ಕರ್ನಾಟಕದ ಸಂಸದರ ಸಭೆಯನ್ನು ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಂದೊಳ್ಳೆ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದಕ್ಕಾಗಿ, ರಾಜ್ಯ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಒಳ್ಳೆಯ ಪರಂಪರೆ, ರಾಜ್ಯ ಸರ್ಕಾರದ ಸಚಿವರು ಮತ್ತು ಸಂಸದರು ಮುಕ್ತವಾಗಿ ಚರ್ಚೆಯನ್ನು ಮಾಡಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳು ಯಶಸ್ವಿ ಆಗಬೇಕಾದರೆ, ಕೇಂದ್ರ ಮತ್ತು ರಾಜ್ಯ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಾಧ್ಯ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ರಾಜ್ಯ ಸರ್ಕಾರ ಕೇಂದ್ರದಿಂದ ಆಗಬೇಕಾದ ಯೋಜನೆಗಳ ಪ್ರಸ್ತಾವನೆ ಯನ್ನು ಸಭೆಯಲ್ಲಿ ಮಾಡಿದೆ. ಈಗಾಗಲೇ ಅನುಮೋದನೆಗೊಂಡ ಯೋಜನೆಗಳು ಯಾಕೆ ಕುಂಠಿತವಾಗಿ ಸಾಗಿವೆ ಎನ್ನುವ ವಿಷಯಗಳೂ ಸಭೆಯಲ್ಲಿ ಮುಕ್ತವಾಗಿ ಚರ್ಚೆಯಾಗಿವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರವಿದ್ದರೆ ಮಾತ್ರ ಸಂಪೂರ್ಣವಾಗಲು ಸಾಧ್ಯ. ಹಾಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಮನವಾದ ಜವಾಬ್ದಾರಿಯಿದೆ. ರಾಜ್ಯದ ಹಿತದೃಷ್ಟಿಯಿಂದ ಸಂಪೂರ್ಣವಾಗಿ ಸಹಕಾರ ಕೊಡಲು ಸಿದ್ಧರಿದ್ದೇವೆ ಎನ್ನುವ ಮಾತನ್ನು ಹೇಳಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.