ಬಕ್ರೀದ್ ದಿನ ಸ್ಮರಿಸಲೇ ಬೇಕಾದ ಹಾಜಿರಾ ತಾಯಿ..!!

Most read

ಬಕ್ರೀದ್ ಸಂದರ್ಭದಲ್ಲಿ ಎಲ್ಲರೂ ಮಾತನಾಡುವುದು, ಬರೆಯುವುದು ಇಬ್ರಾಹಿಮರ ಅರ್ಪಣಾ ಮನೋಭಾವ ಮತ್ತು ವಚನ ಬದ್ಧತೆಯ ಬಗ್ಗೆ ಮಾತ್ರ. ಆದರೆ, ಬಕ್ರೀದ್ ಎಂದರೆ ಇಬ್ರಾಹಿಂ ಮತ್ತು ಇಸ್ಮಾಯಿಲ್ (ಅ)ರ ಸ್ಮರಣೆ ಮಾತ್ರವಲ್ಲ. ಮಹಾ ತಾಯಿ ಹಾಜಿರಾರ  ಸ್ಮರಣೆಯೂ ಹೌದು – ಇಸ್ಮತ್‌ ಪಜೀರ್‌, ಸಾಮಾಜಿಕ ಹೋರಾಟಗಾರರು.

ಈದುಲ್ ಅದ್ಸ್‌ಹಾ ಅರ್ಥಾತ್ ಬಲಿ ಹಬ್ಬದ ಹಿನ್ನೆಲೆಯಿರುವುದು ಪ್ರವಾದಿ ಇಬ್ರಾಹಿಂ (ಅ) ಅಲ್ಲಾಹನ ಆಜ್ಞೆಯಂತೆ ಪುತ್ರ ಇಸ್ಮಾಯಿಲ್‌ರನ್ನು ಬಲಿ ಕೊಡಲು ಸಿದ್ಧರಾಗುವುದು. ಇಬ್ರಾಹಿಮರ ಅರ್ಪಣಾ ಮನೋಭಾವದಿಂದ ಸಂತೃಪ್ತನಾದ ಅಲ್ಲಾಹನು ” ಅಂದೊಮ್ಮೆ ಮಕ್ಕಳಾಗದಿದ್ದಾಗ ನೀವೊಂದು ಹರಕೆ ಹೊತ್ತಿದ್ದಿರಿ ಇಬ್ರಾಹಿಂ, ನನಗೇನಾದರೂ ಸಂತಾನ ಭಾಗ್ಯವೊದಗಿದರೆ ಆ ಸಂತಾನವನ್ನು ಸೃಷ್ಟಿಕರ್ತನಾದ ಅಲ್ಲಾಹನಿಗಾಗಿ ಸಮರ್ಪಿಸುವೆ”  ಎಂದು. ನಾನು ನರಬಲಿಯನ್ನು ಯಾವತ್ತೂ ಪ್ರೋತ್ಸಾಹಿಸುವುದಿಲ್ಲ.ಅದು ಯಾವತ್ತೂ ಕೂಡದು.ನೀವು ವಚನಕ್ಕೆ ಬದ್ಧರಾಗಿರುತ್ತೀರೋ ಎಂದರಿಯಲು ನಿಮ್ಮ ಮುಂದೆ ಎದುರಿಸಲಸಾಧ್ಯವಾದ ಸವಾಲನ್ನಿಟ್ಟೆ. ನೀವು ಹೇಗೆ ಅದನ್ನು ಎದುರಿಸುವಿರಿ, ನಿಮ್ಮ ಅರ್ಪಣಾ ಭಾವ ಎಷ್ಟು ದೃಢವಾದುದು ಎಂದರಿಯಲು ಇಂತಹ ಕಠಿಣ ಪರೀಕ್ಷೆಯನ್ನೊಡ್ಡಿದೆ. ವಚನ ಬದ್ಧತೆಗೆ ನೀವು ಸಾಟಿಯಿಲ್ಲದ ಮಾದರಿಯಾದಿರಿ, ಇಗೋ ಬಲಿಯರ್ಪಿಸಲೆಂದೇ ಸ್ವರ್ಗದ ಆಡನ್ನು ಕಳುಹಿಸಿರುವೆ ಎಂದು ಸೃಷ್ಟಿಕರ್ತ ಇಬ್ರಾಹಿಮರಿಗೆ ನೀಡಿದ ಶುಭ ಸಂದೇಶದ ವಾರ್ಷಿಕ ಸ್ಮರಣೆಯೇ ಈದುಲ್ ಅದ್‌ಹಾ ಅಥವಾ ಬಕ್ರೀದ್.

ಆದರೆ ಇವೆಲ್ಲದರ ಹಿಂದೆ ಓರ್ವ ಮಹಾತಾಯಿ ಹಾಜಿರಾರ ಸಾಟಿಯಿಲ್ಲದ ಸಹನೆಯಿದೆ.ಬಕ್ರೀದ್ ಸಂದರ್ಭದಲ್ಲಿ ಎಲ್ಲರೂ ಮಾತನಾಡುವುದು, ಬರೆಯುವುದು ಇಬ್ರಾಹಿಮರ ಅರ್ಪಣಾ ಮನೋಭಾವ ಮತ್ತು ವಚನ ಬದ್ಧತೆಯ ಬಗ್ಗೆ ಮಾತ್ರ. 

ಇಬ್ರಾಹಿಮರು ಹಸಿ ಹಸಿ ಬಾಣಂತಿ ಪತ್ನಿ ಹಾಜಿರಾ (ರ)ಮತ್ತು ಹಾಲುಗೂಸು ಇಸ್ಮಾಯಿಲ್ (ಅ) ರನ್ನು ಕಣ್ಣೆಟುಕುವಷ್ಟೂ ದೂರ ಮರಳೋ ಮರಳು ಮತ್ತು ದುರ್ಗಮವಾದ ಪರ್ವತಗಳಿರುವ, ನೀರೆಂದರೇನೆಂದೇ ಅರಿಯದ ನಿರ್ಜನ ಮರುಭೂಮಿ ಮಕ್ಕಾದಲ್ಲಿ ಅಲ್ಲಾಹನ ಆಜ್ಞೆಯಂತೆ ಬಿಟ್ಟು ಹೋದರು. ಸುಮ್ಮನೇ ಊಹಿಸಿದರೂ ಮೈ ಜುಮ್ಮೆನ್ನುತ್ತದೆ. ಹಸಿ ಹಸಿ ಬಾಣಂತಿ ಮತ್ತು ಹಾಲುಗೂಸು ಇಸ್ಮಾಯಿಲ್ ಇದ್ದಿರಬಹುದಾದ ಸನ್ನಿವೇಶ ಅದೆಂತಹದ್ದಿರಬಹುದು. ಹಾಲುಗೂಸು ಇಸ್ಮಾಯಿಲ್ ನೀರಡಿಕೆಯಿಂದ ಎಡೆಬಿಡದೇ ಅಳುತ್ತದೆ. ಸ್ವತಃ ತನಗೇ ಕುಡಿಯಲು ನೀರು ಸಿಗದೇ ಬಳಲಿ ಬೆಂಡಾಗಿದ್ದ ಹಾಜಿರಾ ತಾಯಿಯ ಎದೆ ಹಾಲೂ ಬತ್ತಿರುತ್ತದೆ. ಮಗುವನ್ನು ಹೇಗೆ ಸಂತೈಸಲಿ.. ಎಲ್ಲೆಲ್ಲೂ ನೀರಿನ ಕುರುಹೇ ಇಲ್ಲವಲ್ಲಾ ಎನ್ನುತ್ತಾ ಸಫಾ ಮತ್ತು ಮರ್ವಾ ಎಂಬ ಪರ್ವತಗಳ ಮಧ್ಯೆ ದಾಹಜಲನ್ನರಸುತ್ತಾ ಹಾಜಿರಾ ತಾಯಿ ಒಂದೇ ಸಮನೆ ಅತ್ತಿಂದಿತ್ತ ಓಡುತ್ತಿರುತ್ತಾರೆ. ಮಗು ಇಸ್ಮಾಯಿಲ್ ಅಳುತ್ತಾ ಕಾಲು ಬಡಿದ ಜಾಗದಿಂದ ಸಿಹಿನೀರಿನ ಒರತೆಯೊಂದು ಏಳುತ್ತದೆ.  ಆನಂದ ತುಂದಿಲರಾದ ಹಾಜಿರಾ ತಾಯಿ ತಾನೂ ಕುಡಿದು, ಮಗುವಿಗೂ ಕುಡಿಸುತ್ತಾರೆ.ಮತ್ತೆ ಮತ್ತೆ ಚಿಮ್ಮಿ ಹರಿಯುವ ನೀರನ್ನು ಕಂಡು ಹಾಜರಾ ಝಂ ಝಂ (ನಿಲ್ಲು ನಿಲ್ಲು) ಎನ್ನುತ್ತಾರೆ.ಇಂದಿಗೂ ಮಕ್ಕಾ ತೀರ್ಥಯಾತ್ರೆಗೆ ಹೋದ ಯಾತ್ರಿಕರು ಝಂ ಝಂ ಬಾವಿಯ ನೀರನ್ನು ಕಡ್ಡಾಯವಾಗಿ ತರುತ್ತಾರೆ.

ಅಂದು ಹಾಜಿರಾ ತಾಯಿ ತಂಗಿದ ನಿರ್ಜನ ಮರುಭೂಮಿ ಮುಂದೆ ಒಂದು ನಾಗರಿಕತೆಯ ತೊಟ್ಟಿಲಾಯಿತು. ಜಾಗತಿಕ ನಕಾಶೆಯಲ್ಲಿ ಬೊಟ್ಟು ಮಾಡಿ ಗುರುತಿಸಲ್ಪಡುವ ಮಹಾನಗರಿಯಾಗಿ ಬೆಳೆಯಿತು. ಇಂದು ಜಗತ್ತಿನ ಯಾವ ನಗರಿಯಲ್ಲೂ ನಡೆಯದ ಬೃಹತ್ತಾದ ವಾರ್ಷಿಕ ಹಜ್ ಸಮ್ಮೇಳನ ಮಕ್ಕಾದಲ್ಲಿ ನಡೆಯುತ್ತದೆ. ಅದೇ ಹಾಜಿರಾ ತಾಯಿಯ ಪುಣ್ಯ ಪುತ್ರ ಇಸ್ಮಾಯೀಲರ ಸಂತತಿಯಲ್ಲಿ ಪ್ರವಾದಿ ಮುಹಮ್ಮದ್(ಸ.ಅ)  ಎಂಬ ಮಹಾ ಮಾನವತಾವಾದಿಯ ಜನನವಾಗುತ್ತದೆ.

ಒಂದು ವೇಳೆ ಹಾಜಿರಾ ತಾಯಿ ಆ ನಿರ್ಜನ ಮರುಭೂಮಿಯಲ್ಲಿ  ಹಾಲುಗೂಸಿನೊಂದಿಗೆ ತಂಗಲು ಒಪ್ಪದಿರುತ್ತಿದ್ದರೆ.. ಇಂತಹದ್ದೊಂದು ನಾಗರಿಕತೆ, ಇಂತಹದ್ದೊಂದು ಮಹಾನಗರಿ, ಇಂತಹದ್ದೊಂದು ಚರಿತ್ರೆ ನಿರ್ಮಾಣವಾಗುತ್ತಿರಲಿಲ್ಲ. ಹಾಜಿರಾ ತಾಯಿಯ ತ್ಯಾಗ ಅಷ್ಟಕ್ಕೇ ಮುಗಿಯುವುದಿಲ್ಲ. ಹಾಲು ಗೂಸನ್ನು ಬಿಟ್ಟು ಹೋದ ಪತಿ ಇಬ್ರಾಹಿಂ (ಅ) ಒಂದಷ್ಟು ವರ್ಷಗಳ ಬಳಿಕ ಏಕಾ ಏಕಿ ಬಂದು ಮಗುವನ್ನು ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆ ಧರಿಸಿ ಕಳುಹಿಸು ಎನ್ನುತ್ತಾರೆ.

ಎಲ್ಲಿಗೆ? ಅಲ್ಲಾಹನಿಗಾಗಿ ಬಲಿ ಕೊಡಲು..

ಆಗಲೂ ಮಹಾ ತಾಯಿ ಹಾಜಿರಾ ಪತಿ ಇಬ್ರಾಹೀಮರು ವಚನ ಪಾಲನೆ ಮಾಡಲು ಅಡ್ಡಿಯಾಗುವುದಿಲ್ಲ.ಹಾಜಿರಾ ತಾಯಿಯ ಮನೋಧಾರ್ಡ್ಯ ಎಂತಹದ್ದಿರಬಹುದು ಎಂದು ಊಹಿಸಿ. ತಾಯಿಯೊಬ್ಬಳ ಬಳಿ ನಿನ್ನ ಮಗುವನ್ನು ಬಲಿಕೊಡಬೇಕಿದೆ ಎಂದರೆ ಆಕೆ ಏನೆಂದಾಳು..?

ಒಂದು ಮಹಾ ನಾಗರಿಕತೆಗೆ ನಾಂದಿ ಹಾಡಿದ, ಒಂದು ಮಹಾನಗರಿಯ ಹುಟ್ಟಿಗೆ ಕಾರಣವಾದ,ಒಂದು ಬೃಹತ್ತಾದ ಮನುಷ್ಯ ಸಮೂಹದ ಹುಟ್ಟಿಗೆ ಕಾರಣಳಾದ ಹಾಜಿರಾ ತಾಯಿಯ ಸಹನೆ ಸ್ಮರಣಾರ್ಹವಾದುದು. ಬಕ್ರೀದ್ ಎಂದರೆ ಇಬ್ರಾಹಿಂ ಮತ್ತು ಇಸ್ಮಾಯಿಲ್ (ಅ)ರ ಸ್ಮರಣೆ ಮಾತ್ರವಲ್ಲ. ಮಹಾ ತಾಯಿ ಹಾಜಿರಾರ  ಸ್ಮರಣೆಯೂ ಹೌದು.

ಬಕ್ರೀದ್ ಜೀವಪರ ಮನಸುಗಳಿಗೆಲ್ಲಾ ಶುಭವನ್ನೇ ತರಲಿ..

ಇಸ್ಮತ್ ಪಜೀರ್

ಸಾಮಾಜಿಕ ಹೋರಾಟಗಾರರು

More articles

Latest article