ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿ ಮಾಡಲು ಪಕ್ಷ ಭೇದ ಮರೆತು ಕೆಲಸ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನವಲಗುಂದ ವಿದಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮಕ್ಕೆ ಶೀಮತಿ ಫಕ್ಕೀರಮ್ಮ ಭ.ದೊಡ್ಡಗಾಣಿಗೇರ ಸರಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿಸಿದ ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರ ಪುತ್ಥಳಿ ಅನಾವರಣ ಹಾಗೂ ಸರ್ಕಾರದ ವಿವೇಕ ಯೋಜನೆ ಹಾಗೂ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಕೇಂದ್ರ ಆಹಾರ ಮತ್ತು ನಾಗರೀಕ ಸೇವೆ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಧಾರವಾಡದಿಂದ ನವಲಗುಂದ, ರೋಣ, ಗದಗ ಹಾಗೂ ನರಗುಂದ ವರೆಗೆ ಪಾದಯಾತ್ರೆ ಮಾಡಿ ಈ ಯೋಜನೆ ಜಾರಿ ಮಾಡಲು ಸಾಕಷ್ಟು ಹೋರಾಟ ಮಾಡಿದ ಸಂದರ್ಭದಲ್ಲಿ ಎಲ್ಲರೂ ಬೆಂಬಲಿಸಿದ್ದಾರೆ. ಯೋಜನೆ ಬಗ್ಗೆ ನಮಗೂ ಕೂಡ ಬದ್ಧತೆ ಇದ್ದು ಆದಷ್ಟು ಬೇಗ ಯೋಜನೆ ಜಾರಿಗೆ ಕೇಂದ್ರದಿಂದ ಬೇಕಾಗುವ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು.
ಮಹಾದಾಯಿ ನದಿಗೆ ಗೋಡೆ ಕಟ್ಟಲಾಗಿದ್ದು ಅದನ್ನು ತೆರವುಗೊಳಿಸುವ ಕೆಲಸವಾಗಬೇಕು. ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಅದನ್ನು ದೊರಕಿಸಿ ಕೊಡುವ ಕೆಲಸ ಮಾಡೋಣ. ನವಲಗುಂದ ಶಾಸಕರಾದ ಎನ್ ಎಚ್. ಕೋನರೆಡ್ಡಿ ಹಾಗೂ ನಾವು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೇಂದ್ರದ ಪರಿಸರ ಇಲಾಖೆ ಅನುಮತಿ ಪಡೆಯಲು ಅಗತ್ಯ ಕ್ರಮ ವಹಿಸಲು ಮನವಿ ಮಾಡೋಣ ಎಂದರು.
ಮಹಾದಾಯಿ ನಮ್ಮ ಯೋಜನೆಯಾಗಿದ್ದು, ಇದು ರೈತರ ಅನುಕೂಲಕ್ಕಾಗಿದ್ದು, ರೈತರ ವಿಚಾರದಲ್ಲಿ ಯಾರೂ ರಾಜಕಾರಣ ಮಾಡುವುದಿಲ್ಲ. ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧ ಪಟ್ಟಿಲ್ಲ. ಆದರೆ, ಎಲ್ಲ ರಾಜಕೀಯ ಪಕ್ಷಗಳೂ ರೈತನಿಗೆ ಸಂಬಂಧಿಸಿವೆ. ಹೀಗಾಗಿ ರಾಜ್ಯದ ಹಾಗೂ ರೈತರ ಹಿತ ದೃಷ್ಟಿಯಿಂದ ಮಹಾದಾಯಿ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಹೆಬಸೂರ ಗ್ರಾಮದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಹಾಗೂ ನನಗೆ ವ್ಯಯಕ್ತಿವಾಗಿ ಅವಿನಾಭಾವ ಸಂಬಂಧ ಹೊಂದಿದ್ದು ಕಾರಣ ನನ್ನ ತಂದೆ ಎಸ್.ಆರ್. ಬೊಮ್ಮಾಯಿ ಅವರ ಪುತ್ಥಳಿ ಸ್ಥಾಪಿಸಿ ಅನಾವರಣ ಗೊಳಿಸಿದ್ದಕ್ಕೆ ಈ ಬಾಗದ ಹಿರೀಯರಿಗೆ ಹಾಗೂ ಯುವ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸಭೆಯ ಸಾನಿಧ್ಯವನ್ನು ಹೆಬಸೂರ ಗ್ರಾಮದ ಸಿದ್ದಯ್ಯ ಸ್ವಾಮಿಗಳು ವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯತೆಯನ್ನು ನವಲಗುಂದ ಶಾಸಕ ಎನ್. ಹೆಚ್. ಕೋನರಡ್ಡಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಡಾ: ಆರ್.ಬಿ. ಶಿರಿಯಣ್ಣವರ, ಕೆ.ಎಂ.ಎಸ್. ಸದಸ್ಯ ಸುರೇಶ ಬಣವಿ, ಮುಖಂಡರುಗಳಾದ ಗೋಪಣ್ಣ ನಲವಡಿ, ಶಿವಪ್ಪ ಭೂಮಣ್ಣವರ, ವೀರನಗೌಡ ಮರಿಗೌಡ್ರ, ಮೋನಪ್ಪ ಗಡ್ಡಿ, ಸುರೇಶ ಮುದರಡ್ಡಿ, ಚಾಂದುಸಾಬ ನದಾ, ರಾಜು ಸಂಕರಡ್ಡಿ, ಮೌಲಾಸಾಬ ಬಳಗಲಿ, ರಾಮಣ್ಣ ಅಮಡ್ಲ, ಗ್ರಾಮ ಪಂಚಾಯತ ಅಧ್ಯಕ್ಷ ಪ್ರವಿಣ ಹಲಗತ್ತಿ, ಕಿರೆಸೂರ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ಪಾಟೀಲ, ಗ್ರಾ.ಪಂ. ಸದಸ್ಯರುಗಳು, ಕಾಲೇಜು ಸಮಿತಿ ಅಧ್ಯಕ್ಷ ನಾರಾಯಣ ನಲವಡಿ, ಹಾಗೂ ಕಾಲೇಜು ಸಮಿತಿಯ ಸದಸ್ಯರುಗಳು, ಗ್ರಾಮದ ಮುಖಂಡರುಗಳು, ಶಾಲಾ
ಕಾಲೇಜು ವಿದ್ಯಾಥಿರ್ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.