ಬೆಂಗಳೂರು: ರಾಜ್ಯ ಹಿಂದೆಂದೂ ಕಂಡು ಕೇಳರಿಯದ ಲೈಂಗಿಕ ಹಗರಣ ನಡೆಸಿ ದೇಶದಿಂದ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣನ ( prajwal revanna ) ತಂದೆ ಎಚ್.ಡಿ.ರೇವಣ್ಣಗೆ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿನ್ನೆ ಜಾಮೀನು ನೀಡಿದೆ.
ರಾಜಕೀಯ ಪ್ರಭಾವ ಹೊಂದಿರುವ ಎಚ್.ಡಿ.ರೇವಣ್ಣಗೆ ಜಾಮೀನು ದೊರೆತರೆ ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಸಂತ್ರಸ್ಥರನ್ನು ಬೆದರಿಸಬಹುದು ಎಂದು SIT ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿತ್ತು.
ಈಗ ರೇವಣ್ಣಗೆ ನೀಡಲಾಗಿರುವ ಜಾಮೀನು ರದ್ದುಪಡಿಸಲು ಕೋರಿ SIT ಹೈಕೋರ್ಟ್ ಮೊರೆ ಹೋಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಎಚ್.ಡಿ.ರೇವಣ್ಣ ವಿರುದ್ಧ ಕೆ.ಆರ್.ನಗರದಲ್ಲಿ ದಾಖಲಾದ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣ ಮಾತ್ರವಲ್ಲದೆ ಮತ್ತೊಬ್ಬ ಮಹಿಳೆ ನೀಡಿರುವ ಲೈಂಗಿಕ ಕಿರುಕುಳದ ಪ್ರಕರಣವೂ ದಾಖಲಾಗಿದೆ. ಇದಲ್ಲದೆ ತನ್ನ ಪುತ್ರನನ್ನು ರಕ್ಷಿಸಲು ರೇವಣ್ಣ ಸಂತ್ರಸ್ತೆಯರನ್ನು, ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆಯೂ ಇದೆ. ನಿನ್ನೆ ಜಾಮೀನು ಅರ್ಜಿ ತಿರಸ್ಕರಿಸಲು ಕೋರಿ SIT ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು ಇದೇ ಅಂಶವನ್ನು ಎತ್ತಿ ಹೇಳಿದ್ದರು.
ವಿಶೇಷ ಅಭಿಯೋಜಕಿ ಜಯ್ನಾ ಕೊಠಾರಿ, ರೇವಣ್ಣ ಅವರೇ ಅಪಹರಣಕ್ಕೆ ಯೋಜನೆ ರೂಪಿಸಿದ್ದಾರೆ. ಇತರೆ ಆರೋಪಿಗಳು ಈಗಾಗಲೇ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ. ಶಿಕ್ಷೆಯ ಪ್ರಮಾಣ ಜೀವಾವಧಿ ಶಿಕ್ಷೆ ಇದ್ದಾಗ ಜಾಮೀನು ನಿರಾಕರಿಸಬಹುದು ಎಂದು ಕಿಡ್ನ್ಯಾಪ್ ಕೇಸ್ ಗಂಭೀರತೆ ಬಗ್ಗೆ ಕೋರ್ಟ್ ಗಮನಕ್ಕೆ ತಂದ ಅವರು ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಬಲವಾಗಿ ವಾದಿಸಿದ್ದರು,
ಇನ್ನೂ ಕೆಲ ಸಾಕ್ಷಿಗಳ ಹೇಳಿಕೆ ದಾಖಲಿಸಬೇಕಿದೆ. ಸಂತ್ರಸ್ತೆ ಕಿಡ್ನ್ಯಾಪ್ ಮಾತ್ರ ಆಗಿರಲಿಲ್ಲ, ಅತ್ಯಾಚಾರದ ಸಂತ್ರಸ್ತೆ. ಆರೋಪಿಗೆ ಜಾಮೀನು ಕೊಟ್ಟರೆ, ಸಂತ್ರಸ್ತೆಯ ಹಕ್ಕಿನ ರಕ್ಷಣೆ ಹೇಗೆ ಸಾಧ್ಯ? ಬೇರೆ ಸಂತ್ರಸ್ತರಿಗೂ ಇದು ಬೆದರಿಕೆಯಾಗುವ ಸಾಧ್ಯತೆ ಇದೆ. ಆರೋಪಿ ಹೊರ ಬಂದರೆ ಬೇರೆಯವರು ಮುಂದೆ ಬರಲ್ಲ. ಈ ಆರೋಪಿ ಇನ್ನೊಂದು ಕೇಸ್‌ನಲ್ಲೂ ಆರೋಪಿಯಾಗಿದ್ದಾರೆ. ಆರೋಪಿ ವಿರುದ್ದ ದೂರು ನೀಡಬಾರದು ಎಂದೇ ಅಪಹರಣ ಮಾಡಲಾಗಿದೆ. ಕೆಲ ಸಂತ್ರಸ್ಥರ ದೂರುಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 164ರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕಾಗಿದೆ. ಅದಕ್ಕೂ ಮುನ್ನ ಜಾಮೀನು ನೀಡುವುದು ಸರಿಯಲ್ಲ ಎಂದು ಅವರು ವಾದಿಸಿದ್ದರು.
ಮತ್ತೋರ್ವ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ ಸಂತ್ರಸ್ತೆ ಭಯದಲ್ಲಿದ್ದಾರೆ. ಆಕೆಗೆ ಭದ್ರತೆ ತುಂಬಾ ಮುಖ್ಯವಾಗಿದೆ. ಭದ್ರತೆಯಲ್ಲಿಡಲಾಗಿದೆ. ಇವರ ಪ್ರಭಾವ ಎಷ್ಟಿದೆ ಎಂದರೆ ತುಂಬಾ ಜನ ದೂರು ಕೊಟ್ಟಿದ್ದಾರೆ. ಆದ್ರೆ ಎಲ್ಲಾ ದೂರುಗಳಲ್ಲೂ ಬಿ ರಿಪೋರ್ಟ್ ಆಗಿದೆ. ಸಂತ್ರಸ್ತೆಗೆ ರಕ್ಷಣೆ ಬೇಕು, ಹೀಗಾಗಿ ಜಾಮೀನು ನೀಡಬಾರದು ಎಂದು ಅವರು ವಾದಿಸಿದ್ದರು.
ಪ್ರಜ್ವಲ್ ಲೈಂಗಿಕ ಹಗರಣದ ತನಿಖೆ ನಡೆಸುತ್ತಿರುವ SIT ಗೆ ರೇವಣ್ಣಗೆ ಜಾಮೀನು ಸಿಕ್ಕಿರುವುದರಿಂದ ತನಿಖೆಗೆ ತೊಡಕಾಗಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸಲು ಕೋರಿ SIT ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.