ರಾಜ್ಯದ ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ಅನುಭವಿ ನಿವೃತ್ತ ಅಧಿಕಾರಿಗಳಿದ್ದಾರೆ ಅವರನ್ನು ಬಿಟ್ಟು ನೀವು ಬಹುರಾಷ್ಟ್ರೀಯ ಕಂಪನಿಗಳನ್ನು ಕರೆಸಿ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಲಹರ್ ಸಿಂಗ್, ಕರ್ನಾಟಕ ಸರ್ಕಾರಕ್ಕೆ ತನ್ನ ಆದಾಯ ಮೂಲ ಹೆಚ್ಚಿಸುವ ಯೋಚನೆ ಇದ್ದರೆ ರಾಜ್ಯದಲ್ಲಿಯೇ ಸಾಕಷ್ಟು ಪ್ರತಿಭಾವಂತರು, ಸರ್ಕಾರವು ಉನ್ನತ ಮಟ್ಟದ ಪ್ರಾಮಾಣಿಕ ನಿವೃತ್ತ ಅಧಿಕಾರಿಗಳ ತಂಡವಿದೆ. ಅದುಬಿಟ್ಟು ದುಬಾರಿ ವಿದೇಶಿ ಕಂಪನಿಗಳ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ವಿದೇಶಿ ಕಂಪನಿಗಳಿಗೆ ನೀಡಿದ್ದು ನೋಡೊದರೆ, ಸರ್ಕಾರದ ಹಣಕಾಸು ಅತ್ಯಂತ ಕಳಪೆ ಸ್ಥಿತಿಯಲ್ಲಿದೆ ಎಂಬುದನ್ನು ಇದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತದೆ. ರಾಜ್ಯದ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಗ್ಯಾರಂಟಿಗಳನ್ನು ರದ್ದುಪಡಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಅಲ್ಲದೆ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾಗಿ ಒಬ್ಬರೇ ಆಗಿರುವ ಎಲ್.ಕೆ. ಅತೀಖ್ ಅವರು ಮುಖ್ಯಮಂತ್ರಿಗಳ ಕಚೇರಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಅವರು ಮುಖ್ಯಮಂತ್ರಿಗಳ ಕಛೇರಿಯು ಮಾಡಿದ ಹಣಕಾಸಿನ ಪ್ರಸ್ತಾವನೆಗಳನ್ನು ವಿಮರ್ಶಾತ್ಮಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಪರಿಶೀಲಿಸಲು ಅವರು ಸಮರ್ಥರಾಗಿದ್ದಾರೆಯೇ ಎಂದು ಖಚಿತವಾಗಿಲ್ಲ? ಸಹಜವಾಗಿ ಇಲ್ಲಿ ಹಿತಾಸಕ್ತಿಯ ಸಂಘರ್ಷ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಆದಾಯ ಹೆಚ್ಚಳಕ್ಕೆ ಸಲಹೆ ಪಡೆಯಲು ಕರ್ನಾಟಕ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗೆ 10 ಕೋಟಿ ರೂ. ನೀಡುವ ಬದಲಾಗಿ, ಅನುಭವಿ ನಿವೃತ್ತ ಅಧಿಕಾರಿಗಳಾದ ಐಎಸ್ಎನ್ ಪ್ರಸಾದ್, ಚಿರಂಜೀವಿ ಸಿಂಗ್, ವಿ.ಬಾಲಸುಬ್ರಹ್ಮಣ್ಯಂ, ಸುಧಾಕರ್ ರಾವ್, ಎಂ.ಆರ್.ಶ್ರೀನಿವಾಸಮೂರ್ತಿ ಮೊದಲಾದ ಪರಿಣಿತರ ತಂಡವನ್ನು ನೇಮಿಸಬಹುದಿತ್ತು ಎಂದು ಸಲಹೆ ನೀಡಿದ್ದಾರೆ.

 
                                    
