್ದ ನಮ್ಮೂರು. ನಾವು ಲೇಸ್ಯಾರು” ಎಂದರು. ಊರಿನ ಬಗ್ಗೆ ಕೇಳಿದಾಗ ಅಜ್ಜಿ ಹೀಗೇಕೆ ಹೇಳಿದರು?! ಎನಿಸಿತಲ್ಲದೇ ‘ಲೇಸ್ಯಾರು’ ಎಂಬ ಶಬ್ದದ ಅರ್ಥವಾಗಲಿಲ್ಲ. ಮತ್ತೆ ಆ ಅಜ್ಜಿಯನ್ನು ಯಾರೋ ಮಾತಾಡಿಸಿದರು. ಅಜ್ಜಿ ಅವರೊಡನೆ ಮಾತಾಡುತ್ತಾ ಹೊರಟುಹೋದರು. ಅಜ್ಜಿ ಹೇಳಿದ ‘ಲೇಸ್ಯಾರು’ ನನ್ನ ತಲೆ ತಿನ್ನತೊಡಗಿತು. ನಮ್ಮ ಪಕ್ಕದ ಮನೆಯಲ್ಲಿ ಕುಟುಂಬವೊಂದು ವಾಸವಾಗಿತ್ತು. ಗಂಡ-ಹೆಂಡತಿ ಮತ್ತು ನಾಲ್ಕು ಮಕ್ಕಳು. ಗಂಡ ಕೇಂದ್ರ ಸರ್ಕಾರದ ಕಚೇರಿ ಯೊಂದರಲ್ಲಿ ಮೊದಲ ದರ್ಜೆಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ. ಅವರು ಮೂಲತಃ ಹೊಸಪೇಟೆಯವರೇ. ಹೆಂಡತಿಯ ತವರು ಗಜೇಂದ್ರಗಡ. ಹೊಸಪೇಟೆಯಲ್ಲಿ ಸುಮಾರು ವರ್ಷಗಳಿಂದ ಇದ್ದರೂ ಅವಳ ಬಾಶೆ ಕದಲಿರಲಿಲ್ಲ.  ಅವಳೇ ನನಗೆ ಒಳ್ಳೆ ಜೊತೆಯಾದಳು. ನಾನು ಅವಳನ್ನು ‘ಅಕ್ಕ’ ಎಂದು ಕರೆಯುತ್ತಿದ್ದೆ. ಸದ್ಯಕ್ಕೆ ಆ ಓಣಿಯಲ್ಲಿ ಅವಳೇ ನನಗೆ ಅಪ್ತಳಾಗಿದ್ದಳು. ನಾನು ಅವಳ ಬಳಿ ಹೋಗಿ ನನ್ನ ತಲೆ ತಿನ್ನುತ್ತಿದ್ದ ‘ಲೇಸ್ಯಾರು’ ಅರ್ತ ಕೇಳಿದೆ. ಅವಳು ಒಂದು ಬಾರಿ ನನ್ನ ಮುಖ ನೋಡಿ ನುಡಿದಳು-“ಲೇಸ್ಯಾರಂದ್ರ ದೇವದಾಸಿಯರು, ಅಂದ್ರ ಬಸವ್ಯಾರು”

ಅವಳ ಬಾಯಿಂದ ‘ದೇವದಾಸಿ-ಬಸವಿ ಶಬ್ದ ಕೇಳುತ್ತಲೇ ನನ್ನ ಕಿವಿಗಳು ನೆಟ್ಟಗಾದವು! ನಾನು ಚಿಕ್ಕವಳಿದ್ದಾಗ ಈ ಪದಗಳನ್ನು ಅಜ್ಜಿಯ ಬಾಯಿಂದ ಕೇಳಿದ್ದೆ. ಅವ್ವನ ಕೈಯಿಂದ ಬೈಸಿಕೊಂಡಿದ್ದೆ! ಅವ್ವ ಬೈದಿದ್ದೇ ಆ ಪದಗಳ ಬಗ್ಗೆ ಇನ್ನೂ ಕುತೂಹಲ ಹೆಚ್ಚಿ ಅಪ್ಪನ ಬಳಿ ಆ ಪದಗಳ ಅರ್ಥ ಕೇಳಿದ್ದೆ. ಅಪ್ಪ ಒಂದು ಕ್ಷಣ ತಬ್ಬಿಬ್ಬಾಗಿ ‘ಎಲ್ಲೆಲ್ಲಿಂದ ತರ್ತಿಯವ್ವಾ ನೀ ಇಂತಾವೆಲ್ಲಾ’ ಎಂದರೂ ಆ ಪದಗಳ ಅರ್ತ ವಿವರಿಸುತ್ತ ದೇವದಾಸಿ ಎಂಬ ಕಳಂಕಿತ ಪದ್ದತಿ, ತಳವರ್ಗದ ಮಹಿಳೆಯರ ಮೇಲೆ ಅದರ ಕೆಟ್ಟ ಪರಿಣಾಮಗಳು.. ಮೊದಲಾದವುಗಳನ್ನೆಲ್ಲಾ ಸಿಟ್ಟಿನಿಂದ ಅವುಡುಗಚ್ಚುತ್ತ ವಿವರಿಸಿದ್ದ! ಆದರೂ ಆ ಪದಗಳ ಅರ್ತ ನನ್ನ ಬುದ್ಧಿಗೆ ನಿಲುಕಿರಲಿಲ್ಲ-ನಿಲುಕುವ ವಯಸ್ಸೂ ಅದಾಗಿರಲಿಲ್ಲ. ಈಗ ಆ ಅಕ್ಕನ ಬಾಯಿಂದ ಆ ಪದಗಳನ್ನು ಕೇಳಿ ಕುತೂಹಲ ಮತ್ತೆ ಬುದುಗ್ಗನೆ ಕೆರಳಿ ನಿಂತಿತು!

“ಹೌದು, ನಾನೂ ಸಣ್ಣಕ್ಕಿದ್ದಾಗ ಇವುನ್ನ ಕೇಳೇನಿ. ಹಂಗಂದ್ರ ಏನಕ್ಕಾ?”ಎಂದು ಕೇಳಿದೆ. ನನ್ನ ಮಾತಿಗೆ ಅವಳು ತುಸು ಸೋಜಿಗದಿಂದ ನನ್ನತ್ತ ನೋಡಿ ನಂತರ ವಿಶಾದದಿಂದ ವಿವರಿಸತೊಡಗಿದಳು. ಅವಳ ವಿವರಣೆ ಕೇಳಿ ನನ್ನ ಮೈ ಕಂಪಿಸಿತು! ಹೊಟ್ಟೆಯಲ್ಲಿ ತೊಳಸಿದಂತಾಯಿತು. ನಾನು ಈ ಶಬ್ದಗಳ ಅರ್ತಗಳನ್ನು ತಿಳಿದುಕೊಳ್ಳದಿದ್ದರೇ ವಾಸಿಯಿತ್ತು ಎನಿಸಿತು. ಕೆಲವು ಶಬ್ದಗಳೇ ಹಾಗೆ, ಕೆಟ್ಟ ಪರಂಪರೆಯ ವಾಹಕಗಳಾಗಿರುತ್ತವೆ.

ದೇವದಾಸಿ ಪದ್ದತಿ ಬಗ್ಗೆ ಗೊತ್ತಾದ ಬಳಿಕ ಆ ಓಣಿಯಲ್ಲಿನ ಇನ್ನೂ ಹಲವಾರು ಬಸವಿಯರ ಜೀವನಗಳನ್ನು ಕಣ್ಣಾರೆ ಕಂಡು ನಲುಗುವಂತಾಯಿತು. ಬಸವಿ ಬಿಡುವ ಅತವಾ ಮುತ್ತು ಕಟ್ಟುವ ಪದ್ದತಿ ಅವರಲ್ಲಿ ಬಹುತೇಕರಿಗೆ ಪವಿತ್ರ ಪದ್ದತಿಯಾಗಿತ್ತು! ಅದನ್ನು ಅವರು ಎಗ್ಗಿಲ್ಲದೇ ಆಚರಿಸುತ್ತಿದ್ದರು!! ಎಲ್ಲೋ ಅಪರೂಪಕ್ಕೆ ಕೆಲವರು ಇದನ್ನು ವಿರೋದಿಸುತ್ತಿದ್ದರು. ಅಂತಹ ಕಟ್ಟಾ ವಿರೋದಿ ಕುಟುಂಬವೊಂದು ನನ್ನ ಗಮನಕ್ಕೆ ಬಂತು. ಆ ಕುಟುಂಬದಲ್ಲಿ ಗಂಡ-ಹೆಂಡತಿ, ಮೂರು ಮಕ್ಕಳು ಹಾಗೂ ಕುಟುಂಬದ ಯಜಮಾನನ ತಾಯಿ ಹೀಗೆ ಆರು ಜನಗಳಿದ್ದರು. ಕುಟುಂಬದ ಯಜಮಾನ ಯಾವುದೋ ಸರಕಾರಿ ಆಪೀಸಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ. ಮಕ್ಕಳನ್ನೂ ಸಹ ಚೆನ್ನಾಗಿ ಓದಿಸಿದ್ದ. ಆದರೆ ಆತ ತನ್ನ ತಾಯಿಯನ್ನು ತುಂಬಾ ದ್ವೇಶಿಸುತ್ತಿದ್ದ! ಇದರಿಂದ ನನಗೆ ಸೋಜಿಗದೊಡನೆ ವ್ಯತೆಯಾಗುತ್ತಿತ್ತು. ಆತನ ಮೇಲೆ ಸಿಟ್ಟೂ ಬರುತ್ತಿತ್ತು. ನಂತರ ತಿಳಿಯಿತು ಆ ತಾಯಿ ಬಸವಿ ಅಂತ! ಅವಳು ಯಾರೋ ರಚಿಸಿದ ‘ಸಂಪ್ರದಾಯ’ ಎಂಬ ಬಲೆಗೆ ಸಿಲುಕಿ ಪಾಡುಪಡುತ್ತಿದ್ದರೆ ಆತ ತನ್ನ ಬೆನ್ನ ಹಿಂದಿನ ಬೇತಾಳದಿಂದ ಪಾರಾಗಲು ಹೆಣಗುತ್ತಿದ್ದ! ಆ ಕೆಟ್ಟ ನೆನಪುಗಳನ್ನು ಮರೆಯಲೆಂದೇ ಹುಟ್ಟೂರು ತೊರೆದು ಇಲ್ಲಿಗೆ ವಲಸೆ ಬಂದಿದ್ದ! ಒಟ್ಟಿನಲ್ಲಿ ಆ ಇಡೀ ಕುಟುಂಬವೇ ಈ ಕೆಟ್ಟ ಪರಂಪರೆಯಿಂದ ಹೊರಬರಲು ಹರಸಾಹಸ ಪಡುತ್ತಿತ್ತು! ಇದರ ಬಾಗವಾಗಿಯೇ ಅವರು ತಮ್ಮ ಮೂಲ ದೇವರುಗಳನ್ನು ಬಿಟ್ಟು ಶಿಷ್ಟ ದೇವರುಗಳನ್ನು ಪೂಜಿಸುತ್ತಿದ್ದರು. ಸತ್ಯನಾರಾಯಣ ಪೂಜೆ ಮಾಡಿಸುತ್ತಿದ್ದರು. ನಡೆ-ನುಡಿ, ಉಡುಗೆ-ತೊಡುಗೆ, ಮಾತು-ರೀತಿ..ಎಲ್ಲದರಲ್ಲಿಯೂ ಶಿಶ್ಟವಾಗಿರಲು ಪ್ರಯತ್ನಿಸುತ್ತಿದ್ದರು. ಒಂದು ದಿನ ಆ ಮನೆಯ ಎರಡನೆಯ ಮಗ ಮಾತಿನ ನಡುವೆ ‘ಏನ್ ಮಾತಾಡ್ತೀರಿ ತಲಿಗೊಂದ್ರಂಗ’ ಎಂದ ಅಶ್ಟೇ ! ತಕ್ಷಣವೇ ಆತನ ತಂಗಿ ಹುಲಿಯಂತೆ ಎಗರಿ “ಎಷ್ಟು ಗಮಾರಾಗಿ ಮಾತಾಡ್ತಿಯಲ್ಲಣ್ಣ ನೀನು? ನೀಟಂಗ ಮಾತಾಡಾಕ ಆಗೂದಿಲ್ಲ ನಿನ್ಗ?”

ಎಂದು ಮುಂತಾಗಿ ತರಾಟೆಗೆ ತೆಗೆದುಕೊಂಡಳು! ‘ತಲಿಗೊಂದ್ರಂಗ’ ಎಂಬ ಒಂದು ಸಾಮಾನ್ಯ ಶಬ್ದ ಅವಳ ಮನ ಕಲಕಿತ್ತು! ನನಗಾಗ ಅರಿವಾಯಿತು-ಬಾಶೆ ಅಂದರೆ ಅದು ಬರೀ ಶಬ್ದಗಳ ಸಮೂಹವಲ್ಲ, ಸಮುದಾಯಗಳ ನೆನಪುಗಳನ್ನು, ಅಚರಣೆಗಳನ್ನು ಹೊತ್ತೊಯ್ಯುವ ‘ವಾಹಕ’ ಅಂತ. ಅಂದರೆ ಇಲ್ಲಿ ಬಾಶೆ ತನ್ನ ವಿಶಾಲ ನೆಲೆಯಲ್ಲಿ ‘ಸಂಸ್ಕೃತಿ’ಯ ಆಯಾಮವನ್ನು ಪಡೆದುಕೊಳ್ಳುತ್ತದೆ. ಆದಕಾರಣವೇ ಕರ್ನಾಟಕದಲ್ಲಿ ಹಲವು ಕಡೆಗಳಲ್ಲಿ ಬಾಶೆ ಶಬ್ದಕ್ಕೆ ಸಂಸ್ಕೃತಿ-ಸಂಸ್ಕಾರ ಎಂಬ ಅರ್ತವಿದೆ. ಮುಂದೆ ಇದು ಪರಂಪರೆಯ ಬಾಗವೂ ಆಗುತ್ತದೆ. ಈ ಸಂಸ್ಕೃತಿ-ಪರಂಪರೆಗಳು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಅವುಗಳು ಕೆಲವರಿಗೆ ಹೆಮ್ಮೆಯ ಸಂಗತಿಗಳಾದರೆ ಇನ್ನು ಕೆಲವರಿಗೆ ನೋವು-ಅಪಮಾನಗಳ ಕೊಚ್ಚೆಗುಂಡಿಗಳು. ವಾಸ್ತವ ಹೀಗಿರುವಾಗ ಕರುನಾಡನ್ನು ಏಕಾಕಾರದಲ್ಲಿ ಟಂಕಿಸಿ, ನಮ್ಮ ನಾಡ ಸಂಸ್ಕೃತಿ ಬವ್ಯ-ದಿವ್ಯ ಎಂದು ಬೀಗುವುದು ಆತ್ಮವಂಚನೆಯೇ ಸರಿ ಎನಿಸತೊಡಗಿತು.

ಮುಂದೆ ನನಗೆ ಮಕ್ಕಳಾಗಿ, ಅಂಬೆಗಾಲಿನಿಂದ ನಡೆದಾಟಕ್ಕೆಳಸಿ ಅವು ಶಾಲೆಗೆ ಹೋಗತೊಡಗಿದವು. ಆಗ ಅವರಿಗೆ, ನಾನು ಚಿಕ್ಕಂದಿನಲ್ಲಿ ಕಲಿತ, ವ್ಯಾಕರಣಬದ್ದ-ಶುದ್ದವಾದ ‘ಕಟ್ಟರ್’ ಕನ್ನಡವನ್ನು ತುಂಬಾ ಮುತುವರ್ಜಿಯಿಂದ ಕಲಿಸತೊಡಗಿದೆ. ಮೊದಲಿನ ಎರಡು ಮಕ್ಕಳು ನನ್ನ ಕಿಟಿಕಿಟಿ ತಡೆದುಕೊಂಡು ಹೇಗೋ ‘ಒಂದು ಮಟ್ಟಿಗೆ’  ಕಲಿತು ಪಾರಾದರೂ ಕೊನೆಯ ಮಗನದ್ದೇ ಸಮಸ್ಯೆಯಾಗತೊಡಗಿತು. ಅವನು ನಾಲ್ಕನೆಯ ತರಗತಿಯವರೆಗೂ ಓದಿದ್ದು ಗದುಗಿನ ಅಜ್ಜಿ ಮನೆಯಲ್ಲಿ. ನನ್ನ ತಮ್ಮನಿಗೆ ಬಹಳ ದಿನಗಳವರೆಗೆ ಮಕ್ಕಳಾಗಲಿಲ್ಲ. ಮನೆ ಬಿಕೋ ಎನಿಸುತ್ತದೆ ಎಂದು ತುಂಬಾ ಒತ್ತಾಯದಿಂದ ಇವನನ್ನು ಕರೆದುಕೊಂಡು ಹೋಗಿದ್ದ. ಮದುವೆಯಾಗಿ ಹನ್ನೊಂದು ವರ್ಷಗಳ ನಂತರ ಅವನಿಗೊಂದು ಮಗು ಹುಟ್ಟಿತು. ಇದಕ್ಕಾಗಿಯೇ ಕಾಯುತ್ತಿದ್ದ ನಾವು ತಡಮಾಡದೇ ಮಗನನ್ನು ಹೊಸಪೇಟೆಗೆ ಕರೆತಂದು ಐದನೆಯ ತರಗತಿಗೆ ಸೇರಿಸಿದೆವು. ಅವನು ಪೂರಾ ಹತ್ತು ವರ್ಷಗಳನ್ನು ಗದುಗಿನಲ್ಲಿ ಕಳೆದಿದ್ದ. ತನ್ನ ಅಣ್ಣ-ಅಕ್ಕನನ್ನು ಹೊಸಪೇಟೆಯಲ್ಲಿಟ್ಟುಕೊಂಡು ತನ್ನನ್ನು ಮಾತ್ರ ಗದುಗಿನಲ್ಲಿ ಬಿಟ್ಟಿದ್ದು ಅವನಿಗೆ ಸಿಟ್ಟು ತರಿಸಿತ್ತು. ಅದನ್ನು ಒಂದೆರಡು ಬಾರಿ ಆಡಿಯೂ ತೋರಿಸಿದ್ದ. ಹೀಗಾಗಿ ಕೊಂಚ ಹಠಮಾರಿತನ ಅವನ ಸ್ವಬಾವದಲ್ಲಿ ಸೇರಿಹೋಗಿತ್ತು. ನಾನು ಮಾಮೂಲಿನಂತೆ ತುಂಬ ಕಟುವಾಗಿ ಅವನಿಗೆ ಕನ್ನಡ ಕಲಿಸತೊಡಗಿದೆ. ಬರವಣಿಗೆಯಲ್ಲಿ ಅಷ್ಟಾಗಿ ತಪ್ಪಾಗದಿದ್ದರೂ ಕೆಲವೊಂದು ಉಚ್ಚಾರಗಳನ್ನು ತಪ್ಪುತ್ತಿದ್ದ. ಅವನಿಗೆ ಬೈದು ಮತ್ತೆ ಮತ್ತೆ ಕಲಿಸುತ್ತಿದ್ದೆ. ಒಂದು ಬಾರಿ ಅವನು ‘ಉತ್ಸವ’ ಶಬ್ದವನ್ನು ‘ಉಸ್ತವ’ ಎಂದು ತಪ್ಪಾಗಿ ಉಚ್ಚರಿಸಿದ. ಎಷ್ಟು ತಿದ್ದಿದರೂ ಮತ್ತೆ ಮತ್ತೆ ತಪ್ಪಾಗಿಯೇ ಉಚ್ಚರಿಸಿದ. (ಅವನು ನಮ್ಮ ಮೇಲಿನ ಸಿಟ್ಟಿನಿಂದ ಬೇಕೆಂತಲೇ ತಪ್ಪಾಗಿ ಉಚ್ಚರಿಸಿರಬಹುದೆಂಬ ಗುಮಾನಿ ಈಗಲೂ ನನಗಿದೆ). ನನಗೆ ಸಿಟ್ಟು ನೆತ್ತಿಗೇರಿತು. ಒಂದೆರಡು ಏಟುಕೊಟ್ಟು, ಕಿವಿಹಿಂಡಿ ಕಲಿಸಿದೆ. ಕೊನೆಗೂ ಅವನು ಸರಿಯಾಗಿ ಉಚ್ಚರಿಸಿದಾಗ ಉಶ್ಶಪ್ಪ ಅಂತ ಉಸಿರು ಬಿಟ್ಟೆ. ಅದನ್ನು ಕಲಿತ ಮೇಲೆಯೂ ಆತ ಬಿಗುವಾಗಿಯೇ ಇದ್ದ!

ಕೊನೆಯ ಮಗ ಏಳನೆಯ ತರಗತಿಗೆ ಬರುವ ಹೊತ್ತಿಗೆ ನನಗೆ ಕೊಂಚ ಬಿಡುವು ಸಿಕ್ಕಿತು. ನಾನು ನನ್ನ ಚಿಕ್ಕಂದಿನ ಕನಸು ನನಸು ಮಾಡಿಕೊಳ್ಳಲು ಮೈಸೂರಿನ ಇಂದಿರಾಗಾಂದಿ ಮುಕ್ತ ವಿಶ್ವವಿದ್ಯಾಲಯಕ್ಕೆ ಎಂ.ಎ. ಅಂಚೆ ತೆರಪಿ ಶಿಕ್ಷಣಕ್ಕೆ ದಾಕಲಾದೆ. ದಾರವಾಡ ಕೇಂದ್ರವನ್ನು ಆಯ್ಕೆ ಮಾಡಿಕೊಂಡೆ. ಮೊದಲ ವರ್ಷದ ‌ತರಗತಿಯಲ್ಲಿ ಛಂದಸ್ಸು-ತೌಲನಿಕ ಅಧ್ಯಯನ-ಜಾನಪದ(ಸಂಸ್ಕೃತಿ ಅಧ್ಯಯನ) ವಿಶಯಗಳ ಜೊತೆಗೆ ಹಳಗನ್ನಡ ವ್ಯಾಕರಣ(ಶಬ್ದಮಣಿದರ್ಪಣ) ಹಾಗೂ ದ್ರಾವಿಡ ಬಾಶಾ ವಿಜ್ಞಾನ ಆಯ್ಕೆ ಮಾಡಿಕೊಂಡೆ. ಈ ಐದೂ ವಿಶಯಗಳ ಪೈಕಿ ಜಾನಪದ- ಶಬ್ದಮಣಿದರ್ಪಣ-ದ್ರಾವಿಡ ಬಾಶಾ ವಿಜ್ಞಾನ ನನ್ನ ಗಮನ ಸೆಳೆಯತೊಡಗಿದವು. ಪ್ರಾಥಮಿಕ ತರಗತಿಯಿಂದಲೇ ಅಷ್ಟೊಂದು ಕಟ್ಟುನಿಟ್ಟಾಗಿ ಬಾಶಾ ಶುದ್ದಿಯನ್ನು ಸಾದಿಸಿ, ಅಪಾರ ಆಸಕ್ತಿ-ಶ್ರದ್ದೆಯಿಂದ ಓದತೊಡಗಿದರೂ ಶಬ್ದಮಣಿದರ್ಪಣ ಒಂದು ಗೊಂಡಾರಣ್ಯ ಎನಿಸತೊಡಗಿತು ನನಗೆ! ಇದಕ್ಕೆ ವಿರುದ್ದವಾಗಿ ದ್ರಾವಿಡ ಬಾಶಾ ವಿಜ್ಞಾನ ಪತ್ತೆದಾರಿ ಕಾದಂಬರಿಯಂತೆ ಅಪಾರ ಕುತೂಹಲ ಹುಟ್ಟಿಸಿತು! ಮಾತ್ರವಲ್ಲ ಇವೆರಡೂ ಒಂದಕ್ಕೊಂದು ವಿರುದ್ದ ಎನಿಸತೊಡಗಿದವು!  ದ್ರಾವಿಡ ಬಾಶಾ ವಿಜ್ಞಾನ ಬಾಶೆಯ ಬಗ್ಗೆ ಅಲ್ಲಿಯ ತನಕ ನಾನು ನಂಬಿಕೊಂಡು ಬಂದ ಹಲವಾರು ಪ್ರಮೇಯ(ಬ್ರಮೆ)ಗಳನ್ನು ಒಡೆದುಹಾಕಿತು! ಮೊಟ್ಟಮೊದಲ ಪ್ರಮೇಯವಾದ ‘ಇಂಡಿಯಾದ ಎಲ್ಲ ಬಾಶೆಗಳಿಗೂ ಸಂಸ್ಕೃತವೇ ತಾಯಿ’ ಎಂಬುದು ಸುಳ್ಳು ಎಂಬ ಸಂಗತಿಯನ್ನು ಬಾಶಾ ವಿಜ್ಞಾನಿಗಳು ತುಂಬ ಗಟ್ಟಿ ಆದಾರಗಳ ಮೂಲಕ ನಿರೂಪಿಸಿದ್ದರು! ಮಾತ್ರವಲ್ಲ, ಈ ದೇಶದ ಬಹುತೇಕ ಜನ ‘ಪವಿತ್ರ’, ‘ದೇವಬಾಶೆ’ ಎಂದೆಲ್ಲಾ ಗಟ್ಟಿಯಾಗಿ ನಂಬಿರುವ ಸಂಸ್ಕೃತ ಬಾಶೆಗೆ ತನ್ನದೇ ಆದ ಒಂದು ಲಿಪಿಯೇ ಇಲ್ಲ ಎಂಬ ಸಂಗತಿ ನನ್ನನ್ನು ಆಗಾತಕ್ಕೀಡುಮಾಡಿತು!  ‘ನಾಗರಿ’ ಲಿಪಿಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡ ಸಂಸ್ಕೃತ ಬಾಶೆ ಕ್ರಮೇಣ ಈ ದೇಶದ ಸಾಂಸ್ಕೃತಿಕ ವೈವಿದ್ಯತೆಯನ್ನು ಹೇಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತು ಎಂಬ ಅಂಶವನ್ನು ನನ್ನ ಓದಿನ ವಿಸ್ತಾರದಲ್ಲಿ ಕಂಡುಕೊಂಡಾಗ ವಿಶಣ್ಣ ಬಾವವೊಂದು ಮನದಲ್ಲಿ ಮೂಡಿತು. ಸಂಸ್ಕೃತಿ ಅದ್ಯಯನವಂತೂ ನಮ್ಮ ನೆಲಮೂಲ ಪರಂಪರೆಯ ಬೇರುಗಳನ್ನು ಹಣ್ಣಿನ ತೊಳೆ ಬಿಡಿಸಿಟ್ಟಂತೆ ನನ್ನ ಮುಂದೆ ತೆರೆದಿಟ್ಟಿತು. ಎಂ. ಎ. ಓದು ಒಟ್ಟಾರೆ ಬಾಶೆ-ಸಂಸ್ಕೃತಿಗಳ ಬಗ್ಗೆ ನನ್ನ ಅರಿವನ್ನು ಗಮನಾರ್ಹವಾಗಿ ವಿಸ್ತರಿಸಿತು.

ಮುಂದೆ ಇವುಗಳಿಗೆ ಸಂಬಂದಪಟ್ಟ ಪುಸ್ತಕಗಳನ್ನು ಹುಡುಕಿ ಹುಡುಕಿ ಓದತೊಡಗಿದೆ. ನನ್ನ ಓದಿನ ತಿಳಿವಿನಲ್ಲಿ ಬಾಶೆ-ಸಂಸ್ಕೃತಿ ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬ ಸಂಗತಿಯನ್ನು ಕಂಡುಕೊಂಡೆ. ಇದರಿಂದ ನನ್ನಲ್ಲಿ ಸಾಕಷ್ಟು ಬದಲಾವಣೆಯಾಯಿತು. ನಾನು ಬಾಶಾ ಶುದ್ದಿಯ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಟ್ಟೆ. ಮೂಲ ಬಾಶೆಯಲ್ಲಿಯೇ ಇಲ್ಲದ ಅಕ್ಷರಗಳನ್ನು-ಉಚ್ಚಾರಗಳನ್ನು ಹೊರಗಿನಿಂದ ತುರುಕಿ ಬಾಶೆಯನ್ನು ನೇರ್ಪುಗೊಳಿಸುವುದು ಅಸಂಗತವಾಗಿ ಕಾಣತೊಡಗಿತು. ಮಾತ್ರವಲ್ಲ, ಹಾಗೆ ನೇರ್ಪುಗೊಳಿಸಿದ ಬಾಶಾವಲಯದಲ್ಲಿ ಇಲ್ಲದವರನ್ನು ಕೇವಲವಾಗಿ ಕಾಣುವುದು ಅಮಾನವೀಯ ಎನಿಸತೊಡಗಿತು. ಇದರೊಟ್ಟಿಗೆ ನನ್ನ ಸುತ್ತಮುತ್ತಲಿನ ಇನ್ನಿತರ ಸಮುದಾಯಗಳ ಬಾಶಾ ಉಲಿಗಳನ್ನು ಆಸಕ್ತಿಯಿಂದ ಸೂಕ್ಷ್ಮವಾಗಿ ಆಲಿಸುವ ಚಟವೊಂದು ಅಂಟಿಕೊಂಡಿತು! ಆಗ ನನ್ನೆದುರು ತೆರೆದುಕೊಂಡ ಬಾಶಾ ಬಳಗ ಎಷ್ಟೊಂದು ವೈವಿದ್ಯಮಯ! ಎಷ್ಟು ಸುಂದರ!! ‘ನೂರು ಮರ ನೂರು ಸ್ವರ, ಒಂದೊಂದು ಅತಿ ಮದುರ’ ಎಂಬ ಕವಿವಾಣಿಯಂತೆ…,

ಕಾಲಕ್ರಮೇಣ ಮಕ್ಕಳು ಬೆಳೆದು ದೊಡ್ಡವರಾದರು. ಮೊದಲಿನ ಇಬ್ಬರು ಓದು ಮುಗಿಸಿ, ಒಂದು ದಡಕ್ಕೆ ಹತ್ತಿದರು. ಅವರಿಬ್ಬರ ಮದುವೆಗಳೂ ಮುಗಿದು ಹೈದ್ರಾಬಾದ್ ಕರ್ನಾಟಕ ಸೀಮೆಯ ಸೊಸೆ ಮನೆ ತುಂಬಿದಳು. ಮಗಳು ದಾರವಾಡದ ಗಂಡನ ಮನೆ ಸೇರಿದಳು. ಕೊನೆಯ ಮಗ ಡಿಗ್ರಿ ತರಗತಿಯ ಅಂತಿಮ ವರ್ಷದಲ್ಲಿದ್ದ. ಸೊಸೆ ನಿಧಾನಕ್ಕೆ ನಮ್ಮ ಮನೆಗೆ ಹೊಂದಿಕೊಳ್ಳತೊಡಗಿದಳು. ಅಂದು ಅಡುಗೆ ಮನೆಯಲ್ಲಿ ಮದ್ಯಾಹ್ನದ ಊಟಕ್ಕೆ ಅಡುಗೆ ತಯಾರಿ ನಡೆಸಿದ್ದೆವು. ಸೊಸೆ ಮೇಲಡಿಗೆಯನ್ನು ಮುಗಿಸಿ, ರೊಟ್ಟಿಗಾಗಿ ಹಿಟ್ಟು ಸೋಸಲು “ಸಾನಿಗಿ ಎಲ್ಲೈತ್ರಿ?” ಎಂದು ಕೇಳಿದಳು. ಪಚಡಿ(ಸಲಾಡ್)ಗಾಗಿ ತರಕಾರಿ ಹೆಚ್ಚುತ್ತಿದ್ದ ನಾನು ಗ್ಯಾಸ್ ಕಟ್ಟೆಯ ಕೆಳಗಿನ ಗೂಡಿನತ್ತ ಕೈತೋರಿದೆ. “ಓ..ಗುನೇದಾಗ ಐತೇನ್ರಿ” ಎನ್ನುತ್ತ ಅವಳು ಸಾಣಿಗೆ ತೆಗೆದುಕೊಂಡು ಹಿಟ್ಟು ಸೋಸತೊಡಗಿದಳು. ನೀರು ಕುಡಿಯಲು ಒಳಬಂದ ಚಿಕ್ಕ ಮಗ ಅದನ್ನು ಕೇಳಿ ಅಚ್ಚರಿಯಿಂದ ನನ್ನ ಮಾರಿ ನೋಡಿದ. ನಾನು ಯಾವ ಪ್ರತಿಕ್ರಿಯೆ ತೋರದೆ ನನ್ನ ಕೆಲಸ ಮುಂದುವರೆಸಿದೆ. ಬಿರುಗಣ್ಣು ಬಿಟ್ಟು ಲೋಟವನ್ನು ಕಟ್ಟೆಯ ಮೇಲೆ ಕುಕ್ಕಿ ಹೊರನಡೆದ!

ಮುಂಗಾರಿನ ದಿನಗಳವು. ಹದವಾದ ಬಿಸಿಲು-ಜೊತೆಗೆ ಮಣ್ಣಿನ ಗಮಲು! ನಾನದನ್ನು ಸವಿಯುತ್ತಾ ಹೊರಕಟ್ಟೆಯ ಮೇಲೆ ಕುಳಿತಿದ್ದೆ. ನನ್ನ ಜೊತೆಗೆ ಚಿಕ್ಕ ಮಗನೂ ಬಂದು ಸೇರಿಕೊಂಡ.. ಸ್ವಲ್ಪ ಹೊತ್ತಿಗೆಲ್ಲ “ಆಹಾ! ವಾತಾವರನ ಎಷ್ಟ ಚೆಂದೈತಲ್ರಿ…” ಎನ್ನುತ್ತ ಸೊಸೆಯೂ ಬಂದು ಕುಳಿತಳು. ನಾನು “ಹಾಂ ಹೌದು” ಎಂದೆ. ನನ್ನ ಮಗ ಮತ್ತೆ ಅಚ್ಚರಿಯ ನೋಟ ಬೀರಿದ. ನಾನದನ್ನು ನೋಡಿಯೂ ನೋಡದ ಹಾಗೆ ನಿರ್ವಿಕಾರವಾಗಿ ಕುಳಿತೆ. ನನ್ನ ಚಿಕ್ಕ ಮಗ ಸಟಕ್ಕನೆ ಎದ್ದುಹೋದ! ಮರುದಿನ ಸಂಜೆ ಮಗ-ಸೊಸೆ ಸುತ್ತಾಡಿಕೊಂಡು ಬರಲು ಡ್ಯಾಮಿಗೆ ಹೋದರು. ಶಿವಮೊಗ್ಗ ಸೀಮೆಯಲ್ಲಿ ಸಂಪಾಗಿ ಮಳೆಬಿದ್ದು ತುಂಗಭದ್ರಾ ಡ್ಯಾಂ ತುಂಬಿತ್ತು ಬೇರೆ! ಇದೇ ಸಮಯಕ್ಕಾಗಿ ಕಾಯುತ್ತಿದ್ದ ಚಿಕ್ಕ ಮಗ ನನ್ನನ್ನು ಉಗ್ರವಾಗಿ ತರಾಟೆಗೆ ತೆಗೆದುಕೊಳ್ಳತೊಡಗಿದ.

“ಬರೇ ‘ಉತ್ಸವ’ ಅನ್ನೂ ಒಂದ ಶಬ್ದಕ್ಕ ನನ್ಗ ಹ್ಯಾಂಗ ದಂಡಿಸೀದಿ, ನನ್ನ ತಲಿತಿಂದು ಒಲ್ಯಾಗಿಟ್ಟಿ! ಈಗ ನೋಡು ಮುದ್ದಿನ್ ಸೊಸಿ ‘ಸಾನಿಗಿ’, ‘ಗುನೇವು’ ‘ವಾತಾವರನ’.. (ಈ ಶಬ್ದಗಳನ್ನು ಹೇಳುವಾಗ ಆತ ವಿಶಿಷ್ಟವಾಗಿ ಕೈಬಾವ(ಆಂಗಿಕ ಅಭಿನಯ)ಮಾಡಿದ್ದನ್ನು ಕಂಡು ನಗು ಬಂದರೂ ತಡೆದುಕೊಂಡೆ) ಅಂತೆಲ್ಲಾ ತಪ್ಪಾತಿಗಡಿ ಮಾತಾಡಿದ್ರೂ ಹ್ಯಾಂಗ ಸುಮ್ಮನ ಕುಂತಿ, ಬಾಯಾಗ ಅಕ್ಕಿಕಾಳು ಹಾಕ್ಕೊಂಡೊರ ಗತೆ! ನನ್ಗೆಲ್ಲಾ ಗೊತ್ತೈತಿ ತೊಗೋ ನೀ ಒಂದ್ ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣಿ ಇಡಾಕಿ…,” ಮುಂತಾಗಿ ಕಾರಿಕೊಳ್ಳತೊಡಗಿದ. ಅವನ ಮಾತು ಕೇಳಿ ನನ್ನ ಮನಸ್ಸು ತಟ್ಟನೆ ಹಿಂದಕ್ಕೋಡಿತು.., ಒಂದು ಕಾಲದಲ್ಲಿ ನಾನೂ ನನ್ನ ಅಪ್ಪನನ್ನು ಹೀಗೆಯೇ ಕೇಳಿದ್ದೆ. ಒಂದು ಶಬ್ದದ ಬಗ್ಗೆ ಅಪ್ಪನ ತಲೆ ತಿಂದಿದ್ದೆ. ಆ ಒಂದು ಶಬ್ದದ ವಿವರಣೆಗಾಗಿ ಅಪ್ಪ ನೂರಾರು ವರ್ಷಗಳ ಹಿಂದಕ್ಕೋಡಿ ಒಂದು ದೊಡ್ಡ ಕತೆಯನ್ನೇ ಬಿಚ್ಚಿಟ್ಟಿದ್ದ! ಜನಬಳಕೆಯ ಹಲವಾರು ನುಡಿಗಟ್ಟುಗಳ ಮೂಲಕ ಮನದಟ್ಟು ಮಾಡಲು ಹೆಣಗಿದ್ದ. ಅದನ್ನೆಲ್ಲಾ ಬರೆಯುತ್ತ ಕುಳಿತರೆ ಒಂದು ದೊಡ್ಡ ಪುರಾಣವೇ ಆಗುತ್ತದೆ! ಬರೆಯುವ ಬಯಕೆಯಿದ್ದರೂ ಔಚಿತ್ಯ ಪ್ರಜ್ಞೆ ಕಾಡುತ್ತದೆ! ಆದ್ದರಿಂದ ಅದನ್ನು ಸಂಕ್ಶಿಪ್ತವಾಗಿ ವಿವರಿಸಿ ಮುಂದೆ ಹೋಗುತ್ತೇನೆ.

ನನ್ನ ತಂದೆಯ ಹೆಸರು ‘ವೀರಪ್ಪ’. ಅಜ್ಜಿಯ ಹೆಸರು ‘ವೀರಬಸಮ್ಮ’. ಆದರೆ ಅಪ್ಪ-ಅಜ್ಜಿ ಸಹಿ ಮಾಡುವಾಗ ‘ಈರಪ್ಪ’, ‘ಇರಬಸಮ್ಮ’ ಎಂದೇ ಬರೆಯುತ್ತಿದ್ದರು. ನಾನಾಗಲೇ ಪ್ರಾತಮಿಕ ಅವದಿಯ ಕೊನೆಯಲ್ಲಿದ್ದೆ. ಆರೇಳು ವರ್ಷಗಳ ಕಾಲ ತಲೆಗೆ ಕುಟ್ಟಿ ಕುಟ್ಟಿ, ರೂಲು ಕಟ್ಟಿಗೆಯಿಂದ ಕೈ ಬಾವು ಬರುವಂತೆ ಹೊಡೆದೂ ಹೊಡೆದೂ ಬಾಷೆಯನ್ನು ವ್ಯಾಕರಣಬದ್ದವಾಗಿ ಕಲಿಸಿದ್ದರು. ಶಾಲೆಯಲ್ಲಿ ಬರವಣಿಗೆಯಲ್ಲಾಗಲೀ-ಮಾತಿನಲ್ಲಾಗಲೀ ಕಾಗುಣಿತ ದೋಶವನ್ನು ಮಾಡುವುದಾಗಲೀ ಉಚ್ಚಾರ ತಪ್ಪುವುದಾಗಲೀ ಮಾಡುವಂತೆಯೇ ಇರಲಿಲ್ಲ. ಸಹಜವಾಗಿಯೇ ನಾನು ಅಷ್ಟೊತ್ತಿಗಾಗಲೇ ಉಗ್ರವಾದ ಬಾಶಾಶುದ್ದಿಯನ್ನು ಮೈಗೂಡಿಸಿಕೊಂಡಿದ್ದೆ. ಆದಕಾರಣ ಅಜ್ಜಿ-ಅಪ್ಪನ ಅಪಬ್ರಂಶ ಬರವಣಿಗೆ ಮನಸ್ಸಿಗೆ ಕಿರಿಕಿರಿ ಹುಟ್ಟಿಸಿತು.

“ನೀನು-ಅಜ್ಜಿ ಹಂಗ್ಯಾಕ ಬರೀತಿರಪ್ಪ ತಪ್ಪಾತಿಗಡಿ, ಅವು ವೀರಪ್ಪ-ವೀರಬಸಮ್ಮ ಅಂತಿರಬೇಕಲ್ಲ?” ಎಂದು ಅಪ್ಪನನ್ನು ತರಾಟೆಗೆ ತೆಗೆದುಕೊಂಡೆ. ನನ್ನ ಮಾತಿಗೆ ಅಪ್ಪ ನಗುತ್ತ “ಇರ-ಈರ ಶಬ್ದದ ಮೂಲ ವೀರ ಅಲ್ಲ ಪುಟ್ಟಾ ಅದು ಬಾಳಮಾಡಿ (ಬಹುಶಃ) ‘ಬೀರ’ ಇರಬೇಕು ಎಂದ! ನನಗೆ ಅಚ್ಚರಿಯ ಜೊತೆಗೆ ಅಘಾತವಾಯಿತಲ್ಲದೇ ಸಿಟ್ಟೂ ಬಂತು. ಗುರುಗಳನ್ನೇ ಸುಳ್ಳು ಎನ್ನುತ್ತಿದ್ದಾನಲ್ಲ ಅಪ್ಪ ಎನಿಸಿ “ನೀ ಸುಳ್ಳ ಹೇಳಾಕತ್ತಿ. ನಮ್ಮ ಅಕ್ಕೋರು ಹಿಂಗ ಕಲಸ್ಯಾರಾ” ಎಂದು ನಾನು ಮೊಂಡುತನಕ್ಕೆ ಬಿದ್ದೆ.

ನನ್ನ ಸಿಟ್ಟು ಕಂಡು ನಸುನಗುತ್ತಾ ಅಪ್ಪ ಚಂಗನೆ ಹನ್ನೆರಡನೆಯ ಶತಮಾನಕ್ಕೆ ಹಾರಿ, ಬಸವಣ್ಣನವರೊಂದಿಗೆ ಏಳನೂರಾ ಎಪ್ಪತ್ತು ಅಮರಗಣಂಗಳಾದಿಗಳು ಸೇರಿಕೊಂಡು ಕಟ್ಟಿದ ಶರಣ ಸಮಾಜ, ಆ ಸಮಾಜಕ್ಕೆ ಎಲ್ಲ ಶ್ರಮಿಕ ಸಮುದಾಯಗಳಿಂದ ಹರಿದು ಬಂದ ಜನಸಾಗರ, ಅವರು ತಮ್ಮೊಂದಿಗೆ ಹೊತ್ತುತಂದ ದೈವ-ಆಚರಣೆಗಳು…ಮೊದಲಾದವುಗಳನ್ನು ತುಂಬ ವಿವರವಾಗಿ ಹೇಳತೊಡಗಿದ. ನಾನು ಬಾಯಿ ಬಿಟ್ಟುಕೊಂಡು ಕೇಳತೊಡಗಿದೆ.

“ಹಂಗ ಬಂದವರೊಳಗ ಪಶುಪಾಲಕ ಸಮುದಾಯದವರೂ ಇದ್ರು. ಅವ್ರ ದೇವ್ರು ‘ಬೀರಪ್ಪ’ ಅಂದ್ರ ಬೀರದೇವ್ರು. ಆ ಬೀರಪ್ಪನ ಕ್ರಮೇಣ ಇರ-ಈರ-ವೀರ ಆಗಿರಬೇಕು. ನಿಮ್ಮಜ್ಜಿ ನಿನ್ನ ತಮ್ಮಗ ಚಾಸ್ಟಿ ಮಾಡ್ಕೊಂತ ಹೇಳೋ ಒಂದು ಮಾತು ಕೇಳಿಯಿಲ್ಲ ನೀನು? ‘ಈರ ಸೂರಾ ಇರಬಿ ನೆಂಟ’ ಅಂತ. ಆಡು ಮಾತನ್ಯಾಗ ಇವೆಲ್ಲಾ ಸಾಜೀಕ” ಅಪ್ಪನ ಮಾತು ಅಚ್ಚರಿ ಹುಟ್ಟಿಸಿದರೂ ನನಗೆ ಆ ಅಪಭ್ರಂಶ ಶಬ್ದಗಳನ್ನು ಒಪ್ಪುವುದಾಗಲಿಲ್ಲ. “ಹಂಗರ ನಮ್ಮ ಅಕ್ಕೋರು(ಟೀಚರ್) ಕಲಸಿದ್ದು ತಪ್ಪಂತಿ?” ನಾನು ಕೇಳಿದೆ. “ಇದು ತಪ್ಪು-ಸರಿ ಪ್ರಶ್ನೆ ಅಲ್ಲ ಪುಟ್ಟಾ. ನಮ್ಮ ಬಾಶೆ ಸಾವಿರಾರು ವರ್ಶ ಹಳೇದು. ಕಾಲಕ್ಕ ತಕ್ಕಂಗ ಅದ್ರೊಳಗ ಏರು ಇಳುವು ಇದ್ದ ಇರ್ತಾವು. ಅದ ಈ ಗೊಂದ್ಲಕ್ಕ ಕಾರಣಿದ್ದೀತು”. “ನೀ ಹೇಳಿದ್ದು ನನ್ಗ ತಿಳಿವಲ್ದು” ಎಂದೆ ಬೇಸರದಿಂದ. “ಈಗ ನೀ ಇನ್ನೂ ಸಣ್ಣಕಿ ಅದಿ. ಮುಂದ ದೊಡ್ಡೇಕ್ಯಾದಂಗೆಲ್ಲಾ ನಿನ್ಗ ಅರ್ತ ಆಕ್ತೈತಿ ಬಿಡು “ಎನ್ನುತ್ತ ಅಪ್ಪ ಆ ವಿಶಯವನ್ನು ಅಲ್ಲಿಗೆ ಮುಗಿಸಿದರೂ ನನ್ನ ಮನದ ಗೊಂದಲ ಕಡಿಮೆಯಾಗಲಿಲ್ಲ. ಅಪ್ಪನ ಇಷ್ಟೆಲ್ಲಾ ವಿವರಣೆಯ ನಂತರವೂ ನನಗೆ ಶಾಲೆಯಲ್ಲಿ ಕಲಿತ ವ್ಯಾಕರಣಬದ್ಧ ಬಾಶೆಯೇ ಸರಿಯೆನಿಸತೊಡಗಿತು!! 

ಈಗ ಮಗ ಅದನ್ನೇ ಬೇರೆ ಬಗೆಯಲ್ಲಿ ಕೇಳುತ್ತಿದ್ದಾನೆ! ನಾನು ‘ಉತ್ಸವ’ ಶಬ್ದವನ್ನು ಏಟುಕೊಟ್ಟು ಕಲಿಸಿದ್ದನ್ನು ಅವನು ಮರೆತಿರಲಿಲ್ಲ. ಅದೂ ಅಲ್ಲದೇ ಆರಂಬದ ಹತ್ತು ವರ್ಷಗಳ ಕಾಲ ಆತ ನಮ್ಮಿಂದ ದೂರ ಇದ್ದಿದ್ದರಿಂದ ಹಠಮಾರಿತನ-ಅಬದ್ರತೆಯ ಬಾವ ಅವನಲ್ಲಿ ಮನೆಮಾಡತೊಡಗಿತ್ತು. ಇದನ್ನು ಹೀಗೇ ಬಿಟ್ಟರೆ ಅತವಾ ಹಿಗ್ಗಾಮುಗ್ಗಾ ಎಳೆದಾಡಿದರೆ ಎಡವಟ್ಟಾದೀತು ಎನಿಸಿ ನಾನು ಮೆಲ್ಲಗೆ ಹೇಳಿದೆ-

“ನೋಡು ನೀನು ನನ್ನ ಮಗಾ-ಅಕಿ ಸೊಸಿ. ಮಕ್ಳಿಗೆ ತಾಯಿ-ತಂದಿ ಬುದ್ದಿ ಹೇಳಿ ತಿದ್ದಿ ಕಲಸೂದು ವಾಡಿಕಿ ಇರ್ತೈತಿ. ಅದರಾಗ ಸೈತ ನೀನು ತಪ್ಪ ಹುಡುಕಿ ಜಗ್ಗಾಡಾಕತ್ರ ನಾ ಏನ್ ಮಾಡ್ಲೆಪಾ?” “ವೈನಿಗೆ ನಾನೇನು ಹೊಡ್ದು ಬಡ್ದು ಮಾಡಂತ ಹೇಳಿದ್ನೆನು?  ಅವ್ರು ಅಪದ್ದು ಮಾತಾಡ್ದಾಗ ನೀ ಒಂದ್ ಮಾತೂ ಹೇಳ್ದಂಗ ಸುಮ್ಮನ ಕುಂತಿದ್ಯೆಲ್ಲ!” “ನೋಡು ಈ ಬಾಶೆ ಏನೈತಲ್ಲ ಇದ್ರದ್ದು ಕತಿ ಬಾಳೈತಿ. ಊರಿಂದ ಊರಿಗೆ ಬಾಶೆ ಬದ್ಲಿ ಆಕ್ಕೊಂತ ಹೊಕ್ಕೈತಿ. ಅದನ್ನ ನಾವು ಅರ್ತ ಮಾಡ್ಕೋಬೇಕು”. “ಬಾಶೆ ಚೂರು ಹೆಚ್ಚುಕಮ್ಮಿ ಇದ್ದೀತ ಬಿಡು. ಅಕ್ಷರಕ್ಕ ಅಕ್ಷರ ಬದ್ಲಿ ಇರ್ತಾವನ?”

“ಯಾಕಿರೂದಿಲ್ಲ? ಬಾಳ ದೂರ ಬ್ಯಾಡಾ, ಈಗ ನಮ್ಮ ಉಬ್ಬಲಗಂಡೀದ ನೋಡು-’ಹ’ ಅಕ್ಷರಕ್ಕ ‘ಓ’ ಅಕ್ಷರ ಹಾಕಿ ಮಾತಾಡುವುದಿಲ್ಲ? ನಿಮ್ಮ ಅಜ್ಜಿನ್ನ ನೋಡು, ‘ಹೋಕ್ತಾಳಾ’ ಅನ್ನಾಕ ‘ಓತಾಳಾ’ ಅನ್ನಂಗಿಲ್ಲ? ಹಳ್ಳಿ ಮಾತನ್ಯಾಗ ಇವೆಲ್ಲಾ ಸಾಜೀಕ. ಆದ್ರ ಅದನ್ನ ತಪ್ಪು ಅನ್ನಂಗ ನೋಡ್ತಾರಾ. ಇದೆಲ್ಲಾ ಬಾಶೆಯೊಳಗಿನ ಬಾನಗಡಿ” ಎಂದು ಹೇಳುತ್ತಾ ನಾನು ಓದಿದ ದ್ರಾವಿಡ ಬಾಶಾ ವಿಜ್ಞಾನದ ನೆರವು ಪಡೆದು ಸಾದ್ಯವಾದಷ್ಟೂ ಎಳೆಎಳೆಯಾಗಿ ಬಿಡಿಸಿ ತಿಳಿನುತ್ತ ಅವನ ಸಂಶಯವನ್ನು ನಿವಾರಿಸಲು ಪ್ರಯತ್ನಿಸಿದೆ. ನನ್ನ ಮಾತುಗಳನ್ನು ಆತ ಬೆಕ್ಕಸ ಬೆರಗಾಗಿ ಕೇಳಿದ. ನಂತರ ಬೆರಗಿನಿಂದ ಹೊರಬರುತ್ತ ನುಡಿದ-

“ಬಾಶೆಯೊಳಗ ಇಂತಾವೆಲ್ಲ ಕಾರಬಾರ ಅದಾವನು?!! ಮತ್ತ ಇದ್ನ ಮೊದ್ಲ ಯಾಕ ಹೇಳ್ಲಿಲ್ಲ? ಇಷ್ಟೆಲ್ಲಾ ಹಕೀಕತ್ತು ಗೊತ್ತಿದ್ರೂ ಯಾಕ ನನ್ನ ತಲಿ ತಿಂದಿ?” ಎಂದು ಕೇಳಿದ ಸಿಟ್ಟಿನಿಂದ. “ಅಯ್ಯ ಆವಾಗ ಇದೆಲ್ಲಾ ನನಗರ ಎಲ್ಲಿ ಗೊತ್ತಿತ್ತು? ನಾ ಇದ್ನೆಲ್ಲಾ ಓದಿ ತಿಳ್ಕೊಂಡಿದ್ದು ಎಂ.ಎ. ಓದೂ ಮುಂದ. ನಿನ್ಗ ಕಲಸೂವಾಗ ನಾ ಇದ್ನೆಲ್ಲಾ ಓದಿದ್ದಿಲ್ಲ. ಮತ್ತ ಆವಾಗ ನನಗ ಇವೆಲ್ಲಾ ಹ್ಯಾಂಗ ತಿಳೀಬೇಕು? ನೀನ ಹೇಳು!” ಎಂದೆ. ನನ್ನ ಮಾತಿನಿಂದ ಅವನ ಬಾಯಿ ಕಟ್ಟಿತು. ಆದರೆ ಸಿಟ್ಟು ಮಾತ್ರ ಇನ್ನೂ ಪೂರಾ ಸಡಿಲಿರಲಿಲ್ಲ. ತುಸು ಹೊತ್ತು ಬಿಟ್ಟು ಆತ ಗಂಟುಮುಕದಿಂದಲೇ “ನಾ ಕೇಳಿದ್ಕೆಲ್ಲಾ ನಿನ್ನತ್ರ ಏನಾರ ಒಂದು ಉತ್ರ ಇದ್ದ ಇರ್ತೈತಿ ತೊಗೋ” ಎನ್ನುತ್ತ ಎದ್ದು ಹೋದ! ಸದ್ಯ ಪುಣ್ಯಾತ್ಮ ಇಷ್ಟಕ್ಕೆ ಮುಗಿಸಿದನಲ್ಲ! ಎಂದು ನಾನು ಸಮಾದಾನದ ಉಸಿರು ಬಿಟ್ಟೆ!

ದ್ರಾವಿಡ ಬಾಶಾ ವಿಜ್ಞಾನದ ಓದು ನನ್ನಲ್ಲಿನ ಬಾಶಾ ಕಟುತ್ವವನ್ನು ಕಳೆದು ಮೆದುಗೊಳಿಸಿತು. ಮನಸ್ಸು ಮುಕ್ತತೆಗೆ ತೆರೆದುಕೊಂಡಿತು. ವಿವಿದ ಸಮುದಾಯಗಳ ಬಾಶೆಯನ್ನು ಆಲಿಸುವಲ್ಲಿ ಒಂದು ಸೂಕ್ಷ್ಮತೆಯನ್ನು ಒದಗಿಸಿತು. ಹಲವು ಸಮುದಾಯಗಳ ಗೆಳೆಯರನ್ನು ಹೊಂದಿದ್ದ ನನ್ನ ದೊಡ್ಡ ಮಗ ತನ್ನ ಮಾತಿನಲ್ಲಿ ‘ಬಂದ್ರಗಿನ, ಹೋದ್ರಗಿನ, ಬಂದಿಗಿ, ಕುಂತಿಗಿ, ಬಬಾದೇ…’ ಮೊದಲಾದ ಪದಗಳನ್ನು ಎಗ್ಗಿಲ್ಲದೇ ಬಳಸುವಾಗ ಈಗ ಮೊದಲಿನಂತೆ ಮನಸ್ಸಿಗೆ ಕಿರಿಕಿರಿಯಾಗುತ್ತಿರಲಿಲ್ಲ. ವಿವಿದ ಸಮುದಾಯಗಳ ಬಾಶಾ ವೈವಿದ್ಯತೆ, ಬಾಗು-ಬಳುಕು ಅಚ್ಚರಿ ಹುಟ್ಟಿಸುತ್ತಿತ್ತು. ಒಂದೊಂದು ಸಮುದಾಯದ ಬಾಶೆ, ಒಂದೊಂದು ತರ ಸೊಬಗಿನದು ಎನಿಸುತ್ತಿತ್ತು. ಈ ತಿಳುವಳಿಕೆ ನನ್ನಲ್ಲಿ ಮೂಡಲು ದಶಕಗಳನ್ನೇ ಕಳೆಯಬೇಕಾಯಿತು! ಈ ಬಾಶಾ ರಾಜಕಾರಣ ಹುಟ್ಟಿಸುವ ‘ಸಿದ್ದಮಾದರಿ’ಗಳು, ಅವುಗಳ ಆಶಯಗಳು ಚಾಲ್ತಿಯಲ್ಲಿಡುವ ತರತಮ ನೀತಿ-ರೀತಿಗಳ ವ್ಯವಸ್ತೆ, ಅದರ ಪರಿಣಾಮಗಳಾದ ಮರೆವು-ಕೀಳರಿಮೆ..ಎಲ್ಲವನ್ನೂ ಕಂಡಾಗ ಹೇಳತೀರದ ಆತಂಕ ಹಾಗೂ ದಟ್ಟ ವಿಶಾದದೊಟ್ಟಿಗೆ ಸಿಟ್ಟೂ ಉಕ್ಕಿಬರುತ್ತದೆ.

ಒಟ್ಟಿನಲ್ಲಿ ಬಾಶೆ ಬರೀ ಅಕ್ಷರಗಳ ಸಮೂಹವಲ್ಲ, ಅದು ತನ್ನ ವಿಶಾಲ ಅರ್ತದಲ್ಲಿ ಸಂಸ್ಕೃತಿಯ ಪ್ರತಿಬಿಂಬವೂ ಹೌದು. ‘ನಾಲಿಗೆ ಕುಲ ಹೇಳಿತು’ ಎಂಬ ನುಡಿಗಟ್ಟು ಇದನ್ನು ಶಕ್ತವಾಗಿ ಕಾಣಿಸುತ್ತದೆ. ಬಾಶೆಗಿರುವ ಈ ಅಸಾದ್ಯ ರೂಪಕ ಶಕ್ತಿಯನ್ನು ಮೆಚ್ಚಬೇಕೋ ಅತವಾ ಪ್ರತಿಗಾಮಿ ತಾತ್ವಿಕತೆಗೂ ವಾಹಕ ಶಕ್ತಿಯಾಗಿ ಮೈಯೊಡ್ಡಬೇಕಾದ ಅದರ ಹಣೇಬರಹಕ್ಕೆ ಮರುಗಬೇಕೋ ತಿಳಿಯುವುದಿಲ್ಲ! ಈ ಹಗ್ಗಜಗ್ಗಾಟದಲ್ಲಿ ಅರಿವಾಗುವ ಸಂಗತಿಯೆಂದರೆ ಬಾಶೆ ತಂತಾನೆ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅದೊಂದು ‘ವಾಹಕ’ ಮಾತ್ರ. ಅದು ತನ್ನನ್ನು ಬಳಸುವವರ ಇಚ್ಚೆಗೆ ಅನುಸಾರವಾಗಿ ವರ್ತಿಸುತ್ತದೆ ಎಂಬುದು. ಬಾಶೆ ಮನುಶ್ಯರ ಅತ್ಯದ್ಬುತ ಅನ್ವೇಶಣೆ ಎಂಬ ಸಂಗತಿಯನ್ನು ನೆನಪಿಟ್ಟುಕೊಂಡೂ ಈ ಮಾತನ್ನು ಹೇಳಬೇಕಾಗಿದೆ. ಅಂದಾಗ ಬಾಶೆ ಕರ್ನಾಟಕ ಅತವಾ ಇಡೀ ಇಂಡಿಯಾದ ಪರಂಪರೆಯುದ್ದಕ್ಕೂ ದರ್ಮ-ರಾಜಕೀಯ-ವ್ಯಾಪಾರಿ ಹಿತಾಸಕ್ತಿಗಳಿಗನುಸಾರವಾಗಿ ಬಳಕೆಯಾದದ್ದೇ ಹೆಚ್ಚು. ನಮ್ಮ ಕನ್ನಡ ಸಾಹಿತ್ಯ ಪರಂಪರೆಯೇ ಇದಕ್ಕೆ ಸಾಕ್ಷಿಯಾಗಿದೆ ಕೂಡ. ‘ಶಬ್ದಮಣಿದರ್ಪಣ’ ಬಾಶಾ ವೈವಿದ್ಯತೆಯನ್ನು ಗೂಡಿಸಿ ಹಾಕಿ ಏಕಾಕೃತಿಯತ್ತ ವಾಲಿದರೆ ‘ಕವಿರಾಜಮಾರ್ಗ’ ‘ಕನ್ನಡಂಗಳ್’, ‘ಜನಪದಂಗಳ್’ ಎಂದು ಬಾಶಾ ವೈವಿದ್ಯತೆಯನ್ನು ಸಮರ್ತಿಸುತ್ತದೆ. ‘ಕುರಿತೋದದೆಯುಂ ಕಾವ್ಯಪರಿಣಿತಮತಿಗಳ್’ ಎಂದು ನಮ್ಮ ಜನಪದರನ್ನು ಮನ್ನಿಸುತ್ತದೆ. ಇದು ಬಾಶಾ ಸಂಗರ್ಶ ಮಾತ್ರವಲ್ಲ, ಸಾಂಸ್ಕೃತಿಕ ಸಂಗರ್ಶವಾಗಿ ನಮ್ಮ ಪರಂಪರೆಯುದ್ದಕ್ಕೂ ಹರಿದು ಬಂದಿದೆ. ಈ ವಿದ್ಯಮಾನ ಇಲ್ಲಿರುವ ಏಕಾಕೃತಿಯ ಸುಳ್ಳು ಪರದೆಯನ್ನು ಸರಿಸಿ ಪರಂಪರೆಯ ವಿಚ್ಚಿದ್ರಕರ ವಾಸ್ತವವನ್ನು ತೆರೆದು ತೋರುತ್ತದೆ. ಹಾಗಾಗಿಯೇ ಇಲ್ಲಿ ಪರಂಪರೆ ಕೆಲವರಿಗೆ ಗೌರವ-ಹೆಮ್ಮೆಯ ಸಂಗತಿಯಾದರೆ ಇನ್ನುಳಿದ ಬಹುದೊಡ್ಡ ಸಮುದಾಯಗಳಿಗೆ ಅದು ನೋವು-ಅಪಮಾನ-ಅನಿಷ್ಟಗಳ ಮೂಟೆಯಾಗಿದೆ. ಇವರಿಗೆ ಯಾವುದೂ ಸುಲಬವಾಗಿ ಸಿಗದು. ಸಂಗರ್ಶ-ಹೋರಾಟದ ಮೂಲಕವೇ ಎಲ್ಲವನ್ನೂ ದಕ್ಕಿಸಿಕೊಳ್ಳಬೇಕು! ಅಂಬೇಡ್ಕರ್ ಅವರು ‘ಸಂವಿಧಾನ’ ಎಂಬುದೊಂದನ್ನು ಕೊಡದೇ ಹೋಗಿದ್ದರೆ ಗತಿ ಏನಿತ್ತೋ?!! ಹೀಗಿರುವಾಗ ಪರಂಪರೆಯ, ಆ ಮೂಲಕ ಬಾಶೆಯ ಅಳಿವು-ಉಳಿವಿನ ಪ್ರಶ್ನೆ ಯಾರನ್ನು ಕಾಡಬೇಕು? ಯಾರು ಪರಂಪರೆಯ ಅರ್ತಾತ್ ಬಾಶೆಯ ರಕ್ಷಣೆಯ ಹೊಣೆ ಹೊರಬೇಕು? ಯಾರು ಪರಂಪರೆಯುದ್ದಕ್ಕೂ ಇದರ ಪಲಗಳನ್ನು ಬಾಚಿ ಬಾಚಿ ಪಡೆದುಕೊಂಡಿರುವರೋ ಅವರು ತಾನೆ? ಆದರೆ ಈಗ ಆಗುತ್ತಿರುವುದು ಏನು? ಪರಂಪರೆಯಲ್ಲಿ ಬಾಶೆ-ದರ್ಮ-ರಾಜಕೀಯ ಉತ್ಪನ್ನಗಳನ್ನು ತಿಂದು ತೇಗಿದ ಮೇಲು ವರ್ಗ ಹಾಗೂ  ಜಾತಿಗಳ ಜನ ತಮಗೆ ಅನ್ನ-ಆಶ್ರಯ ನೀಡಿದ ಬಾಶೆಯನ್ನು ತೊರೆದು ಕಾನ್ವೆಂಟ್ ಗಳೆಂಬ ಇಂಗ್ಲೀಷ್ ಮಾದ್ಯಮದ ಶಾಲೆಗಳನ್ನು ನಾಡಿನಾದ್ಯಂತ ತೆರೆದು ವ್ಯಾಪಾರಕ್ಕೆ ನಿಂತಿದ್ದಾರೆ! ವಾಸ್ತವ ಹೀಗಿರುವಾಗ ಪರಂಪರೆಯ ಅಂದರೆ ಬಾಶೆಯ ರಕ್ಷಣೆಯ ಹೊಣೆಯನ್ನು ಶೋಶಿತ ಸಮುದಾಯಗಳ ಹೆಗಲಿಗೆ ವರ್ಗಾಯಿಸುವುದು ಕ್ರೌರ್ಯವೇ ಸರಿ.

ಜಂಬೂದ್ವೀಪ ನವಕಂಡ ಪೃತ್ವಿಯೊಳು

ಕೇಳಿರಯ್ಯಾ ಎರಡಾಳಿನ ಬಾಶೆಯ

ಕೊಲುವೆನೆಂಬ ಬಾಶೆ ದೇವನದಾದರೆ

ಗೆಲುವೆನೆಂಬ ಬಾಶೆ ಸದ್ಬಕ್ತನದು

ಸತ್ಯವೆಂಬ ಕೂರಲಗನೆ ತಳೆದು

ಸದ್ಬಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ

ಬಸವಣ್ಣನವರ ಈ ವಚನದಲ್ಲಿ ಸೂಚಿತವಾದ ‘ಕೊಲುವ’ ದೇವಬಾಶೆ ಹಾಗೂ ‘ಗೆಲುವ’ ಸದ್ಬಕ್ತರ ಬಾಶೆ ಯಾವುವೆಂದು ಬಿಡಿಸಿ ಹೇಳಬೇಕಿಲ್ಲ. ಇದು ಪರಂಪರೆಯುದ್ದಕ್ಕೂ ನಡೆಯುತ್ತ ಬಂದ ಜಟಾಪಟಿ. ಈ ಜಟಾಪಟಿಗೆ ಹೆಚ್ಚುವರಿಯಾಗಿ ಇಂದು ಜಾಗತಿಕ ವಿದ್ಯಮಾನಗಳೂ ತಗುಲಿಹಾಕಿಕೊಂಡು ಪರಿಸ್ತಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ!

ಇಂದು ಇಡೀ ಜಗತ್ತೇ ವಿದ್ಯುನ್ಮಾನ ಮಾದ್ಯಮಗಳ ಅಮಲಿನಲ್ಲಿದೆ. ಇವುಗಳೆದುರು ಸೆಣಸಬೇಕಾದ ಬಾಶೆಯನ್ನು ದರ್ಮ-ರಾಜಕೀಯ-ವ್ಯಾಪಾರೀ ಶಕ್ತಿಗಳು ತಮ್ಮ ಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಿವೆ. ದರ್ಮಕ್ಕೆ ಅದು ತನ್ನ ಅಜೆಂಡಾವನ್ನು ಗಟ್ಟಿಗೊಳಿಸುವ ಸಾದನವಾದರೆ, ರಾಜಕೀಯ ಶಕ್ತಿಗಳಿಗೆ ಅದೊಂದು ದಾಳ ಮಾತ್ರ. ಇನ್ನು ಮಾರುಕಟ್ಟೆಯ ಶಕ್ತಿಗಳಿಗೆ ಅದೊಂದು ಮಾರಾಟದ ಸರಕು ಅಷ್ಟೇ. ಹೀಗೆ ಬದಲಾದ ಸನ್ನಿವೇಶಗಳ ಎದುರು ಬಾಶೆಯ ಅಳಿವು-ಉಳಿವು ಹಲವು ಸಿಕ್ಕುಗಳೊಂದಿಗೆ ತಳುಕುಹಾಕಿಕೊಂಡಿದ್ದರೂ ಆತ್ಯಂತಿಕವಾಗಿ ಆರ್ತಿಕ ಸಂಗತಿಗಳೇ ನಿರ್ಣಾಯಕ ಪಾತ್ರ ವಹಿಸುವುದರಿಂದ  ಕನ್ನಡವನ್ನು ಅನ್ನದ ಬಾಶೆಯನ್ನಾಗಿ ಪರಿವರ್ತಿಸದಿದ್ದರೆ ನಾವು ಅದಕ್ಕೆ ತಕ್ಕನಾದ ಬೆಲೆ ತೆರಬೇಕಾಗುತ್ತದೆ. ಆದಕಾರಣ ನಮಗೀಗ ನಮ್ಮದೇ ಆದ ಬಾಶಾನೀತಿ ಜರೂರಾಗಿ ಬೇಕು. ಅದನ್ನು ಎಷ್ಟು ಸಾದ್ಯವೋ ಅಷ್ಟು ಬೇಗ ಜಾರಿಗೆ ತರಬೇಕು. ಕರುನಾಡ ಅರಿವಿಗರು ಈ ನಿಟ್ಟಿನ ಪ್ರಯತ್ನದಲ್ಲಿ ಬಗೀರತರಾಗದೇ ಉಳಿಗಾಲವಿಲ್ಲ.

(ಈ ಲೇಕನವನ್ನು ಎಲ್ಲರ ಕನ್ನಡದಲ್ಲಿ ಬರೆಯಲು ಪ್ರಯತ್ನಿಸಲಾಗಿದೆ.)

ವನಮಾಲಾ ಕಟ್ಟೇಗೌಡರ್, ಹೊಸಪೇಟೆ

ಮೊ : 9341757653

ಇದನ್ನೂ ಓದಿ- ಕವಿ, ವನಗಳ ಸೃಷ್ಟಿಕರ್ತ ಭೂಹಳ್ಳಿ ಪುಟ್ಟಸ್ವಾಮಿ: ಒಂದು ನೆನಪು

More articles

Latest article