ಮೈಸೂರು: ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಗ್ಯಾರಂಟಿಗಳನ್ನು ಮರುಪರಿಶೀಲಿಸಲಾಗುವುದೇ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯದ ಆದೇಶದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನ್ಯಾಯಾಲಯದ ಆದೇಶದ ಮೇಲೆ ನಾನು ಪ್ರತಿಕ್ರಿಯೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಈ ಪ್ರಕರಣದಲ್ಲಿ ಕಾಂಗ್ರೆಸ್ನದ್ದು ರಾಜಕೀಯ ಷಡ್ಯಂತರ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿ ದೂರು ನೀಡಿರುವವರು ಯಾರು? ಸರ್ಕಾರವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಧ್ವೇಷದ ರಾಜಕಾರಣ ಮಾಡುವುÅದಿಲ್ಲ. ಕಾನೂನು ರೀತಿ ಕೆಲಸ ಮಾಡುವ ಪೋಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಒಪ್ಪಿ ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದರು.
ದೇವೇಗೌಡರ ಕುಟುಂಬವನ್ನು ನಾಶ ಮಾಡುವುದರಲ್ಲಿ ಯಶಸ್ಸು ಕಂಡಿರುವ ಕಾಂಗ್ರೆಸ್ ಈಗ ಯಡಿಯೂರಪ್ಪ ಅವರನ್ನು ನಾಶ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಈ ನೆಲದ ಕಾನೂನನ್ನು ನಾವು ಗೌರವಿಸುತ್ತೇವೆ. ಕಾನೂನು ಹೇಳಿದಂತೆ ನಡೆದುಕೊಳ್ಳುತ್ತೇವೆ ಹಾಗೂ ಕಾನೂನನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ದರ್ಶನ್ ಪ್ರಕರಣದಲ್ಲಿ ಪ್ರಭಾವಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅದು ಕೇವಲ ಸುದ್ದಿ. ನನ್ನನ್ನು ಭೇಟಿಯಾಗಲು ಯಾರೂ ಬಂದಿಲ್ಲ ಎಂದರು. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದರು. ಚಿತ್ರ ನಟ ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಸುತ್ತ ಶಾಮಿಯಾನ ಹಾಕುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರೆಯೆ ನೀಡಿ ಪೋಲೀಸಿನವರು ಏನು ತೀರ್ಮಾನ ಮಾಡಿದ್ದಾರೆ ಎಂದು ಗೊತ್ತಿಲ್ಲ. ಅದನ್ನು ನಮ್ಮನ್ನು ಕೇಳಿ ಮಾಡಿಲ್ಲ ಎಂದರು. ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗಿದೆ ಎಂಬ ಪ್ರಶ್ನೆಗೆ ಸಾಮಾನ್ಯ ಜನರಿಗಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂದರು. ಸಾಮಾನ್ಯ ಜನ ಹೇಗೆ ಹೇಳುವುದನ್ನು ಕೇಳುತ್ತೇವೆ ಎಂದರು.
ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ ಒಂದು ಸ್ಥಾನದಿಂದ 9 ಸ್ಥಾನಗಳನ್ನು ಪಡೆದಿದ್ದೇವೆ. ನಮ್ಮ ನಿರೀಕ್ಷೆಯ ರೀತಿ ಫಲಿತಾಂಶ ಬಂದಿಲ್ಲ. ಮೈಸೂರು ಸೋತಿರುವುದು ಚಾಮರಾಜನಗರ ಲೊಕಸಭಾ ಕ್ಷೇತದಲ್ಲಿ ಗೆದ್ದಿರುವುದು ಸತ್ಯ. ಒಂದರಿಂದ 9 ಸ್ಥಾನಕ್ಕೇರಿದ್ದು, ಶೇ 13% ರಷ್ಟು ಮತಗಳ ಹಂಚಿಕೆ ನಮ್ಮ ಪರವಾಗಿದೆ. ಹಾಗೆಂದು ನಮ್ಮ ಬೆನ್ನು ತಟ್ಟಿಕೊಳ್ಳುತ್ತಿಲ್ಲ. ನಮ್ಮ ಫಲಿತಾಂಶ ಕಳೆದ ಬಾರಿಗಿಂತ ಉತ್ತಮವಾಗಿದೆ. ಆದರೆ ನಿರೀಕ್ಷೆಯಂತೆ ಆಗಿಲ್ಲ ಎಂದರು.
ಮುಂಗಾರು ವಿಫಲವಾಗುತ್ತಿದೆ ಎಂಬ ಬಗ್ಗೆ ಮಾತನಾಡಿ ಇನ್ನೂ 10 ದಿನಗಳಿವೆ. ಕಾದು ನೋಡೋಣ ಮೋಡ ಬಿತ್ತನೆ ಬಗ್ಗೆ ನಾನು ತಜ್ಞನ ಬಳಿ ಚರ್ಚಿಸುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.