ಎರಡು ವರ್ಷ ದಾಟಿ ಮುಂದುವರಿಯುತ್ತಿರುವ ದೇವನಹಳ್ಳಿ ಭೂ ಸ್ವಾಧೀನ ವಿರೋಧಿ ಹೋರಾಟ

Most read

ಚನ್ನರಾಯಪಟ್ಣ-ದೇವನಹಳ್ಳಿ ರೈತಾಪಿಯ ಈ ಧೀರೋದಾತ್ತ ಹೋರಾಟ ಸೋಲಬಾರದು, ನಾವದನ್ನು ಸೋಲಗೊಡಬಾರದು. ಅದು ಗೆಲ್ಲಲೇಬೇಕು. ಹಾಗಿದ್ದಲ್ಲಿ ರೈತರ ಅನ್ನದ ಋಣ ಇರುವ ನಾವೆಲ್ಲರೂ ಇದೇ ತಾ. 23ರ ಪ್ರತಿಭಟನೆ ಮತ್ತು ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ, ರೈತರ ಋಣವನ್ನು ಕೊಂಚವಾದರೂ ತೀರಿಸೋಣ ಬನ್ನಿಸಿರಿಮನೆ ನಾಗರಾಜ್.

ಬೆಂಗಳೂರಿನ ಉತ್ತರಕ್ಕೆ 40 ಕಿಲೋಮೀಟರ್‌ ದೂರವಿರುವ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಣದಲ್ಲಿ ಆ ಹೋಬಳಿಯ 13 ಹಳ್ಳಿಗಳ ರೈತಾಪಿ ಜನತೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 845 ದಿನ (ಹತ್ತಿರ ಹತ್ತಿರ ಎರಡೂವರೆ ವರ್ಷ) ದಾಟಿ ಮುಂದುವರಿದಿದ್ದು, ತನ್ನದೇ ಒಂದು ಇತಿಹಾಸ ಸೃಷ್ಟಿಸಿದೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಆ ರೈತರ ಫಲವತ್ತಾದ 1,777 ಎಕರೆ ಭೂಮಿಯನ್ನು ಬಲವಂತದಿಂದ ಸ್ವಾಧೀನ ಪಡಿಸಿಕೊಳ್ಳಲು ನಡೆಸಿರುವ ಕ್ರಮದ ವಿರುದ್ಧ ಈ ಹೋರಾಟ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯರಾದಿಯಾಗಿ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು-ಶಾಸಕರು, ಎಲ್ಲರೂ ಈ ಜನತೆಗೆ ವಿಶ್ವಾಸದ್ರೋಹ ಎಸಗಿದ್ದು, ಇದೀಗ ಕೊನೆಯ ಯತ್ನವೆಂಬಂತೆ ಇದೇ ತಾರೀಖು 23ರಂದು ಮುಖ್ಯಮಂತ್ರಿಯವರ ಮನೆಗೆ ಜಾಥಾ ಹೊರಟು, ಸಮಸ್ಯೆ ಬಗೆಹರಿಸಿಕೊಳ್ಳದೆ ಹಿಂದಿರುಗುವುದಿಲ್ಲ ಎಂದು ರೈತರು ತೀರ್ಮಾನ ಮಾಡಿದ್ದಾರೆ. ಮತ್ತೆಮತ್ತೆ ಭರವಸೆ ಕೊಟ್ಟು, ಇದೀಗ ಎರಡು ಹಳ್ಳಿಗಳಿಗೆ ಎತ್ತಂಗಡಿ ನೋಟೀಸ್‌ ನೀಡಿರುವ ಹಿನ್ನೆಲೆಯಲ್ಲಿ ರೈತ ಹೋರಾಟ ಸಮಿತಿಯ ನಿಯೋಗ ಕೈಗಾರಿಕಾ ಮಂತ್ರಿ ಎಂ. ಬಿ. ಪಾಟೀಲರನ್ನು ಭೇಟಿ ಮಾಡಿದಾಗ, “ನೀವು ಹೇಳಿದ ಹಾಗೆಲ್ಲ ಕೇಳೋಕಾಗಲ್ರೀ…!” ಎಂದು ಉದ್ಧಟತನದ ಮಾತಾಡಿ ರೈತರನ್ನು ಅಪಮಾನಿಸಿರುವ ಕಾರಣಕ್ಕೆ, ಅವರನ್ನು ವಜಾ ಮಾಡಬೇಕೆಂಬ ಆಗ್ರಹವೂ ಸೇರಿಕೊಂಡಿದೆ.

ರೈತರನ್ನು ನೆಲೆ ತಪ್ಪಿಸುತ್ತಿರುವ ಕೆಐಎಡಿಬಿ

ಹೋರಾಟದ ಸಭೆ

ದೇವನಹಳ್ಳಿ ತಾಲೂಕಿನಲ್ಲಿ ಕಸಬಾ, ಚನ್ನರಾಯಪಟ್ಣ, ಕುಂದಾಣ ಹಾಗೂ ಜಾಲ ಎಂಬ ನಾಲ್ಕು ಹೋಬಳಿಗಳಿವೆ. ಕಸಬಾ ಮತ್ತು ಚನ್ನರಾಯಪಟ್ಣ ಹೋಬಳಿಗಳ 7,000 ಎಕರೆ ಭೂಮಿ ವಿಮಾನ ನಿಲ್ದಾಣಕ್ಕೆ ಹೋಗಿದೆ. ಚನ್ನರಾಯಪಟ್ಣದ 1200 ಎಕರೆ ಮತ್ತು ಕುಂದಾಣದ 830 ಎಕರೆ ಭೂಮಿ ಕೆಐಎಡಿಬಿ ಮೊದಲನೇ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡಿದೆ. ರೈತರು ಹೇಳುವಂತೆ, “ಮೊದಲ ಹಂತದಲ್ಲಿ ಕುಂದಾಣದ ನಾಲ್ಕು ಹಳ್ಳಿಗಳಲ್ಲಿ ಒಂದು ಎಕರೆಯನ್ನೂ ರೈತರ ಬಳಿ ಉಳಿಸಿಲ್ಲ; ಊರಿನ ಮತ್ತು ಹೊಲಗಳ ದಾರಿಯನ್ನು ಸಹ ಮುಚ್ಚಿ, ಬೇರೆ ಕಡೆ ದಾರಿ ಅಂತ ಮಾಡಿ ಇನ್ನಿಲ್ಲದಷ್ಟು ಅನಾನುಕೂಲ ಮಾಡಲಾಗಿದೆ; ಕೆಲವರ ಮನೆಯಂಗಳದವರೆಗೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ; ಸ್ಮಶಾನಕ್ಕೂ ಜಾಗ ಇಲ್ಲದಂತೆ, ಹೆಜ್ಜೆ ಇಟ್ಟಲ್ಲೆಲ್ಲ ಕೆಐಎಡಿಬಿಯದೇ ಭೂಮಿ ಎಂಬಂತಾಗಿದೆ. ಇದಲ್ಲದೆ ಎಸ್‌ಈಝಡ್‌ಗೆ, ಏರೋಸ್ಪೇಸ್‌ಗೆ, ಭಟ್ರಮಾರನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಂತ ಈ ತಾಲೂಕಿನ ಬಹುತೇಕ ಭೂಮಿ ರೈತರ ಕೈ ತಪ್ಪಿದೆ. ಕಸಬಾ ಹೋಬಳಿಯಲ್ಲೀಗ ರೈತರ ಬಳಿ ಒಂದು ಎಕರೆ ಭೂಮಿಯೂ ಇಲ್ಲ, ಅಷ್ಟೂ ಭೂಮಿ ಹೀಗೆ ವಿವಿಧ ರೀತಿಯ “ಅಭಿವೃದ್ಧಿ”ಗಾಗಿ ಪರಭಾರೆಯಾಗಿದೆ.” ಈಗ ಚನ್ನರಾಯಪಟ್ಣದ ಈ 1,777 ಎಕರೆ ಭೂಮಿಯೂ ರೈತರ ಕೈತಪ್ಪುವ ಹಂತಕ್ಕೆ ಬಂದಿದೆ. ಇವರಲ್ಲಿ ಹೆಚ್ಚಿನವರು ಅತಿಸಣ್ಣ ಮತ್ತು ಸಣ್ಣ ರೈತರು ಹಾಗೂ ಬಗರ್‌ಹುಕುಂ ಸಾಗುವಳಿದಾರರಾಗಿದ್ದಾರೆ.

ಅಳಿದುಳಿದ ಈ ಸಮೃದ್ಧ ಭೂಮಿಗೂ “ಅಭಿವೃದ್ಧಿ”ಕಾರರು ಕಣ್ಣು ಹಾಕಿದಾಗ ರೈತರು ತಿರುಗಿ ಬಿದ್ದಿದ್ದಾರೆ, ಅವರಿಗೆ ಇಡೀ ತಾಲೂಕಿನ ರೈತರು ಮತ್ತು ಜನಸಾಮಾನ್ಯರು ಬೆಂಬಲಕ್ಕೆ ನಿಂತಿದ್ದಾರೆ. ಮೊದಲು ಭೂಸ್ವಾಧೀನದ ಪ್ರಕ್ರಿಯೆಯ ಆರಂಭದಲ್ಲೇ 62% ರೈತರು ಗ್ರಾಮಸಭೆ ನಡೆಸಿ, ಭೂಮಿ ಬಿಡುವುದಿಲ್ಲವೆಂದು ಲಿಖಿತ ಪ್ರತಿಭಟನೆ ಸಲ್ಲಿಸಿದ್ದರು. ಆದರೂ ಮಂಡಳಿ ತನ್ನ ಹೆಜ್ಜೆ ಹಿಂತೆಗೆಯದಿದ್ದಾಗ, ʼಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿʼ ರಚಿಸಿಕೊಂಡು ಹೋರಾಟ ಆರಂಭವಾಯಿತು. ಹಲವು ಸಲ ಕಾಲ್ನಡಿಗೆ ಜಾಥಾಗಳು, ರಸ್ತೆ ತಡೆ‌, ಲಾಠಿ ಚಾರ್ಜ್ ಮತ್ತು ಕೇಸುಗಳು, ದೊಡ್ಡದೊಡ್ಡ ಪ್ರತಿಭಟನಾ ಸಮಾವೇಶಗಳು, ಅಂದಿನ ವಿಪಕ್ಷ ನಾಯಕ ಸಿದ್ಧರಾಮಯ್ಯರಿಂದ ಧರಣಿ ಸ್ಥಳದಲ್ಲಿ ಸತ್ಯಾಗ್ರಹಿಗಳ ಭೇಟಿ ಮತ್ತು ಜಮೀನು ಸ್ವಾಧೀನಕ್ಕೆ ಅವಕಾಶ ಕೊಡದಿರುವ ಆಶ್ವಾಸನೆ, ಹೊಸ ಸರ್ಕಾರ ಬಂದಮೇಲೆ ಪದೇಪದೇ ಜಿಲ್ಲಾ ಉಸ್ತುವಾರಿ ಮಂತ್ರಿ ಮುನಿಯಪ್ಪ, ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್‌, ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರುಗಳ ಭೇಟಿ, ಈಚೆಗೆ ಭಾರತೀಯ ಕಿಸಾನ್‌ ಯೂನಿಯನ್ ನಾಯಕ ರಾಕೇಶ್‌ ಟಿಕಾಯತ್‌ ನೇತೃತ್ವದಲ್ಲಿ ಅದರ ಪದಾಧಿಕಾರಿಗಳ ನಿಯೋಗದಿಂದ ಸಿದ್ಧರಾಮಯ್ಯ ಭೇಟಿ ಮತ್ತು ಭರವಸೆ … ಹೀಗೆ ಹತ್ತಿರಹತ್ತಿರ ಎರಡೂವರೆ ವರ್ಷ ಕಳೆದುಹೋಗಿದೆ. ಈಗ 80%ಗಿಂತ ಹೆಚ್ಚಿನ ರೈತರು ಜಮೀನು ಕೊಡಲು ನಿರಾಕರಿಸುತ್ತಿದ್ದಾರೆ. ಆದರೂ ಸರ್ಕಾರ ಹೋರಾಟವನ್ನು ಒಡೆಯುವ ತಂತ್ರಗಳನ್ನು ಹೆಣೆಯುತ್ತಿದೆಯೇ ವಿನಃ ತಾನು ಕೊಟ್ಟ ಭರವಸೆಯಲ್ಲಿ ಒಂದಕ್ಷರವನ್ನೂ ಈಡೇರಿಸಿಲ್ಲ.

ಸಮೃದ್ಧ ನೀರು, ಫಲವತ್ತಾದ ಭೂಮಿ, ʼಇದಿಲ್ಲʼ ಎಂಬಂತಿಲ್ಲದ ಫಸಲು

ಭೂಸ್ವಾಧಿನದ ವಿರುದ್ಧ ಹೋರಾಟ

 ಇಡೀ ಈ ಪ್ರದೇಶದ ಭೂಮಿ ಬಹಳ ಫಲವತ್ತಾಗಿದೆ. ಪ್ರತಿಯೊಂದು ಹಳ್ಳಿಗೂ ಕೆರೆಗಳಿವೆ, ಕೆಲವಕ್ಕೆ ಎರಡೆರಡು ಕೆರೆಗಳಿವೆ. ಸಾಕಷ್ಟು ಕೊಳವೆ ಬಾವಿಗಳೂ ಇವೆ. ಅಲ್ಲದೆ ವಾರ್ಷಿಕ ಸರಾಸರಿ 35 ಅಂಗುಲಕ್ಕೆ ಕಮ್ಮಿಯಿಲ್ಲದಷ್ಟು ಮಳೆಯೂ ಆಗುತ್ತದೆ; ಕೆಲವೊಮ್ಮೆ, ಉದಾ: 2022ರಂತೆ, 50 ಅಂಗುಲಕ್ಕಿಂತಲೂ ಹೆಚ್ಚು ಮಳೆಯಾಗಿದ್ದೂ ಇದೆ. ಇಲ್ಲಿ ಬೆಳೆಯುವ ಬೆಳೆಗಳಲ್ಲಿ “ಇದಿಲ್ಲ” ಎನ್ನುವಂತಿಲ್ಲ. ಆಹಾರ ಧಾನ್ಯ, ಹಣ್ಣುಗಳು, ತರಕಾರಿ, ಸೊಪ್ಪು, ರೇಷ್ಮೆ ಹೀಗೆ ಸಕಲವೂ ಇದೆ. ತೆಂಗಿನ ತೋಟಗಳೂ ಇವೆ. ಅಷ್ಟೇ ಅಲ್ಲ, ಕರಾವಳಿಯಲ್ಲಿ ಮತ್ತು ಮಲೆನಾಡಿನ ಕೆಲವೆಡೆ ಬೆಳೆಯುವ ಗೋಡಂಬಿ (ಗೇರುಬೀಜ) ಕೂಡ ಇಲ್ಲಿ ಬೆಳೆಯುತ್ತದೆ, ಅದರ ತೋಟಗಳಿವೆ. ಹೈನೋದ್ಯಮ ಸಮೃದ್ಧವಾಗಿದೆ. ಕೋಳಿ ಫಾರಂಗಳಿವೆ. ಬೆಂಗಳೂರಿಗೆ ಹಾಲು ಹಣ್ಣು ಹೂವು ತರಕಾರಿ ಕೋಳಿಮೊಟ್ಟೆ ಇವುಗಳ ಬಹುಪಾಲು ಈ ಪ್ರದೇಶದಿಂದಲೇ ಪೂರೈಕೆ ಆಗುತ್ತದೆ ಎನ್ನುವ ರೈತರು, ಇಂಥ ಸುಭಿಕ್ಷದ ನೆಲವನ್ನು ಭಿಕ್ಷಾಪಾತ್ರೆಯನ್ನಾಗಿ ಮಾಡಹೊರಟಿರುವ ಅಧಿಕಾರಿಗಳು-ರಾಜಕಾರಣಿಗಳು “ಅದೆಂಥ ಹೊಟ್ಟೆಗೆ ಅನ್ನ ತಿನ್ನದ ಜೀವಿಗಳೋ! …” ಎಂದು ಆಕ್ರೋಶಿಸುತ್ತಾರೆ.

ಈ ಜಮೀನುಗಳು ಅವುಗಳ ಮಾಲೀಕರಾದ ರೈತರಿಗೆ ಮಾತ್ರವಲ್ಲದೆ ಅವುಗಳಲ್ಲಿ ದುಡಿಯುವ ಕೃಷಿ ಕಾರ್ಮಿಕರು, ಹೈನೋದ್ಯಮ ಮತ್ತು ಕೋಳಿ ಸಾಕಣೆಯಲ್ಲಿ ದುಡಿಯುವ ಕಾರ್ಮಿಕರು, ಸಾಗಾಣಿಕೆಯನ್ನು ಅವಲಂಬಿಸಿರುವ ನೂರಾರು ವಾಹನ ಮಾಲೀಕರು ಮತ್ತು ಕಾರ್ಮಿಕರು … ಹೀಗೆ ಸಾವಿರಾರು ಜನರಿಗೆ ಜೀವನಾಧಾರವಾಗಿದೆ. ಈಗಾಗಲೇ ತಾಲೂಕಿನ ಸಾವಿರಾರು ಎಕರೆ ಭೂಮಿಯ ಭೂಸ್ವಾಧೀನದಿಂದ ಜೀವನೋಪಾಯ ಕಳೆದುಕೊಂಡಿರುವವರೂ ಸೇರಿದರೆ ಸಾವಿರಾರು ಕುಟುಂಬಗಳ ಲಕ್ಷಾಂತರ ಜನರ ಜೀವನ ಮೂರಾಬಟ್ಟೆಯಾಗಿದೆ, ಇನ್ನೂ ಆಗಲಿದೆ. ಹೋಗಲಿ ಅಂದರೆ, ಇಲ್ಲಿಗೆ ಬರುತ್ತವೆ ಎನ್ನಲಾಗಿರುವ ಕಂಪನಿಗಳಲ್ಲಾದರೂ ಈ ಎಲ್ಲ ಸ್ಥಳೀಯರಿಗೆ ಉದ್ಯೋಗ ನೀಡುತ್ತಾರೇನೋ ಅಂದರೆ, ʼನಮಗೆ ಬೇಕಿರುವ ವಿದ್ಯಾರ್ಹತೆ ಇಲ್ಲʼ ಎಂದೋ ಇನ್ನೇನೋ ನೆಪ ಒಡ್ಡಿ, ಸ್ಥಳೀಯರನ್ನು ಉದ್ಯೋಗದಿಂದ ದೂರವಿಡುತ್ತಾರೆ. ಹಾಗಾಗಿಯೇ ಚನ್ನರಾಯಪಟ್ಣದ ಹೋರಾಟಕ್ಕೆ ಇಷ್ಟು ಗಟ್ಟಿಯಾದ ಬೆಂಬಲ ದಕ್ಕಿ, ಅದು ಇಷ್ಟು ದೀರ್ಘ ಕಾಲ ದಿಕ್ಕು ತಪ್ಪದೆ ದಿಟ್ಟವಾಗಿ ಮುಂದುವರಿಯಲು ಸಾಧ್ಯವಾಗಿದೆ.

ಕೃಷಿ ಯೋಗ್ಯವಲ್ಲ?

ಫಲವತ್ತಾದ ಭೂಮಿ

ಹಿಂದಿನಿಂದಲೂ ಸರ್ಕಾರಗಳು ಮತ್ತು ಕೆಐಎಡಿಬಿ “ಕೃಷಿಯೋಗ್ಯ ಭೂಮಿಯನ್ನು ಕೈಗಾರಿಕೆ ಅಥವಾ ಇನ್ನಿತರ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಲೇ ಬಂದಿವೆ. ಇಷ್ಟು ಫಲವತ್ತಾದ, ಜಲಸಮೃದ್ಧವಾದ, ವಿಭಿನ್ನ ಬೆಳೆ ಬೆಳೆಯುವ ಭೂಮಿ ʼಕೃಷಿಯೋಗ್ಯ ಅಲ್ಲದ್ದುʼ ಅನ್ನುವುದಾದಲ್ಲಿ, ʼಕೃಷಿಯೋಗ್ಯʼ ಭೂಮಿ ಯಾವುದು? ನಗರದ ʼತಾರಸಿ ತೋಟʼಗಳಾ? ಎಂದು ರೈತರು ಕಿಡಿ ಕಾರುತ್ತಾರೆ.

ಈ ಹಿನ್ನೆಲೆಯಲ್ಲಿ, ಹಿಂದೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಪರಿಸರ ತಜ್ಞರಾದ ಆ.ನ.ಯಲ್ಲಪ್ಪ ರೆಡ್ಡಿಯವರ ಒಂದು ತಣ್ಣನೆಯ ಆಕ್ರೋಶದ ಮಾತು ನೆನಪಾಗುತ್ತೆ. ಹಿಂದೆ 1998-2000ದ ಸಮಯದಲ್ಲಿ ಬೆಂಗಳೂರು-ಮೈಸೂರು ಕಾರಿಡಾರ್‌ ಯೋಜನೆಗೆ 20 ಸಾವಿರ ಎಕರೆ ಭೂ ಸ್ವಾಧೀನ ಮಾಡಹೊರಟಿದ್ದ ʼನೈಸ್ʼ ಕಂಪನಿ ಆ ಭೂಮಿಯನ್ನು ʼಬಂಜರು ಭೂಮಿʼ ಎಂದು ರಿಕಾರ್ಡ್‌ ಮಾಡಿಸಿ ಕೊಂಡಿತ್ತು. ಅದನ್ನು ಕುರಿತು ಒಂದು ಚಿಂತನ ಸಭೆಯಲ್ಲಿ ಯಲ್ಲಪ್ಪರೆಡ್ಡಿಯವರು, ಈ ಭೂಮಿಯನ್ನು ʼಬಂಜರುʼ ಎನ್ನುವ ಮನುಷ್ಯ ತನ್ನ ತಾಯಿಯನ್ನೇ ʼಬಂಜೆʼ ಎಂದಂತೆ ಎಂದು ಸಾತ್ವಿಕ ಆಕ್ರೋಶದ ಮಾತನ್ನಾಡಿದ್ದರು. ಈ ಮಾತು ದೇವನಹಳ್ಳಿಯನ್ನು ಬಂಜರಾಗಿಸಲು ಹೊರಟಿರುವವರಿಗೂ ನೂರಕ್ಕೆ ನೂರು ಅನ್ವಯಿಸುತ್ತೆ ಎಂದರೆ ತಪ್ಪಾಗದು.

ಕೊನೆಯಲ್ಲಿ –

ಚನ್ನರಾಯಪಟ್ಣ-ದೇವನಹಳ್ಳಿ ರೈತಾಪಿಯ ಈ ಧೀರೋದಾತ್ತ ಹೋರಾಟ ಸೋಲಬಾರದು, ನಾವದನ್ನು ಸೋಲಗೊಡಬಾರದು. ಅದು ಗೆಲ್ಲಲೇಬೇಕು. ಹಾಗಿದ್ದಲ್ಲಿ ರೈತರ ಅನ್ನದ ಋಣ ಇರುವ ನಾವೆಲ್ಲರೂ ಇದೇ ತಾ. 23ರ ಪ್ರತಿಭಟನೆ ಮತ್ತು ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ, ರೈತರ ಋಣವನ್ನು ಕೊಂಚವಾದರೂ ತೀರಿಸೋಣ ಬನ್ನಿ.

ಸಿರಿಮನೆ ನಾಗರಾಜ್.

ಹೋರಾಟಗಾರರು

More articles

Latest article