ನಾನು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಭದ್ದನಾಗಿದ್ದೇನೆ. ರಾಜ್ಯದ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ನಾನು ರಾಜಕೀಯ ತ್ಯಾಗಕ್ಕೂ ಸಿದ್ದ ಎಂದು ಸಿ ಎಸ್ ನಾಡಗೌಡ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರೂ ಆಗಿರುವ ನಾಡಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಕೆಲ ಕ್ಷೇತ್ರಗಳಿಗೆ ಮಾತ್ರ ಹಣ ಬಿಡುಗಡೆ ಮಾಡಿದೆ. ಅಭಿವೃದ್ಧಿ ಮಾಡಲು ಸರಿಯಾಗಿ ಅನುದಾನ ಸಿಗದೇ ಇದ್ದರೆ ರಾಜಕೀಯ ತ್ಯಾಗಕ್ಕೂ ಸಿದ್ದನಾಗಿದ್ದೇನೆ ಎನ್ನುವ ಮೂಲಕ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕವನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡಬೇಕು. ಮುದ್ದೇಬಿಹಾಳ ಕ್ಷೇತ್ರ ಮಾತ್ರವಲ್ಲ. ಹಿಂದುಳಿದ ಯಾವುದೇ ಕ್ಷೇತ್ರಗಳಿರಲಿ ಸಮರ್ಪಕವಾಗಿ ಸಮತೋಲನ ಮಾಡಿ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಮಾಡದಿದ್ದರೆ ನನಗೆ ಮುಂದೆ ರಾಜಕಾರಣ ಮಾಡುವ ಇಚ್ಛೆ ಇಲ್ಲವೆಂದ ಸಿ ಎಸ್ ನಾಡಗೌಡ ಸ್ಪಷ್ಟಪಡಿಸಿದ್ದಾರೆ.
ಹಿಂದುಳಿದ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಒಂದು ಕ್ಷೇತ್ರಕ್ಕೆ ಅತೀ ಹೆಚ್ಚು ಹಣ ನೀಡಿ ಭಾರೀ ಕೆಲಸ ಮಾಡಲಾಗಿದೆ ಎನ್ನುವುದು. ಬೇರೆಯವರು ಕೇಳಿದಾಗ ಹಣ ಕೊಡದೇ ಇರುವುದು. ಅಭಿವೃದ್ಧಿಯಿಂದ ಕ್ಷೇತ್ರದ ಜನರನ್ನು ವಂಚಿತ ಮಾಡುವಂತಹ ರಾಜಕೀಯ ಮಾಡುವ ಇಚ್ಛೆ ನನಗಿಲ್ಲ ಎಂದು ಸರ್ಕಾರವನ್ನು ಪರೋಕ್ಷವಾಗಿ ದೂರಿದ್ದಾರೆ.