Tuesday, September 17, 2024

ಶಿರೂರು ಗುಡ್ಡದಲ್ಲಿ ಸೇನೆಯಿಂದ ರಕ್ಷಣಾ ಕಾರ್ಯ; ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕೆ

Most read

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತದ ವಿಷಯಕ್ಕೆ ಸಂಬಂಧಿಸಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕುಟುಕಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವರು; ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು 7 ಜನ ಸಾವನ್ನಪ್ಪಿದ್ದ ಶಿರೂರು ಗ್ರಾಮಕ್ಕೆ ನಾನು ಶನಿವಾರ ಭೇಟಿ ನೀಡಿದಾಗ ಈ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದರು! ಮಿಲಿಟರಿಯನ್ನು ಕರೆತಂದು ಫೀಲ್ಡಿಗೆ ಇಳಿಸಬೇಕಾಗಿತ್ತು. ಅವರೊಬ್ಬರೇ ಬಂದು ಏನು ಮಾಡುತ್ತಾರೆ ಎಂದು ಲಘುವಾಗಿ ಮಾತನಾಡಿದ್ದರು!! ಎಂದು ಅವರು ಟೀಕಿಸಿದ್ದಾರೆ.

ಡಿಸಿಎಂ ಅವರು ನನ್ನ ಬಗ್ಗೆ ಲಘುವಾಗಿ ಮಾತನಾಡುವ ಭರದಲ್ಲಿ ನಮ್ಮ ಹೆಮ್ಮೆಯ ಸೇನೆಯನ್ನೂ ಹೀಗಳೆದಿದ್ದರು. ಇದು ದುರ್ದೈವದ ಸಂಗತಿ. ಜಿಲ್ಲಾಡಳಿತ ರಕ್ಷಣಾ ಕಾರ್ಯ ಮಾಡುತ್ತಿಲ್ಲವೆಂದು ನಾನು ಹೇಳಿಲ್ಲ. ಸರಕಾರವನ್ನೂ ಟೀಕಿಸಿಲ್ಲ. ಆದರೂ, ನೊಂದ ಕುಟುಂಬಗಳ ಕಣ್ಣೀರಿಗೆ ಓಗೊಟ್ಟು ನಮ್ಮ ಹೆಮ್ಮೆಯ ಸೇನೆಯ 40ಕ್ಕೂ ಹೆಚ್ಚು ವೀರಯೋಧರು ರಕ್ಷಣಾ ಕಾರ್ಯಕ್ಕೆ ಧಾವಿಸಿ, ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ. ಇದಕ್ಕೆ ಡಿಸಿಎಂ ಅವರ ಆಕ್ಷೇಪಣೆ ಇದೆಯಾ? ಈ ಬಗ್ಗೆ ಅವರೇ ಉತ್ತರಿಸಬೇಕು ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ.. ಇಷ್ಟು ಸರಳ ಸಾಮರಸ್ಯ ತತ್ತ್ವವೂ ಡಿಸಿಎಂ ಆಗಿರುವ ವ್ಯಕ್ತಿಗೆ ತಿಳಿದಿಲ್ಲ ಎಂದರೆ, ಇದಕ್ಕಿಂತ ತಿಳಿಗೇಡಿತನ ಇನ್ನೊಂದಿಲ್ಲ ಎಂದಿರುವ ಅವರು ನಮ್ಮ ಸೇನೆ ನಮ್ಮ ಹೆಮ್ಮೆ ಎಂದು ದಿಸಿಎಂಗೆ ಟಾಂಗ್ ನೀಡಿದ್ದಾರೆ.

More articles

Latest article