ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ

Most read

ಆಂಟಿಗುವಾ: ತವರಿನಲ್ಲಿ ನಡೆಯುತ್ತಿರುವ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ವೆಸ್ಟ್ ಇಂಡೀಸ್ ಕನಸನ್ನು ದಕ್ಷಿಣ ಆಫ್ರಿಕಾ ಭಗ್ನಗೊಳಿಸಿತು. ಮಳೆಯಿಂದಾಗಿ ಅಡಚಣೆಗೆ ಒಳಗಾದ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕಾ ತಂಡ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಮೂರು ವಿಕೆಟ್ ಗಳಿಂದ ಮಣಿಸಿ ಸೆಮಿಫೈನಲ್ ಗೇರಿತು.

ಈ ಪಂದ್ಯದೊಂದಿಗೆ ಗ್ರೂಪ್ 2 ರ ಹಣಾಹಣಿ ಮುಗಿದಿದ್ದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕ ತಂಡಗಳು ಸೆಮಿಫೈನಲ್ ತಲುಪಿವೆ. ಆತಿಥೇಯ ದೇಶಗಳಾದ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಟೂರ್ನಿಯಿಂದ ಹೊರನಡೆದಿವೆ.

ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಇಂದು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಬ್ರೇಜ್ ಶಂಸಿ (3/27) ಮಾರಕ ಬೌಲಿಂಗ್ ನೆರವಿನಿಂದ 135 ರನ್ ಗಳಿಗೆ ಕಟ್ಟಿಹಾಕಿತು. ರೋಸ್ಟನ್ ಚೇಸ್ 42 ಎಸೆತಗಳಲ್ಲಿ 52 ರನ್ ಗಳಿಸಿ ವೆಸ್ಟ್ ಇಂಡೀಸ್ ಗೌರವದ ಮೊತ್ತ ತಲುಪಲು ಕಾರಣರಾದರು.

ಸುಲಭದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ. ಒಂದೇ ಓವರ್ ನಲ್ಲಿ ಆಂಡ್ರೂ ರಸೆಲ್ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ಕ್ವಿಂಟನ್‌ ಡಿ ಕಾಕ್ ಮತ್ತು ಹೆಂಡ್ರಿಕ್ಸ್ ಅವರನ್ನು ಔಟ್ ಮಾಡಿ ಪೆವಿಲಿಯನ್ ಗೆ ಕಳಿಸಿದರು.

ನಂತರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಡಿಎಲ್ ಎಸ್ ಪದ್ಧತಿಯಂತೆ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಅನ್ನು 17 ಓವರ್ ಗಳಿಗೆ ಮೊಟಕುಗೊಳಿಸಿ 123 ರನ್ ಗಳ ಗುರಿ ನೀಡಲಾಯಿತು. ವೆಸ್ಟ್ ಇಂಡೀಸ್ ಬೌಲರ್ ಗಳು ಕರಾರುವಕ್ ಬೌಲಿಂಗ್ ನಡೆಸಿ ಒಂದಾದ ಮೇಲೊಂದರಂತೆ ವಿಕೆಟ್ ಪಡೆಯುತ್ತ ಪಂದವನ್ನು ಜೀವಂತವಾಗಿಟ್ಟಿದ್ದರು. ದಕ್ಷಿಣ ಆಫ್ರಿಕಾದ ಯಾವ ಆಟಗಾರನೂ 30 ರನ್ ಗಡಿ ದಾಟಲಿಲ್ಲ. ಆದರೆ ಸ್ಬಬ್ಸ್ (29), ಕ್ಲಾಸನ್ (22) ಗಳಿಸಿ ಪಂದ್ಯವನ್ನು ತಮ್ಮ ಕಡೆ‌ವಾಲುವಂತೆ ಮಾಡಿದರು.

ಕೊನೆಯಲ್ಲಿ ಹೋರಾಟ ಪ್ರದರ್ಶಿಸಿದ ಮಾರ್ಕೋ ಜಾನ್ಸನ್ 14 ಎಸೆತಗಳಲ್ಲಿ 21 ರನ್ ಗಳಿಸಿ ದಕ್ಷಿಣ ಆಫ್ರಿಕ ತಂಡವನ್ನು ಗೆಲುವಿನ ರೇಖೆ ದಾಟಿಸಿದರು. ಕೊನೆಯ ಓವರ್ ನಲ್ಲಿ 5 ರನ್ ಬೇಕಾಗಿದ್ದಾಗ ಮೊದಲ ಎಸೆತದಲ್ಲೇ ಲಾಂಗ್ ಆನ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಜಾನ್ಸನ್ ವೆಸ್ಟ್ ಇಂಡೀಸ್ ಕನಸನ್ನು ಹಾಳುಗೆಡವಿದರು.

ಇದರೊಂದಿಗೆ ದಕ್ಷಿಣ ಆಫ್ರಿಕ ತಂಡ ಟಿ 20 ಸೆಮಿಫೈನಲ್ ತಲುಪಿದ್ದು, ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದೆ. ಈ ಪಂದ್ಯವನ್ನು ಸೋತಿದ್ದರೆ ದಕ್ಷಿಣ ಆಫ್ರಿಕ ಪಂದ್ಯಾವಳಿಯಿಂದ ಹೊರಹೋಗುತ್ತಿತ್ತು.‌

More articles

Latest article