ನೆನಪು | ಪಂಡಿತ್‌ ರಾಜೀವ ತಾರಾನಾಥರೊಡನೆ ಒಂದು ದಿನ- ರಹಮತ್‌ ತರೀಕೆರೆ

Most read

ನಾವು ಹೋದಾಗ ಗುಹೆಯ ಮುಂದೆ ವಿಶ್ರಮಿಸುತ್ತಿರುವ ಹುಲಿಯಂತೆ, ಆಜಾನುಬಾಹು ರಾಜೀವ್ ಹಾಲಿನಲ್ಲಿ ಪತ್ರಿಕೆ ಓದುತ್ತ ಕುಳಿತಿದ್ದರು. ತುಸು ದೂರದಲ್ಲಿ ಅವರ ಬಲಿಷ್ಠ ನಾಯಿ ಪವಡಿಸಿತ್ತು. ನಮ್ಮನ್ನು ಅಕ್ಕರೆಯಿಂದ ಬರಮಾಡಿಕೊಂಡ ರಾಜೀವ್, ಅಡುಗೋಣೆಯತ್ತ ಕತ್ತುಹೊರಳಿಸಿ `ನೋಡಮ್ಮಾ, ಮಂದಿ ಬಂದಿದ್ದಾರೆ. ಟೀ ಕೊಡು’ ಎಂದರು. ಎದುರು ಗೋಡೆಯ ಮೇಲೆ ಪಂಡಿತ ತಾರಾನಾಥರ ಫೋಟೊ ಇತ್ತು. ಚಹಾಪಾನ ಮಾಡುತ್ತ ತಾರಾನಾಥರ ನೆನಪುಗಳನ್ನು ಮೆಲ್ಲನೆ ಕೆದಕಿದೆ. ಕಾಲಪ್ರವಾಹದಲ್ಲಿ ಎಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಜಾರಿದ ರಾಜೀವ್, ನಿಧಾನವಾಗಿ  ಬಿಚ್ಚಿಕೊಂಡು ಮಾತಾಡಲು ಶುರುಮಾಡಿದರು. 

“ಸಂಗೀತ ನಮ್ಮ ಮನೆಯೊಳಗೆ ಮೊದಲಿಂದಲೂ ಇತ್ತು. ನಾನು ಮೂರು ವರ್ಷಿದ್ದಾಗ ಶುರು ಮಾಡಿದೆ. ಐದು ವರ್ಷ ಆದಾಗ ನಮ್ಮಪ್ಪ ಬಾಖೈದಾ ತಬಲಾಕ್ಕೆ ಹಾಕಿಬಿಟ್ರು. ಗ್ರಾಮೊಫೋನ್ ಹಚ್ಚೋದು ಹೇಳ್ಕೊಟ್ಟಿದ್ರು. `ರಾಜೀವ್ ಪುಟ್ಟಾ! ಇಂಥದ್ದು ಹಾಡ್ಕೊ’ ಅಂತ ಅಬ್ದುಲ್ ಕರೀಂಖಾನರ ರೆಕಾರ್ಡ್ ಕೊಡ್ತಿದ್ರು. ತಾರಾನಾಥರು ಸ್ಫುರದ್ರೂಪಿಗಳು. ಧ್ವನಿ ಬಹಳ ಚಂದ. ಆಕರ್ಷಣೀಯ ರೀತಿಯಲ್ಲಿ ಮಾತಾಡತಿದ್ದರು. ಲೆಕ್ಚರ್ ಮಾಡೋಕೆ ಮುಂಚೆ ಟೇಬಲ್ ಮ್ಯಾಲೆ ಕೂತು ಮೂರು ನಿಮಿಷ ಹಾಡಿಬಿಡ್ತಿದ್ದರು. ಇದು ಅವರ ಶೈಲಿ. ನೋಡೋಕೆ ಹಿಟ್ಲರನ ಅಣ್ಣತಮ್ಮಂದಿರ ಹಾಗಿದ್ದರು. ಆದರೆ ಬ್ಯಾರೇನೆ ಒಳಗಿಂದ. ಮುಖ್ಯ ಏನಂದ್ರೆ ಹಿಂದೂ-ಮುಸ್ಲಿಂ ಭೇದ ಇಲ್ಲ. ನಾವೆಲ್ಲ ಮನುಷ್ಯರು ಅನ್ನೋ ಭಾವನೆಯಲ್ಲಿ ಇರತಾ ಇದ್ರು. ತಬಲಾ ಹುಸೇನ್, ಜಾನ್‍ರತ್ನಂ, ಪದ್ಮನಾಭ ಭಟ್ಟ ಅವರನೆಲ್ಲ ಬೆಳೆಸಿದವರು; ಆಯುರ್ವೇದದಲ್ಲಿ ದೊಡ್ಡ ಹೆಸರು ಮಾಡಿದವರು.’’

ತಾರಾನಾಥರ `ಪ್ರೇಮಾಯತನ’ ಆಶ್ರಮದ ಬಗ್ಗೆ ಕೇಳಿದೆ:

“ತಾರಾನಾಥರು ‘ಪ್ರೇಮಾಯತನ’ ಆಶ್ರಮ ಕಟ್ಟಿದ್ದರು. ಅದನ್ನು ಈ ಸಂಪ್ರದಾಯವಾದಿ ಬ್ರಾಹ್ಮಣರೆಲ್ಲ ‘ಪ್ರೇಮಯಾತನೆ’ ಅಂತ ಲೇವಡಿ ಮಾಡ್ತಿದ್ದರು. ಅದೊಂದು ಆಸ್ಪತ್ರೆ. ಅಲ್ಲಿ ಹುಚ್ಚು ಹಿಡಿದವರು, ಕುಷ್ಠ ಬಂದಿರೋರು, ಸಮಾಜ ಬಾಹಿರರು, ಮದುವೆಯಿಲ್ಲದೆ ಬಸುರಾದವರು ಇರತಾ ಇದ್ರು. ಒಂದು ಪ್ರಸಂಗ ನೆನಪಿಸಿಕೊಂಡರೆ ಇನ್ನೂ ಮೈಯೆಲ್ಲ ಝುಂ ಅಂತದೆ. ನನಗೆ ಐದು ವರ್ಷ ಇರಬಹುದು. ನಮ್ಮಪ್ಪನ ಜತೀಗೆ ತಳಗ ಮಲಕೋತಿದ್ದೆ ವರಾಂಡದೊಳಗ. ಅಲ್ಲಿ ಒಂದು ಕಂದೀಲು ಇರತಿತ್ತು. ಅದರಾಚೆ ಕತ್ತಲು. ಆ ಕತ್ತಲೊಳಗ `ಓಓಓ..’ ಅಂತ ಒಬ್ಬ ಕಿರಚುತಿದ್ದ. ಅವನನ್ನ ಇಬ್ಬರು ಹಿಡಕೊಂಡು ಬಂದ್ರು-ಅಂಥಾ ಹುಚ್ಚ ಅವ್ಞ. ಆಗ ನಮ್ಮಪ್ಪ ನಮ್ಮನೆಲ್ಲ ಎಬ್ಬಿಸಿಬಿಟ್ರು. ‘ಏ! ಕೂಗಬ್ಯಾಡ ಬಾರೋ ಇಲ್ಲಿ, ಮಲ್ಕೊ’ ಅಂತ ಅವನನ್ನ ಕರದು ತಮ್ಮ ಬ್ಲಾಂಕೆಟ್‍ನೊಳಗ ಮಲಗಿಸಿಕೊಂಡು ಬಿಟ್ರು. ಹುಚ್ಚರಿಗೆ ನಿದ್ದಿ ಬರೋದಿಲ್ಲ. ಚಡಪಡಸ್ತಿರ್ತಾರ. ಅವರಿಗೆ ಸ್ವಲ್ಪ ನಿದ್ದಿ ಬಂತಂದ್ರೆ ಗುಣ ಆಗತಾ ಇದೆ ಅಂತರ್ಥ. ಅವನಿಗೆ ನಿದ್ದೆ ಹತ್ತಿಬಿಡ್ತು.’’

`ಸಮಾಜಬಾಹಿರ’ ಆದವರಿಗೆ ಆಶ್ರಯ ಕೊಟ್ಟ ಬಗ್ಗೆ ತುಸು ವಿವರಿಸಬೇಕೆಂದು ಕೇಳಿದೆ. ರಾಜೀವ್ ಹೀಗೆ ವಿವರಿಸಿದರು:

“ಒಮ್ಮೆ ತಾರಾನಾಥರು ಬರ್ತಾ ಇರಬೇಕಾದರೆ, ಒಬ್ಬ ಹೆಣಮಗಳು ಬಂದು ಕಾಲಿಗೆ ಬಿದ್ಲಂತೆ. ಆಗಿನ್ನೂ ಅವರಿಗೆ ಮದುವೆ ಆಗಿದ್ದಿಲ್ಲ. ಆಕೆ ‘ನಾನು ಗರ್ಭಿಣಿ, ನನ್ನ ಬಸರು ತಗಸ್ರೀ ನಿಮ್ಮ ಆಸ್ಪತ್ರೆಯೊಳಗ’ ಅಂದಳು. ಪಂಡಿತರು ‘ಯಾಕಮ್ಮ? ನೀ ತಾಯಾಕ್ತಿದೀಯ’ ಅಂದರು. ಆಗವಳು ‘ನಾನು ವಿಧವೆ. ವಿಧವೆಯಾದವಳ ಮಕ್ಕಳಿಗೆ ಯಾರ ದಿಕ್ಕು?’ ಅಂದಳು. ‘ಅಷ್ಟೇ ಏನು? ಪಂಡಿತ ತಾರಾನಾಥನ ಮಗು ಅಂತ  ನನ್ನ ಹೆಸರು ಹೇಳು. ಬಸರು ತಗಿಯಲ್ಲ. ಹೆರಿಗೆ ಮಾಡಸ್ತೀನಿ. ಬಂದದ್ದು ಬರಲಿ, ಹೆದರಬ್ಯಾಡ. ಮಗೂನ ಹ್ಯಾಗ ಮುಂದ ಬೆಳಸಬೇಕು ನಾನು ಹೇಳ್ತೀನಿ. ನಿನಗ ಮಗು ಬ್ಯಾಡಂದರ ನನಗ ಕೊಟ್ಬಿಡು. ಕೊಲ್ಲಬ್ಯಾಡ’ ಅಂದರು. ಎಂಥ ದೊಡ್ಡಮಾತರಿ ಇವೆಲ್ಲ? ಪಬ್ಲಿಕ್ಕಿನೊಳಗ ಹೀಂಗ ಹೇಳಬೇಕಾದರೆ ಎಷ್ಟು ಧೈರ್ಯ ಇರಬೇಕು? ನೀವು ನಾವು ಹೇಳ್ತೀವೇನು? ಉಚ್ಚೀ ಹೊಯ್ಕೋತೀವಿ ಉಚ್ಚೀ. ನಮ್ಮಪ್ಪಾ ಭಾಳದೊಡ್ಡ ಮನುಷ್ಯಾ. ಸೂರ್ಯನಿಗೆ ದಿಲ್‍ದಾರ್ ಅಂತ ಯಾರೋ ಕರದಾರ. ಅಂತಹ ದಿಲ್‍ದಾರ್ ವ್ಯಕ್ತಿ.’’

ರಾಜೀವ್ ಕೂತಿದ್ದ ಕುರ್ಚಿಯ ಮೇಲ್ಭಾಗದಲ್ಲಿ ಸರಿಯಾಗಿ ಅವರ ತಲೆಯ ಮೇಲೆ, ಅಲಿ ಅಕ್ಬರ್‌ ಖಾನ್‌ರ ಫೋಟೊ ಇತ್ತು. ಸಿಗರೇಟ್ ಸೇದುತ್ತ ತೀಕ್ಷ್ಣನೋಟದಿಂದ ಎತ್ತಲೋ ಗಮನಿಸುತ್ತಿರುವ ಭಂಗಿಯ ಪಟವದು. ಅವರ ಗುರುಗಳ ಬಗ್ಗೆ ಹೇಳಬೇಕೆಂದು ವಿನಂತಿಸಿದೆ. ಕುತ್ತಿಗೆ ಹೊರಳಿಸಿ ಪಟದ ಕಡೆ ನೋಡುತ್ತ ರಾಜೀವ್ ಅಭಿಮಾನದ ದನಿಯಲ್ಲಿ ನುಡಿದರು:

“ಪಂಡಿತ ತಾರಾನಾಥ್ ವಾಸ್ ಮೈ ಬಯಲಾಜಿಕಲ್ ಫಾದರ್; ಇವರು ಈ ಅಲಿ ಅಕಬರ್ ಖಾನ್ ಕೂಡ ನಮ್ಮಪ್ಪ. ಅವರಿಂದಲೇ ಎಲ್ಲ. ನನ್ನ ಪ್ರತಿ ಕಣಕಣವೂ ಅವರೇ. ಅವರಿಲ್ಲದಿದ್ದರೆ ನಾನಿಲ್ಲ. ಅವರಿಂದ ಎಲ್ಲಾ ಪಡಕೊಂಡು ಇವತ್ತು ಅವರ ಸಂಗೀತಕ್ಕ ಮಾಯಿಂದಗಿ ಮಾಡ್ತಿದೇನೆ. ಈ ದುನಿಯಾದೊಳಗ ಅವರಿಲ್ಲ. ಆದರ ಅವರ ಸಂಗೀತ ಅದ. ನನ್ನ ಗುರುಗಳಲ್ಲಿ ಹಿಂದೂ-ಮುಸಲ್ಮಾನ್ ಅಂತ ಭೇದ ಇಲ್ಲವೇ ಇರಲಿಲ್ಲ. ನನ್ನಲ್ಲೂ ಇಲ್ಲ. ಇದು ಈಗ ನಮ್ಮ ಕರಾವಳಿಯಲ್ಲಿ ಇರೋದಕ್ಕೆ ತದ್ವಿರುದ್ಧ. ಅಲ್ಲಿ ಇಬ್ಬರು ಕೂತು ಮಾತಾಡೋ ಹಂಗಿಲ್ಲ. ಆ ರೀತಿಯೊಳಗ ಪಂಡಿತ ತಾರಾನಾಥರಿಗೂ  ಅಲಿ ಅಕಬರ್‌ಖಾನರಿಗೂ ವ್ಯತ್ಯಾಸವಿಲ್ಲ. ತಾರಾನಾಥರು ನಮ್ಮ ಗುರುಗಳನ್ನ ಪ್ರೀತಿಯಿಂದ ಖಾನ್‍ಸಾಬ್ ಅಂತ ಸಂಬೋಧನೆ ಮಾಡ್ತಿದ್ದರು.’’ 

ಮಾತುಕತೆಯಲ್ಲಿ ಅಲಿ ಅಕಬರ್‌ಖಾನರ ಸಿಟ್ಟು, ಸಹಾನುಭೂತಿ, ಪ್ರೀತಿಯನ್ನು ಸೂಚಿಸುವ ಅನೇಕ ಪ್ರಸಂಗಗಳ ಪ್ರಸ್ತಾಪ ಬಂದಿತು. ಒಮ್ಮೆ ಖಾನ್‍ಸಾಹೇಬರು  ಒಂದೇ ದಿನದಲ್ಲಿ ಮೂರು ಕಛೇರಿ ಕೊಟ್ಟರಂತೆ. ಅವರ ಪಕ್ಕ ಕೂತು ತಂಬೂರಿ ನುಡಿಸುತ್ತಿದ್ದ ರಾಜೀವ್,  ಕಛೇರಿಯ ಕೊನೆಯ ಭಾಗಕ್ಕೆ ಬರುವ ಹೊತ್ತಿಗೆ ಅವರ ಹೆಗಲಮೇಲೆ ತಲೆಯಿಟ್ಟು ಮಲಗಿಬಿಟ್ಟಿದ್ದರಂತೆ. ಆಗ ಖಾನ್‍ಸಾಹೇಬರ ಸಿಲ್ಕಿನ ಜುಬ್ಬದ ಮೇಲೆ  ಅಂಗೈ ಅಗಲದಷ್ಟು ಜೊಲ್ಲು ಸುರಿದಿತ್ತಂತೆ. ಈ ಘಟನೆಯನ್ನು ರಾಜೀವ್ ಗುರುಕಾರುಣ್ಯದ ಆತ್ಯಂತಿಕ ರೂಪಕವೆಂಬಂತೆ ಪರಿಭಾವಿಸುತ್ತ ನೆನೆದರು. ಮರಣಕಾಲಕ್ಕೆ ತಮ್ಮನ್ನು ಮಗನೆಂದು ಕರೆದ ಗುರುವಿನ ಬಗ್ಗೆ ಹೇಳುತ್ತ ಭಾವುಕರಾದರು: “ನನ್ನ ತಲೆಗೂದಲಲ್ಲಿ ಕೆಲವು ಇನ್ನೂ ಕಪ್ಪಾಗಿವೆ. ಅಂದ್ರೆ ಯೌವನ ಉಳಿದುಕೊಂಡಿದೆ ಎಂದರ್ಥ. ಇದಕ್ಕೆ ಕಾರಣ ನನ್ನ ಗುರುಗಳು ಬೈದು ಕಲಿಸಿದ ವಿನಯ.’’

ರಾಜೀವ್ ತಾಯಿ ತಮಿಳುನಾಡಿನ ಬೆಸ್ತ ಕುಟುಂಬದವರು; ತಂದೆ ದಕ್ಷಿಣ  ಕನ್ನಡದಿಂದ ವಲಸೆ ಹೋದ ಸಾರಸ್ವತ ಬ್ರಾಹ್ಮಣರು; ಗುರುಗಳು ಮುಸ್ಲಿಮರು; ಹುಟ್ಟಿದ್ದು ಬೆಳೆದಿದ್ದು ಕಲಿತಿದ್ದು ನೌಕರಿ ಮಾಡಿದ್ದು ಹೈದರಾಬಾದ್, ಬೆಂಗಳೂರು, ಕ್ಯಾಲಿಫೋರ್ನಿಯಾ, ಆಡೆನ್, ಮುಂಬೈ, ಪುಣೆ, ಧಾರವಾಡ, ಮೈಸೂರು, ಕೊಲ್ಕತ್ತ ಮುಂತಾದ ಶಹರುಗಳಲ್ಲಿ. ಹೀಗೆ ಕಾಸ್ಮೊಪಾಲಿಟನ್ ಹಿನ್ನೆಲೆಯುಳ್ಳ ಕಾರಣದಿಂದಲೂ ಅವರಿಗೆ ಧರ್ಮ ಮತ್ತು ಜಾತಿಭೇದಗಳ ನಂಬಿಕೆ ಹೋಗಿರಬಹುದು. ಅವರು ಹೇಳಿದರು: “ಇದು ಸೂಫಿ ಅಂತೀರೋ ಏನಂತೀರೋ ಗೊತ್ತಿಲ್ಲ, ಇದೊಂದು ಧೋರಣೆ. ಒಂದು ದಾರಿ. ಅದರಲ್ಲಿ ನಮ್ಮಪ್ಪ ಅದಾರ. ಖಾನ್‍ಸಾಹೇಬರು ಅದಾರ. ಪೆರಿಯಾರ್ ಅದಾರ. ಪೆರಿಯಾರರ ದ್ರಾವಿಡ ಮೂಮೆಂಟ್ ಜೊತೆಗೆ ನಾನು ಸ್ವಲ್ಪ ಸೇರ್ಕೊಂಡೆ. ಈ ಸನಾತನವಾದ ರೆಜೆಕ್ಟ್ ಮಾಡಿದೆ. ಈ ಸನಾತನವಾದದಿಂದ ಎಷ್ಟು ಹಾನಿ ಆಯಿತು? ಆರ್ಯರಿಗೆ ಇಂಡಿಯಾ ಗೊತ್ತಿತ್ತೇನ್ರಿ? ಕೆಳಗೆ ಬರೋದು. ಬರ್ತಾ ಬರ್ತಾ ಹೊಡದು ದಾಸರಾಗಿ ಮಾಡೋದು. ನಾವು ನೀವು ಕೋತಿಗಳು; ಕಿಷ್ಕಿಂಧೆ ಯವರು. `ಹನುಮನುದಿಸಿದ ನಾಡು’ ನಮ್ಮದು. ಆ ಸಂದರ್ಭದಲ್ಲಿ ನಾನು ದ್ರಾವಿಡ ಅಂತ ಸ್ಪಷ್ಟವಾಗಿ ಹೇಳದೋರು ಪೆರಿಯಾರರು.’’

ರಾಜೀವ್ ಧಾರ್ಮಿಕ ಮೂಲಭೂತವಾದ ಹಾಗೂ ಕೋಮುವಾದಗಳನ್ನು ಕಟುವಾಗಿ ಟೀಕಿಸಿಕೊಂಡು ಬಂದವರು. ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಧಾರ್ಮಿಕ ಅಸಹನೆಯ ಬಗ್ಗೆ ಪ್ರಸ್ತಾಪ ಮಾಡಿದೆ. ಅದಕ್ಕವರು ಹೀಗೆಂದರು: “ಜಗಳೂರು ಇಮಾಂ ಅಂತಿದ್ದರು. ಕೇಳಿದಿರಾ? ನಾಲ್ವಡಿ ಕೃಷ್ಣರಾಜ ಒಡೆಯರ್ ಮಿನಿಸ್ಟ್ರಿಯೊಳಗೆ ಎಜುಕೇಶನ್ ಮಿನಿಸ್ಟರ್ ಆಗಿದ್ದೋರು; ಕನ್ನಡವನ್ನು ದಕ್ಷವಾದ ರೀತೀಲಿ ಉಪಯೋಗಿಸಿ ದೋರು. ಇವರ ಬಗ್ಗೆ ಯಾರೂ ಮಾತಾಡೋದೇ ಇಲ್ಲ. ಮೈಸೂರು ಕಟ್ಟದೋರು ಯಾರು ಅಂದರೆ ವಿಶ್ವೇಶ್ವರಯ್ಯ ಅಂತೀವಿ. ಮಿರ್ಜಾ ಇಸ್ಮಾಯಿಲ್ ಅಂತ ಒಬ್ಬ  ಇದ್ದ. ಇವತ್ತು ಮಂಡ್ಯ ಕೊಟ್ಟೋನು ಅವನು. ಬೆಂಗಳೂರು ಮೈಸೂರನ್ನ ಸುಂದರವಾಗಿಸಿದೋನು ಅವನು; ಶಹಾಜಹಾನ್ ಇದ್ದಂಗ. ಜೈಪುರ ಹೈದರಾಬಾದ್ ಎಲ್ಲಿ ಹೋದರೆ ಅಲ್ಲಿ ಅದನ್ನ ಬೆಳಗಿಸಿ ಬಿಡೋನು. ನಾವೆಲ್ಲ ಸೆಕ್ಯುಲರ್. ಅವನ ಮಾತೇ ಎತ್ತೋದಿಲ್ಲ. ಅಮೆರಿಕನ್ ಸಿಟಿಜನ್ ನಾನು. ಈ ದೇಶಕ್ಕೂ ಅಮೆರಿಕಕ್ಕೂ ಇರೋ ಫರಕು  ನೋಡ್ರಿ. ಇಲ್ಲಿ ಒಬ್ಬ ಮುಸ್ಲಿಂ ಬೇಕು ಪ್ರೆಸಿಡೆಂಟ್ ಆಗೋಕೆ. ಅಧಿಕಾರ ಇಲ್ಲ. ಆದರೆ ಇವತ್ತು ಅಮೆರಿಕ ತನ್ನ ಫ್ಯಾಕ್ಟುವಲ್ ಪವರ್ ಒಬ್ಬ ಕರಿಯ ಒಬಾಮಾಗೆ ಕೊಟ್ಟದ. ವಿಚ್  ಇಸ್ ಹಾನೆಸ್ಟ್ ಅಫರ್ಮಿಟಿವ್ ಆಕ್ಟ್.’’ ನಾನು ಅಮೆರಿಕನ್ ಸಿಟಿಜನ್ ಎಂದು ಹೇಳುವಾಗ ಅವರಲ್ಲಿ ಇದ್ದದ್ದು ಹೆಮ್ಮೆಯೋ, ತರತಮಗಳು ತುಂಬಿದ ಭಾರತದ ಬಗ್ಗೆ ಇದ್ದ ತಿರಸ್ಕಾರವೋ ಅರಿಯದಾದೆನು. ಆದರೆ ಅವರು ಬಹಳ ಮೆಚ್ಚುವ ಅಮೆರಿಕದಲ್ಲಿಯೂ ಜನಾಂಗವಾದ ಇದೆ. ಮುಸ್ಲಿಮ್ ದ್ವೇಷವಿದೆ. ಸೈನಿಕ ಬಲದಿಂದ ಇತರೆ ದೇಶಗಳನ್ನು ಆಕ್ರಮಿಸಿಕೊಳ್ಳುವ ವಿಸ್ತರಣವಾದವಿದೆ. ಈ ಕುರಿತು ಪ್ರಸ್ತಾಪ ಮಾಡಿದರೆ ವಿಷಯಾಂತರ ಆದೀತೆಂದು ನಾನು ಪ್ರಶ್ನಿಸಲಿಲ್ಲ. 

ರಾಜೀವ್‌, ರಾಮಾನುಜನ್, ತೇಜಸ್ವಿ, ಲಂಕೇಶ್, ಕಾರ್ನಾಡ್ ಮುಂತಾಗಿ ಬಹುತೇಕ ನವ್ಯ ಲೇಖಕರು. ಜಾತಿಪದ್ಧತಿಯ ಟೀಕಾಕಾರರು. ಇದರ ಜತೆಯಲ್ಲೇ, ಯೂರೋಪಿಯನ್ ಸಮಾಜಗಳಲ್ಲಿರುವ ಮುಕ್ತತೆ ಮತ್ತು ಉದಾರತೆ ಬಗ್ಗೆ ಒಲವುಳ್ಳವರು. ರಾಜೀವ್ ಅವರಿಗೆ ಸಾಹಿತ್ಯ ಸಂಗೀತಗಳಲ್ಲಿದ್ದ ಗತಿಯೂ ತಂದೆಯಿಂದ ಬಂದ ವೈಚಾರಿಕತೆಯೂ ಸೇರಿ, ಜಾತಿ-ಧರ್ಮಗಳ ವಿಷಯದಲ್ಲಿ ಸೀಮೋಲ್ಲಂಘನ ಶಕ್ತಿಯನ್ನು ಕೊಟ್ಟಂತಿತ್ತು. ಹೀಗಾಗಿಯೇ ಅವರ ಮಾತುಕತೆಯಲ್ಲಿ ಸಂಪ್ರದಾಯಸ್ಥರ ಬಗ್ಗೆ ತೀವ್ರವಾದ ವ್ಯಂಗ್ಯ ವಿಡಂಬನೆಗಳು ನುಸುಳುತ್ತಿದ್ದವು. ಇವುಗಳ ಹಿಂದೆ ತಾರಾನಾಥರ `ಧರ್ಮಸಂಭವ’ ಕೃತಿಯಿತ್ತು; ಈ ಕೃತಿ ಬರೆದ ಕಾರಣದಿಂದ ಪಂಡಿತರನ್ನು ಸಂಪ್ರದಾಯವಾದಿಗಳು ನಡೆಸಿಕೊಂಡ ರೀತಿಯ ಬಗ್ಗೆ ಕಹಿ ನೆನಪೂ ಇತ್ತು ಅನಿಸಿತು. ರಾಜೀವ್ ಹೇಳಿದರು:

“ತಿರುಚ್ಚಿಯಲ್ಲಿ ನನ್ನ ಕಲೀಗ್ ಶ್ರೀನಿವಾಸ ಅಯ್ಯಂಗಾರ್ ಅಂತಿದ್ದ. ಪ್ರೊಫೆಸರ್ ಅವ್ಞ.  ಟೇಬಲ್ ಮೇಲೆ ಬಂದರೆ ನನ್ನ ಪತ್ರ ಎಲ್ಲ ಓದ್ತಿದ್ದ. ಮಾತಾಡ್ತ ಕೂಡತಿದ್ದ. ನಾನೇನಾದರೂ ಕೊಡೋಕೆ ಹೋದ್ರೆ ಮುಟ್ತಾ ಇರಲಿಲ್ಲ. ಅವನೊಂದು ಸಲ  ಹೇಳಿದ: `ಮೇಲ್ಕೋಟೆಗೆ ಹೋಗಿದ್ದೆ. ನನ್ನ ಹೆಂಡ್ತಿಗೆ ಪುಳಿಯೋಗರೆ ಮಾಡೋಕೆ ಹೇಳಿದೆ. ಮಾಡಿದ್ಲು. ತಿಂದೆ. ಅಲ್ಲಿನ  ರುಚಿ ಬರಲಿಲ್ಲ. ಏನು ಮಾಡಿದೆ ಗೊತ್ತಾ? ಅದನ್ನು  ಆಕೆಯ ಮುಸುಡಿಯ ಮೇಲೆ ಎರಚಿ, ತೆಪ್ಪದಕೊಳದ ಸುತ್ತ ಅಟ್ಟಿಸಿಕೊಂಡು ಹೋದೆ’ ಅಂದ. ನನಗೆ ಭಾಳ ಸಿಟ್ಟುಬಂತು. `ನನಮಗನೆ, ಜೋಡು ತಗೊಂಡು ಹೊಡದುಬಿಡ್ತೀನಿ. ಪಾಪ! ಆ ಹೆಂಗಸು ಏನೋ ಕಷ್ಟಪಟ್ಟು ಮಾಡಿದಾಳೆ. ತಿನ್ನೋದು ಬಿಟ್ಟು ಅಟ್ಟಿಸಿಕೊಂಡು ಹೋಗಿದ್ಯಾ ಅಂತ ಹೊಡೆಯೋಕೆ ಎದ್ದುಬಿಟ್ಟೆ’ ಎಂದರು. ಅವರ ಪ್ರಕಾರ, ಉತ್ತರ ಭಾರತೀಯರಿಗೆ ಹೋಲಿಸಿದರೆ ತಮಿಳುನಾಡಿನ ಜನ ಹೆಚ್ಚು ಸೆಕ್ಯುಲರ್. ಇದಕ್ಕೆ  ಕಾರಣ ಅವರ ದ್ರಾವಿಡ ಸಂಸ್ಕೃತಿ.

ತಿರುಚ್ಚಿಯಲ್ಲಿ ಅಧ್ಯಾಪಕರಾಗಿದ್ದಾಗ ಬೈಕ್ ಅಪಘಾತದಲ್ಲಿ ಕಾಲು ಮುರಿದುಕೊಂಡ ಪ್ರಸಂಗವನ್ನು ಸ್ಮರಿಸಿಕೊಂಡರು:

“ಮೋಟರ್ ಸೈಕಲ್ ಅಪಘಾತದೊಳಗ ಕಾಲು ಮುರದಾಗ, ಹಾಸಿಗೆಯೊಳಗೆ ಎಲ್ಲಾ. ನನ್ನ ಶಿಷ್ಯರು ಕುಂಡೀ ತೊಳದರು, ಉಚ್ಚೀ ಬಳದರು. ಅವರ್ಯಾರೂ ನನ್ನ ಜಾತಿಯವರಲ್ಲ. ಆಗ ಪ್ರೊ. ಇಸ್ಮಾಯಿಲ್ ಅಂತ ಪ್ರಿನ್ಸಿಪಾಲರೂ ಕಾಲೇಜಿನ ಸೆಕ್ರೆಟರಿ ಜಮಾಲುದ್ದೀನ್ ಸಾಹೇಬರೂ ನೋಡೋಕೆ ಬಂದರು. ಅವರನ್ನು ನೋಡಿ ‘ಯಾವ್ಯಾಗ ಎಷ್ಟೆಷ್ಟು ಸ್ಯಾಲರಿ ಕಟ್ ಮಾಡ್ತೀರಿ ಹೇಳಿಬಿಡ್ರಿ’ ಅಂದೆ. ‘ಕಾಲು ಸರಿಯಿದ್ರೆ ಸ್ಯಾಲರಿ ಕಟ್ ಮಾಡ್ತಿದ್ವಿ. ಆದರೆ ಕಾಲು ಕಟ್‍ ಆಗಿದೆ. ನಿಮಗೆ ಒಬ್ಬ ಸರ್ವೆಂಟ್ ಇಡಬೇಕು. ಅದಕ್ಕೆ ಬಂದಿದೀವಿ’ ಅಂದರು” 

ರಾಜೀವ್ ಮೂಲತಃ ಇಂಗ್ಲಿಶ್ ಸಾಹಿತ್ಯದ ವಿದ್ಯಾರ್ಥಿ. ಉನ್ನತ ಶಿಕ್ಷಣದ ಹಲವಾರು ಸಂಸ್ಥೆಗಳಲ್ಲಿ ಪ್ರಾಧಾಪಕರಾಗಿದ್ದವರು; ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ ಬರೆದವರು. ಅವರೊಮ್ಮೆ ಬೆಂಗಳೂರಿನಲ್ಲಿ ಪಾಶ್ಚಾತ್ಯ ವಿಮರ್ಶೆಯ ಬಗ್ಗೆ ಮಾಡಿದ ಅದ್ಭುತ ಉಪನ್ಯಾಸದ ಬಗ್ಗೆ ಶ್ರೀಧರ್ ಹೇಳಿದ್ದರು. ಮನೋಹರ ಗ್ರಂಥಮಾಲಾದ ‘ಮನ್ವಂತರ’ ಸಂಚಿಕೆಯಲ್ಲಿ ಅವರ ವಿಮರ್ಶೆಯ ಲೇಖನವೊಂದನ್ನು ನಾನು ಓದಿದ್ದೆ. ಆಗದು ಪೂರ್ತ ಅರ್ಥವಾಗಿರಲಿಲ್ಲ. ಬಹಳ ಬಿಗಿಯಾಗಿತ್ತು. ಅದರ ನೆನಪಿನಲ್ಲಿ ‘ಯಾಕೆ ವಿಮರ್ಶೆ ಬರೆಯೋದನ್ನ ನಿಲ್ಲಿಸಿದಿರಿ?’ ಎಂದೆ. ಅವರ ಪ್ರತಿಕ್ರಿಯೆ ಹೀಗಿತ್ತು:

“ಅವೆಲ್ಲ ಮರತಬಿಡ್ರಿ. ಅದರಾಗೆ ಏನೂ ಇಲ್ಲ. ಮದುವೆ ಆಗಬಾರದಿತ್ತು. ಆಗಿಬಿಟ್ಟೆ. ಸಾಹಿತ್ಯಕ್ಕೆ ಬರಬಾರದಿತ್ತು. ಅಕಸ್ಮಾತ್ ಬಂದುಬಿಟ್ಟೆ. ನಾನೂ ಅನಂತಮೂರ್ತಿಯವರೂ ಸಮಕಾಲೀನರು. ಇಂಗ್ಲೀಶ್ ಸಾಹಿತ್ಯ ಓದಿ ಬೆಳದೋರು. ನಾನು ಬೆಂಗಳೂರಲ್ಲಿ ಓದಿದೆ, ಅವರು ಮೈಸೂರಲ್ಲಿ ಓದಿದ್ರು. ಇಬ್ಬರಿಗೂ ಒಂದೇ ದಿವಸ ಕೆಲಸಾ ಸಿಕ್ತು. ಐದಾರು ತಿಂಗಳು ಒಟ್ಟಿಗೆ ಕೆಲಸ ಮಾಡ್ತಿದ್ದಿವಿ. ಆದರೆ ನಾವು ಒಟ್ಟು ಕಳ್ಳರು. ಅಲ್ಲಿ ಇಲ್ಲಿ ಓದಿದ್ದು ತಿರುಗಾಮುರುಗಾ ಬರದು ನಮ್ಮ ಸೈನ್ ಹಾಕಿಬಿಡ್ತೀವಿ. ನವ್ಯದವರಲ್ಲಿ ಕದ್ದಿದ್ದೇ ಹೆಚ್ಚು. ಅವರು ಎಲ್ಲೆಲ್ಲಿ ಕದ್ದಾರೆ ಅಂತ ನನಗ್ಗೊತ್ತು. ಏನು ಸಿಕ್ಕರೂ ಲೋಹಿಯಾ ಹೆಸರು ಹಚ್ಚಿ ಬಿಡೋದು. ಸಂಕೀರ್ಣತೆ ಸಂಕೀರ್ಣತೆ ಅನ್ನೋರು. ಒದೀಬೇಕ್ರೀ. ಈ ಸಂಕೀರ್ಣತೆ ಮೈಸೂರಿನ ಕಾಫಿಹೌಸಲ್ಲಿ ಹುಟ್ಟಿದ್ದು. ನಾನು ಹೆಚ್ಚು ಸಾಹಿತ್ಯ ಓದಿಲ್ಲ. ನನ್ನ ದಾವೆ ಏನೂಂದ್ರೆ ಅನಂತಮೂರ್ತಿನೂ ಹೆಚ್ಚು ಓದಿಲ್ಲ. ನೀವು ಸಾಹಿತ್ಯದ ಪ್ರಶ್ನೆಗಳನ್ನ ಕುರ್ತಕೋಟಿಯಂತಹವರ ಹತ್ತರ ಕೇಳಬೇಕು. ಕನ್ನಡ ಸಾಹಿತ್ಯದ ಇಡೀ ಮ್ಯಾಪ್ ತಿಳಕೊಂಡೋರು ಅವರು. ನನ್ನದೊಂದು ಲೇಖನ ಮನೋಹರ ಗ್ರಂಥ ಮಾಲಾದ ಸಂಪುಟದಲ್ಲಿ ಇನ್ನೂ ಹಸಿಯಾಗಿ ಇದೆ- ಕನ್ನಡ ಸಾಹಿತಿಗಳ  ಕುರಿತು. ಕೆಲವರು ನನ್ನ ಆತ್ಮಕತೆ ಬರೀರಿ ಅಂತ ಗಂಟುಬಿದ್ದಾರ. ಮೊನ್ನೆ ಪ್ರಕಾಶಕರೊಬ್ಬರು ಬಂದಿದ್ರು. ನಿಮ್ಮ ವಿಮರ್ಶೆ ಬರೆಹಗಳನ್ನೆಲ್ಲ ಒಟ್ಟು ಹಾಕಿದೀವಿ, ಪ್ರಕಟಮಾಡ್ತೀವಿ ಅಂದರು. ನೀವು ತರೋ ಆವಶ್ಯಕತೆ ಇಲ್ಲ ಅಂತಂದೆ. ಅದರಲ್ಲಿ ಏನೋ ಒಂದೆರಡು ನೋಟ ಸಿಗಬಹುದು. ಆ ಕಾಲದಲ್ಲಿ ರಾಜೀವ್ ಹೇಳಿದ್ರೆ ಉಂಟು ಇಲ್ಲದಿದ್ರೆ ಇಲ್ಲ ಅಂತ ಭಾಳ ಜಂಬಾ ಇತ್ತು ನನಗೆ. ಆರ್.ಕೆ. ನಾರಾಯಣ- ನಾನು ಅವರನ್ನ ಇಂಗಿನ ನಾರಾಯಣ ಅಂತಿದ್ದೆ- ಬರೆದ ಒಂದು ಬೇಜವಾಬ್ದಾರಿ ಕಾದಂಬರಿ ಓದಿ, ಒಂದು ಬೇಜವಾಬ್ದಾರಿ ಲೇಖನ ಬರೆದಿದ್ದೆ. ಅದನ್ನು ಹರಡಿ ವಿಸ್ತಾರಮಾಡಿ ಜಾನೆಟ್ ಗ್ಯಾನೆಲ್ ಅನ್ನೋಳು ಪಿಎಚ್.ಡಿ., ಪಡೆದಳು. ಈಗ ಅವೆಲ್ಲ ಬುಲ್‍ಶಿಟ್ ಅನಸ್ತದ.’’

`‘ನಿಮ್ಮ ಸಾಹಿತ್ಯ ವಿಮರ್ಶೆಯನ್ನ ಯಾಕೆ ಡಿಸೋನ್ ಮಾಡ್ತೀರಿ?’ʼ

‘`ಸಂಗೀತ ಡಿಸೋನ್ ಮಾಡೋದಿಲ್ಲ. ಆದರೆ ಈ ವಿಮರ್ಶೆಯನ್ನ ಡಿಸೋನ್ ಮಾಡ್ತೇನೆ. ನೋಡ್ರಿ, ನನಗೆ 80 ವರ್ಷ ಆತು. ನನ್ನ ಮುಂದೆ ಸಾಕಷ್ಟು ಟೈಮಿಲ್ಲ. ನಿಮ್ಮಂಥವರು ಬರದದ್ದು ಓದ್ತೀನಿ. ಅದರೊಳಗಿನ ಕನ್ನಡಕ್ಕಾಗಿ ಅಲ್ಲ, ಅಲ್ಲಿರುವ ಸೂಫಿ ನಜರಿಯಾತಿಗೆ. ಈ ಕನ್ನಡದ ಸಾಹಿತ್ಯದಿಂದ ನಾನು ಕಲೀಬೇಕಾಗಿಲ್ಲ. ಸಾಹಿತ್ಯ ಲೋಕದಲ್ಲಿ ನಾನು ಬಹಳ ಕಾಲ ಇರಲಿಲ್ಲ. ಅಷ್ಟುಹೊತ್ತಿಗೆ ಖಾನ್‍ಸಾಹೇಬರ ಹತ್ತಿರ ಸಂಗೀತ ಕಲೀಲಿಕ್ಕೆ ಬಾಂಬೇಕ್ಕೆ ಹೋದೆ. ಬಾಂಬೇಲಿದ್ದಾಗ ಖಾನ್‍ಸಾಹೇಬರು ‘ಮೈ ಕಲ್ಕತ್ತಾ ಜಾರಹಾ ಹೂಂ, ತುಂ ಭೀ ಆಜಾವ್’ ಅಂತ ಸುಲಭವಾಗಿ ಹೇಳಿ, ಕಾಡಿಗೆ ಹೋದಹಾಗೆ ಹೊರಟುಹೋಗಿ ಬಿಟ್ರು. ಮತ್ತೆ ಕಲ್ಕತ್ತಾಕ್ಕೆ ಹೋದೆ..’’

(ಈ ಮಾತುಕತೆಯನ್ನು ನ್ಯಾಯನಿಷ್ಠುರಿಗಳ ಜತೆಯಲ್ಲಿ ಕೃತಿಯಿಂದ ಆಯ್ದುಕೊಳ್ಳಲಾಗಿದೆ)

(ಮುಂದಿನ ಭಾಗವನ್ನು ನಾಳೆ ಕನ್ನಡ ಪ್ಲಾನೆಟ್‌.ಕಾಮ್‌ ನಲ್ಲಿ ಓದಿ)

ರಹಮತ್‌ ತರೀಕೆರೆ

ಹಿರಿಯ ಸಾಹಿತಿ

More articles

Latest article