ಡೆಂಗಿ ಜ್ವರ: ಅರಿತು ಸಂಭಾಳಿಸಿಕೊಳ್ಳೋಣ

Most read

ಇತ್ತೀಚೆಗೆ ಪಪಾಯಾ ಎಲೆಯ ರಸ ಕುಡಿದರೆ, ಕಿವಿ-ಡ್ರ್ಯಾಗನ್ ಹಣ್ಣುಗಳನ್ನು ತಿಂದರೆ ಡೆಂಗಿ ಜ್ವರ ಬರುವುದಿಲ್ಲ; ಬಂದವರಿಗೆ ಪ್ಲೇಟ್‍ಲೆಟ್ ಕೌಂಟ್ ಹೆಚ್ಚುವುದೆಂಬ ಸುಳ್ಳು ಮಾಹಿತಿ ಓಡಾಡುತ್ತಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಈ ಬಗೆಗೆ ಗುಣಮಟ್ಟದ ಕ್ಲಿನಿಕಲ್ ಟ್ರಯಲ್‍ಗಳು ನಡೆದಿಲ್ಲ. ಕೆಲವೇ ಸಂಖ್ಯೆಯ ರೋಗಿಗಳ ಮೇಲಿನ ಪರಿಣಾಮವನ್ನು ಆಧರಿಸಿದ ವರದಿಗಳನ್ನು ಸಾರ್ವತ್ರಿಕ ಎನ್ನಲಾಗುವುದಿಲ್ಲ. ನಿಜವಾಗಿ ಪಪ್ಪಾಯಿ ಎಲೆಗಳನ್ನು ಕುದಿಸಿ ಕಷಾಯ ಮಾಡಿ ಕುಡಿದರೆ ರೋಗಿಗೆ ಅಪಾಯವಿದೆ – ಡಾ. ಎಚ್‌ ಎಸ್‌ ಅನುಪಮಾ, ಕವಲಕ್ಕಿ.

ಈಗ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಉಲ್ಬಣಗೊಂಡ ಡೆಂಗಿಯದೇ ಸುದ್ದಿ. ಚುನಾವಣಾ ಜ್ವರದ ಬಳಿಕ ಮತ್ತೊಂದು ಜ್ವರ ಸಾರ್ವಜನಿಕರನ್ನೂ, ವೈದ್ಯಕೀಯ ರಂಗವನ್ನೂ, ಸುದ್ದಿಮನೆಯವರನ್ನೂ ಕಾಯಿಸುತ್ತಿದೆ! ರಾಜಧಾನಿಯಲ್ಲಷ್ಟೇ ಅಲ್ಲ, ಸಣ್ಣಪುಟ್ಟ ಹಳ್ಳಿಯ ಕ್ಲಿನಿಕ್, ಆಸ್ಪತ್ರೆಗಳಲ್ಲೂ ಮಳೆಗಾಲದ ಫ್ಲೂ ಜ್ವರದ ಬದಲು ಶಂಕಿತ ಡೆಂಗಿ ರೋಗಿಗಳೇ ತುಳುಕುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಅರ್ಧ ಜನಸಂಖ್ಯೆ ಡೆಂಗಿ ಸೋಂಕಿಗೊಳಗಾಗುವ ಸಾಧ್ಯತೆಯಿದೆ. ರೋಗಪತ್ತೆ ಮಾಡದೆಯೂ ಲಕ್ಷಣಾಧಾರಿತ ಚಿಕಿತ್ಸೆ ನೀಡುವುದರಿಂದ ನಿಜವಾದ ಡೆಂಗಿ ರೋಗಿಗಳ ಸಂಖ್ಯೆ ತಿಳಿಯದೇ ಹೋಗಿದೆ. ಒಂದು ಅಂದಾಜಿನಂತೆ ವಿಶ್ವಾದ್ಯಂತ ವಾರ್ಷಿಕ 30 ಕೋಟಿ ಜನರಿಗೆ ಡೆಂಗಿ ಸೋಂಕುಂಟಾಗುತ್ತದೆ. 9.6 ಕೋಟಿ ಜನರಿಗೆ ರೋಗಲಕ್ಷಣ ಕಾಣಿಸಿಕೊಳ್ಳುತ್ತದೆ. ಅದರಲ್ಲಿ 70% ಪ್ರಕರಣಗಳು ಏಷ್ಯಾ ಒಂದರಲ್ಲಿಯೇ ಕಾಣಿಸಿಕೊಳ್ಳುತ್ತವೆ! ಇತ್ತೀಚಿನವರೆಗೆ ಜನ ದಟ್ಟಣೆಯ ಪ್ರದೇಶಗಳಲ್ಲಿ ಹರಡುತ್ತಿದ್ದ, ನಗರವಾಸಿಗಳನ್ನು ಹೆಚ್ಚು ಬಾಧಿಸುತ್ತಿದ್ದ ಡೆಂಗಿ ಬರಬರುತ್ತ ಎಲ್ಲೆಡೆ ಹರಡಿದೆ. ಎಲ್ ನಿನೊ ಕಾರಣವಾಗಿ ಹೆಚ್ಚಿದ ಮಳೆ, ಹೆಚ್ಚಿದ ಭೂ ತಾಪಮಾನ, ಹೆಚ್ಚಿದ ತೇವಾಂಶ, ಹೆಚ್ಚಿದ ನಗರೀಕರಣ, ಹೆಚ್ಚಿದ ಜನರ ಚಲನವಲನ-ಗುಂಪುಗೂಡುವಿಕೆ, ಕಡಿಮೆಯಾದ ರೋಗನಿರೋಧಕ ಶಕ್ತಿಗಳು ಸೊಳ್ಳೆಯ ವಂಶಾಭಿವೃದ್ಧಿಯನ್ನೂ, ರೋಗ ಹರಡುವಿಕೆಯನ್ನೂ ವೇಗಗೊಳಿಸಿವೆ. ಸೂಕ್ತ ವೈದ್ಯಕೀಯ ಕಾಳಜಿ, ಚಿಕಿತ್ಸೆ ಸಿಗದೇ ನಲುಗುವವರು; ನಕಲಿ/ದುರಾಶೆಯ ವೈದ್ಯರ ನಂಬಿ ಮೋಸ ಹೋದವರು; ಸಾಲಸೋಲ ಮಾಡಿ ಜೀವವುಳಿಸಿ ಕೊಳ್ಳುವವರು; ಆಪ್ತರ ಉಳಿಸಿ ಕೊಳ್ಳಲಾಗದೇ ಕಳೆದು ಕೊಂಡವರು; ಕಾಯಿಲೆ ಬರದಂತೆ ಮೊದಲೇ ಲೋಟಗಟ್ಟಲೆ ಪಪಾಯಾ ಎಲೆಯ ರಸ ಕುಡಿದು ಹೊಟ್ಟೆ ಹಾಳುಮಾಡಿ ಕೊಳ್ಳುವವರು; ಹುಡುಕಿ ಹುಡುಕಿ ಡ್ರ್ಯಾಗನ್ ಹಣ್ಣು, ಕಿವಿ ಹಣ್ಣು ತಿನ್ನುವವರು; ಸ್ವಯಂ ಚಿಕಿತ್ಸೆ, ಕಾಳಜಿ ಮಾಡಿಕೊಳ್ಳುತ್ತ, ಗೂಗಲ್ ಸಲಹೆಯನ್ನು ನಂಬುತ್ತ, ಆಸ್ಪತ್ರೆಗೆ ಬರುವ ಮೊದಲೇ ಇದ್ದಬದ್ದ ಪರೀಕ್ಷೆ-ಚಿಕಿತ್ಸೆಗಳನ್ನು ಮಾಡಿಕೊಳ್ಳುವವರು – ಮುಂತಾಗಿ ಹಲವು ತರಹದ ಬಾಧಿತ ಗುಂಪುಗಳು ಸೃಷ್ಟಿಯಾಗಿವೆ.

ಇದರ ನಡುವೆ ಸರಿಯಾದ ವೈಜ್ಞಾನಿಕ ತಿಳುವಳಿಕೆ, ಜಾಗೃತಿ ಮಾತ್ರ ರೋಗ ಬರದಂತೆ ತಡೆಯಬಲ್ಲವಾಗಿವೆ.  

ಹೇಗೆ ಬರುತ್ತದೆ?

ಟೋಗಾ ಗುಂಪಿನ ವೈರಸ್ಸಿನಿಂದ ಬರುವ ಕಾಯಿಲೆ ಡೆಂಗಿ. ಏಡಿಸ್ ಗುಂಪಿನ ಸೊಳ್ಳೆಯಿಂದ ಹರಡುತ್ತದೆ. ಈ ಸೊಳ್ಳೆ ವೃದ್ಧಿಯಾಗಲು ಪೂರಕ ವಾತಾವರಣವಿರುವ ಉಷ್ಣವಲಯ, ಸಮಶೀತೋಷ್ಣ ವಲಯದ ದೇಶಗಳಲ್ಲಿ ಇದು ಸಾಮಾನ್ಯವಾಗಿದೆ.

ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ನಡೆಸುವ, ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚುವ, ಮೈಮೇಲೆ ಬಿಳಿ ಪಟ್ಟೆ ಹೊಂದಿರುವ `ಹುಲಿ ಸೊಳ್ಳೆ’ ಏಡಿಸ್ ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. ನೂರು ಮೀಟರಿಗಿಂತ ಹೆಚ್ಚು ದೂರ ಹಾರಲಾರದ ಅದು ಸಣ್ಣಪುಟ್ಟ ನೀರಿನ ನೆಲೆಗಳಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ನಡೆಸುತ್ತದೆ. ಚಿಕುನ್‍ಗುನ್ಯಾ, ಡೆಂಗಿ ಹಾಗೂ ಹಳದಿ ಜ್ವರಗಳ ರೋಗಾಣುಗಳನ್ನೂ ಒಟ್ಟಿಗೇ ಸಾಗಿಸಬಲ್ಲ ವಾಹಕ ಶಕ್ತಿಯ ಏಡಿಸ್ ಸೊಳ್ಳೆಯಿಂದ ಎರಡೆರೆಡು ಕಾಯಿಲೆಗಳು ಒಟ್ಟೊಟ್ಟಿಗೇ ಉಂಟಾಗುವುದಿದೆ.

ಸಂತಾನೋತ್ಪತ್ತಿ ನಡೆಸಲು ಹೆಣ್ಣು ಸೊಳ್ಳೆಗೆ ಪ್ರೋಟೀನ್ ಬೇಕು. ಅದಕ್ಕಾಗಿ `ರಕ್ತಶೋಧ’ ನಡೆಸುತ್ತಿರುತ್ತದೆ. ಡೆಂಗಿ ಜ್ವರ ಬಂದು ನಾಲ್ಕೈದು ದಿನಗಳವರೆಗೆ, ಕೆಲವೊಮ್ಮೆ ಹನ್ನೆರೆಡು ದಿನಗಳವರೆಗೂ ವೈರಸ್ ರೋಗಿಯ ರಕ್ತದಲ್ಲಿರುತ್ತದೆ. ಅಂತಹ ರೋಗಿಯ ರಕ್ತ ಹೀರಿದ ಸೊಳ್ಳೆಯಲ್ಲಿ ವೈರಸ್ ವೃದ್ಧಿಗೊಳ್ಳಲು 8-12 ದಿನ ಬೇಕು. ವಾತಾವರಣದ ಉಷ್ಣತೆ 25-28 ಡಿಗ್ರಿ ಇರಬೇಕು. ವೈರಸ್ ತುಂಬಿಕೊಂಡ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಅವರಿಗೆ ರೋಗ ಹರಡುತ್ತದೆ.

ಒಮ್ಮೆ ಸೊಳ್ಳೆಗೆ ಸೋಂಕಾದರೆ ಸಾಯುವವರೆಗೂ ಡೆಂಗಿ ವಾಹಕವಾಗೇ ಇರುತ್ತದೆ. ಆದರೆ ಮನುಷ್ಯರನ್ನು ಹೊರತುಪಡಿಸಿದರೆ ಸೊಳ್ಳೆಯನ್ನಾಗಲೀ, ಮತ್ಯಾವುದೇ ಜೀವಿಯನ್ನಾಗಲೀ ಡೆಂಗಿ ಬಾಧಿಸುವುದಿಲ್ಲ!

ರೋಗಲಕ್ಷಣ

ಮನುಷ್ಯ ದೇಹವೊಂದು ಅದ್ಭುತ. ಉಷ್ಣತೆಯೇರಿಸಿಕೊಂಡು ರೋಗಾಣುವನ್ನು ಕೊಲ್ಲಲು ದೇಹ ನಡೆಸುವ ರಕ್ಷಣಾತ್ಮಕ ಪ್ರಯತ್ನವೇ ಜ್ವರ. ಡೆಂಗಿ ವೈರಸ್ ಮನುಷ್ಯ ದೇಹದ ವಿವಿಧ ಜೀವಕೋಶಗಳನ್ನು ಪ್ರವೇಶಿಸಿದಾಗ ಅವು ಬಿಡುಗಡೆ ಮಾಡುವ ಸಿಗ್ನಲ್ ಪ್ರೋಟೀನುಗಳು ಮತ್ತು ರಕ್ಷಣಾ ವ್ಯೂಹದ ಪ್ರತಿಕ್ರಿಯೆಗಳು ರೋಗಿಯ ದೇಹದೊಳಗೆ ಅದೃಶ್ಯವಾಗಿ ಘನಘೋರ ಕದನ ನಡೆಸುತ್ತವೆ. ಅದರ ಫಲವಾಗಿ ರೋಗಲಕ್ಷಣಗಳು ಗೋಚರಿಸುತ್ತವೆ.

ಇಲಿಜ್ವರ, ಮಲೇರಿಯಾ, ಫ್ಲೂ, ಝೀಕಾ ಮುಂತಾದ ಸೋಂಕುಗಳಲ್ಲಿಯೂ ಆರಂಭದ ಡೆಂಗಿ ರೋಗಲಕ್ಷಣಗಳು ಕಂಡುಬರುತ್ತವೆ. ಎಂದೇ ರೋಗಪತ್ತೆಯ ಜವಾಬ್ದಾರಿಯನ್ನು ತಜ್ಞರಿಗೆ ಬಿಟ್ಟು ಕೆಲ ಸಾಮಾನ್ಯ ರೋಗಲಕ್ಷಣಗಳನ್ನು ತಿಳಿಯುವುದು ಒಳಿತು:

80% ಜನರಿಗೆ ಸೋಂಕು ಬಂದರೂ ಯಾವುದೇ ರೋಗಲಕ್ಷಣ ಉಂಟಾಗುವುದಿಲ್ಲ. ಆದರೂ ದೈನಂದಿನ ಚಟುವಟಿಕೆಗೆ ತೊಂದರೆ ಕೊಡದ ಸಾಧಾರಣ ಮೈಕೈನೋವು, ಜ್ವರ ಹೀಗೆ ಬಂದು ಹಾಗೆ ಕಡಿಮೆಯಾಗುತ್ತದೆ.

ಉಳಿದವರಲ್ಲಿ ಸೌಮ್ಯ ಜ್ವರ ಹಾಗೂ ತೀವ್ರ ರಕ್ತಸ್ರಾವದ ಜ್ವರ ಎಂಬ ಎರಡು ರೀತಿಗಳಲ್ಲಿ ಡೆಂಗಿ ಬಾಧಿಸುತ್ತದೆ.

15% ಜನರಲ್ಲಿ ರೋಗಲಕ್ಷಣಗಳು ಸೌಮ್ಯ ರೀತಿಯದಾಗಿರುತ್ತವೆ. ಸೊಳ್ಳೆ ಕಚ್ಚಿ ವೈರಸ್ಸು ದೇಹ ಪ್ರವೇಶಿಸಿದ ಒಂದು ವಾರದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಮೈಕೈ ಮುರಿದು ಹೋದಂತೆನಿಸುವಂತಹ (ಬ್ರೇಕ್ ಬೋನ್ ಫಿವರ್) ವಿಪರೀತ ಜ್ವರ (104 ಡಿಗ್ರಿಯಷ್ಟು) ಬರುತ್ತದೆ. ಮೈಕೈ ನೋವು, ತಲೆನೋವು, ವಾಕರಿಕೆ, ಕಣ್ಣುನೋವು, ಸಂದು ನೋವು, ಊದಿದ ದುಗ್ಧ ಗ್ರಂಥಿಗಳು, ಸುಸ್ತು ಆಯಾಸ ಬಾಧಿಸುತ್ತವೆ. ಮುಖ ಕೆಂಪಾಗಿ ಬೆವರಿ ಬೆವರಿ ಜ್ವರ ಬಿಡುತ್ತದೆ. ಹೊಟ್ಟೆಯಲ್ಲಿ ಸಂಕಟವುಂಟಾಗುತ್ತದೆ. ಎಲ್ಲವೂ ಒಂದು ವಾರದ ಹೊತ್ತಿಗೆ ಕಡಿಮೆಯಾಗುತ್ತವೆ. ಆ ವೇಳೆಗೆ ಮೈ ತುರಿಕೆ ಕಾಣಿಸಿಕೊಳ್ಳಬಹುದು.

5% ಜನರಲ್ಲಿ ತೀವ್ರ ತರಹದ ಡೆಂಗಿ ಪ್ರಕಟವಾಗುತ್ತದೆ. ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತದೆ. ಪ್ಲೇಟ್‍ಲೆಟ್, ಬಿಳಿಯ ರಕ್ತಕಣಗಳನ್ನು ಉತ್ಪಾದಿಸುವ ಅಸ್ಥಿಮಜ್ಜೆಯೇ ವೈರಸ್ಸಿನಿಂದ ದಾಳಿಗೊಳಗಾಗುವುದರಿಂದ ರಕ್ತ ಹೆಪ್ಪುಗಟ್ಟಲು ಕಾರಣವಾದ ಪ್ಲೇಟ್‍ಲೆಟ್ ತಯಾರಿ ಕುಸಿಯುತ್ತದೆ. ರಕ್ತನಾಳಗಳಿಂದ ರಕ್ತ-ಪ್ಲಾಸ್ಮಾ ಸೋರಿಕೆಯಾಗುತ್ತದೆ. ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ. ಪಿತ್ತಜನಕಾಂಗ (ಲಿವರ್) ದೊಡ್ಡದಾಗುತ್ತದೆ. ಪಿತ್ತಕೋಶ (ಗಾಲ್ ಬ್ಲಾಡರ್) ಸೋಂಕಿಗೊಳಗಾಗುತ್ತದೆ. ಕರುಳಿನಲ್ಲಿ ಹುಣ್ಣುಗಳಾಗುತ್ತವೆ. ಹೊಟ್ಟೆಯ ಅಂಗಾಂಗಗಳ ಉರಿಯೂತದಿಂದ ಹೊಟ್ಟೆಯಲ್ಲಿ ಹಾಗೂ ಶ್ವಾಸಕೋಶದ ಸುತ್ತ ನೀರು ತುಂಬಿಕೊಳ್ಳುತ್ತದೆ. ಅತಿ ಹೊಟ್ಟೆನೋವು, ಒಂದೇಸಮ ವಾಂತಿ, ಉಸಿರಾಟದ ತೊಂದರೆ, ಮೂಗು ಅಥವಾ ವಸಡುಗಳಿಂದ ರಕ್ತಸ್ರಾವ, ಸುಸ್ತು, ಆತಂಕದ ಮನಸ್ಥಿತಿ, ವಾಂತಿ-ಮಲಗಳಲ್ಲಿ ರಕ್ತ, ಬಾಯಾರಿಕೆ ಮೊದಲಾದ ತಡೆಯಲಾಗದ ಬಾಧೆಗಳು ರೋಗಿಯನ್ನು ಜರ್ಝರಗೊಳಿಸುತ್ತವೆ.

ಎಷ್ಟೋ ಸಲ ಜ್ವರ ಇಳಿದ ಮೇಲೆಯೇ ಈ ಅಪಾಯಕರ ರೋಗಲಕ್ಷಣಗಳು ಕಾಣಿಸಿ ಕೊಳ್ಳುವುದು. ಅವರು ತಕ್ಷಣ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಲೇಬೇಕು.

ಈ 5% ಜನರಲ್ಲೂ ಸೂಕ್ತ ಚಿಕಿತ್ಸೆ ದೊರಕಿದರೆ 99% ರೋಗಿಗಳು ಚೇತರಿಸಿಕೊಳ್ಳುತ್ತಾರೆ. ದುರ್ಬಲ ರೋಗಿಗಳು ಅಥವಾ ಮೊದಲೇ ಬೇರೆ ಕಾಯಿಲೆಯಿಂದ ನರಳುತ್ತಿರುವವರು, ಐದು ವರ್ಷದೊಳಗಿನ ಮಕ್ಕಳಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು. ಬಹು ಅಂಗಾಂಗ ವೈಫಲ್ಯ ಬಂದೆರಗಿ ಸಾವು ಸಂಭವಿಸಬಹುದು. ಮರಣ ಪ್ರಮಾಣ 0.8-2.5%.

ಸಣ್ಣಮಕ್ಕಳನ್ನು ಡೆಂಗಿ ಹೆಚ್ಚೇ ಬಾಧಿಸುತ್ತದೆ. ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ 10 ವರ್ಷ ಮೇಲ್ಪಟ್ಟ ಮಕ್ಕಳಿಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಮಹಿಳೆಯರನ್ನು, ಅಸ್ತಮಾ, ರಕ್ತಹೀನತೆ, ಸಕ್ಕರೆ ಕಾಯಿಲೆ, ಬೊಜ್ಜು ಇರುವವರನ್ನು ತೀವ್ರಸ್ವರೂಪದ ಡೆಂಗಿ ಹೆಚ್ಚು ಬಾಧಿಸುತ್ತದೆ. ಬಸುರಿ ಮಹಿಳೆಗೆ ಡೆಂಗಿ ಬಂದರೆ ಅವಧಿಪೂರ್ವ ಹೆರಿಗೆಯಾಗಬಹುದು. ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೆ ತೊಂದರೆಯಾಗಿ ಅದರ ತೂಕ ಕಡಿಮೆಯಾಗಬಹುದು.

ಡೆಂಗಿ 1, 2, 3, 4 ಹೆಸರಿನ ನಾಲ್ಕು ತಳಿಯ ವೈರಸ್ಸುಗಳಿಂದ ರೋಗವುಂಟಾಗುತ್ತದೆ. ಒಮ್ಮೆ ಒಂದು ತಳಿಯ ವೈರಸ್ಸಿನಿಂದ ಡೆಂಗಿ ಬಂದರೆ ಅದರ ವಿರುದ್ಧ ಜೀವಮಾನ ಪರ್ಯಂತ ರೋಗನಿರೋಧಕ ಶಕ್ತಿ ಬರುತ್ತದೆ. ಆದರೆ ಮತ್ತುಳಿದ ಮೂರು ತಳಿಯ ವೈರಸ್ಸುಗಳಿಂದ ಕಾಯಿಲೆ ಬರಬಹುದು. ಎಂದೇ ಮತ್ತೆಮತ್ತೆ ಸೋಂಕುಂಟಾಗುವ ಸಾಧ್ಯತೆ ಹೆಚ್ಚು. ಮೊದಲನೆಯ ಸಲದ ಸೋಂಕಿಗಿಂತ ಎರಡನೆಯ ಸಲದ್ದು, ನಂತರದ್ದು ಹೆಚ್ಚು ತೀವ್ರವೂ, ಅಪಾಯಕಾರಿಯೂ ಆಗಿರುತ್ತವೆ.

ಚಿಕಿತ್ಸೆ

ಹಲವು ವೈರಸ್ ಕಾಯಿಲೆಗಳಂತೆ ಇದೂ ಕೂಡ ತಂತಾನೇ ಗುಣವಾಗುವ ರೋಗವಾದ್ದರಿಂದ ಕೇವಲ ಲಕ್ಷಣಾಧಾರಿತ ಅಗತ್ಯ ಚಿಕಿತ್ಸೆಯನ್ನಷ್ಟೇ ನೀಡಬೇಕಾಗುತ್ತದೆ. ರೋಗಲಕ್ಷಣಗಳಿಗೆ ಸೂಕ್ತ ಚಿಕಿತ್ಸೆ, ಸುಲಭದಲ್ಲಿ ಜೀರ್ಣವಾಗುವ, ಹೊಟ್ಟೆಗೆ ಹಿತವಾಗುವ ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವನೆ, ಜಲಾಹಾರ/ನೀರು ಸೇವನೆ, ಸಂಪೂರ್ಣ ವಿರಾಮ ಅಗತ್ಯವಾಗಿದೆ. ಸಮರ್ಥ-ಆಪ್ತ ವೈದ್ಯರಲ್ಲಿ ವಿಶ್ವಾಸವಿಟ್ಟು ಚಿಕಿತ್ಸೆ ಪಡೆದರೆ ಡೆಂಗಿಯನ್ನು ದಾಟುವುದು ಸುಲಭ. ತೀವ್ರ ಸ್ವರೂಪದ ಡೆಂಗಿ ಜ್ವರದಲ್ಲಿ ಮಾತ್ರ ರೋಗ ಯಾವ ಹಾದಿ ಹಿಡಿಯುತ್ತದೆ ಎಂದು ಊಹಿಸುವುದು ಕಷ್ಟ. ದೇಹದ ಯಾವುದೇ ಭಾಗವನ್ನಾದರೂ ಅಥವಾ ಎಲ್ಲ ಭಾಗಗಳನ್ನೂ ಒಮ್ಮೆಲೇ ವೈಫಲ್ಯಕ್ಕೆ ದೂಡಬಲ್ಲ ಡೆಂಗಿ ಕಾಯಿಲೆ ಕೆಲವೊಮ್ಮೆ ವೈದ್ಯರ ಅನುಭವ-ನಿರೀಕ್ಷೆಗಳನ್ನೂ ಮೀರಿ ಅನೂಹ್ಯ ಅಪಾಯಕರ ಹಂತ ತಲುಪುತ್ತದೆ. ಪ್ರತಿ ರೋಗಿಯ ದೇಹವೂ ಭಿನ್ನವಾಗಿ ರೋಗಕ್ಕೆ ಪ್ರತಿಕ್ರಿಯಿಸುತ್ತದೆ. ಯಾವುದು ಯಾವಾಗ ಅಗತ್ಯವೋ ಹಾಗೆ ಚಿಕಿತ್ಸಾ ವಿಧಾನ, ಔಷಧಗಳು ನಿರಂತರ ಬದಲಾಗುತ್ತ ಹೋಗುತ್ತವೆ.

ರೋಗದ ತೀವ್ರ, ಅಂತಿಮ ಸ್ಥಿತಿಯ ಅನಿಶ್ಚಿತತೆಯೇ ಘರ್ಷಣೆ, ಪ್ರಯೋಗ, ತಪ್ಪು ಕಲ್ಪನೆಗಳಿಗೂ ಕಾರಣವಾಗಿದೆ.

ವಾಸ್ತವವಾಗಿ ಸೋಂಕು ತಗುಲಿದ ಏಳು ದಿನಗಳ ಬಳಿಕ ತಂತಾನೇ ಪ್ಲೇಟ್‍ಲೆಟ್ ಸಂಖ್ಯೆ ಏರುತ್ತದೆ. ಅದು ತೀರಾ ಕಡಿಮೆಯಾದಲ್ಲಿ ರಕ್ತದಾನ ಮಾಡಿದ ಹಾಗೆ ರಕ್ತದ ಪ್ಲೇಟ್‍ಲೆಟ್ ತೆಗೆದು ಕೊಡಬೇಕಾಗುತ್ತದೆ. ಆದರೆ ಇತ್ತೀಚೆಗೆ ಪಪಾಯಾ ಎಲೆಯ ರಸ ಕುಡಿದರೆ, ಕಿವಿ-ಡ್ರ್ಯಾಗನ್ ಹಣ್ಣುಗಳನ್ನು ತಿಂದರೆ ಡೆಂಗಿ ಜ್ವರ ಬರುವುದಿಲ್ಲ; ಬಂದವರಿಗೆ ಪ್ಲೇಟ್‍ಲೆಟ್ ಕೌಂಟ್ ಹೆಚ್ಚುವುದೆಂಬ ಸುಳ್ಳು ಮಾಹಿತಿ ಓಡಾಡುತ್ತಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಈ ಬಗೆಗೆ ಗುಣಮಟ್ಟದ ಕ್ಲಿನಿಕಲ್ ಟ್ರಯಲ್‍ಗಳು ನಡೆದಿಲ್ಲ. ಕೆಲವೇ ಸಂಖ್ಯೆಯ ರೋಗಿಗಳ ಮೇಲಿನ ಪರಿಣಾಮವನ್ನು ಆಧರಿಸಿದ ವರದಿಗಳನ್ನು ಸಾರ್ವತ್ರಿಕ ಎನ್ನಲಾಗುವುದಿಲ್ಲ. ನಿಜವಾಗಿ ಪಪ್ಪಾಯಿ ಎಲೆಗಳನ್ನು ಕುದಿಸಿ ಕಷಾಯ ಮಾಡಿ ಕುಡಿದರೆ ರೋಗಿಗೆ ಅಪಾಯವಿದೆ. ಅದನ್ನು ಈ ಮೊದಲು ನಾವೆಂದೂ ತಿಂದಿರಲಿಲ್ಲ. ಮಂಗ ತಿನ್ನುವುದ ಕಂಡಿದ್ದೆವಷ್ಟೆ. ಅದರ ಕಹಿಯಿಂದ ಹೊಟ್ಟೆಯುರಿ, ವಾಂತಿ ಹೆಚ್ಚಬಹುದು. ಅಲರ್ಜಿಯೂ ಆಗಬಹುದು.

ಆದರೆ ಅಸ್ಪಷ್ಟ ಮಾಹಿತಿಯ ಎಳೆ ಹಿಡಿದ ಫಾರ್ಮಾ ಕಂಪನಿಗಳು ಪಪಾಯಾ ಎಲೆಗಳ ಸಾರದಿಂದ ತಯಾರಿಸಿದ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಟ್ಟಿವೆ! ಆ ಮಾತ್ರೆಗಳಿಂದಲೇ ಪ್ಲೇಟ್‍ಲೆಟ್ ಸಂಖ್ಯೆ ಹೆಚ್ಚಾಯಿತೆನ್ನಲು ಸಂಶೋಧನಾ ಪುರಾವೆ ಇಲ್ಲವಾದರೂ ಅವೆಷ್ಟು ಜನಪ್ರಿಯವೆಂದರೆ ವೈದ್ಯರು ಬರೆಯಲೇಬೇಕು. ಅವರು ಬರೆಯದಿದ್ದರೆ ರೋಗಿಗಳೇ ಗೂಗಲ್ ನೋಡಿ ತರಿಸಿ ಬಳಸುತ್ತಾರೆ! 

ಹಾಗೆಯೇ ಕಿವಿ ಮತ್ತು ಡ್ರ್ಯಾಗನ್ ಹಣ್ಣು ತಿಂದರೆ ಡೆಂಗಿ ಗುಣವಾಗುತ್ತದೆ/ಮತ್ತೆ ಬಾರದು ಎನ್ನುವುದಕ್ಕೂ ಆಧಾರಗಳಿಲ್ಲ. ಕಪ್ಪು ಬಣ್ಣದ ಮಲವಿಸರ್ಜನೆ ಡೆಂಗಿಯ ಅಪಾಯಕರ ಲಕ್ಷಣಗಳಲ್ಲೊಂದು. ಕಿವಿ, ಡ್ರ್ಯಾಗನ್ ಎಂಬ ಸಣ್ಣಸಣ್ಣ ಬೀಜಗಳಿರುವ ಹಣ್ಣುಗಳು ಭೇದಿಯಾಗುವಂತೆ ಮಾಡುತ್ತವೆ ಮತ್ತು ಡ್ರ್ಯಾಗನ್ ತಿಂದ ಬಳಿಕ ಮಲದ ಬಣ್ಣ ಕೆಂಪು/ಕಂದಾಗಿ ಬದಲಾಗುತ್ತದೆ. ಇವು ರೋಗಲಕ್ಷಣಗಳನ್ನು ಮರೆಮಾಚುವ/ಗೊಂದಲಗೊಳಿಸುವ ಸಾಧ್ಯತೆಗಳೇ ಹೆಚ್ಚು.

ಕಿವಿ ಹಣ್ಣು

ಪಪಾಯಾ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಫ್ಲೇವಿನಾಯ್ಡ್‍ಗಳೂ, ಆಂಟಿ ಆಕ್ಸಿಡೆಂಟ್‍ಗಳೂ ಇವೆ. ಅವು ಎಲ್ಲ ಹಣ್ಣುಗಳಲ್ಲೂ ಇರುತ್ತವೆ. ಹಾಗಾಗಿ ಪಪಾಯಿ ಎಲೆಯ ರಸ ಕುಡಿಯುವುದಕ್ಕಿಂದ ತಾಜಾ ಹಣ್ಣಿನ ರಸ, ಎಳನೀರು, ಶರಬತ್ ಕುಡಿಯುವುದು ರೋಗಿಗಳಿಗೆ ಸಹಕಾರಿಯಾಗಬಹುದು. ಈ ದೃಷ್ಟಿಯಿಂದ ಕಿವಿ, ಡ್ರ್ಯಾಗನ್ ಹಣ್ಣುಗಳು ರೋಗ ಗುಣಪಡಿಸದಿದ್ದರೂ ಅಪಾಯಕಾರಿಯಂತೂ ಅಲ್ಲ ಎನ್ನಬಹುದು.

ತಡೆಗಟ್ಟುವುದು ಹೇಗೆ?

ಡೆಂಗಿ ಬರದಂತೆ ತಡೆಗಟ್ಟಲು ಎರಡು ಮಾರ್ಗಗಳಿವೆ:

ಏಡೀಸ್ ಸೊಳ್ಳೆ ಹೆಚ್ಚದಂತೆ, ಕಚ್ಚದಂತೆ ನೋಡಿ ಕೊಳ್ಳುವುದು.

ರೋಗನಿರೋಧಕ ಲಸಿಕೆ ಅಭಿವೃದ್ಧಿ ಪಡಿಸುವುದು.

ವಾಸಸ್ಥಳದ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೊಳ್ಳೆನಾಶದ ಪ್ರಥಮ ಹೆಜ್ಜೆ. ಬಿಸಾಡುವಾಗ ಎಲ್ಲ ಟೊಳ್ಳು, ಖಾಲಿ ವಸ್ತುಗಳನ್ನು ಬೋರಲಾಗಿಯೇ ಬಿಸಾಡಬೇಕು. ಎಲ್ಲಿಯೇ ನೀರಿಡ  ಬೇಕಾದರೂ ಮುಚ್ಚಬೇಕು. ಸೊಳ್ಳೆ ಕಚ್ಚದಂತೆ ಮೈತುಂಬ ಬಟ್ಟೆ ತೊಡಬೇಕು. ಸೊಳ್ಳೆ ಪರದೆ-ಸೊಳ್ಳೆ ವಿಕರ್ಷಕ ಕ್ರೀಮುಗಳನ್ನು ಬಳಸಬೇಕು. ಏಡಿಸ್ ಸೊಳ್ಳೆಗಳು ರಾತ್ರಿಯೂ ಕಚ್ಚಬಹುದಾದ್ದರಿಂದ ಎಲ್ಲ ಕ್ರಮಗಳನ್ನು ಹಗಲೂ, ರಾತ್ರಿಯೂ ಮುಂದುವರೆಸಬೇಕು. ಡೆಂಗಿ ತೀವ್ರವಾಗಿರುವ ಪ್ರದೇಶಗಳಿಗೆ ಪ್ರಯಾಣ ಮುಂದೂಡ ಬೇಕು. ಭಾರೀ ನೀರು ಸಂಗ್ರಹಾಗಾರಗಳಲ್ಲಿ ಸೊಳ್ಳೆ ಬೆಳೆಯದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳೂ, ಸಾರ್ವಜನಿಕರೂ ಎಚ್ಚೆತ್ತರೆ ಡೆಂಗಿಯಷ್ಟೇ ಅಲ್ಲ, ಸೊಳ್ಳೆಗಳಿಂದ ಹರಡುವ ಇತರ ಕಾಯಿಲೆಗಳಾದ ಚಿಕುನ್‍ಗುನ್ಯಾ, ಮಲೇರಿಯಾ, ಫೈಲೇರಿಯಾ, ಹಳದಿ ಜ್ವರ, ಜಪಾನೀಸ್ ಎನ್ಕೆಫಲೈಟಿಸ್‍ಗಳನ್ನೂ ತಡೆಗಟ್ಟಬಹುದು.

ಯಾವುದೋ ಕಾಯಿಲೆ ಬಂದೆರಗಿದಾಗ ಅದರ ಬಗೆಗೆ, ಚಿಕಿತ್ಸೆ-ಲಕ್ಷಣ-ತಡೆಯುವಿಕೆ ಬಗೆಗೆ ಅವಸರದಲ್ಲಿ ಮಾಹಿತಿ ಹುಡುಕಿ, ತಪ್ಪು ಅಸ್ಪಷ್ಟ ಮಾಹಿತಿ ರಾಶಿಯಿಂದ ಗೊಂದಲಗೊಂಡು, ಅನುಮಾನ-ಭಯಕ್ಕೆ ಒಳಗಾಗುವುದಕ್ಕಿಂತ ಆರೋಗ್ಯವಾಗಿರುವಾಗಲೇ ನಮ್ಮ ದೇಹ ರಚನೆ, ಕಾರ್ಯ ವೈಖರಿಯ ಬಗೆಗೆ ತಿಳಿದು; ಆರೋಗ್ಯಕರ ಆಹಾರ, ನಿದ್ರೆ, ಜೀವನಶೈಲಿ, ಸ್ವಚ್ಛತೆ, ಮನೋಲ್ಲಾಸಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳುವತ್ತ ಗಮನ ಹರಿಸುವುದು ಒಳ್ಳೆಯದಲ್ಲವೆ? ರೋಗ-ಚಿಕಿತ್ಸೆಯ ಚಿಂತೆಯನ್ನು ಆಪ್ತ ವೈದ್ಯರಿಗೆ ಬಿಟ್ಟು, ದೇಹ, ಆರೋಗ್ಯ ಕಾಪಾಡಿಕೊಳ್ಳುವ ಬಗೆಗೆ ಅರಿತು ನಡೆಯುವುದು ಸೂಕ್ತ. ಅಲ್ಲವೆ?

ಡೆಂಗಿ ಒಂದು ನಿರ್ಲಕ್ಷಿತ ಸೋಂಕು. ನಿರ್ಲಕ್ಷಿತ ಯಾಕೆಂದರೆ ಸೊಳ್ಳೆಯಿಂದ ಕಚ್ಚಿಸಿಕೊಳ್ಳುವ ಮಧ್ಯಮ, ಕೆಳವರ್ಗಗಳನ್ನು ಮತ್ತು ಹಿಂದುಳಿದ ಅಥವಾ ಮುಂದುವರೆಯುತ್ತಿರುವ ದೇಶ-ಪ್ರದೇಶಗಳನ್ನು ಇದು ಬಾಧಿಸುತ್ತದೆ. ಈ ಹಣೆಪಟ್ಟಿಯಿಂದ ಡೆಂಗಿ ಹೊರಬಂದು ಲಸಿಕೆ ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ. ಆ ಕುರಿತು ಇನ್ನುಮೇಲೆ ವಿಶ್ವಾದ್ಯಂತ ಸಂಶೋಧನೆ, ಪ್ರಯೋಗಗಳು ನಡೆಯಬೇಕಿದೆ. ಇದುವರೆಗೆ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ಬಳಸುವ ಡೆಂಗಿ ರೋಗನಿರೋಧಕ ಚುಚ್ಚುಮದ್ದು/ಲಸಿಕೆ ಲಭ್ಯವಿಲ್ಲ. ಅಮೆರಿಕ, ಯೂರೋಪಿಯನ್ ಯೂನಿಯನ್ನಿನ ದೇಶಗಳು ಡೆಂಗ್ವ್ಯಾಕ್ಸಿಯಾ (2016), ಕ್ಯುಡೆಂಗಾ (2022) ಎಂಬ ಎರಡು ಲಸಿಕೆ ನೀಡುತ್ತಿವೆ. ಕ್ಯುಡೆಂಗಾವನ್ನು ಬ್ರೆಜಿಲ್, ಇಂಡೋನೇಷ್ಯಾಗಳೂ ಬಳಸುವ ಹಾದಿಯಲ್ಲಿವೆ. ಅವುಗಳ ಪರಿಣಾಮ ಕುರಿತ ಅಧ್ಯಯನ ಆಗಬೇಕಿದೆ. ಲಸಿಕೆಗಳ ಬಗೆಗೆ ವಿಸ್ತೃತ ಸಂಶೋಧನೆ, ತಯಾರಿಕೆ, ಬಳಕೆಯನ್ನು ಫಾರ್ಮಾ ಕಂಪನಿಗಳಿಂದ ವಿಶ್ವ ಆರೋಗ್ಯ ಸಂಸ್ಥೆ ತೆಗೆದುಕೊಂಡು, ಹಕ್ಕುಸ್ವಾಮ್ಯವಿಲ್ಲದೆ ಮನುಷ್ಯರೆಲ್ಲರಿಗೆ ಹಂಚಬೇಕಿದೆ.

ಲಸಿಕೆ, ಚಿಕಿತ್ಸೆಗಳಲ್ಲಿ ಹಕ್ಕುಸ್ವಾಮ್ಯವಿರದ `ಜಾಗತಿಕ ಆರೋಗ್ಯ ಸಮಾಜವಾದ’ ಎಂದಾದರೂ ಬಂದೀತೆಂದು ಆಶಿಸೋಣವೇ?

ಡಾ. ಎಚ್.ಎಸ್. ಅನುಪಮಾ

ಇವರು ಉತ್ತರ ಕನ್ನಡದ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯರಾಗಿದ್ದಾರೆ. ವೃತ್ತಿಯ ಜತೆಗೇ ಸಾಹಿತ್ಯ, ಜನ ಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ

ಈ ಸುದ್ದಿ ಓದಿದ್ದೀರಾ? ಡೆಂಗ್ಯು ತಡೆಗೆ ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

More articles

Latest article