ಕನಕಪುರ | ದಲಿತ ಯುವಕನ ಕೈ ಕಡಿದ ಪ್ರಬಲ ಜಾತಿ ಗುಂಪು

Most read

ರಾಮನಗರ ಜಿಲ್ಲೆ ಕನಕಪುರ ತಾಲೂಕು ಮಾಳಗಾಳು ಗ್ರಾಮದಲ್ಲಿ ಮೇಲ್ಜಾತಿಯ ಯುವಕರ ಗುಂಪೊಂದು ಭಾನುವಾರ ರಾತ್ರಿ ದಲಿತ ಯುವಕ ಅನೀಶ್ ಮೇಲೆ ಹಲ್ಲೆ ನಡೆಸಿ ಮುಂಗೈ ಕತ್ತರಿಸಿದ್ದಾರೆ. ಅನೀಶ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದಾರೆ.

ಉಪಮುಖ್ಯಮಂತ್ರಿ ಸ್ವ ಕ್ಷೇತ್ರ ಕನಕಪುರದ ದಲಿತರ ಕಾಲೋನಿಗೆ ನುಗ್ಗಿದ ಗುಂಪು ಅನೀಶ್ ಮೇಲೆ ಹಲ್ಲೆ ಮಾಡಿ ಕೈ ಕತ್ತರಿಸಿ ಹಾಕಿದ್ದಾರೆ. ಅನೀಶ್ ಎಡಗೈ ತುಂಡಾಗಿದ್ದು, ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನೀಶ್ ಮಾವ ಪಿ.ಎಲ್‌.ಡಿ. ಬ್ಯಾಂಕ್ ಉದ್ಯೋಗಿ ಲಕ್ಷ್ಮಣ ಮತ್ತು ಗೋವಿಂದರಾಜು ಅವರ ಮೇಲೆ ಕೂಡ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೇ ಮನೆಯಲ್ಲಿದ್ದ ಮಹಿಳೆಯರು ಸೇರಿದಂತೆ 7 ಜನರ ಮೇಲೆ ಹಲ್ಲೆ ನಡೆಸಿದ್ದು ಮನೆಯ ಮುಂದೆ ನಿಲ್ಲಿಸಿದ್ದ ಎರಡು ಆಟೋಗಳನ್ನು ಜಖಂಗೊಳಿಸಿದೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಹರ್ಷ, ಕರುಣೇಶ್, ರಾಹುಲ್, ಶಿವ, ಶಶಾಂಕ, ದರ್ಶನ್ ಸೇರಿದಂತೆ ಇತರರ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಕೊಲೆ ಯತ್ನ ಆರೋಪದಡಿ ಕನಕಪುರ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ತಾಲೂಕು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸೇರಿದ್ದರೆ, ಗ್ರಾಮ ವಿಧಾನಪರಿಷತ್ ಸದಸ್ಯ ಎಸ್. ರವಿಯವರ ಸ್ವಗ್ರಾಮವಾಗಿದೆ. ಗ್ರಾಮದಲ್ಲಿ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಸ್‌ಪಿ ಕಾರ್ತಿಕ್ ರೆಡ್ಡಿ ಗ್ರಾಮಕ್ಕೆ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಲಿತ ಸಮುದಾಯದ ಯುವಕರಿಬ್ಬರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಒಕ್ಕಲಿಗ ಸಮುದಾಯದ ಯುವಕರ ಗುಂಪ್ಪೊಂದು ರಸ್ತೆಯಲ್ಲಿ ಏಕೆ ನಿಂತಿರುವಿರಿ ಎಂದು ಜಗಳ ತೆಗೆದಿದೆ. ನಂತರ ಭಾನುವಾರ ರಾತ್ರಿ ದಲಿತರ ಎನ್.ಕೆ. ಕಾಲೊನಿಗೆ ನುಗ್ಗಿದ ಒಕ್ಕಲಿಗ ಸಮುದಾಯದ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಪ್ರಮುಖ ಆರೋಪಿ ಹರ್ಷ ರೌಡಿಶೀಟರ್ ಆಗಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಿಂದ ಆತನನ್ನು ತುಮಕೂರಿಗೆ ಗಡಿಪಾರು ಮಾಡಲಾಗಿತ್ತು. ಆದರೂ, ಆಗಾಗ ಊರಿಗೆ ಬಂದು ಹೋಗುತ್ತಿದ್ದ. ಆತನೇ ತನ್ನ ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಹಲ್ಲೆಗೊಳಗಾದ ಲಕ್ಷ್ಮಣ್‌ ದೂರಿನಲ್ಲಿ ತಿಳಿಸಿದ್ದಾರೆ.

ದಲಿತರ ಎನ್.ಕೆ. ಕಾಲೊನಿ ನಿವಾಸಿಗಳು ಹಾಗೂ ಪರಿಶಿಷ್ಟ ಸಮುದಾಯದ ಕುಟುಂಬಗಳು ಈ ಹಲ್ಲೆಯಿಂದಾಗಿ ಆತಂಕದಲ್ಲಿವೆ. ನಗರಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಬಳಿ ತೆರಳಿದ ದಲಿತ ಮುಖಂಡರು ‘ದಲಿತರಿಗೆ ರಕ್ಷಣೆ ಕೊಡಿ’ ಎಂದು ಮನವಿ ಮಾಡಿದರು. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ನಗರಸಭೆ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿದ್ದಾರೆ.

More articles

Latest article