ಕೊಪ್ಪಳ: ದೇಶದ ಇತಿಹಾಸ ತಿರುಚಿ ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸಿ, ಕೃಷಿ, ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುತ್ತಿರುವ ಶಕ್ತಿಗಳ ವಿರುದ್ಧ ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಸಂವಿಧಾನ ಮತ್ತು ಅದರ ಆಶಯಗಳ ಉಳಿವಿದೆ ಬೃಹತ್ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ನವದೆಹಲಿಯ ರಾಕೇಶ್ ಟಿಕಾಯತ್ ಹೇಳಿದರು.
ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಪ್ರಾರಂಭವಾದ 10 ನೇ ಮೇ ಸಾಹಿತ್ಯ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶವು ಇಂದು ಕಠಿಣ ಸನ್ನಿವೇಶ ಎದುರಿಸುತ್ತಿದೆ.ಒಂದು ದೇಶ ,ಒಂದು ಚುನಾವಣೆ ಎಂದು ಹೇಳುವ ಮೂಲಕ ಬಹುತ್ವದ ಆಶಯಕ್ಕೆ, ಒಕ್ಕೂಟ ವ್ಯವಸ್ಥೆಗೆ ರಾಜ್ಯಗಳ ಸ್ವಾಯತ್ತತೆ,ಅಸ್ಮಿತೆಗೆ ಧಕ್ಕೆ ತರುವ ಯತ್ನಗಳು ನಡೆದಿವೆ. ದೆಹಲಿಯಲ್ಲಿ ನಡೆಸಿದ 13 ತಿಂಗಳ ಕಾಲದ ರೈತ ಆಂದೋಲನದಲ್ಲಿ ದೇಶದ ಜನತೆ ಹಾಗೂ ಭಾರತ ಸರ್ಕಾರ ಮುಖಾಮುಖಿಯಾಗಿದ್ದವು. ಚಳವಳಿಯಲ್ಲಿ ಯಾವುದೇ ವಿಪಕ್ಷಗಳು ರೈತರು ಯಾವುದೇ ಭಾಷೆ, ಧರ್ಮದ ಆಧಾರದಲ್ಲಿ ಒಂದಾಗದೇ ಕೇವಲ ಕೃಷಿಕರು ಮಾತ್ರ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಸಂಘಟಿತರಾಗಿ ಹೋರಾಡಿದರು.
ದೇಶದ ಜನರನ್ನು ಕಳೆದ ಸುಮಾರು 25 ವರ್ಷಗಳಿಂದ ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ಎಗ್ಗಿಲ್ಲದೇ ಸಾಗಿವೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಿದೆ. ದೇಶದ ಜನತೆ ಇದೆಲ್ಲವನ್ನೂ ಶಾಂತಿಯುತವಾಗಿ ಗಮನಿಸುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ .ಶಿಕ್ಷಣ, ಕೃಷಿ ಕಾರ್ಪೋರೇಟ್ ವಲಯಕ್ಕೆ ಮಾರಾಟ ಮಾಡುತ್ತ. ದೇಶದ ನೈಜ ಇತಿಹಾಸ ಮುಚ್ಚಿಹಾಕಿ ತಮ್ಮದೇ ಆದ ಇತಿಹಾಸ ಬರೆಸಲು ಹೊರಟವರಿಗೆ ದೇಶದ ಆದಿವಾಸಿ,ಬುಡಕಟ್ಟು,ದಲಿತರು ಬೇಕಾಗಿಲ್ಲ ಇದರ ವಿರುದ್ಧ ದೊಡ್ಡ ಜನಾಂದೋಲನದ ಅಗತ್ಯವಿದೆ ಎಂದು ರಾಕೇಶ್ ಟಿಕಾಯತ್ ಹೇಳಿದರು.
ತೆಲಂಗಾಣದ ಕವಿ,ಹೋರಾಟಗಾರ್ತಿ ಜೂಪಕ ಸುಭದ್ರ ದಿಕ್ಸೂಚಿ ಮಾತುಗಳನ್ನಾಡಿ, ದೇಶವು ಯಾರೊಬ್ಬರ ಸರ್ವಾಧಿಕಾರದಲ್ಲಿ ಮುಂದೆ ಸಾಗಬಾರದು, ಧಾರ್ಮಿಕ, ಸಾಮಾಜಿಕ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಪ್ರತಿಯೊಬ್ಬರು ಇದೇ ಧರ್ಮ ಅನುಸರಿಸಿ ಎಂದು ಯಾರೂ ಕೂಡ ನಿರ್ದೇಶನ ಕೊಡಲು ಸಾಧ್ಯವಿಲ್ಲ. ಅನೇಕ ದಮನಕಾರಿ ಪ್ರಕ್ರಿಯೆಗಳ ಮಧ್ಯೆಯೂ ಎದೆಗುಂದದ ಈ ದೇಶದ ರೈತರು ಪ್ರಭುತ್ವದ ವಿರುದ್ಧ ವರ್ಷಗಟ್ಟಲೇ ಹೋರಾಡಿದ್ದು,ದೇಶದ ಜನಸಾಮಾನ್ಯರಲ್ಲಿನ ರೋಷಕ್ಕೆ ಸಾಕ್ಷಿಯಾಗಿದೆ. ನಮ್ಮ ಯಲ್ಲಮ್ಮ,ಹುಲಿಗೆಮ್ಮ,ದುರ್ಗಮ್ಮ ದೇವರುಗಳನ್ನು ಅಲಕ್ಷಿಸಿ.ತಾವು ಪೂಜಿಸುವವರು ಮಾತ್ರ ದೇವರು ಎಂದು ಬಿಂಬಿಸುವುದು ಆರ್ ಎಸ್ ಎಸ್ ನ ಮನೋಧರ್ಮವಾಗಿದೆ.ಸಾಹಿತ್ಯ ಎನ್ನುವುದು ಜನಪರವಾಗಿರಬೇಕು ಎಂಬ ಆಶಯದ ಮೇ ಸಾಹಿತ್ಯ ಮೇಳ ನಡೆಯುತ್ತಿರುವುದು ಸಂತಸ ಎಂದರು.
ಕೊಂಕಣಿ ಕವಿ,ಹೋರಾಟಗಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪಣಜಿಯ ದಾಮೋದರ ಮೌಜೋ ಮಾತನಾಡಿ,ಸಂವಿಧಾನವು ನಾವು ಪ್ರತಿಯೊಬ್ಬರಿಗೂ ಸೇರಿದ್ದಾಗಿದೆ. ಜಲಾಲುದ್ದೀನ್ ರೂಮಿ ಹೇಳಿದ ಹಾಗೆ ಹೃದಯದಿಂದ ಬಂದ ಮಾತು,ಸಾಹಿತ್ಯ ಸರಳವಾಗಿ ಮತ್ತೊಬ್ಬರ ಎದೆಗೆ ದಾಟುತ್ತವೆ. ಆದರೆ ಇತರರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳದವರು “ಮನ್ ಕಿ ಬಾತ್ ” ಮಾತುಗಳನ್ನಾಡುತ್ತಿರುವುದು ಕೃತ್ರಿಮ ನಟನೆಯಾಗಿದೆ. ಸಮಾಜದ ಕೆಲವರನ್ನು ತಮ್ಮ ರಾಜಕೀಯಕ್ಕಾಗಿ ದಾರಿ ತಪ್ಪಿಸುವ ಕಾರ್ಯಗಳು ನಡೆಯುತ್ತಿವೆ.ಸಾಹಿತಿಗಳು,ಪತ್ರಕರ್ತರು ಮುಕ್ತವಾಗಿ ಬರೆಯುವ, ಮಾತನಾಡುವ ಹಕ್ಕುಗಳನ್ನು ಕಸಿಯಲಾಗುತ್ತಿದೆ. ನರೇಂದ್ರ ಧಾಬೋಲ್ಕರ್, ಗೋವಿಂದ ಪಾನ್ಸರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗಳಾಗಿವೆ.ಕೇರಳದ ಮಾತೃಭೂಮಿ ಪ್ರಕಾಶನ ಇಂದು ಬೆದರಿಕೆ ಎದುರಿಸುತ್ತಿದೆ.ಮಹಿಳೆಯ ಬಗ್ಗೆ ಕೇವಲ ತೋರಿಕೆಯ ಅನುಕಂಪವಿದೆ.ನಿಜವಾದ ಸಹಾನುಭೂತಿ ಇಲ್ಲವಾಗಿದೆ. ಅ ಬಗ್ಗೆ ಅಂತಹ ಶಕ್ತಿಗಳಲ್ಲಿ ಕೊಂಚವೂ ಪಾಶ್ಚಾತ್ತಾಪ ಇಲ್ಲವಾಗಿರುವುದು ದುರಂತವಾಗಿದೆ.ಮಾನವ ಪ್ರಜ್ಞೆ,ಮಾನವ ಹಕ್ಕುಗಳಿಗೆ ನೇರವಾಗಿ ಧಕ್ಕೆಯಾಗಿದೆ. ಸೌಹಾರ್ದ,ತ್ಯಾಗ ,ಕಲೆ ,ಸಂಸ್ಕೃತಿ ಹಾಗೂ ನೈತಿಕತೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಬೇಕು.ಬರಹಗಾರರು,ಕವಿಗಳು ಕಲಿಗಳಾಗಿಯೂ ಕೂಡ ಸಮಾಜದ ಸ್ವಾಸ್ಥ್ಯಕ್ಕಾಗಿ ಹೋರಾಡುವ ಅಗತ್ಯವಿದೆ ಎಂದರು.
ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಪ್ರ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ಸಂವಿಧಾನವನ್ನು ಮುರಿಯುತ್ತೇವೆ ಎನ್ನುವ ಜನವಿರೋಧಿಗಳಿಗೆ ಮೇ ಸಾಹಿತ್ಯ ಮೇಳ ಸ್ಪಷ್ಟ ಎಚ್ಚರಿಕೆಯ ಮಹಾಸಂದೇಶ ನೀಡುತ್ತಿದೆ.ಸಂವಿಧಾನ ಉಳಿವಿಗಾಗಿ ಎರಡನೇ ಸ್ವಾತಂತ್ರ್ಯ ಆಂದೋಲನಕ್ಕೆ ನಾವೆಲ್ಲ ಅಣಿಯಾಗಬೇಕಾಗಿದೆ.ಗೋಮುಖ ವ್ಯಾಘ್ರಗಳಾಗಿ ಮುಖವಾಡ ಧರಿಸಿರುವವರ ದದ್ದುಳಿತವನ್ನು ನಿಲ್ಲಿಸಬೇಕಾಗಿದೆ.ಭಾರತ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದು ಅಪಾಯದಲ್ಲಿದೆ. ಜವಾಬ್ದಾರಿಯಿಂದ ಜನರಿಂದ ಮತ ಪಡೆದವರು ಸಂವಿಧಾನಬದ್ಧವಾಗಿ ಸಮಸ್ತ ಜನರಿಗೆ ರಾಜಕೀಯ,ಆರ್ಥಿಕ,ಸಾಮಾಜಿಕ ನ್ಯಾಯ ಕೊಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದವರು, ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರೂ ಕೂಡ ಮಹಿಳೆಯರಿಗೆ ಶೇ.33 ರ ಮೀಸಲು ಕೊಡಲು ಸಾಧ್ಯವಾಗದಿರುವುದು ಅವರ ಗೋಸುಂಬೆತನಕ್ಕೆ ಸಾಕ್ಷಿಯಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಮಾನತೆಯ ಆಶಯಕ್ಕೆ ಈಗ ಸಂಪೂರ್ಣವಾಗಿ ಧಕ್ಕೆ ಬಂದಿದೆ.ಆಳುವ ಭಾರತ ಸರ್ಕಾರವು ದೇಶದ ವಿಮಾನ ನಿಲ್ದಾಣಗಳು, ಬಂದರುಗಳನ್ನು, ಜೀವ ವಿಮಾ ನಿಗಮಗಳು ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳನ್ನು ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿರುವವರಿಗೆ ದೇಶದ ಜನ ಪಾಠ ಕಲಿಸಬೇಕು.ಅಸಮಾನತೆಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ಬಯಸುವವರಿಗೆ ಜನ ಬೆಂಬಲಿಸಬಾರದು ಎಂದರು.ವಿವಿಧ ಧರ್ಮಗಳು ಭ್ರಾತೃತ್ವದಿಂದ ಜೀವನ ನಡೆಸುತ್ತಿರುವ ಬಹುತ್ವದ ಭಾರತ ಇದಾಗಿದೆ.ಎಲ್ಲಾ ಮತ ಧರ್ಮಗಳಿಗೂ ಸಮಾನ ಹಕ್ಕು,ಅವಕಾಶಗಳಿವೆ ಎಂದು ಸುಪ್ರೀಂ ಕೋರ್ಟು ಅನೇಕ ಆದೇಶಗಳನ್ನು ನೀಡಿದೆ ಎಂದರು.
ಹತ್ತನೇ ಮೇ ಸಾಹಿತ್ಯ ಮೇಳದ ಉದ್ಘಾಟನಾ ಕಾರ್ಯಕ್ರಮವು ಪ್ರಖರ ಚಿಂತನೆಗಳ ಹೊಳೆ ಹರಿಸಿತು.