ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಚಿತ್ರನಟ ದರ್ಶನ್ ಮತ್ತು ಅವರ ಸಹಚರರನ್ನು ಇಂದೂ ಸಹ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
ಎಲ್ಲ 17 ಮಂದಿ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಇದುವರೆಗೆ ನಡೆದ ವಿಚಾರಣೆ ಸಂದರ್ಭದಲ್ಲಿ ದರ್ಶನ್, ನನಗೆ ಏನೂ ಗೊತ್ತಿಲ್ಲ. ನನಗೂ ಇದಕ್ಕೂ ಏನೂ ಸಂಬಂಧ ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ಆದರೆ ಪೊಲೀಸರು ಡಿಜಿಟಲ್ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಎಲ್ಲ ಆರೋಪಿಗಳ ಬಾಯಿಬಿಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.
ಸಿಸಿಟಿವಿ ದೃಶ್ಯಗಳು,, ಸಿಡಿಆರ್, ಟವರ್ ಲೊಕೇಷನ್ ಮಾಹಿತಿಗಳನ್ನು ಆರೋಪಿಗಳ ಮುಂದಿಟ್ಟು ಪ್ರಶ್ನೆಗಳ ಸುರಿಮಳೆಯನ್ನೇ ಕೇಳಲಾಗುತ್ತಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ನಿನ್ನೆ ದರ್ಶನ್ ಮತ್ತು ತಂಡವನ್ನು ಕೊಲೆ ನಡೆದ ಪಟ್ಟಣಗೆರೆಯ ಖಾಸಗಿ ಶೆಡ್ ಬಳಿ ಕರೆದೊಯ್ದು ಸ್ಥಳ ಮಹಜರ್ ಮಾಡಲಾಗಿತ್ತು. ಇಂದೂ ಸಹ ಆರೋಪಿಗಳನ್ನು ಹಲವೆಡೆ ಸ್ಥಳ ಮಹಜರ್ ಗೆ ಕರೆದೊಯ್ಯುವ ಸಾಧ್ಯತೆ ಇದೆ.
ರೇಣುಕಾಸ್ವಾಮಿಯ ಕೊಲೆ ಪ್ರಕರಣ ಕಿಡ್ನಾಪ್ ನೊಂದಿಗೆ ಆರಂಭವಾಗುವ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದಲ್ಲಿ ಸ್ಥಳ ಮಹಜರು ಸಾಧ್ಯತೆ ಇದೆ. ರೇಣುಕಾಸ್ವಾಮಿಯನ್ನು ಕರೆತಂದ ಆರೋಪಿ ರಾಘವೇಂದ್ರ ಸೇರಿದಂತೆ ಹಲವು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು.
ಅದೇ ರೀತಿ ರೇಣುಕಾಸ್ವಾಮಿಯ ಮೃತದೇಹವನ್ನು ಎಸೆದ ಸುಮನಹಳ್ಳಿಯ ರಾಜಾಕಾಲುವೆ ಬಳಿಯೂ ಸ್ಥಳ ಮಹಜರ್ ನಡೆಯಬೇಕಿದೆ.
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಉಳಿದ ಎಲ್ಲ ಆರೋಪಿಗಳನ್ನು ಒಂದೇ ಕೋಣೆಯಲ್ಲಿ ಇರಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರ ಗೌಡ ಅವರನ್ನು ಪ್ರತಿ ದಿನ ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ, ಬೆಳಿಗ್ಗೆ ವಾಪಾಸ್ ಕರೆಯಿಸಲಾಗುತ್ತಿದೆ.